ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರತಿಭಟನೆ ವೇಳೆ ರೈತ ಸಾವು; ಪಕ್ಷದ ನಾಯಕನ ವಿರುದ್ಧ ಪ್ರಕರಣ

Update: 2024-05-06 11:19 GMT

ಸುರೀಂದರ್ ಪಾಲ್ ಸಿಂಗ್ | PC : indianexpress.com

ಹೊಸದಿಲ್ಲಿ: ಪಂಜಾಬಿನ ಪಟಿಯಾಳಾದ ಸೆಹ್ರಾ ಗ್ರಾಮದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಪ್ರಣೀತ ಕೌರ್ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ರೈತ ಸುರೀಂದರ್ ಪಾಲ್ ಸಿಂಗ್ (55) ಸಾವಿಗೆ ಕಾರಣರಾದ ಆರೋಪದಲ್ಲಿ ಪಟಿಯಾಳಾ ಪೋಲಿಸರು ರವಿವಾರ ಬಿಜೆಪಿ ನಾಯಕ ಹರ್ವಿಂದರ್ ಸಿಂಗ್ ಹರ್ಪಾಲಪುರ್ ಮತ್ತು ಇತರ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಹರ್ಪಾಲಪುರ್ ಶಿರೋಮಣಿ ಅಕಾಲಿ ದಳದ ನಾಯಕ ಪ್ರೇಮಸಿಂಗ್ ಚಂದುಮಜ್ರಾರ ಸೋದರಳಿಯನಾಗಿದ್ದಾರೆ.

ಎಫ್‌ಐಆರ್ ದಾಖಲಾದ ಬಳಿಕವೂ ಬಿಕ್ಕಟ್ಟು ಮುಂದುವರಿದಿದ್ದು, ಮೃತ ಸಿಂಗ್ ಅವರ ಕುಟುಂಬಕ್ಕೆ ಸರಕಾರಿ ಉದ್ಯೋಗದ ಭರವಸೆ ನೀಡುವಂತೆ ರೈತ ಸಂಘಟನೆಗಳು ಪಟ್ಟು ಹಿಡಿದಿವೆ. ರೈತ ನಾಯಕರು ಮರಣೋತ್ತರ ಪರೀಕ್ಷೆಗೂ ಅವಕಾಶ ನೀಡಲಿಲ್ಲ.

ರವಿವಾರ ಹಿರಿಯ ಪೋಲಿಸ್ ಅಧಿಕಾರಿಗಳು ಮತ್ತು ರೈತ ನಾಯಕರ ನಡುವೆ ನಡೆದ ಎರಡು ಸುತ್ತಿನ ಮಾತುಕತೆಗಳು ಯಾವುದೇ ಫಲ ನೀಡಿಲ್ಲ.

ಹರ್ಪಾಲಪುರ್‌ರನ್ನು ಮೇ 7ರೊಳಗೆ ಬಂಧಿಸದಿದ್ದರೆ ಮೇ 8ರಂದು ಜಾಥಾ ನಡೆಸುವುದಾಗಿ ಮತ್ತು ಪ್ರಣೀತ ಕೌರ್ ಅವರ ಪತಿ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನಿವಾಸದ ಮುಂದೆ ಧರಣಿ ಕುಳಿತುಕೊಳ್ಳುವುದಾಗಿ ರೈತ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಆಗಿದ್ದೇನು?

ಶನಿವಾರ ಪ್ರಣೀತ ಕೌರ್ ಚುನಾವಣಾ ಪ್ರಚಾರಕ್ಕೆಂದು ಸೆಹ್ರಾ ಗ್ರಾಮಕ್ಕೆ ಆಗಮಿಸಿದ್ದರು. ಅವರು ಕಾರಿನಿಂದ ಇಳಿದು ವೇದಿಕೆಯತ್ತ ಸಾಗುತ್ತಿದ್ದಂತೆ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಲೆಂದು ಸುರೀಂದರ್ ಪಾಲ್ ಸಿಂಗ್ ಮತ್ತು ಇತರ ರೈತರು ಅವರನ್ನು ಸಮೀಪಿಸಿದ್ದರು. ಈ ವೇಳೆ ಕೌರ್ ಜೊತೆಯಲ್ಲಿದ್ದ ಹರ್ಪಾಲಪುರ್ ಮತ್ತು ಇತರರು ರೈತರೊಂದಿಗೆ ವಾಗ್ವಾದ ನಡೆಸಿ ಅವರನ್ನು ಹಿಂದಕ್ಕೆ ತಳ್ಳತೊಡಗಿದ್ದು,ಸುರೀಂದರ್ ಪಾಲ್ ಸಿಂಗ್ ನೆಲಕ್ಕೆ ಬಿದ್ದಿದ್ದರು. ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.

ಪ್ರತ್ಯೇಕ ಘಟನೆಯಲ್ಲಿ, ಕಳೆದ ಫೆಬ್ರವರಿಯಲ್ಲಿ ‘ದಿಲ್ಲಿ ಚಲೋ ’ಆಂದೋಲನದ ಸಂದರ್ಭದಲ್ಲಿ ಬಂಧಿಸಲ್ಪಟ್ಟು ಹರ್ಯಾಣದ ವಿವಿಧ ಜೈಲುಗಳಲ್ಲಿರುವ ಮೂವರು ರೈತರ ಬಿಡುಗಡೆಗೆ ಆಗ್ರಹಿಸಿ ಶಂಭು ಗೇಟ್ ರೈಲು ನಿಲ್ದಾಣದಲ್ಲಿ ರೈತ ಸಂಘಟನೆಗಳು ನಡೆಸುತ್ತಿರುವ ‘ರೈಲು ತಡೆ’ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ತರ್ನತರನ್ ಜಿಲ್ಲೆಯ ರೈತ ಮಹಿಳೆ ಬಲ್ವಿಂದರ್ ಕೌರ್ (55) ಶನಿವಾರ ಹೃದಯ ಸ್ತಂಭನದಿಂದ ಮೃತ ಪಟ್ಟಿದ್ದಾರೆ. ಕೌರ್ ಮತ್ತು ಸುರೀಂದರ್ ಪಾಲ್ ಸಿಂಗ್ ನಿಧನದೊಂದಿಗೆ ದಿಲ್ಲಿ ಚಲೋ ಆಂದೋಲನದಲ್ಲಿ ಮೃತರ ಸಂಖ್ಯೆ 19ಕ್ಕೇರಿದೆ.

ಶಂಭು ರೈಲ್ವೆ ನಿಲ್ದಾಣದಲ್ಲಿ ರೈತರ ಧರಣಿ ಸೋಮವಾರ 20ನೇ ದಿನಕ್ಕೆ ಕಾಲಿರಿಸಿದೆ. ಇದರಿಂದಾಗಿ ಪ್ರತಿದಿನ ಸುಮಾರು 200 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗುತ್ತಿದೆ ಅಥವಾ ಸಂಚಾರ ಮಾರ್ಗವನ್ನು ಬದಲಿಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News