Mangaluru | ಲ್ಯಾಂಡ್ ಫ್ಲೇವರ್ ಬೊಂಡ ಫ್ಯಾಕ್ಟರಿ ಮತ್ತು ಅಡ್ಯಾರ್ ಗ್ರಾ.ಪಂ. ಸಹಯೋಗದಲ್ಲಿ 25 ಉಚಿತ ಹೊಲಿಗೆ ಯಂತ್ರಗಳ ವಿತರಣೆ
ಮಂಗಳೂರು : ಲ್ಯಾಂಡ್ ಫ್ಲೇವರ್ ಬೊಂಡ ಫ್ಯಾಕ್ಟರಿ ಅಡ್ಯಾರ್ ಮತ್ತು ಅಡ್ಯಾರ್ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತ 25 ಹೊಲಿಗೆ ಯಂತ್ರಗಳ ವಿತರಣಾ ಕಾರ್ಯಕ್ರಮ ಶನಿವಾರ ಅಡ್ಯಾರ್ ಯಶಸ್ವಿ ಹಾಲ್ ನಲ್ಲಿ ಜರುಗಿತು.
ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಅವರು, “ಭಾರತೀಯ ಸಂಸ್ಕೃತಿಯ ಮೂಲ ತಳಹದಿ ಇರುವುದು ನಾವು ಮಾಡುವ ದಾನ ಧರ್ಮದಲ್ಲಿ. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಎಲ್ಲಾ ಧರ್ಮದಲ್ಲೂ ದಾನದ ಕುರಿತು ಸ್ಪಷ್ಟ ಉಲ್ಲೇಖವಿದೆ. ಈ ನಿಟ್ಟಿನಲ್ಲಿ ಸಂಸ್ಥೆಯೊಂದು ಗ್ರಾಮ ಪಂಚಾಯತ್ ಜೊತೆ ಸೇರಿಕೊಂಡು ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯ“ ಎಂದರು.
ಲ್ಯಾಂಡ್ ಫ್ಲೇವರ್ ಬೊಂಡ ಫ್ಯಾಕ್ಟರಿ ಮೆನೇಜರ್ ಜಗದೀಶ್ ಕಾಮತ್ ಮಾತಾಡಿ, ”ಗ್ರಾಮದ ಜನರಿಗೆ ಸಹಾಯವಾಗುವಂತಹ ಕಾರ್ಯಕ್ರಮವನ್ನು ಮುಂದೆ ನಿಂತು ನೆರವೇರಿಸಿದ ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸಬೇಕಾಗಿದೆ. ಹೊಲಿಗೆ ಯಂತ್ರ ಕೇವಲ ಒಂದು ಯಂತ್ರವಲ್ಲ, ಇದು ಸ್ವ ಉದ್ಯೋಗ ನಡೆಸಲು ಸ್ಫೂರ್ತಿ ತುಂಬುವ ಸಾಧನ, ಗ್ರಾಮದ ಜನರಿಗೆ ಸಿಗುವ ಉತ್ತಮ ಅವಕಾಶ ಇದಾಗಿದ್ದು ಇದರಿಂದ ಹಲವರ ಬದುಕು ಬದಲಾಗಬಹುದು. ನೀವು ಈ ಯಂತ್ರದಿಂದ ಹೆಚ್ಚಿನ ಅಭಿವೃದ್ಧಿಯಾಗಬೇಕು. ನಿಮ್ಮ ಭವಿಷ್ಯದಲ್ಲಿ ಇನ್ನಷ್ಟು ಮಂದಿಗೆ ಕೆಲಸ ನೀಡಬೇಕು“ ಎಂದರು.
ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಜಲೀಲ್ ಮಾತಾಡಿ, “ಅಡ್ಯಾರ್ ಗ್ರಾಮದ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನದಲ್ಲಿ ಯಾರ ಹಂಗು ಕೂಡ ಇಲ್ಲದೆ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲು ಲ್ಯಾಂಡ್ ಫ್ಲೇವರ್ ಸಂಸ್ಥೆಯನ್ನು ಸಂಪರ್ಕಿಸಿದಾಗ ಅವರು ಕೂಡಲೇ ಇದಕ್ಕೆ ಸ್ಪಂದಿಸಿದ್ದಾರೆ. ನಮ್ಮ ಊರಿನ 150ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸಿರುವ ಅವರು ನಮ್ಮ ಗ್ರಾಮಕ್ಕೆ ಮಾರ್ಗದರ್ಶಿಯಾಗಿದ್ದಾರೆ. ಎಲ್ಲವನ್ನು ಸರಕಾರಗಳಿಂದ ಮಾಡಲು ಸಾಧ್ಯವಿಲ್ಲ. ಸಮಾಜದಲ್ಲಿ ಉತ್ತಮ ಕೆಲಸಕ್ಕಾಗಿ ಇಂತಹ ಉದ್ಯಮಿಗಳು ಮುಂದೆ ಬಂದಾಗ ಸಮಾಜ ಅಭಿವೃದ್ಧಿಯಾಗುತ್ತದೆ. ತಾವು ಮಾತ್ರ ಬೆಳೆದರೆ ಸಾಲದು ತಮ್ಮ ಜೊತೆಗೆ ಸಮಾಜವೂ ಅಭಿವೃದ್ಧಿಯಾಗಬೇಕು ಎಂದು ಬಯಸುವ ಇಂತಹ ದಾನಿಗಳಿಂದ ಇನ್ನಷ್ಟು ಮಂದಿ ಸ್ಫೂರ್ತಿಯನ್ನು ಪಡೆದುಕೊಳ್ಳಬೇಕು. ಇಂದು ಇಲ್ಲಿ ಕೊಡುತ್ತಿರುವ ಹೊಲಿಗೆ ಯಂತ್ರಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಿ“ ಎಂದು ಹೇಳಿದರು.
ವೇದಿಕೆಯಲ್ಲಿ ಲ್ಯಾಂಡ್ ಫ್ಲೇವರ್ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಸತೀಶ್ ತಲ್ಗೂರು, ಮಿನರ್ವ ಸಂಸ್ಥೆಯ ನಿರ್ದೇಶಕ ವಿನೋದ್ ಡಿಸೋಜ, ಸತೀಶ್, ಜುಮಾ ಮಸೀದಿ ಅಧ್ಯಕ್ಷ ಅಸ್ಲಾಂ, ಬದ್ರಿಯಾ ಮದ್ರಸಾ ಅಧ್ಯಕ್ಷ ಅಬ್ಬಾಸ್, ಸೇವಾಂಜಲಿ ಟ್ರಸ್ಟ್ ನ ಕೃಷ್ಣಕುಮಾರ್ ಪೂಂಜಾ ಹಾಗೂ ಅಡ್ಯಾರ್ ಗ್ರಾಮ ಪಂಚಾಯತ್ ನ ಜೋಹಾರ, ಪಿಡಿಓ ಅಸಫ್, ಅಸ್ಲಾಂ ಮತ್ತಿತರರು ಉಪಸ್ಥಿತರಿದ್ದರು.