ಮಹಾರಾಷ್ಟ್ರ | ಇವಿಎಂ ತಿರುಚಲು ಶಿವಸೇನೆ (UBT) ಬಣದ ನಾಯಕ ಅಂಬಾದಾಸ್ ದಾನ್ವೆ ಬಳಿ 2.5 ಕೋಟಿ ರೂ.ಗೆ ಬೇಡಿಕೆಯಿಟ್ಟ ಯೋಧನ ಬಂಧನ

Update: 2024-05-08 08:00 GMT

PC : freepressjournal.in

ಛತ್ರಪತಿ ಶಿವಾಜಿನಗರ: ಇವಿಎಂಗಳನ್ನು ತಿರುಚಲು ಶಿವಸೇನೆ (ಉದ್ಧವ್ ಠಾಕ್ರೆ) ಬಣದ ನಾಯಕ ಅಂಬಾದಾಸ್ ದಾನ್ವೆ ಬಳಿ 2.5 ಕೋಟಿ ರೂ. ಗೆ ಬೇಡಿಕೆಯಿಟ್ಟ ಆರೋಪದಲ್ಲಿ ಯೋಧನೊಬ್ಬನನ್ನು ಮಹಾರಾಷ್ಟ್ರದ ಛತ್ರಪತಿ ಶಿವಾಜಿನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿರುವ ಅಧಿಕಾರಿಯು, “ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ದಾನ್ವೆ ಅವರು ಮಾರುತಿ ಢಾಂಕೆ (42) ಎಂಬ ಯೋಧರೊಬ್ಬರು ಚಿಪ್ ಒಂದರ ಮೂಲಕ ಇವಿಎಂ ತಿರುಚಲು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಇಂತಹುದೇ ಕೃತ್ಯದಿಂದ ನಿರ್ದಿಷ್ಟ ಅಭ್ಯರ್ಥಿಯೊಬ್ಬರು ಹೆಚ್ಚು ಮತ ಗಳಿಸಿದ್ದರು ಎಂದು ಹೇಳಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ” ಎಂದು ಹೇಳಿದ್ದಾರೆ.

“ತನ್ನ ಸಾಲವನ್ನು ತೀರಿಸಿಕೊಳ್ಳಲು ಆರೋಪಿಯು ಇಂತಹ ಪ್ರತಿಪಾದನೆ ಮಾಡಿದ್ದಾನೆ. ಆತನಿಗೆ ಇವಿಎಂಗಳ ಕುರಿತು ಏನೂ ತಿಳಿದಿಲ್ಲ” ಎಂದು ಪೊಲೀಸರು ತಿಳಿಸಿದ್ದಾರೆ.

“ಆರೋಪಿಯು ಮಂಗಳವಾರ ಸಂಜೆ 4 ಗಂಟೆಯ ಸುಮಾರಿಗೆ ಸೆಂಟ್ರಲ್ ಬಸ್ ನಿಲ್ದಾಣದ ಬಳಿ ಇರುವ ಹೋಟೆಲೊಂದರಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕರ ಕಿರಿಯ ಸಹೋದರ ರಾಜೇಂದ್ರ ದಾನ್ವೆಯನ್ನು ಭೇಟಿಯಾಗಿದ್ದಾನೆ. ಮಾತುಕತೆ ಮುಗಿದ ನಂತರ ರೂ. 1.5 ಕೋಟಿ ಮೊತ್ತಕ್ಕೆ ಒಪ್ಪಂದ ಅಂತಿಮಗೊಂಡಿತ್ತು” ಎಂದು ಅಧಿಕಾರಿಯು ತಿಳಿಸಿದ್ದಾರೆ.

“ಅಂಬಾದಾಸ್ ದಾನ್ವೆ ಅವರು ನೀಡಿದ್ದ ಮಾಹಿತಿಯನ್ನು ಆಧರಿಸಿ ಮುಂಚಿತವಾಗಿಯೇ ಸ್ಥಳಕ್ಕೆ ಸಾಮಾನ್ಯರ ಉಡುಪಿನಲ್ಲಿ ಪೊಲೀಸರನ್ನು ರವಾನಿಸಲಾಗಿತ್ತು. ಆರೋಪಿಯು ರಾಜೇಂದ್ರ ದಾನ್ವೆಯವರಿಂದ ಮುಂಗಡವಾಗಿ ರೂ. 1 ಲಕ್ಷವನ್ನು ಪಡೆಯುವಾಗ ಆತನನ್ನು ಸ್ಥಳದಲ್ಲಿಯೇ ಸೆರೆ ಹಿಡಿಯಲಾಯಿತು” ಎಂದು ಅವರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಮನೋಜ್ ಲೋಹಿಯಾ, “ಆರೋಪಿಯು ಭಾರಿ ಸಾಲದ ಸುಳಿಗೆ ಸಿಲುಕಿದ್ದ. ಆತ ತನ್ನ ಸಾಲದ ಸುಳಿಯಿಂದ ಹೊರಬರಲು ಈ ತಂತ್ರ ಮಾಡಿದ್ದ. ಆತನಿಗೆ ಇವಿಎಂ ಬಗ್ಗೆ ಏನೂ ತಿಳಿದಿಲ್ಲ. ನಾವು ಆತನನ್ನು ಬಂಧಿಸಿದ್ದು, ಕ್ರಾಂತಿ ಚೌಕ್ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ” ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ) ಹಾಗೂ 511 (ಅಪರಾಧ ನಡೆಸುವ ಪ್ರಯತ್ನ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮತ್ತೊಬ್ಬ ಅಧಿಕಾರಿಯು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಯು ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಪಠಾದ್ರಿ ನಿವಾಸಿಯಾಗಿದ್ದು, ಆತನನ್ನು ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News