ಸಂಘಟನ್ ಸೃಜನ್ ಅಭಿಯಾನ-2 ಉಡುಪಿ ಜಿಲ್ಲಾ ವೀಕ್ಷಕರಾಗಿ ಅಬ್ದುಲ್ ರವೂಫ್ ನೇಮಕ
ಅಬ್ದುಲ್ ರವೂಫ್
ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕೈಗೊಂಡಿರುವ ಸಂಘಟನ್ ಸೃಜನ್ ಅಭಿಯಾನ-2 (SSA-2) ಅಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಅಬ್ದುಲ್ ರವೂಫ್ ಅವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರಾಗಿ ನೇಮಕ ಮಾಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಆದೇಶದಂತೆ ಅಬ್ದುಲ್ ರವೂಫ್ ಅವರು ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ಕಾಂಗ್ರೆಸ್ ಮುಖಂಡರ ಸಭೆಗಳನ್ನು ಆಯೋಜಿಸಿ ಸ್ಥಳೀಯ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದಾರೆ.
ಅಭಿಯಾನದಡಿ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ), ಬ್ಲಾಕ್ ಅಧ್ಯಕ್ಷರ ನೇಮಕಾತಿ, ಬ್ಲಾಕ್ ಸಮಿತಿ ಪದಾಧಿಕಾರಿಗಳ ಪಟ್ಟಿ, ಮಂಡಲ್ ಅಧ್ಯಕ್ಷರ ನೇಮಕ ಹಾಗೂ ಬೂತ್ ಸಮಿತಿಗಳ ರಚನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕೆಪಿಸಿಸಿಗೆ ವರದಿ ಸಲ್ಲಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) 2026ರ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 30ರವರೆಗೆ ಸಂಘಟನ್ ಸೃಜನ್ ಅಭಿಯಾನ-2ನ್ನು ಪೂರ್ಣಗೊಳಿಸಲು ಗಡುವು ನಿಗದಿಪಡಿಸಿದ್ದು, ನಿಗದಿತ ಅವಧಿಯೊಳಗೆ ಎಲ್ಲ ಸಂಘಟನಾ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೂಚಿಸಿದ್ದಾರೆ.