×
Ad

ರಾಷ್ಟ್ರವ್ಯಾಪಿ ಮುಷ್ಕರ ಹಿನ್ನೆಲೆ: ಮಂಗಳೂರಿನಲ್ಲಿ ಕಾರ್ಮಿಕ ಸಂಘಟನೆಗಳ ಮೆರವಣಿಗೆ, ಪ್ರತಿಭಟನಾ ಸಭೆ

Update: 2025-07-09 16:30 IST

ಮಂಗಳೂರು: ಕಾರ್ಮಿಕ ಕಾನೂನುಗಳ ಉಳಿವಿಗಾಗಿ, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಲು ಒತ್ತಾಯಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಕರೆ ನೀಡಿರುವ ಅಖಿಲ ಭಾರತ ಮುಷ್ಕರದ ಅಂಗವಾಗಿ ಮಂಗಳೂರಿನಲ್ಲಿಂದು ಕಾರ್ಮಿಕ ಸಂಘಟನೆಗಳ ಮೆರವಣಿಗೆ, ಪ್ರತಿಭಟನಾ ಸಭೆ ನಡೆಯಿತು.

 

ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಿಂದ ಸಾವಿರಕ್ಕೂ ಅಧಿಕ ಕಾರ್ಮಿಕರು, ನೌಕರರು ಕೇಂದ್ರ ಸರಕಾರದ ಆಕ್ರಮಣಕಾರಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಬಳಿಕ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಸಭೆಯನ್ನು ನಡೆಸಿದರು.

 

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಕೇಂದ್ರದಲ್ಲಿ ಕಳೆದ 11 ವರ್ಷಗಳಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರಕಾರ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆಯೇ ಹೊರತು ಈ ದೇಶದ ಕಾರ್ಮಿಕ ವರ್ಗ, ರೈತಾಪಿ ಜನತೆ ಜನಸಾಮಾನ್ಯರದ್ದಲ್ಲ. ದೇಶದ ಆರ್ಥಿಕತೆಗೆ ಅತ್ಯಂತ ದೊಡ್ಡ ಶಕ್ತಿ ನೀಡುವ ಕಾರ್ಮಿಕ ವರ್ಗವನ್ನು ತೀರಾ ನಗಣ್ಯವನ್ನಾಗಿಸಿ,ಕಾರ್ಮಿಕ ಕಾನೂನುಗಳನ್ನು ನಿಷ್ಕ್ರಿಯಗೊಳಿಸಿ ಇಡೀ ಕಾರ್ಮಿಕ ವರ್ಗವನ್ನು ಮತ್ತೆ ಜೀತದಾಳುಗಳನ್ನಾಗಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

 

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ ಮಾತನಾಡಿ, ದೇಶದ ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರನ್ನು ಅತ್ಯಂತ ಕೀಳಾಗಿ ಕಾಣುವ ಸಮಾಜ ಯಾವತ್ತೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಅಂತಹ ಕಾರ್ಮಿಕ ವರ್ಗದ ಶ್ರಮವನ್ನು ಅರ್ಥೈಸಿ, ಶ್ರಮಕ್ಕೆ ತಕ್ಕ ಪ್ರತಿಫಲವನ್ನೂ, ಎಲ್ಲಾ ಸಾಮಾಜಿಕ ಭದ್ರತೆಗಳನ್ನೂ, ನಿವೃತ್ತಿಯ ಬಳಿಕ ಯೋಗ್ಯವಾದ ಪಿಂಚಣಿಯನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

 

ಬ್ಯಾಂಕ್ ನೌಕರರ ಸಂಘಟನೆಯ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಫಣೀಂದ್ರ ಕೆ. ಮಾತನಾಡಿ, ದೇಶದ ಬ್ಯಾಂಕ್ ವಿಮೆ ಸೇರಿದಂತೆ ಎಲ್ಲಾ ಆರ್ಥಿಕ ರಂಗಗಳನ್ನು ವಿಲೀನೀಕರಣ, ಖಾಸಗೀಕರಣಗೊಳಿಸುವ ಮೂಲಕ ದೇಶದ ಆರ್ಥಿಕತೆಯನ್ನೇ ನಾಶ ಮಾಡಲು ಕೇಂದ್ರ ಸರಕಾರ ಹೊರಟಿದೆ. ಜನಸಾಮಾನ್ಯರ ಬದುಕು ಹಾಗೂ ದೇಶದ ಅಭಿವೃದ್ಧಿಯಲ್ಲಿ ಆರ್ಥಿಕ ಕ್ಷೇತ್ರವೇ ಪ್ರಮುಖವಾಗಿದೆ. ಅಂತಹ ಕ್ಷೇತ್ರವನ್ನೇ ನಾಶ ಮಾಡಿ ದೇಶದ ಅಭಿವೃದ್ಧಿ ನಡೆಸುವುದಾದರೂ ಹೇಗೆ....? ಎಂದು ಪ್ರಶ್ನಿಸಿದರು.

ಸಬೆಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ನಾಯಕರಾದ ವಸಂತ ಆಚಾರಿ, ಜೆ.ಬಾಲಕೃಷ್ಣ ಶೆಟ್ಟಿ, ರೈತ ನಾಯಕರಾದ ಕೆ.ಯಾದವ ಶೆಟ್ಟಿ, ಸನ್ನಿ ಡಿಸೋಜ, ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ವಿನ್ಸೆಂಟ್ ಡಿಸೋಜ, ಬ್ಯಾಂಕ್ ನೌಕರರ ಸಂಘಟನೆಯ ಸುನೀಲ್ ಪದಕಣ್ಣಾಯ, ವಿಮಾ ಪ್ರತಿನಿಧಿಗಳ ಸಂಘಟನೆಯ ಲೋಕೇಶ್ ಶೆಟ್ಟಿ ಮಾತನಾಡಿದರು.

ಹೋರಾಟವನ್ನು ಬೆಂಬಲಿಸಿ ಯುವಜನ ಸಂಘಟನೆಯ ಮುಖಂಡರಾದ ಬಿ.ಕೆ.ಇಮ್ತಿಯಾಝ್, ಸಂತೋಷ್ ಬಜಾಲ್, ನಿತಿನ್ ಕುತ್ತಾರ್, ರಿಝ್ವಾನ್ ಹರೇಕಳ, ನವೀನ್ ಕೊಂಚಾಡಿ, ತಯ್ಯೂಬ್ ಬೆಂಗರೆ, ರಝಾಕ್ ಮುಡಿಪು, ಮಹಿಳಾ ಮುಖಂಡರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, ಅಸುಂತ ಡಿಸೋಜ, ಪ್ರಮೀಳಾ ಶಕ್ತಿನಗರ, ಸಮಿತಾ ಬಿ.ಸಿ.ರೋಡ್, ಮಮತಾ, ಆದಿವಾಸಿ ಸಂಘಟನೆಯ ಕರಿಯಾ ಕೆ., ರಶ್ಮಿ ವಾಮಂಜೂರು, ತುಳಸಿ ಬೆಳ್ಮಣ್ಣು ಮತ್ತಿತರರು ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಬ್ಯಾಂಕ್ ನೌಕರರ ಸಂಘಟನೆಯ ನಾಯಕರಾದ ಗಿರೀಶ್, ಬಿ.ಎಂ.ಮಾಧವ, ಪುರುಷೋತ್ತಮ ಪೂಜಾರಿ, ಸಿಐಟಿಯು ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಸುಕುಮಾರ್ ತೊಕ್ಕೊಟು, ವಸಂತಿ ಕುಪ್ಪೆಪದವು, ನೋಣಯ್ಯ ಗೌಡ, ಯಶೋಧ ಮಳಲಿ, ಪದ್ಮಾವತಿ ಶೆಟ್ಟಿ, ಸುಂದರ ಕುಂಪಲ, ರವಿಚಂದ್ರ ಕೊಂಚಾಡಿ, ಜನಾರ್ದನ ಕುತ್ತಾರ್, ಭವ್ಯಾ ಮುಚ್ಚೂರು, ಬಿಜು ಆಗಸ್ಟಿನ್, ವಿಶ್ವನಾಥ ಬಂಗಾರಡ್ಕ, ರೋಹಿದಾಸ್, ರಫೀಕ್ ಹರೇಕಳ ಎಐಟಿಯುಸಿ ನಾಯಕರಾದ ಎಚ್.ವಿ. ರಾವ್, ಬಿ.ಶೇಖರ್, ಸುರೇಶ್ ಕುಮಾರ್, ಕರುಣಾಕರ್ ಮಾರಿಪಳ್ಳ, ವಿ.ಕುಕ್ಯಾನ್, ಪ್ರವೀಣ್ ಕುಮಾರ್, ಜಯಸಿಂಹ, ರೈತ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಶೇಖರ್ ಕುಂದರ್, ಸದಾಶಿವದಾಸ್, ವಿವಿಧ ಸಂಘಟನೆಗಳ ಮುಖಂಡರಾದ ಸದಾನಂದ, ಜೀವನ್ ಲೋಬೋ, ಎಂ.ಎಸ್.ಭಟ್, ಜನಾರ್ದನ ಪೆರಾಜೆ, ಸೋಮಶೇಖರ್, ಪುಷ್ಪರಾಜ್ ಬೋಳೂರು, ಜಗತ್ಪಾಲ್, ಕೃಷ್ಣಪ್ಪ, ಫಾರೂಕ್, ಮಜೀದ್, ಮುಝಾಫರ್ ಅಹ್ಮದ್, ಸಂತೋಷ್ ಆರ್.ಎಸ್., ವಿನಾಯಕ ಶೆಣೈ, ವಿಜಯ, ಕಲಂದರ್, ಅಹ್ಮದ್ ಬಾವ, ಅನ್ಸಾರ್ ಫೈಸಲ್ ನಗರ ಮುಂತಾದವರು ಭಾಗವಹಿಸಿದ್ದರು

ಸಿಐಟಿಯು ನಾಯಕ ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎಐಟಿಯುಸಿ ಮುಖಂಡ ಕರುಣಾಕರ್ ಮಾರಿಪಳ್ಳ ವಂದಿಸಿದರು.

 



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News