×
Ad

ಪಶ್ಚಿಮ ಏಷ್ಯಾ ಸಂಘರ್ಷ | ಚರ್ಚೆಗೆ ಒತ್ತಾಯಿಸಿ ಸಂಸತ್ ಆವರಣದಲ್ಲಿ ವಿರೋಧ ಪಕ್ಷದ ಸಂಸದರಿಂದ ಪ್ರತಿಭಟನೆ

Update: 2026-03-09 14:24 IST

Photo credit: PTI

ಹೊಸದಿಲ್ಲಿ: ಪಶ್ಚಿಮ ಏಷ್ಯಾದಲ್ಲಿ ತೀವ್ರಗೊಂಡಿರುವ ಸಂಘರ್ಷದ ಕುರಿತು ಸಂಸತ್ತಿನಲ್ಲಿ ಪೂರ್ಣ ಪ್ರಮಾಣದ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಹಲವು ವಿರೋಧ ಪಕ್ಷಗಳ ಸಂಸದರು ಸೋಮವಾರ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ವಿಷಯದಲ್ಲಿ ಕೇಂದ್ರ ಸರ್ಕಾರ ‘ಮೌನ’ ವಹಿಸಿದೆ ಎಂದು ಅವರು ಟೀಕಿಸಿದರು.

ಬಜೆಟ್ ಅಧಿವೇಶನದ ದ್ವಿತೀಯಾರ್ಧದ ಕಾರ್ಯತಂತ್ರದ ಕುರಿತು ಚರ್ಚಿಸಲು ಸಂಸತ್ ಆವರಣದಲ್ಲಿ ವಿರೋಧ ಪಕ್ಷದ ನಾಯಕ ಖರ್ಗೆ ಅವರ ಕೊಠಡಿಯಲ್ಲಿ ವಿರೋಧ ಪಕ್ಷಗಳ ಸದನದ ನಾಯಕರು ಸಭೆ ನಡೆಸಿದರು.

ಸಭೆಯಲ್ಲಿ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಜೊತೆಗೆ ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಡಿಎಂಕೆಯ ದಯಾನಿಧಿ ಮಾರನ್, ಎನ್ಸಿಪಿ (ಎಸ್ಪಿ) ಯ ಸುಪ್ರಿಯಾ ಸುಳೆ ಮತ್ತು ಶಿವಸೇನೆ (ಯುಬಿಟಿ) ಯ ಸಂಜಯ್ ರಾವತ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಬಜೆಟ್ ಅಧಿವೇಶನದ ಎರಡನೇ ಭಾಗಕ್ಕೆ ಸಂಸತ್ತು ಮತ್ತೆ ಸೇರುತ್ತಿರುವ ಸಂದರ್ಭದಲ್ಲಿ ಇರಾನ್ ಜೊತೆಗಿನ ಅಮೆರಿಕ–ಇಸ್ರೇಲ್ ಯುದ್ಧದ ಪರಿಣಾಮಗಳು ಭಾರತದ ಮೇಲೆ ಬೀಳುವ ಸಾಧ್ಯತೆ ಇದೆ ಎಂದು ಖರ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಉಂಟಾಗಿರುವ ಭೌಗೋಳಿಕ–ರಾಜಕೀಯ ಬಿಕ್ಕಟ್ಟಿನ ಕುರಿತು ಸಂಸತ್ತಿನಲ್ಲಿ ಸಮಗ್ರ ಚರ್ಚೆ ನಡೆಯುವುದು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವರ ಏಕಪಕ್ಷೀಯ ಹೇಳಿಕೆ ಸಮಸ್ಯೆಗೆ ಪರಿಹಾರವಾಗುವುದಿಲ್ಲ. ರಾಷ್ಟ್ರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಮೂಹಿಕ ಪ್ರಯತ್ನ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ವ್ಯಾಪಾರಿಗಳಿಗೆ ನೆರವು ನೀಡಲು, ರಫ್ತುಗಳಿಗೆ ಪೂರೈಕೆ ಸರಪಳಿಗಳನ್ನು ವೈವಿಧ್ಯಗೊಳಿಸಲು ಹಾಗೂ ಬೆಲೆ ಏರಿಕೆಯಿಂದ ಜನರಿಗೆ ಆಗುವ ಹೊರೆ ತಪ್ಪಿಸಲು ಕೇಂದ್ರ ಸರ್ಕಾರ ವಿವರವಾದ ತುರ್ತು ಯೋಜನೆಯನ್ನು ಪ್ರಕಟಿಸಬೇಕು ಎಂದು ಖರ್ಗೆ ಒತ್ತಾಯಿಸಿದರು.

ಸಭೆಯ ಬಳಿಕ ವಿರೋಧ ಪಕ್ಷದ ಸಂಸದರು ಸಂಸತ್ತಿನ ಮಕರ ದ್ವಾರದ ಬಳಿ ಸೇರಿ ಪ್ರತಿಭಟನೆ ನಡೆಸಿದರು. ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದ ಅವರು, ಈ ಪ್ರಶ್ನೆಗಳ ಕುರಿತು ಸರ್ಕಾರ ಮೌನ ವಹಿಸಿರುವುದನ್ನು ಟೀಕಿಸಿದರು.

“ಕೊಲ್ಲಿ ಉರಿಯುತ್ತಿದೆ, ತೈಲ ಆಘಾತ ಎದುರಾಗಿದೆ. ಭಾರತೀಯರು ಅಲ್ಲಿ ಸಿಲುಕಿಕೊಂಡಿದ್ದಾರೆ. ಭಾರತಕ್ಕೆ ನಾಯಕತ್ವ ಬೇಕು—ಮೌನವಲ್ಲ” ಎಂದು ಬರೆದಿದ್ದ ದೊಡ್ಡ ಬ್ಯಾನರ್ ಹಿಡಿದು ಸಂಸದರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಹಾಗೂ ತೃಣಮೂಲ ಕಾಂಗ್ರೆಸ್ ನ ಸಾಗರಿಕಾ ಘೋಷ್ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News