×
Ad

ITR ಹೊಂದಿಕೆಯಾಗುತ್ತಿಲ್ಲ ಎನ್ನುವ ಇಮೇಲ್ ಬಂದಿದೆಯೆ? ಮುಂದೇನು ಮಾಡಬೇಕು?

ಇಲ್ಲಿದೆ ವಿವರ

Update: 2025-12-23 22:50 IST

Photo Credit : X

ಇತ್ತೀಚೆಗೆ ಅನೇಕ ಮಂದಿಗೆ ಆದಾಯ ತೆರಿಗೆ ಇಲಾಖೆಯಿಂದ ಇಮೇಲ್ ಬಂದಿದ್ದು, ಅದರಲ್ಲಿ ಆದಾಯ ತೆರಿಗೆ ಸಲ್ಲಿಸುವಾಗ ಕ್ಲೇಮ್ ಮಾಡಿರುವ ರಿಟರ್ನ್ (ಐಟಿಆರ್‌) ಮತ್ತು ಉದ್ಯೋಗದಾತರು (ಕಂಪೆನಿ) ತಮ್ಮ ಫಾರ್ಮ್ 16ನಲ್ಲಿ ವರದಿ ಮಾಡಿರುವ ಕಡಿತಗಳು ಹೊಂದಿಕೆಯಾಗುತ್ತಿಲ್ಲ ಎಂದು ಬರೆಯಲಾಗಿದೆ.


ಚಾರ್ಟರ್ಡ್ ಅಕೌಂಟಂಟ್ ಹಿಮಾಂಕ್ ಸಿಂಗ್ಲಾ ಅವರು ಎಕ್ಸ್‌ (ಈ ಹಿಂದೆ ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಒಂದು ಚರ್ಚೆಗೆ ಕಾರಣವಾಗಿದೆ. ಅವರು ತಮ್ಮ ಪೋಸ್ಟ್‌ನಲ್ಲಿ ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿದಾರರಿಗೆ ಕಳುಹಿಸುತ್ತಿರುವ ಇಮೇಲ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಇತ್ತೀಚೆಗೆ ಅನೇಕ ಮಂದಿಗೆ ಆದಾಯ ತೆರಿಗೆ ಇಲಾಖೆಯಿಂದ ಇಮೇಲ್ ಬಂದಿದ್ದು, ಅದರಲ್ಲಿ ಆದಾಯ ತೆರಿಗೆ ಸಲ್ಲಿಸುವಾಗ ಕ್ಲೇಮ್ ಮಾಡಿರುವ ರಿಟರ್ನ್ (ಐಟಿಆರ್‌) ಮತ್ತು ಉದ್ಯೋಗದಾತರು (ಕಂಪೆನಿ) ತಮ್ಮ ಫಾರ್ಮ್ 16ನಲ್ಲಿ ವರದಿ ಮಾಡಿರುವ ಕಡಿತಗಳು ಹೊಂದಿಕೆಯಾಗುತ್ತಿಲ್ಲ ಎಂದು ವಿವರ ನೀಡಲಾಗಿದೆ.

“ಹೊಸ ದಿನ. ಮತ್ತು ಆದಾಯ ತೆರಿಗೆ ಇಲಾಖೆಯಿಂದ ಹೊಸ ನಾಟಕ. ಇದೀಗ ಉದ್ಯೋಗಿ ತನ್ನ ಕಡಿತಗಳ ಕ್ಲೇಮ್‌ ಗಳನ್ನು ಉದ್ಯೋಗದಾತರಿಗೆ ವರದಿ ಮಾಡಿರುವುದಿಲ್ಲ ಮತ್ತು ಐಟಿಆರ್‌ ನಲ್ಲಿ ಅದನ್ನು ಕ್ಲೇಮ್ ಮಾಡಿದಲ್ಲಿ ಆತ ತೆರಿಗೆ ತಪ್ಪಿಸಿದ ವ್ಯಕ್ತಿಯಾದನೆ? ತೆರಿಗೆ ಪಾವತಿದಾರರ ಮಾನ್ಯ ಕ್ಲೇಮ್‌ಗಳಿಗೆ ಆದಾಯ ತೆರಿಗೆ ಇಲಾಖೆಯಿಂದ ಇಮೇಲ್ ಬರುತ್ತಿದೆ. ಅವರನ್ನು “ತೆರಿಗೆ ತಪ್ಪಿಸಿಕೊಂಡವರು” ಎಂದು ಜರೆಯಲಾಗುತ್ತಿದೆ ಮತ್ತು ಆತಂಕ ಸೃಷ್ಟಿಸಲಾಗುತ್ತಿದೆ. ಆದರೆ ವಿವಾಹ ಸಮಾರಂಭದಲ್ಲಿ 70 ಲಕ್ಷ ರೂಪಾಯಿ ಮೌಲ್ಯದ ಪಟಾಕಿ ಹೊಡೆಸಿದ ಶಾಸಕನಿಗೆ ಆದಾಯ ತೆರಿಗೆ ಯಾವಾಗ ನೋಟೀಸ್ ಕಳುಹಿಸಲಿದೆ? ಯಾವತ್ತೂ ಇಲ್ಲ” ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹಿಮಾಂಕ್ ಸಿಂಗ್ಲಾ ಬರೆದಿದ್ದಾರೆ.

ಏನಿದು ಹೊಂದಾಣಿಕೆಯಾಗದ ರಿಟರ್ನ್‌?

ಆದಾಯ ತೆರಿಗೆ ತನ್ನ ಇಮೇಲ್ ಜೊತೆಗೆ ಸೇರಿಸಿದ ಎಚ್ಚರಿಕೆ ಎಲ್ಲರ ಆತಂಕಕ್ಕೆ ಕಾರಣವಾಗಿದೆ. “ಇಮೇಲ್‌ಗೆ ಪ್ರತಿಕ್ರಿಯಿಸದೆ ಇರುವುದು ಎಂದರೆ “ಉದ್ದೇಶಪೂರ್ವಕ ಆಯ್ಕೆ ಎಂದು ಅರ್ಥೈಸಿಕೊಳ್ಳಲಾಗುವುದು” ಮತ್ತು ಅಂತಹ ಪ್ರಕರಣಗಳಲ್ಲಿ ವಿವರವಾದ ತನಿಖೆ ನಡೆಸಲಾಗುವುದು ಎಂದು ಆದಾಯ ತೆರಿಗೆ ಇಮೇಲ್‌ ನಲ್ಲಿ ಬರೆದಿರುವುದು ಹಲವರ ಚಿಂತೆಗೆ ಕಾರಣವಾಗಿದೆ.

ಐಟಿಆರ್‌ನಲ್ಲಿ ಕ್ಲೇಮ್ ಮಾಡಲಾಗಿರುವ ಕಡಿತಗಳು ಮತ್ತು ಉದ್ಯೋಗದಾತರು ಪ್ರಮಾಣಿಸಿದ ಮೊತ್ತಗಳು ಪರಸ್ಪರ ಹೊಂದಿಕೆಯಾಗದೆ ಇದ್ದಾಗ ಇಂತಹ ಇಮೇಲ್‌ ಕಳುಹಿಸಬಹುದು. ಆದಾಯ ತೆರಿಗೆ ಇಲಾಖೆಯು “ಗಮನಾರ್ಹವಾದ ಹೊಂದಿಕೆಯಾಗದಿರುವುದು” ಕಂಡುಬಂದಲ್ಲಿ ಅಂತಹವರಿಗೆ ಇಮೇಲ್ ಕಳುಹಿಸುತ್ತದೆ.

ಅಂತಹ ಪ್ರಕರಣದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮರುಪಾವತಿ ಕ್ಲೇಮ್ ಮಾಡಿರಲಾಗುತ್ತದೆ. ಇಂತಹ ಸಂದರ್ಭದಲ್ಲಿ ವ್ಯವಸ್ಥೆಯು ತೆರಿಗೆ ಪಾವತಿದಾರನಿಗೆ ಎಚ್ಚರಿಕೆ ಕಳುಹಿಸಿ ತಮ್ಮ ಸಲ್ಲಿಕೆಯನ್ನು ಮರುಪರಿಶೀಲಿಸುವಂತೆ ತಿಳಿಸುತ್ತದೆ.

ತೆರಿಗೆ ಪಾವತಿದಾರರು ಆತಂಕ ಪಡಬೇಕೆ?

ತೆರಿಗೆ ತಜ್ಞರು ಹೇಳುವ ಪ್ರಕಾರ, ಆದಾಯ ತೆರಿಗೆ ಇಲಾಖೆ ಬಹಳ ಕಠಿಣವಾದ ಇಮೇಲ್ ಕಳುಹಿಸಿರಬಹುದು. ಆದರೆ ಶಿಕ್ಷೆ ನೀಡುವುದು ಉದ್ದೇಶವಾಗಿರುವುದಿಲ್ಲ. ಇದನ್ನು ತೆರಿಗೆ ಬೆದರಿಕೆ ಎಂದು ಗಮನಿಸದೆ ಅನುಸರಣೆಗೆ ಒತ್ತಾಯಿಸಿರುವುದು ಎಂದು ತಿಳಿದುಕೊಳ್ಳಬೇಕು ಎಂದು ಚಾರ್ಟರ್ಡ್ ಅಕೌಂಟಂಟ್‌ಗಳು ಅಭಿಪ್ರಾಯಪಟ್ಟಿದ್ದಾರೆ.

“ಮಾನ್ಯವಾದ ಕಾರಣಗಳಿಂದ ಹೊಂದಿಕೆಯಾಗದೆ ಇರಬಹುದು. ದಾಖಲೆಗಳು ಅಪೂರ್ಣವಾಗಿರುವುದು ಅಥವಾ ಸ್ವೀಕಾರಾರ್ಹವಲ್ಲದೆ ಇರುವ ಕಾರಣಗಳಿಂದ ಉದ್ಯೋಗದಾತರು ವೇತನದಾರರ ಕಡಿತದ ಹಕ್ಕುಗಳನ್ನು ತಿರಸ್ಕರಿಸಿರಬಹುದು. ಆದರೆ ತೆರಿಗೆದಾರರ ಬಳಿ ಮಾನ್ಯ ಸಾಕ್ಷ್ಯಗಳು ಇದ್ದಲ್ಲಿ ಅವುಗಳನ್ನು ನೇರವಾಗಿ ಐಟಿಆರ್‌ ನಲ್ಲಿ ಕ್ಲೇಮ್ ಮಾಡಲು ಅವಕಾಶ ನೀಡಲಾಗಿದೆ. ಬಹಳಷ್ಟು ಮಂದಿ ಕಡಿತಗಳನ್ನುತಮ್ಮ ಉದ್ಯೋಗದಾತರಿಗೆ ಘೋಷಿಸಲು ಮರೆತಿರುತ್ತಾರೆ ಮತ್ತು ರಿಟರ್ನ್‌ ನಲ್ಲಿ ಅವುಗಳನ್ನು ಕ್ಲೇಮ್ ಮಾಡುವುದು ಇದೆ” ಎನ್ನುತ್ತಾರೆ ತಜ್ಞರು.

ಆದಾಯ ತೆರಿಗೆ ಇಲಾಖೆಯ ವ್ಯವಸ್ಥೆ ಎರಡೂ ಕಾನೂನುಬದ್ಧ ಮತ್ತು ಕಾನೂನುಬಾಹಿರ ಕ್ಲೇಮ್‌ ಗಳನ್ನು ತೋರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ ಇಮೇಲ್ ಎಲ್ಲಾ ಜವಾಬ್ದಾರಿಯನ್ನು ತೆರಿಗೆ ಪಾವತಿಸುವವರ ಮೇಲೆಯೇ ಹೊರಿಸಿದೆ. “ತೆರಿಗೆ ಪಾವತಿಸುವವರೇ ತಮ್ಮ ಕ್ಲೇಮ್‌ ಅನ್ನು ವಿಶ್ಲೇಷಿಸಿ, ದೃಢೀಕರಿಸಬೇಕು ಮತ್ತು ಪರಿಷ್ಕೃತ ರಿಟರ್ನ್ ಮೂಲಕ ಕ್ಲೇಮ್‌ಗಳನ್ನು ಸರಿಪಡಿಸಿಕೊಳ್ಳಬೇಕು ಅಥವಾ ಎಐಎಸ್ (ವಾರ್ಷಿಕ ಮಾಹಿತಿ ಹೇಳಿಕೆ) ಅಭಿಪ್ರಾಯದಲ್ಲಿ ವಿವರ ನೀಡಬೇಕು. ಆದರೆ ಕಡಿತಗಳು ಮಾನ್ಯವಾಗಿದ್ದು, ಅದಕ್ಕೆ ದಾಖಲೆಗಳು ಇದ್ದಲ್ಲಿ ಅವುಗಳನ್ನು ಪರಿಷ್ಕರಿಸುವ ಅಗತ್ಯವಿರುವುದಿಲ್ಲ” ಎನ್ನುತ್ತಾರೆ ತಜ್ಞರು.

ಹೌದು ಇಮೇಲ್‌ನಲ್ಲಿರುವ ಭಾಷೆ ಬೆದರಿಸುವಂತಿದೆ. ಆದರೆ ಇದೊಂದು ಉತ್ತಮ ವ್ಯವಹಾರ. ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಳ್ಳುವ ಮೊದಲು ತೆರಿಗೆ ಪಾವತಿದಾರರಿಗೆ ತಮ್ಮ ತಪ್ಪುಗಳನ್ನು ಸರಿಪಡಿಸಲು ಅವಕಾಶ ನೀಡಲಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News