ಮೂಡುಬಿದಿರೆ | ಸಂಪಿಗೆ ಚರ್ಚಿನಲ್ಲಿ ಕ್ರಿಸ್ಮಸ್-2025 ಆಚರಣೆ
ಕ್ರಿಸ್ಮಸ್ ನ ಆದರ್ಶ, ತತ್ವಗಳನ್ನು ಮೈಗೂಡಿಸಿಕೊಳ್ಳಿ : ಓನಿಲ್ ಡಿ'ಸೋಜ
ಮೂಡುಬಿದಿರೆ: ಮಂಗಳೂರು ಧಮ೯ಪ್ರಾಂತ್ಯ ಮೂಡುಬಿದಿರೆ ವಾರಾಡೋ ಮತ್ತು ಸಂಪಿಗೆ ಹೋಲಿ ಸ್ಪೀರಿಟ್ ಚರ್ಚ್ ವತಿಯಿಂದ ವಲಸಿಗ ಮತ್ತು ಶ್ರಮಿಕರ ಆಯೋಗದವರಿಗೆ ಭಾನುವಾರ ಕ್ರಿಸ್ಮಸ್-2025ನ್ನು ಆಚರಿಸಲಾಯಿತು.
ಮೂಡುಬಿದಿರೆ ವಲಯದ ಪ್ರಧಾನ ಧರ್ಮಗುರು ಓನಿಲ್ ಡಿ'ಸೋಜ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕ್ರಿಸ್ಮಸ್ ಹಬ್ಬ ಕೇವಲ ಡಿ.25ಕ್ಕೆ ಮಾತ್ರ ಸೀಮಿತವಾಗದೆ, ಅದರ ಆದರ್ಶ ಮತ್ತು ತತ್ವಗಳನ್ನು ವರ್ಷವಿಡೀ ನಾವು ಮೈಗೂಡಿಸಿಕೊಳ್ಳಬೇಕು. ಏಸು ಕ್ರಿಸ್ತರು ರೋಗ ಪೀಡಿತ ಜನರ, ದೀನ ದಲಿತರ ಮತ್ತು ಎಲ್ಲಾ ವರ್ಗದ ಜನರ ಜತೆ ಹೇಗೆ ಹೊಂದಿಕೊಂಡು ಬಾಳಬೇಕೆಂದು ತಿಳಿಸಿಕೊಟ್ಟಿದ್ದಾರೆ ಅದರಂತೆ ನಾವು ಬಾಳೋಣ ಎಂಬ ಸಂದೇಶವನ್ನು ನೀಡಿದರು.
ಸಂಪಿಗೆ ಪವಿತ್ರಾತ್ಮ ದೇವಾಲಯದ ಧಮ೯ಗುರು ವಿನ್ಸೆಂಟ್ ಡಿ'ಸೋಜ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ದೇವರ ಮೇಲಿನ ನಂಬಿಕೆ ನಮ್ಮ ಬದುಕಿನ ಅಂಧಕಾರವನ್ನು ತೊಲಗಿಸುತ್ತದೆ. ಸೇವೆ-ಸೌಹಾರ್ದತೆ ಪರಸ್ಪರ ಪ್ರೀತಿ ವಿಶ್ವಾಸಗಳನ್ನು ಬೆಳಗಿಸುತ್ತದೆ ಎಂದರು.
ಬೆಳ್ಳೂರು ಮರಿಯಾಶ್ರಮದ ಸುನಿಲ್ ಕ್ರಿಸ್ಟೋಪರ್ ಡಿ'ಸೋಜ, ಪವಿತ್ರಾತ್ಮ ದೇವಾಲಯದ ಉಪಾಧ್ಯಕ್ಷ ವಿಲ್ಫ್ರೆಡ್ ಮಿಸ್ಕಿತ್, ಕಾರ್ಯದರ್ಶಿ ರೋಶನ್ ಫೆರ್ನಾಂಡಿಸ್, ಸಂಪಿಗೆ ಚರ್ಚ್‌ನ 21ನೇ ಆಯೋಗದ ಸಂಯೋಜಕ ರೋಬರ್ಟ್ ಡಿ'ಸೋಜ, ವಲಸಿಗ ಶ್ರಮಿಕ ಆಯೋಗದ ಸಂಚಾಲಕ ಆಲ್ವಿನ್ ಸಾಂಕ್ತೀಸ್, ಕಾರ್ಯದರ್ಶಿ ಎಗ್ಬರ್ಟ್ ಡಿ'ಸಿಲ್ವ ಅತಿಥಿಗಳಾಗಿ ಭಾಗವಹಿಸಿದ್ದರು.
ಆಲಂಗಾರು ಮೌಂಟ್ ರೋಸರಿ ಕಾನ್ವೆಂಟ್ ನ ಸಿಸ್ಟರ್ ಲೀನಾ ಡಿಕುನ್ಹಾ, ಐಸಿವೈಎಂ ಸಚೇತಕಿ ಗ್ರೇಸಿ ಡಿ'ಸೋಜ, ಚರ್ಚ್ ಪಾಲನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಲೋನ ಡಿ'ಸೋಜ ಸ್ವಾಗತಿಸಿದರು. ಲ್ಯಾನ್ಸಿ ಡಿ'ಸೋಜ ಕಾರ್ಯಕ್ರಮ ನಿರೂಪಿಸಿದರು. ಜೊಸ್ವಿನ್ ಅಮಿತಾ ಫೆರ್ನಾಂಡಿಸ್ ವಂದಿಸಿದರು.