×
Ad

4ನೇ ಮಹಡಿಯಿಂದ ಬಿದ್ದು ಮಗು ಬದುಕಿದರೂ, ತನ್ನ ಬಗ್ಗೆ ಬಂದ ಟೀಕೆಯಿಂದ ಆಘಾತಕ್ಕೊಳಗಾದ ತಾಯಿ ಆತ್ಮಹತ್ಯೆ

Update: 2024-05-20 21:50 IST

Pc : X 

ಚೆನ್ನೈ: ಚೆನ್ನೈಯಲ್ಲಿ ನಾಲ್ಕನೇ ಮಹಡಿಯ ಅಪಾರ್ಟ್ಮೆಂಟ್ ಬಾಲ್ಕನಿಯಿಂದ ತಾಯಿಯ ಕೈಯಿಂದ ಕೈತಪ್ಪಿ ಬಿದ್ದರೂ ಮಗುವೊಂದು ಪವಾಡಸದೃಶವಾಗಿ ಬದುಕುಳಿದ ಘಟನೆ ನಡೆದ ಕೆಲ ದಿನಗಳ ಬಳಿಕ, ಆ ಮಗುವಿನ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ವರದಿಯಾಗಿದೆ.

ಆ ಘಟನೆಯ ಬಳಿಕ ಮಗುವಿನ ರಕ್ಷಣೆಯ ವೀಡಿಯೊ ವೈರಲ್ ಆಗಿತ್ತು. ತಾಯಿಗೆ ಮಗುವನ್ನು ಸರಿಯಾಗಿ ನೋಡಿಕೊಳ್ಳಲು ಆಗುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದ್ದಂತೆ ಮಹಿಳೆ ಆಘಾತಕ್ಕೆ ಒಳಗಾಗಿದ್ದರು ಎಂದು ಅವರ ಸಂಬಂಧಿಕರು ತನಿಖೆಯ ವೇಳೆ ತಿಳಿಸಿದ್ದಾರೆ ಎಂದು ಕೊಯಮತ್ತೂರಿನ ಕರಮಡೈ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಪ್ರಿಲ್ 28ರಂದು 8 ತಿಂಗಳ ಹೆಣ್ಣು ಮಗು ತಾಯಿಯ ಕೈಗಳಿಂದ ಜಾರಿ ಎರಡನೇ ಮಹಡಿಯಲ್ಲಿರುವ ಟಿನ್ ಶೆಡ್ಗೆ ಬಿದ್ದಿತ್ತು. ಅಪಾರ್ಟ್ಮೆಂಟ್ ಕಟ್ಟಡದ ನಿವಾಸಿಗಳು ತಮ್ಮ ಪ್ರಾಣ ಅಪಾಯಕ್ಕೊಡ್ಡಿ ಮಗುವನ್ನು ರಕ್ಷಿಸುವ ವೀಡಿಯೊವೊಂದನ್ನು ನೆರೆಮನೆಯ ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದರು.

ಮಹಿಳೆಯು ತನ್ನ ಎರಡನೇ ಮಗುವಿಗೆ ಜನ್ಮ ನೀಡಿದ ನಂತರ ಪ್ರಸವಾನಂತರದ ಖಿನ್ನತೆ(postpartum depression)ಗೆ ಒಳಗಾಗಿದ್ದರು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ತನ್ನ ಕುರಿತ ಟೀಕೆಗಳಿಂದ ಬೇಸತ್ತ 33 ವರ್ಷದ ಮಹಿಳೆಯು ತನ್ನ ಗಂಡ ಮತ್ತು ಇಬ್ಬರು ಮಕ್ಕಳೊಂದಿಗೆ ಕೊಯಮತ್ತೂರಿನಲ್ಲಿರುವ ತನ್ನ ತವರು ಮನೆಗೆ ಎರಡು ವಾರಗಳ ಹಿಂದೆ ಬಂದಿದ್ದರು. ಅವರು ಶನಿವಾರ ತನ್ನ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

‘‘ನಾವು ಹೊರಗೆ ಹೋಗಿದ್ದೆವು. ಮನೆಗೆ ವಾಪಸ್ ಬರುವಾಗ ಅವರ ಮೃತದೇಹ ಪತ್ತೆಯಾಗಿತ್ತು’’ ಎಂದು ಮಹಿಳೆಯ ತಂದೆ ತಿಳಿಸಿದ್ದಾರೆ ಎಂದು ಅವರು ಹೇಳಿದರು.

ಮಹಿಳೆ ಮತ್ತು ಗಂಡ ಇಬ್ಬರೂ ಚೆನ್ನೈಯಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯೋಗಿಯಾಗಿದ್ದರು ಎಂದು ತಿಳಿದು ಬಂದಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News