ತೆಲಂಗಾಣ: ವಿದ್ಯಾರ್ಥಿಗಳ ಕೇಸರಿ ಉಡುಗೆಯನ್ನು ಪ್ರಾಂಶುಪಾಲರು ಪ್ರಶ್ನಿಸಿದರೆಂದು ಶಾಲೆಯಲ್ಲಿ ದಾಂಧಲೆ ನಡೆಸಿದ ಗುಂಪು

Update: 2024-04-18 05:48 GMT

Photo: NDTV

ಹೈದರಾಬಾದ್: ತೆಲಂಗಾಣದ ಮಂಚೇರಿಯಲ್‌ ಜಿಲ್ಲೆಯ ಕಣ್ಣೆಪಲ್ಲಿ ಗ್ರಾಮದ ಬ್ಲೆಸ್ಡ್‌ ಮದರ್‌ ತೆರೆಸಾ ಹೈಸ್ಕೂಲಿನ ಪ್ರಾಂಶುಪಾಲರು ಶಾಲೆಗೆ ಕೇಸರಿ ಉಡುಗೆ ಧರಿಸಿ ಬಂದ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಾರೆಂಬ ಕಾರಣಕ್ಕೆ ಶಾಲೆಗೆ ನುಗ್ಗಿದ ಗುಂಪೊಂದು ಅಲ್ಲಿ ದಾಂಧಲೆಗೈದು ಸಿಬ್ಬಂದಿಯನ್ನು ತಳ್ಳಾಡಿದ ಘಟನೆ ವರದಿಯಾಗಿದೆ.

ಇನ್ನೊಂದೆಡೆ ಕೆಲ ವಿದ್ಯಾರ್ಥಿಗಳ ಹೆತ್ತವರ ದೂರಿನ ಹಿನ್ನೆಲೆಯಲ್ಲಿ ಪ್ರಾಂಶುಪಾಲರು ಮತ್ತು ಓರ್ವ ಸಿಬ್ಬಂದಿಯ ವಿರುದ್ಧ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಹಾಗೂ ವಿವಿಧ ಧರ್ಮಗಳ ನಡುವೆ ದ್ವೇಷದ ಭಾವನೆ ಮೂಡಿಸಲು ಯತ್ನಿಸಿದ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿದೆ.

ಹೈದರಾಬಾದ್‌ನಿಂದ ಸುಮಾರು 250 ಕಿಮೀ ದೂರವಿರುವ ಈ ಶಾಲೆಯಲ್ಲಿ ಕೇರಳ ಮೂಲದ ಜೈಮನ್‌ ಜೋಸೆಫ್‌ ಪ್ರಾಂಶುಪಾಲರಾಗಿದ್ದಾರೆ. ಕೆಲ ದಿನಗಳ ಹಿಂದೆ ಕೆಲ ವಿದ್ಯಾರ್ಥಿಗಳು ಕೇಸರಿ ವಸ್ತ್ರ ಧರಿಸಿ ಶಾಲೆಗೆ ಬಂದಿರುವುದನ್ನು ಗಮನಿಸಿದ ಅವರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದಾಗ ತಾವು 21 ದಿನಗಳ ಹನುಮಾನ್‌ ದೀಕ್ಷಾ ಆಚರಿಸುತ್ತಿರುವುದಾಗಿ ತಿಳಿಸಿದ್ದರು. ಈ ವಿಚಾರ ಚರ್ಚಿಸಲು ಹೆತ್ತವರನ್ನು ಶಾಲೆಗೆ ಬರ ಹೇಳಲು ಪ್ರಾಂಶುಪಾಲರು ತಿಳಿಸಿದ್ದರು.

ಯಾರೋ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿಯಬಿಟ್ಟು ಪ್ರಾಂಶುಪಾಲರು ಕ್ಯಾಂಪಸ್ಸಿನಲ್ಲಿ ಹಿಂದು ಧರ್ಮದ ಉಡುಗೆಗೆ ಅನುಮತಿಸಿಲ್ಲ ಎಂದು ಆರೋಪಿಸಿದ್ದರು. ಇದರ ಬೆನ್ನಿಗೇ ಗುಂಪೊಂದು ಶಾಲೆಯಲ್ಲಿ ದಾಂದಲೆ ನಡೆಸಿತ್ತು. ಕೇಸರಿ ಬಟ್ಟೆ ಧರಿಸಿದ ಮಂದಿ ಜೈ ಶ್ರೀ ರಾಮ್‌ ಘೋಷಣೆಗಳನ್ನು ಮೊಳಗಿಸುತ್ತಾ ಕಿಟಿಕಿ ಗಾಜುಗಳನ್ನು ಒಡೆಯುತ್ತಿರುವುದು ಹಾಗೂ ಶಿಕ್ಷಕರು ಕೈಮುಗಿದು ದಾಂಧಲೆ ನಿಲ್ಲಿಸುವಂತೆ ಅವರಲ್ಲಿ ಮೊರೆಯಿಡುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು. ಕೆಲ ಜನರು ಕ್ಯಾಂಪಸ್ಸಿನಲ್ಲಿರುವ ಮದರ್‌ ತೆರೆಸಾ ಪ್ರತಿಮೆಯತ್ತವೂ ಕಲ್ಲು ತೂರಾಟ ನಡೆಸಿದ್ದರು. ಕೆಲ ಜನರು ಪ್ರಾಂಶುಪಾಲರನ್ನು ಸುತ್ತುವರಿದು ಅವರಿಗೆ ಥಳಿಸಿ ಬಲವಂತದಿಂದ ಅವರ ಹಣೆಗೆ ತಿಲಕವಿರಿಸಿದ್ದಾರೆಂದೂ ವರದಿಯಾಗಿದೆ. ಶಾಲಾಡಳಿತ ಕ್ಷಮೆಯಾಚಿಸಬೇಕೆಂದೂ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News