ಕೋಲಾರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪ್ರಾಪ್ತ ವಯಸ್ಸಿನ ಗರ್ಭಿಣಿಯರ ಸಂಖ್ಯೆ?!

Update: 2023-12-17 12:10 GMT

ಕೋಲಾರ, ಡಿ.16: ಗಡಿ ಜಿಲ್ಲೆ ಕೋಲಾರದಲ್ಲಿ 18 ವರ್ಷ ತುಂಬುವ ಮುನ್ನವೇ ಗರ್ಭಿಣಿ ಆಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ 8 ತಿಂಗಳಲ್ಲಿ 98 ಪ್ರಕರಣಗಳು ದಾಖಲಾಗಿರುವುದು ವರದಿಯಾಗಿದೆ.

ಇಂತಹ ಆತಂಕಕಾರಿ ವಿಚಾರ ಜಿಲ್ಲೆಯ ಆರೋಗ್ಯ ಇಲಾಖೆಯ ಆರ್ಸಿಎಚ್ (ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ) ಪೋರ್ಟಲ್ನಲ್ಲಿ 2023ರ ಏಪ್ರಿಲ್ನಿಂದ ನವೆಂಬರ್ವರೆಗೆ ದಾಖಲಾಗಿರುವ ಅಂಕಿ ಅಂಶಗಳಿಂದ ಬೆಳಕಿಗೆ ಬಂದಿದೆ. 2021-22ನೇ ಸಾಲಿನಲ್ಲಿ 123 ಪ್ರಕರಣ ದಾಖಲಾಗಿದ್ದವು.

ಮತ್ತೊಂದು ಆಘಾತಕಾರಿ ವಿಚಾರ ವೆಂದರೆ ಈ ವರ್ಷ ಮುಳಬಾಗಿಲು ಹಾಗೂ ಮಾಲೂರು ತಾಲೂಕಿನ 14ರ ಪ್ರಾಯದ ಇಬ್ಬರು ಬಾಲಕಿಲಯರು ಗರ್ಭಿಣಿಯರಾಗಿರುವುದು ತಿಳಿದು ಬಂದಿದೆ. ಗರ್ಭಿಣಿಯರು ತಾಯಿ ಕಾರ್ಡ್ ಪಡೆಯಲು ಬಂದಾಗ ಅವರ ವಯಸ್ಸು ಬಹಿರಂಗವಾಗಿದೆ.

ಜಿಲ್ಲೆಯು ಎರಡು ರಾಜ್ಯಗಳ ಗಡಿ ಭಾಗದಲ್ಲಿ ಇರುವುದರಿಂದ ಬಾಲ್ಯ ವಿವಾಹ ಹಾಗೂ ಅಪ್ರಾಪ್ತ ವಯಸ್ಸಿನ ಗರ್ಭಿಣಿಯರ ಪ್ರಕರಣಗಳು ಹೆಚ್ಚುತ್ತಿವೆ. 18 ವರ್ಷದೊಳಗಿನ ಗರ್ಭಿಣಿಯರ ಪ್ರಕರಣ ನೋಂದಾಯಿಸಿಕೊಳ್ಳುತ್ತಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ಕೊಡುತ್ತಿದ್ದಾರೆ. ಪೊಕ್ಸೊ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುತ್ತಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯವೂ ಬಾಲ್ಯ ವಿವಾಹ ಹಾಗೂ ಬಾಲಕಿಯರ ಗರ್ಭಿಣಿ ಪ್ರಕರಣಗಳಿಗೆ ಕಾರಣ ಎನ್ನಲಾಗಿದೆ. ಕೆಲವೊಮ್ಮೆ ಬಾಲ್ಯವಿವಾಹ ಜರುಗುತ್ತಿರುವ ಮಾಹಿತಿ ಬಂದ ಕೂಡಲೇ ಅಧಿಕಾರಿಗಳು ಮದುವೆ ನಿಲ್ಲಿಸಿ ಕೈತೊಳೆದುಕೊಂಡು ನಂತರ ಬಾಲಕಿಯ ಕಡೆಗೆ ಗಮನಹರಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದ ಮತ್ತೆ ಬಾಲ್ಯ ವಿವಾಹವಾಗುತ್ತಿರುವ ಪ್ರಕರಣ ಕಂಡುಬರುತ್ತಿದೆ. ತ್ವರಿತವಾಗಿ ಪ್ರಕರಣವೂ ದಾಖಲಾಗುತ್ತಿಲ್ಲ. ಮಹಿಳೆ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸಭೆಗಳು ತಾಲೂಕು ಹಂತದಲ್ಲಿ ನಡೆಯುತ್ತಿಲ್ಲ.

ಪ್ರಸ್ತಕ ಸಾಲಿನಲ್ಲಿ ಅಪ್ರಾಪ್ತ ವಯಸ್ಸಿನ ಗರ್ಭಿಣಿಯರ ಪ್ರಕರಣಗಳು:

ಮಾಲೂರು (27), ಬಂಗಾರಪೇಟೆ (24) ಹಾಗೂ ಕೋಲಾರ ತಾಲೂಕಿನಲ್ಲಿ (22)ಪ್ರಕರಣಗಳು ಕಂಡುಬಂದಿದೆ.

227 ಬಾಲ್ಯ ವಿವಾಹ ದೂರು

ಕೋಲಾರ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 227 ಬಾಲ್ಯ ವಿವಾಹ ದೂರುಗಳು ಬಂದಿದ್ದು, ಅವುಗಳಲ್ಲಿ 215 ಪ್ರಕರಣ ತಡೆಯಲಾಗಿದೆ. 2022ರ ಡಿಸೆಂಬರ್ ಅಂತ್ಯದವರೆಗಿನ ಅಂಕಿಅಂಶಗಳ ಪ್ರಕಾರ ಬಾಲ್ಯ ವಿವಾಹ ನಡೆದ 12 ಪ್ರಕರಣಗಳಲ್ಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಕೋಲಾರ ಹಾಗೂ ಮುಳಬಾಗಿಲು ತಾಲೂಕಿನಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.


ಆಂಧ್ರ ಪ್ರದೇಶ, ತಮಿಳುನಾಡಿನಿಂದ ಜಿಲ್ಲೆಗೆ ವಲಸೆ, ಕೂಲಿಗೆ ಬರುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ, ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಕೋವಿಡ್ ಸಂದರ್ಭದಲ್ಲಿ ಈ ಪ್ರಕರಣ ಇನ್ನೂ ಹೆಚ್ಚಿದ್ದವು. ಅಪ್ರಾಪ್ತ ಗರ್ಭಿಣಿ ಪ್ರಕರಣಗಳು ನಮ್ಮ ಗಮನಕ್ಕೆ ಬಂದಾಗ ನೋಂದಣಿ ಮಾಡಿ ಮೊದಲು ಅವರಿಗೆ ಅಗತ್ಯ ಚಿಕಿತ್ಸೆ, ಔಷಧ ಕೊಡುತ್ತೇವೆ. ಇಂಥ ಪ್ರಕರಣ ತಡೆಯಲು ನಮ್ಮಿಂದಾದ ಎಲ್ಲ ಅಗತ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಗ್ರಾಮಾಂತರ ಹಾಗೂ ನಗರ ಪ್ರದೇಶದಲ್ಲಿ ಆರೋಗ್ಯ ಶಿಕ್ಷಣ ನೀಡಿ ಜಾಗೃತಿ ಮೂಡಿಸುತ್ತಿದ್ದೇವೆ.

- ಡಾ.ವಿಜಯಕುಮಾರಿ, ಕೋಲಾರ ಜಿಲ್ಲಾ ಆರ್ಸಿಎಚ್ ಅಧಿಕಾರಿ,

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಸಿ.ವಿ.ನಾಗರಾಜ್. ಕೋಲಾರ

contributor

Similar News