ಮೂಡುಬಿದಿರೆ | ʼಆಳ್ವಾಸ್ ಕ್ರಿಸ್ಮಸ್-2025ʼ ಕಾರ್ಯಕ್ರಮ
ಕ್ರಿಸ್ಮಸ್ ಜಗತ್ತಿಗೆ ಶಾಂತಿ, ಪ್ರೀತಿ, ಸೌಹಾರ್ದತೆಯನ್ನು ಸಾರುತ್ತದೆ : ಡಾ.ಅಲೋಶಿಯಸ್ ಪೌಲ್ ಡಿಸೋಜ
ಸಾಂದರ್ಭಿಕ ಚಿತ್ರ : PC | GROK
ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿರುವ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ ವೇದಿಕೆ) ಸಭಾಂಗಣದಲ್ಲಿ ʼಆಳ್ವಾಸ್ ಕ್ರಿಸ್ಮಸ್ 2025' ಕಾರ್ಯಕ್ರಮ ನಡೆಯಿತು.
ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ವಂದನೀಯ ಡಾ.ಅಲೋಶಿಯಸ್ ಪೌಲ್ ಡಿಸೋಜ ಕ್ರಿಸ್ಮಸ್ ಸಂದೇಶ ನೀಡಿ, ಪ್ರೀತಿ, ಶಾಂತಿ, ಸೌಹಾರ್ದತೆಯ ಸಂದೇಶವನ್ನು ಕ್ರಿಸ್ಮಸ್ ಇಡೀ ವಿಶ್ವಕ್ಕೆ ನೀಡುತ್ತದೆ. ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗದೇ ಮಾನವೀಯತೆಯನ್ನು ಸಕಲರಿಗೆ ತೋರಿಸುವುದು ಕ್ರೈಸ್ತ ಧರ್ಮದ ಉದ್ದೇಶ. ಕ್ರಿಸ್‌ಮಸ್ ಹಬ್ಬವು ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ಪರಸ್ಪರ ಸಹಬಾಳ್ವೆ, ಮಾನವೀಯತೆ ಮತ್ತು ಮನುಕುಲದ ಸೇವೆಯ ಸಂದೇಶವನ್ನು ಸಾರುತ್ತದೆ ಎಂದರು.
ಮಂಗಳೂರಿನ ಸೇಂಟ್ ಜೂಜ್ ವಾಜ್ ಹೋಮ್‌ನ ನಿವೃತ್ತ ಹಿರಿಯ ಧರ್ಮಗುರು ವಂದನೀಯ ಫ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಂಸ್ಕೃತಿಕ ಮೆರುಗು:
ಕಾರ್ಯಕ್ರಮದ ಆರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ತಂಡದಿಂದ ಆಕರ್ಷಕ ಮೆರವಣಿಗೆ ನಡೆಯಿತು. ಸ್ತುತಿ ಮತ್ತು ಆರಾಧನೆಯೊಂದಿಗೆ ವೇದಿಕೆಯ ಕಾರ್ಯಕ್ರಮಗಳು ಸಂಪನ್ನಗೊಂಡವು. ನಂತರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು 'ರಂಗ್-ತರಂಗ್' ತಂಡದವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು.