ಪಶ್ಚಿಮ ಏಶ್ಯ ಸಂಘರ್ಷದ ನಡುವೆ ಭಾರತದಿಂದ ಬಾಂಗ್ಲಾಕ್ಕೆ 5 ಸಾವಿರ ಟನ್ ಡೀಸೆಲ್ ಪೂರೈಕೆ
Photo : gemini AI
ಹೊಸದಿಲ್ಲಿ: ಪಶ್ಚಿಮ ಏಶ್ಯ ಸಂಘರ್ಷವು ಜಾಗತಿಕ ಇಂಧನ ಭದ್ರತೆಯ ಮೇಲೆ ಪರಿಣಾಮವನ್ನು ಬೀರಿರುವ ನಡುವೆಯೇ ಭಾರತವು ಅಸ್ಸಾಂನ ನುಮಾಲಿಗಢ ತೈಲ ಸಂಸ್ಕರಣಾಗಾರದಿಂದ ಕೊಳವೆಮಾರ್ಗವಾಗಿ ಬಾಂಗ್ಲಾದೇಶಕ್ಕೆ ಡೀಸೆಲ್ ಪೂರೈಕೆಯನ್ನು ಆರಂಭಿಸಿದೆ. ಕನಿಷ್ಠ 5 ಸಾವಿರ ಟನ್ ಡೀಸೆಲ್ ಕೊಳವೆಮಾರ್ಗದ ಮೂಲಕ ಗಡಿದಾಟಿ ಮಂಗಳವಾರ ಬಾಂಗ್ಲಾವನ್ನು ತಲುಪಲಿದೆಯೆಂದು ಬಾಂಗ್ಲಾದೇಶ ಪೆಟ್ರೋಲಿಯಂ ನಿಗಮದ ಅದ್ಯಕ್ಷ (ಬಿಪಿಸಿ) ಮುಹಮ್ಮದ್ ರೆಝಾನುರ್ ರಹ್ಮಾನ್ ತಿಳಿಸಿದ್ದಾರೆ.
ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಜಂಟಿದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ತೈಲ ಪೂರೈಕೆಯಲ್ಲಿ ಉಂಟಾಗಿರುವ ತೀವ್ರ ವ್ಯತ್ಯಯದಿಂದಾಗಿ ಬಾಂಗ್ಲಾವು ತೈಲದ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಈ ಡೀಸೆಲ್ ಪೂರೈಕೆಯು, ಉಭಯ ನೆರೆಹೊರೆಯ ದೇಶಗಳ ನಡುವೆ ಏರ್ಪಟ್ಟ ಬೃಹತ್ ವಾರ್ಷಿಕ ತೈಲ ಪೂರೈಕೆ ಒಪ್ಪಂದದ ಭಾಗವಾಗಿದೆ.
ಈ ಡೀಸೆಲ್ ಅಸ್ಸಾಂನ ನುಮಾಲಿಗಡ ತೈಲಸಂಸ್ಕರಣಾಗಾರದಿಂದ ಬಾಂಗ್ಲಾದೇಶ- ಭಾರತ ಮಿತ್ರತ್ವ ಪೈಪ್ಲೈನ್ ಮೂಲಕ ಬಾಂಗ್ಲಾದೇಶದ ದಿನಾಜ್ಪುರವನ್ನು ತಲುಪಲಿದೆ. ಬಾಂಗ್ಲಾದೇಶ-ಭಾರತ ಮಿತ್ರತ್ವ ಪೈಪ್ಲೈನ್ ಅನ್ನು 2023ರ ಮಾರ್ಚ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಗಿನ ಬಾಂಗ್ಲಾ ಪ್ರಧಾನಿ ಹಸೀನಾ ಶೇಖ್ ಉದ್ಘಾಟಿಸಿದ್ದರು.