ʼಅಗ್ನಿಪಥʼ ಬದಲಿಸಿದ ಚಂಬಲ್ ಕಣಿವೆಯ ಹಾದಿ!

Update: 2024-05-08 17:21 GMT

ಸಾಂದರ್ಭಿಕ ಚಿತ್ರ

ಗ್ವಾಲಿಯರ್ : ತನ್ನ ಕಂದರಗಳು, ಢಕಾಯಿತರು ಮತ್ತು ಬಂದೂಕುಗಳಿಗಾಗಿ ಹೆಸರಾಗಿರುವ ಮಧ್ಯಪ್ರದೇಶದ ಚಂಬಲ್ ಕಣಿವೆಗೆ ಇನ್ನೊಂದು ಗುರುತೂ ಇದೆ ಎನ್ನುವುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಈ ಪ್ರದೇಶದಲ್ಲಿ ಕೇವಲ ಢಕಾಯಿತರು ಅಥವಾ ಬಂಡುಕೋರರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವುದಿಲ್ಲ, ಪ್ರದೇಶದಲ್ಲಿಯ ಹೆಚ್ಚಿನ ಸಂಖ್ಯೆಯ ಯುವಜನರು ದೀರ್ಘಕಾಲದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ದೇಶವನ್ನು ರಕ್ಷಿಸುತ್ತಿದ್ದಾರೆ.

ಚಂಬಲ್ ಪ್ರದೇಶದಲ್ಲಿಯ ಗ್ರಾಮಗಳಾದ್ಯಂತ ಅಸಂಖ್ಯಾತ ಮನೆಗಳು ಯೋಧರನ್ನು ದೇಶಕ್ಕೆ ನೀಡಿವೆ ಮತ್ತು ಇಲ್ಲಿ ಹುತಾತ್ಮರ ದೀರ್ಘ ಪಟ್ಟಿಯೇ ಇದೆ. ಆದರೆ ಅಗ್ನಿಪಥ ಯೋಜನೆಯು ಆರಂಭಗೊಂಡಾಗಿನಿಂದ ಇಲ್ಲಿಯ ಸ್ಥಿತಿಯೇ ಬದಲಾಗಿಬಿಟ್ಟಿದೆ.

ಅದೊಂದು ಕಾಲವಿತ್ತು. ಚಂಬಲ್ ಪ್ರದೇಶದ ಭಿಂಡ್,ಮೊರೆನಾ ಮತ್ತು ಗ್ವಾಲಿಯರ್ ಜಿಲ್ಲೆಗಳಿಂದ ಸೇನಾ ಭರ್ತಿಗಾಗಿ ಸಲ್ಲಿಸಲಾಗುತ್ತಿದ್ದ ಅರ್ಜಿಗಳ ಸಂಖ್ಯೆ ಮಧ್ಯಪ್ರದೇಶದ ಎಲ್ಲ ಜಿಲ್ಲೆಗಳಲ್ಲಿಯ ಒಟ್ಟು ಅರ್ಜಿಗಳ ಸಂಖ್ಯೆಗೆ ಸಮವಾಗಿರುತ್ತಿತ್ತು ಎಂದು ಗ್ವಾಲಿಯರ್‌ನ ಎಸ್‌ಎಫ್ ಮೈದಾನದಲ್ಲಿ ಸೇನೆ, ಪೋಲಿಸ್ ಮತ್ತು ಅರೆಸೇನಾ ಪಡೆಗಳನ್ನು ಸೇರುವ ಯುವಜನರಿಗೆ ದೈಹಿಕ ತರಬೇತಿಯನ್ನು ನೀಡುತ್ತಿರುವ ಸೂರಜ್ ಹೇಳುತ್ತಾರೆ.

ಆದರೆ ಅಗ್ನಿಪಥ ಯೋಜನೆ ಬಂದ ಬಳಿಕ ಚಂಬಲ್‌ನ ಯುವಜನರು ಸೇನೆಯ ಬಗ್ಗೆ ಭ್ರಮನಿರಸನಗೊಂಡಿದ್ದಾರೆ.

ಮಧ್ಯಪ್ರದೇಶದ ಹುತಾತ್ಮರಲ್ಲಿ ಶೇ.45ರಷ್ಟು ಯೋಧರು ಭಿಂಡ್ ಮತ್ತು ಮೊರೆನಾ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ನೆರೆಯ ಗ್ವಾಲಿಯರ್ ಜಿಲ್ಲೆಯನ್ನೂ ಸೇರಿಸಿದರೆ ಈ ಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ.

‘ದೇಶಕ್ಕಾಗಿ ಹುತಾತ್ಮರಾಗುವುದು ಹೆಮ್ಮೆಯ ವಿಷಯ, ಆದರೆ ಅಗ್ನಿಪಥ ಯೋಜನೆ ಬಂದ ಬಳಿಕ ನಾವು ಹುತಾತ್ಮರಾದರೆ ನಮ್ಮ ಕುಟುಂಬಗಳಿಗೆ ಸಾಮಾನ್ಯ ಯೋಧರ ಕುಟುಂಬಗಳು ಪಡೆಯುವ ಪಿಂಚಣಿಯಾಗಲೀ ಇತರ ಸೌಲಭ್ಯಗಳಾಗಲೀ ದೊರೆಯುವುದಿಲ್ಲ’ ಎನ್ನುತ್ತಾರೆ ಮೊರೆನಾ ಜಿಲ್ಲೆಯ ಕೈಲಾರಸ್ ಗ್ರಾಮದ ಮನು ಸಿಕಾರ್ವರ್.

ಎರಡು ವರ್ಷಗಳ ಹಿಂದಿನವರೆಗೂ ಮನು ಸೇನೆಯನ್ನು ಸೇರಲು ಬಯಸುತ್ತಿದ್ದರು ಮತ್ತು ಅದಕ್ಕಾಗಿ ಎಲ್ಲ ತಯಾರಿಗಳನ್ನು ಶ್ರದ್ಧೆಯಿಂದ ನಡೆಸುತ್ತಿದ್ದರು. ಆದರೆ ಅಗ್ನಿಪಥ ಯೋಜನೆ ಅವರ ಕನಸನ್ನು ಮೊಳಕೆಯಲ್ಲಿಯೇ ಚಿವುಟಿಹಾಕಿದೆ.

‘ಅಗ್ನಿಪಥ ಯೋಜನೆಯಿಂದಾಗಿ ಸೇನೆಗೆ ಸೇರುವ ನನ್ನ ಕನಸನ್ನು ನಾನು ತೊರೆಯಬೇಕಾಯಿತು. ಏಕೆಂದರೆ ಅಲ್ಲಿ ಯಾವುದೇ ಭವಿಷ್ಯವಿಲ್ಲ. ನಾಲ್ಕು ವರ್ಷಗಳ ಬಳಿಕ ಸೇನೆಯಿಂದ ಮರಳಿದ ಬಳಿಕ ನಾನು ಬೇರೆ ಕೆಲಸ ಹುಡುಕಿಕೊಳ್ಳಬೇಕು. ಹೊಸದಿಕ್ಕಿನಲ್ಲಿ ಹೋರಾಡಬೇಕು ’ ಎಂದು ಮನು ಹೇಳಿದರು.

ಇದು ಮನು ಒಬ್ಬರದೇ ಕಥೆಯಲ್ಲ. ಅವರಂತೆ ಅನೇಕ ಯುವಜನರು ಸೇನೆಯನ್ನು ಸೇರಲು ಆಕಾಂಕ್ಷಿಗಳಾಗಿದ್ದರು,ಆದರೆ ಅವರೀಗ ಬೇರೆ ಕೆಲಸಗಳನ್ನು ಹುಡುಕುತ್ತಿದ್ದಾರೆ. ಕೆಲವರು ಕಮ್ಮಾರರಾಗಿ, ಬಡಗಿಗಳಾಗಿ ಬದುಕಿನ ದಾರಿಯನ್ನು ಕಂಡುಕೊಂಡಿದ್ದಾರೆ. ಕೆಲವರು ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆ.

ಮನು ಈಗ ಸ್ಪಧಾತ್ಮಕ ಪರೀಕ್ಷೆಗಳಿಗಾಗಿ ದಿಲ್ಲಿಯಲ್ಲಿ ತಯಾರಿ ನಡೆಸುತ್ತಿದ್ದಾರೆ. ಆದರೆ ತನ್ನ ತಂದೆಯೂ ಯೋಧರಾಗಿದ್ದರಿಂದ ಈಗಲೂ ತನ್ನ ಮೊದಲ ಆಯ್ಕೆಯು ಸೇನೆಯೇ ಆಗಿದೆ ಎಂದು ಅವರು ಹೇಳಿದರು.

ದೇಶದ ಅನೇಕ ಭಾಗಗಳಲ್ಲಿ ಸೇನೆಯು ಗೌರವಾನ್ವಿತ ಜೀವನವನ್ನು ನಡೆಸಲು ಒಂದು ಸಂಪ್ರದಾಯ, ಪ್ರವೃತ್ತಿ ಮತ್ತು ಅಗತ್ಯವಾಗಿದೆ. ಆದರೆ ಅಗ್ನಿಪಥ ಯೋಜನೆಯು ಒಂದೇ ಏಟಿಗೆ ಈ ಸಂಸ್ಕೃತಿಯನ್ನು ಕೊನೆಗೊಳಿಸಿದೆ. ಅಗ್ನಿಪಥ ಯೋಜನೆ ಬಂದ ಬಳಿಕ ಚಂಬಲ್‌ನಲ್ಲಿ ಸೇನೆಗೆ ಸೇರಲು ದೈಹಿಕ ತರಬೇತಿಯನ್ನು ಪಡೆಯುತ್ತಿರುವ ಆಕಾಂಕ್ಷಿಗಳ ಸಂಖ್ಯೆಯೂ ತೀರ ಕುಸಿದಿದೆ.

ಅಗ್ನಿವೀರನಾಗುವುದು ಸಂಪೂರ್ಣ ಅರ್ಥಹೀನ. ಸತ್ತರೂ ಹುತಾತ್ಮ ಪಟ್ಟ ದೊರೆಯುವುದಿಲ್ಲ ಎಂದು ಹೇಳುವ ಮೂಲಕ ಈ ಪ್ರದೇಶದಲ್ಲಿಯ ಗ್ರಾಮಸ್ಥರು ಅಗ್ನಿಪಥ ಯೋಜನೆಯನ್ನು ತಿರಸ್ಕರಿಸಿದರು.

ಅವಿವಾಹಿತರು ಮಾತ್ರ ಅಗ್ನಿಪಥ ಯೋಜನೆಗೆ ಅರ್ಹರಾಗಿದ್ದಾರೆ. ಸೇವೆಯ ನಡುವೆ ಅವರು ವಿವಾಹವಾದರೆ ಅವರನ್ನು ವಜಾಗೊಳಿಸಲಾಗುತ್ತದೆ. ಚಂಬಲ್‌ನಲ್ಲಿ, ವಿಶೇಷವಾಗಿ ಗ್ವಾಲಿಯರ್, ಭಿಂಡ್ ಮತ್ತು ಮೊರೆನಾಗಳಲ್ಲಿ 20-21 ವರ್ಷಗಳ ಸಣ್ಣ ವಯಸ್ಸಿನಲ್ಲಿಯೇ ಮದುವೆ ಮಾಡಲಾಗುತ್ತದೆ. ಸೇನೆಯಲ್ಲಿ ಸಮವಸ್ತ್ರ ವಿತರಣೆಯಾದ ಕೂಡಲೇ ಮದುವೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಈ ಪ್ರದೇಶದಲ್ಲಿ 25 ವರ್ಷ ವಯಸ್ಸಿನ ಯುವಕರನ್ನು ‘ಮುದುಕರು’ ಎಂದು ಪರಿಗಣಿಸಲಾಗುತ್ತದೆ.

ಅಗ್ನಿವೀರರು ಮದುವೆಯಾಗುವಂತಿಲ್ಲ, ಆದರೆ ನಿಶ್ಚಿತಾರ್ಥ ಮಾಡಿಕೊಳ್ಳಬಹುದು. ಆದರೆ ಅದಕ್ಕೆ ಹೆಣ್ಣು ಸಿಗುತ್ತಿಲ್ಲ. ಭವಿಷ್ಯದ ಬಗ್ಗೆ ಯಾವುದೇ ಭದ್ರತೆಯಿಲ್ಲದ ಅಗ್ನಿವೀರರಿಗೆ ಹೆಣ್ಣು ಕೊಡಲು ಯಾವ ಮಾತಾಪಿತೃಗಳೂ ಸಿದ್ಧರಿಲ್ಲ. ಹೀಗಾಗಿ ಅಗ್ನಿವೀರರಾಗಿ ನಾಲ್ಕು ವರ್ಷಗಳಲ್ಲಿ ನಿವೃತ್ತರಾಗುವವರು ಅತ್ತ ಕೆಲಸವೂ ಇಲ್ಲದೇ ಅವಿವಾಹಿತರಾಗಿಯೇ ಉಳಿಯಬೇಕಾದ ಎರಡಲಗಿನ ಕತ್ತಿಯನ್ನು ಎದುರಿಸುತ್ತಿದ್ದಾರೆ.

ಸೌಜನ್ಯ : thewire.in

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News