ಅಭಿವೃದ್ಧಿಯಲ್ಲಿ ಹೊಸ ಭರವಸೆ ಮೂಡಿಸಿದ ಕೇಂದ್ರ ಬಜೆಟ್: ಶಾಸಕ ವೇದವ್ಯಾಸ್ ಕಾಮತ್
Photo credit: PTI
ಮಂಗಳೂರು: ಕೇಂದ್ರ ಸಚಿವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026ರ ಕೇಂದ್ರ ಬಜೆಟ್ ಭವಿಷ್ಯದ ಭಾರತದ ಅಭಿವೃದ್ಧಿಯಲ್ಲಿ ಹೊಸ ಭರವಸೆ ಮೂಡಿಸಿರುವ ದೂರದೃಷ್ಟಿತ್ವದ ಬಜೆಟ್ ಎಂದು ಮಂಗಳೂರು ಶಾಸಕ ಡಿ.ವೇದವ್ಯಾಸ ಕಾಮತ್ ಪ್ರತಿಕ್ರಿಯಿಸಿದರು.
ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು, ನಾಗರಿಕರ ಆಶಯಗಳನ್ನು ಈಡೇರಿಸಲು ಮತ್ತು ಸಂಪನ್ಮೂಲಗಳ ಸಾರ್ವತ್ರಿಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು 'ಮೂರು ಕರ್ತವ್ಯ' ಎಂಬ ವ್ಯವಸ್ಥಿತ ಚೌಕಟ್ಟನ್ನು ಪರಿಚಯ ಮಾಡಿದೆ. ಈ ಮೂರು ಕರ್ತವ್ಯಗಳು ರೈತರು, ಯುವಕರು, ಮಹಿಳೆಯರು, ಹಿಂದುಳಿದ ವರ್ಗದವರು ಮತ್ತು ಪ್ರತಿ ಪ್ರದೇಶಕ್ಕೆ ಸುಸ್ಥಿರ ಸುಧಾರಣೆಯ ಮೂಲಕ ಪ್ರಯೋಜನ ನೀಡುತ್ತದೆ. ಇದು ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ಗುರಿ ಹೊಂದಿದೆ ಎಂದು ಹೇಳಿದರು.
ರೈತರು ಮತ್ತು ಕೃಷಿಕರಿಗೆ ಉಪಯುಕ್ತ ಸಲಹೆ ಮತ್ತು ಸಹಕಾರ ನೀಡುವ ಸಲುವಾಗಿ ಬಜೆಟ್ ನಲ್ಲಿ ಕೃತಕ ಬುದ್ಧಿಮತ್ತೆ (AI) ಪರಿಕರಗಳನ್ನು ಒದಗಿಸುವುದಾಗಿ ಘೋಷಿಸಲಾಗಿದೆ. ಇದು ದೇಶದಲ್ಲಿ ಕೃಷಿ ಚಟುವಟಿಕೆಗಳಲ್ಲಿ ದೊಡ್ಡ ಪರಿವರ್ತನೆ ತರಲಿದೆ. ಕರಾವಳಿ ಭಾಗದ ತೆಂಗು, ಗೋಡಂಬಿ ಬೆಳೆಗೆ ವಿಶೇಷ ಒತ್ತು ನೀಡುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಜತೆಗೆ ಶ್ರೀಗಂಧ ಬೆಳೆಗೂ ಪ್ರೋತ್ಸಾಹ ನೀಡಿರುವುದು ರಾಜ್ಯದ ಕರಾವಳಿ ಭಾಗದ ರೈತರಿಗೆ ವರದಾನವಾಗಲಿದೆ. ಕುಡಿಯಲು, ಕೃಷಿ ಹಾಗೂ ಇತರ ನೀರಾವರಿ ಯೋಜನೆಗಳಿಗಾಗಿ 500 ಜಲಾಶಯಗಳ ನಿರ್ಮಾಣವಾಗಲಿದೆ. ಅಲ್ಲದೆ ಮೀನುಗಾರಿಕೆ ವಲಯದಲ್ಲಿ ಮೌಲ್ಯವರ್ಧನೆಗೆ ವಿಶೇಷ ಯೋಜನೆ ಪ್ರಕಟಿಸಲಾಗಿದೆ. ನಮ್ಮ ಭಾಗದ ಮೀನುಗಾರರಿಗೂ ಇದರ ಪ್ರಯೋಜನ ಸಿಗಲಿದೆ ಎಂದು ಅವರು ಪ್ರತಿಕ್ರಿಯಿಸಿದರು.
ಕರ್ನಾಟಕದ ಕರಾವಳಿ ಭಾಗದಲ್ಲಿ ಟ್ರಕ್ಕಿಂಗ್ ಮಾರ್ಗಗಳ ಅಭಿವೃದ್ಧಿಗೆ ವಿಶೇಷ ಯೋಜನೆ ಪ್ರಕಟಿಸುವ ಮೂಲಕ ರಾಜ್ಯದ ಕರಾವಳಿ ಭಾಗಕ್ಕೆ ಕೊಡುಗೆ ನೀಡಿರುವುದು ಸ್ವಾಗತಾರ್ಹ. ಇದರಿಂದ ಕರಾವಳಿ ಪ್ರವಾಸೋದ್ಯಮಕ್ಕೆ ದೊಡ್ಡಮಟ್ಟಿನ ಉತ್ತೇಜನ ಸಿಗಲಿದೆ. ಅಲ್ಲದೆ ಕರಾವಳಿ ಸಾಗಣೆಯ ಪಾಲನ್ನು ಹೆಚ್ಚಿಸಲು ಕರಾವಳಿ ಸರಕು ಯೋಜನೆಯನ್ನು ಕೂಡಾ ಪ್ರಕಟಿಸಲಾಗಿದೆ. ಇದು ಕರಾವಳಿಯ ಆರ್ಥಿಕತೆಗೆ ಬೂಸ್ಟ್ ನೀಡಲಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.