ಕೇಂದ್ರ ನಾಗರಿಕ ಸೇವಾ ನೇಮಕಾತಿಗಳಲ್ಲಿ ಮುಸ್ಲಿಮರ ಪ್ರಮಾಣ ಶೇ. 70ರಷ್ಟು ಹೆಚ್ಚಳ

Update: 2024-04-17 17:37 GMT

 PC : ANI

ಹೊಸದಿಲ್ಲಿ: 14 ವರ್ಷಗಳ ಹಿಂದೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಶಾ ಫೈಸಲ್ ಪ್ರಥಮ ರ‍್ಯಾಂಕ್ ಪಡೆದಾಗ, ಇಡೀ ಮುಸ್ಲಿಂ ಸಮುದಾಯದಲ್ಲಿ ಒಂದು ಬಗೆಯ ಹೆಮ್ಮೆಯ ಭಾವನೆ ಮೂಡಿತ್ತು. ಅದು ಸಮುದಾಯಕ್ಕೆ ನಾಗರಿಕ ಸೇವೆ ಪರೀಕ್ಷೆಗಳಲ್ಲಿ ಮರಳಿ ಆಸಕ್ತಿಯನ್ನು ಮೂಡಿಸಿತ್ತು. ಈ ವರ್ಷ ವಿಶ್ವದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆ ಎಂದು ಪರಿಗಣಿಸಲಾಗುವ ಯುಪಿಎಸ್ಸಿ ಯಲ್ಲಿ ಆಯ್ಕೆಯಾಗಿರುವ 50 ಮಂದಿ ನಾಗರಿಕ ಸೇವಾ ಆಕಾಂಕ್ಷಿಗಳು ಮುಸ್ಲಿಮರು. ಕಳೆದ ವರ್ಷಕ್ಕೆ ಹೋಲಿಸಿದರೆ, ಮುಸ್ಲಿಮರ ಆಯ್ಕೆ ಪ್ರಮಾಣದಲ್ಲಿ ಶೇ. 70ರಷ್ಟು ಏರಿಕೆ ಕಂಡು ಬಂದಿದೆ ಎಂದು theprint.in ವರದಿ ಮಾಡಿದೆ.

2023ರ ನಾಗರಿಕ ಸೇವೆಗಳ ಪರೀಕ್ಷೆಯ ಜ್ಯೇಷ್ಠತಾ ಪಟ್ಟಿಯಲ್ಲಿ ನೌಶೀನ್ (ಅಖಿಲ ಭಾರತ ರ‍್ಯಾಂಕ್ 9), ವಾರ್ದಾ ಖಾನ್ (18), ಝುಫಿಶಾನ್ ಹಕ್ (34) ಹಾಗೂ ಫಾಬಿ ರಶೀದ್ (71) ಸೇರಿದಂತೆ ನಾಲ್ವರು ಅಗ್ರ 100ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

2021 ಹಾಗೂ 2022ರಲ್ಲಿ ಕ್ರಮವಾಗಿ 25 ಹಾಗೂ 29 ಇದ್ದ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯಕ್ಕೆ ಹೋಲಿಸಿದರೆ ಈ ಬಾರಿಯ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದ್ದರೂ, ಮುಸ್ಲಿಂ ಸಮುದಾಯದ ಒಟ್ಟು ಜನಸಂಖ್ಯೆಯನ್ನು ಈ ಸಂಖ್ಯೆಗಳಷ್ಟೆ ಪ್ರತಿನಿಧಿಸುವುದಿಲ್ಲ ಎನ್ನುವುದು ಗಮನಾರ್ಹ ಅಂಶ.

ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಅಣಕು ಸಂದರ್ಶನಗಳನ್ನು ಏರ್ಪಡಿಸುತ್ತಾ ಬರುತ್ತಿರುವ ಹೊಸದಿಲ್ಲಿಯಲ್ಲಿ ತರಬೇತುದಾರ ಹಾಗೂ ಸಹಾಯಕ ಪ್ರಾಧ್ಯಾಪಕ ವಿಜೇಂದರ್ ಚೌಹಾಣ್ ಈ ಕುರಿತು ಪ್ರತಿಕ್ರಿಯಿಸಿ , “ಈ ಪ್ರತಿಪಾದನೆಯ ಸಮರ್ಥನೆಗೆ ನನಗೆ ಇನ್ನೂ ಹೆಚ್ಚು ದತ್ತಾಂಶಗಳ ಅಗತ್ಯವಿದೆ. ಅವರು ಈಗಲೂ ತೀರಾ ಕಳಪೆ ಪ್ರಾತಿನಿಧ್ಯ ಹೊಂದಿದ್ದು, ತಮ್ಮ ಜನಸಂಖ್ಯೆಯ ಅನುಪಾತವನ್ನೂ ಸರಿಗಟ್ಟುತ್ತಿಲ್ಲ. ನಾಗರಿಕ ಸೇವೆಗಳಲ್ಲಿ ತಮ್ಮ ಪ್ರಾತಿನಿಧ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಯಾವುದಾದರೂ ಅಲ್ಪಸಂಖ್ಯಾತ ಸಮುದಾಯವಿದ್ದರೆ ಅದು ಜೈನ ಸಮುದಾಯವೇ ಹೊರತು ಮುಸ್ಲಿಮರಲ್ಲ” ಎನ್ನುತ್ತಾರೆ.

ಮಂಗಳವಾರ ಬಿಡುಗಡೆಯಾಗಿರುವ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಜ್ಯೇಷ್ಠತಾ ಪಟ್ಟಿಯ ಪ್ರಕಾರ, ಒಟ್ಟಾರೆ 1,016 ಅಭ್ಯರ್ಥಿಗಳು ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್) ಹಾಗೂ ಇನ್ನಿತರ ವಿಭಾಗಗಳ ನೇಮಕಾತಿಗೆ ಆಯ್ಕೆಗೊಂಡಿದ್ದಾರೆ.

ಮೇಲೆ ಉಲ್ಲೇಖಿಸಲಾಗಿರುವ ಸಂಖ್ಯೆಗಳನ್ನು ಯುಪಿಎಸ್ಸಿ ಪಟ್ಟಿಯ ಅಂತಿಮ ಫಲಿತಾಂಶದಿಂದ ತೆಗೆದುಕೊಳ್ಳಲಾಗಿದೆ. ಆದರೆ, ಯುಪಿಎಎಸ್ಸಿ ತಾನಾಗಿಯೇ ಅಭ್ಯರ್ಥಿಗಳನ್ನು ಧರ್ಮದ ಆಧಾರದಲ್ಲಿ ವರ್ಗೀಕರಿಸುವುದಿಲ್ಲ.

ಕಳೆದ ಮೂರು ವರ್ಷಗಳಲ್ಲಿ ನಾಗರಿಕ ಸೇವಾ ಪರೀಕ್ಷೆಯ ಹುದ್ದೆಗಳಲ್ಲಿ ಕೊಂಚ ಮಟ್ಟಿನ ಏರಿಕೆಯಾಗಿರುವುದನ್ನೂ ಪರಿಗಣಿಸಬೇಕಿದೆ. 2021ರಲ್ಲಿ 712 ಹುದ್ದೆಗಳಿದ್ದದ್ದು, 2022ರಲ್ಲಿ 1022ಕ್ಕೆ ಏರಿಕೆಯಾಗಿ, 2023ರಲ್ಲಿ 1,016ಕ್ಕೆ ತಲುಪಿದೆ.

ಹಾಗಾದರೆ, ಯುಪಿಎಸ್ಸಿಯಲ್ಲಿ ಮುಸ್ಲಿಮರ ಪ್ರಾತಿನಿಧ್ಯವು ಏರಿಕೆಯಾಗುತ್ತಿದೆಯೆ? ಕೋಚಿಂಗ್ ಸೆಂಟರ್ ಉದ್ಯಮದ ಮೂಲವೊಂದರ ಪ್ರಕಾರ, ಒಂದು ವೇಳೆ ಕಳೆದ ಮೂರು ವರ್ಷಗಳಲ್ಲಿನ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಮಾತ್ರ ಇದು ನಿಜವಾಗಿದೆ.

ಇದಕ್ಕೆ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಪರೀಕ್ಷೆಯ ಬಗ್ಗೆ ಜಾಗೃತಿ ಮೂಡಿರುವುದು ಹಾಗೂ ಸಮುದಾಯಗಳು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳು, ಅಧ್ಯಯನ ಸಾಮಗ್ರಿ ಹಾಗೂ ತರಬೇತಿ ತರಗತಿಗಳನ್ನು ಒದಗಿಸಲು ಮುಂದೆ ಬರುತ್ತಿರುವುದೂ ಕಾರಣ ಎಂದು ಮೂಲಗಳು ಹೇಳುತ್ತವೆ.

ಈ ಏರಿಕೆಯ ಹಿಂದಿನ ಕಾರಣದ ಬಗ್ಗೆ ಹೇಳುವ ಚೌಹಾಣ್ “ಈ ಕುರಿತು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಲ್ಲಿ ಹೆಚ್ಚು ಜಾಗೃತಿ ಮೂಡಿದ್ದು, ಅವರದನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಹೀಗಾಗಿ ನಾವು ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳನ್ನು ನೋಡುತ್ತಿದ್ದೇವೆ. ಸಂತಸದ ಸಂಗತಿಯೆಂದರೆ, ಹೆಚ್ಚು ಮಹಿಳೆಯರು ನಾಗರಿಕ ಸೇವೆಗಳ ಆಕಾಂಕ್ಷಿಗಳಾಗುತ್ತಿದ್ದಾರೆ” ಎಂದು ವಿವರಿಸುತ್ತಾರೆ.

2023ರ ಅಂತಿಮ ಫಲಿತಾಂಶವು ಯುಪಿಎಸ್ಸಿಯಲ್ಲಿ ಜೈನರ ಪ್ರಾತಿನಿಧ್ಯವೂ ಏರಿಕೆಯಾಗಿರುವುದನ್ನು ತೋರಿಸುತ್ತಿದೆ. ಈ ವರ್ಷದ ಪಟ್ಟಿಯಲ್ಲಿ ಜೈನ ಸಮುದಾಯದಿಂದ ಒಟ್ಟು 12 ಅಭ್ಯರ್ಥಿಗಳಿದ್ದಾರೆ.

ಹೀಗಿದ್ದೂ, ನಾಗರಿಕ ಸೇವೆಗಳ ತರಬೇತಿ ವಲಯದಲ್ಲಿನ ತಜ್ಞರ ಪ್ರಕಾರ, ಮುಸ್ಲಿಮರ ಪ್ರಾತಿನಿಧ್ಯವು ಏರಿಕೆಯಾಗುತ್ತಿದೆ ಎಂದು ಪ್ರತಿಪಾದಿಸಲು ಈ ದತ್ತಾಂಶವು ಸಾಕಷ್ಟಾಗುವುದಿಲ್ಲ ಎನ್ನುತ್ತಾರೆ.

ದೇಶದಲ್ಲಿನ ಜೈನರು, ಬನಿಯಾಗಳು ಹಾಗೂ ದಲಿತರು ನಾಗರಿಕ ಸೇವೆಗಳ ಪ್ರವೇಶ ಪರೀಕ್ಷೆಗಳನ್ನು ಯಶಸ್ವಿಯಾಗಿ ದಾಟಲು ಹೇಗೆ ಪರಸ್ಪರ ಸಹಾಯ ಮಾಡಿಕೊಳ್ಳುತ್ತಿವೆ ಎಂಬ ಕುರಿತು ವರದಿಯಾಗಿತ್ತು. ಯುಪಿಎಸ್ಸಿ ತರಬೇತಿಯನ್ನು ಪ್ರಾಯೋಜಿಸುವ ಈ ಸಮುದಾಯಗಳ ಉಪಕ್ರಮಗಳು ತಮ್ಮ ಸಮುದಾಯಗಳ ಬಡ ಸದಸ್ಯರಿಗೆ ನೆರವು ಒದಗಿಸುವ ಹೊಸ ಮಾದರಿಯಾಗಿದ್ದು, ಭಾರತದ ಅತ್ಯುನ್ನತ ಅಧಿಕಾರ ಕೇಂದ್ರದಲ್ಲಿ ಸಾಕಷ್ಟು ಪ್ರಾತಿನಿಧ್ಯವವನ್ನು ಖಾತರಿ ಪಡಿಸುತ್ತಿವೆ. ಇದರ ಫಲಿತಾಂಶವೆಂದರೆ, ಕೋಟ್ಯಂತರ ಭಾರತೀಯ ಯುವಕರಿಗೆ ಕೈಗೆಟಕುತ್ತಿರುವ ಯುಪಿಎಸ್ಸಿ ಪರೀಕ್ಷೆಗಳು.

“ಈ ಫಲಿತಾಂಶದಲ್ಲಿ ಹಾಗೂ ಅಂತರ್ಜಾಲದಲ್ಲೂ ಕೂಡಾ ಇಂತಹ ಪ್ರತಿಷ್ಠಾನಗಳು ಪ್ರಮುಖ ಪಾತ್ರ ವಹಿಸಿವೆ. ಈಗ ಬಹುತೇಕ ಕಲಿಕಾ ಸಾಮಗ್ರಿಗಳು ಅಂತರ್ಜಾಲದಲ್ಲೇ ಲಭ್ಯವಿದ್ದು, ಇದೂ ಕೂಡಾ ಸಹಾಯಕವಾಗಿದೆ. ಅತಿಯ, ಹಮ್ದರ್ದ್ ಹಾಗೂ ಜಾಮಿಯಾದಂಥ ಪ್ರತಿಷ್ಠಾನಗಳು ಪರೀಕ್ಷಾ ಆಕಾಂಕ್ಷಿಗಳು ಬಯಸುವ ಪರಿಸರ ಹಾಗೂ ನೆರವನ್ನು ಒದಗಿಸುತ್ತಿವೆ” ಎನ್ನುತ್ತಾರೆ ಆತಿಯ ಪ್ರತಿಷ್ಠಾನದ ವಿದ್ಯಾರ್ಥಿ ನಿಲಯಗಳನ್ನು ನಿರ್ವಹಿಸುತ್ತಿರುವ ಯೂನಿಸ್ ಯೂಸುಫ್ ಮೀರ್.

ಈ ವರ್ಷ ಆತಿಯ ಪ್ರತಿಷ್ಠಾನದ ಓರ್ವ ವಿದ್ಯಾರ್ಥಿ ಅಖಿಲ ಭಾರತ ಮಟ್ಟದಲ್ಲಿ 88ನೇ ರ‍್ಯಾಂಕ್ ಪಡೆದಿದ್ದರೆ, ಇನ್ನೂ ಆರು ಮಂದಿ ಅಭ್ಯರ್ಥಿಗಳು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಈ ಪ್ರತಿಷ್ಠಾನವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ತಯಾರಿಸುತ್ತಿದ್ದರೂ, ನಾವಿನ್ನೂ ಸಾಕಷ್ಟು ದೂರ ಕ್ರಮಿಸಬೇಕಿದೆ ಎಂದು ಮುಸ್ಲಿಂ ಸಮುದಾಯ ಭಾವಿಸಿದೆ.

ಈ ಕುರಿತು ಪ್ರತಿಕ್ರಿಯಿಸುವ 2023ನೇ ಬ್ಯಾಚ್ ನ ಐಎಎಸ್ ಅಧಿಕಾರಿ ಮೊಯಿನ್ ಅಹ್ಮದ್, “ಜಾಗೃತಿಯ ಮಟ್ಟವು ಹೆಚ್ಚಳವಾಗುತ್ತಿದೆ ಹಾಗೂ ಮುಸ್ಲಿಂ ಸಮುದಾಯದ ಮಧ್ಯಮ ವರ್ಗ ಮತ್ತು ತಳ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಆಯ್ಕೆಯ ಅವಕಾಶ ದೊರೆಯುತ್ತಿರುವುದರಿಂದ ಶಿಕ್ಷಣವನ್ನು ಆಧರಿಸಿ ಅದ್ಭುತವಾದುದನ್ನು ಸಾಧಿಸಬಹುದು ಎಂಬ ಭಾವನೆ ಬೆಳೆಯುತ್ತಿದೆ ಎಂಬುದು ನನ್ನ ಅನಿಸಿಕೆಯಾಗಿದೆ” ಎಂದು ಹೇಳುತ್ತಾರೆ.

“ಯಾಕೆಂದರೆ, ಈ ಮುಂಚೆ ಮುಸ್ಲಿಮರಿಗೆ ಉದ್ಯೋಗ ದೊರೆಯುವುದಿಲ್ಲ ಅಥವಾ ದೊಡ್ಡ ವ್ಯಕ್ತಿಗಳು ಮಾತ್ರ ಉದ್ಯೋಗ ಪಡೆಯುತ್ತಾರೆ ಎಂಬ ಭಾವನೆಯಿತ್ತು. ಈ ಮಿಥ್ಯೆ ಕುಸಿಯುತ್ತಿದ್ದರೂ, ಸಮುದಾಯದ ಜನಸಂಖ್ಯೆಯ ಅನುಪಾತಕ್ಕೆ ಹೋಲಿಸಿದರೆ ಇನ್ನೂ ತೀರಾ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದೆ” ಎನ್ನುತ್ತಾರವರು.

ಇದೇ ಧಾಟಿಯಲ್ಲಿ ಮಾತನಾಡುವ ಚೌಹಾಣ್, ಭಾರತದಲ್ಲಿನ ಜನಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಪಾಲನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳುತ್ತಿರುವ ಮುಸ್ಲಿಂ ಅಭ್ಯರ್ಥಿಗಳ ಸಂಖ್ಯೆ ತೀರಾ ನಗಣ್ಯವಾಗಿದೆ ಎನ್ನುತ್ತಾರೆ. “ದೇಶದಲ್ಲಿ ಜೈನರ ಜನಸಂಖ್ಯೆ ಶೇ. 0.4 ಇದೆ. ಆ ಲೆಕ್ಕದಲ್ಲಿ ಜೈನರ ಅನುಪಾತಕ್ಕೆ ಹೋಲಿಸಿದರೆ ಮುಸ್ಲಿಂ ಅಭ್ಯರ್ಥಿಗಳು 480 ಮಂದಿ ಇರಬೇಕು” ಎಂದು ಹೇಳುತ್ತಾರೆ.

ಯಶಸ್ವಿ ಅಭ್ಯರ್ಥಿಗಳನ್ನು ಅಭಿನಂದಿಸುವಾಗ ಹಲವಾರು ಸಾಮಾಜಿಕ ಮಾಧ್ಯಲಮ ಬಳಕೆದಾರರು, ದೇಶದ ಜನಸಂಖ್ಯೆಯಲ್ಲಿ ಮುಸ್ಲಿಮರ ಜನಸಂಖ್ಯೆ ಶೇ. 30ರಷ್ಟಿದ್ದರೂ, 1016 ಅಭ್ಯರ್ಥಿಗಳ ಪೈಕಿ ಕೇವಲ 51 ಮುಸ್ಲಿಂ ಅಭ್ಯರ್ಥಿಗಳಿರುವುದು ಸಾಲದು ಎಂತಲೂ ತಮ್ಮ ಭಾವನೆಗಳನ್ನು ಉಲ್ಲೇಖಿಸುತ್ತಿದ್ದಾರೆ.

ಈ ಸಂಭ್ರಮಾಚರಣೆ ಹಾಗೂ ಆತ್ಮನಿರೀಕ್ಷಣೆಯ ನಡುವೆ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಿರುವ ಮುಸ್ಲಿಮರ ಸಂಖ್ಯೆಯ ಕುರಿತು ಸುದರ್ಶನ್ ನ್ಯೂಸ್ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕ ಸುರೇಶ್ ಚವ್ಹಾಂಕೆ ಒಂದು ಟ್ವೀಟ್ ಮಾಡಿದ್ದರು.

ನಾಲ್ಕು ವರ್ಷಗಳ ಹಿಂದೆ ‘ಯುಪಿಎಸ್ಸಿ ಜಿಹಾದ್’ ಎಂಬ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದ ಚವ್ಹಾಂಕೆ, ಭಾರತೀಯ ನಾಗರಿಕ ಸೇವೆಗಳಲ್ಲಿ ಮುಸ್ಲಿಮರನ್ನು ಒಳ ನುಸುಳಿಸುವ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಇದರ ಪರಿಣಾಮವಾಗಿ ಅವರ ಕಾರ್ಯಕ್ರಮದ ವಿಷಯವು ಗಮನ ಸೆಳೆದು, ಹಲವರು ಈ ಕಾರ್ಯಕ್ರಮ ದ್ವೇಷ ಭಾಷಣಕ್ಕೆ ಸಮ ಎಂದು ದೂಷಿಸಿದ್ದರು.

“ಈ ಕಾರ್ಯಕ್ರಮ ಆಕ್ರಮಣಕಾರಿ ಧೋರಣೆಯದ್ದಾಗಿದ್ದು, ಉತ್ತಮ ಅಭಿರುಚಿಯನ್ನು ಹೊಂದಿರಲಿಲ್ಲ. ಈ ಕಾರ್ಯಕ್ರಮ ಕೋಮುವಾದಿ ಭಾವನೆಯನ್ನು ಪ್ರಚೋದಿಸುವ ರೀತಿಯಲ್ಲಿತ್ತು” ಎಂದು 2020ರಲ್ಲಿ ಸುಪ್ರೀಂ ಕೋರ್ಟ್ ಎದುರು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪ್ರಮಾಣ ಪತ್ರ ಸಲ್ಲಿಸಿತ್ತು. ಈ ಕಾರ್ಯಕ್ರಮದ ಪ್ರಸಾರದ ಧಾಟಿ ಹಾಗೂ ಆಶಯ, ಸುದ್ದಿ ವಾಹಿನಿಯ ಮೂಲಕ ಪ್ರಸ್ತುತ ಪಡಿಸಿದ ಹಲವಾರು ಹೇಳಿಕೆಗಳು ಹಾಗೂ ಶ್ರಾವ್ಯ-ದೃಶ್ಯ ತುಣುಕುಗಳು ಕಾರ್ಯಕ್ರಮ ಸಂಹಿತೆಯನ್ನು ಉಲ್ಲಂಘಿಸಿರುವುದನ್ನು ಸೂಚಿಸುತ್ತಿವೆ” ಎಂದೂ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News