ಕ್ಯಾಬಿನ್ ಸಿಬ್ಬಂದಿ ಕೊರತೆಯಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ನ 80ಕ್ಕೂ ಹೆಚ್ಚು ವಿಮಾನಯಾನಗಳು ರದ್ದು

Update: 2024-05-08 05:55 GMT

Photo: PTI

ಹೊಸದಿಲ್ಲಿ: ಕ್ಯಾಬಿನ್ ಸಿಬ್ಬಂದಿಗಳ ಕೊರತೆಯಿಂದಾಗಿ ಏರ್ ಇಂಡಿಯಾ ಎಕ್ಸ್ಪ್ರೆಸ್ ತನ್ನ 80ಕ್ಕೂ ಹೆಚ್ಚು ವಿಮಾನಯಾನಗಳನ್ನು ರದ್ದುಗೊಳಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟಾಟಾ ಸಮೂಹದ ಒಡೆತನದ ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಆಡಳಿತದ ನಿರ್ವಹಣೆಯ ಕುರಿತು ಪ್ರತಿಭಟಿಸಿ ಹಲವಾರು ಕ್ಯಾಬಿನ್ ಸಿಬ್ಬಂದಿಗಳು ಅನಾರೋಗ್ಯದ ನೆಪದಲ್ಲಿ ಕರ್ತವ್ಯಕ್ಕೆ ಗೈರಾಗುತ್ತಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ ಎನ್ನಲಾಗಿದೆ.

ಎಐಎಕ್ಸ್ ಕನೆಕ್ಟ್ (ಹಿಂದಿನ ಏರ್‌ ಏಷ್ಯಾ ಇಂಡಿಯಾ)ವನ್ನು ಏರ್ ಇಂಡಿಯಾ ಜೊತೆ ವಿಲೀನಗೊಳಿಸುವ ಪ್ರಕ್ರಿಯೆ ಆರಂಭಗೊಂಡಂದಿನಿಂದ ಏರ್ ಇಂಡಿಯಾ ಸಿಬ್ಬಂದಿಗಳಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ.

ಸೋಮವಾರ ಸಂಜೆಯಿಂದ ಹಲವು ಕ್ಯಾಬಿನ್ ಸಿಬ್ಬಂದಿಗಳು ಅನಾರೋಗ್ಯದ ನೆಪದಲ್ಲಿ ಗೈರಾಗುತ್ತಿರುವುದರಿಂದ ಹಲವಾರು ವಿಮಾನಯಾನಗಳನ್ನು ರದ್ದುಗೊಳಿಸಬೇಕಾಗಿ ಬಂದಿದೆ. ಕೊಚ್ಚಿ, ಕೋಝಿಕ್ಕೋಡ್ ಮತ್ತು ಬೆಂಗಳೂರಿಗೆ ಹೋಗುವ ವಿಮಾನಗಳ ಹಾರಾಟಕ್ಕೆ ತೊಂದರೆಯಾಗಿದೆ ಎನ್ನಲಾಗಿದೆ.

ಏರ್ ಇಂಡಿಯಾ ಆಡಳಿತವು ಅಸಮರ್ಪಕವಾಗಿದೆ ಹಾಗೂ ಸಿಬ್ಬಂದಿಯನ್ನು ಸಮಾನತೆಯಿಂದ ನೋಡುತ್ತಿಲ್ಲ ಎಂದು ಕಳೆದ ತಿಂಗಳು ಸಿಬ್ಬಂದಿಗಳ ಒಂದು ಯೂನಿಯನ್ ಆರೋಪಿಸಿತ್ತು. ಆಡಳಿತದ ಅಸಮರ್ಪಕತೆಯು ಉದ್ಯೋಗಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸಿದೆ ಎಂದು ಸುಮಾರು 300 ಕ್ಯಾಬಿನ್ ಸಿಬ್ಬಂದಿಗಳನ್ನು ಪ್ರತಿನಿಧಿಸುವ ಏರ್ ಇಂಡಿಯಾ ಎಕ್ಸ್ಪ್ರೆಸ್ ಎಂಪ್ಲಾಯೀಸ್ ಯೂನಿಯನ್ ಹೇಳಿತ್ತು.

ವಿಮಾನಯಾನಗಳು ರದ್ದಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಅನಾನುಕೂಲತೆಗಾಗಿ ವಿಷಾದಿಸಿದೆಯಲ್ಲದೆ ಕಾರ್ಯನಿರ್ವಹಣಾತ್ಮಕ ಕಾರಣಗಳನ್ನು ನೀಡಿದೆ.

“ಮುಂದಿನ ಏಳು ದಿನಗಳೊಳಗೆ ವಿಮಾನಯಾನ ರಿಶೆಡ್ಯೂಲ್ ಮಾಡಬಹುದು ಅಥವಾ ಪೂರ್ಣ ರೀಫಂಡ್ ಗೆ ಕೋರಬಹುದು,”ಎಂದೂ ಏರ್ ಇಂಡಿಯಾ ಹೇಳಿದೆ.

ಇತ್ತೀಚೆಗಷ್ಟೇ ಟಾಟಾ ಗ್ರೂಪ್ ಗೆ ಸೇರಿದ ವಿಸ್ತಾರಾ ಏರ್ ವೇಸ್ ಪೈಲಟ್ ಗಳ ಸಮಸ್ಯೆಯಿಂದಾಗಿ ವಿಮಾನಯಾನಗಳನ್ನು ಕಡಿತಗೊಳಿಸಬೇಕಾಗಿ ಬಂದಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News