ಟ್ರಂಪ್‌ಗೆ ಮರೆಯಲಾಗದ ಪಾಠ ಕಲಿಸಿದ ಅಮೆರಿಕದ ಮತದಾರರು
ಡೊನಾಲ್ಡ್ ಟ್ರಂಪ್
ಇಸ್ರೇಲ್‌ಗಾಗಿ ಇರಾನ್ ಮೇಲೆ ಯುದ್ಧ ಸಾರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ಅಹಂನ್ನು ಅಮೆರಿಕದ ಮತದಾರರು ಒಂದೇ ಏಟಿಗೆ ಚೂರು ಚೂರು ಮಾಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಸೃಷ್ಟಿಸಿದ ಅರಾಜಕತೆ ಅಮೆರಿಕದ ಪ್ರತಿಯೊಂದು ಗ್ಯಾಸ್ ಸ್ಟೇಷನ್‌ಗೆ ಕಿಚ್ಚು ಹೊತ್ತಿಸಿ, 2026ರ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷವನ್ನು ಹೀನಾಯವಾಗಿ ಮಣ್ಣು ಮುಕ್ಕಿಸಿದೆ.
ಶ್ವೇತಭವನದಲ್ಲಿ ಟ್ರಂಪ್ ಕೋಟ್ಯಂತರ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಬಾಲ್‌ರೂಮ್ ಅನ್ನು ಹೆಮ್ಮೆಯಿಂದ ಕಣ್ದುಂಬಿಕೊಳ್ಳುತ್ತಿದ್ದ ಹೊತ್ತಿನಲ್ಲೇ, ಇತ್ತ ಮತದಾರರು ಅವರ ಅಧಿಕಾರದ ಕೋಟೆಯನ್ನೇ ಧ್ವಂಸಗೊಳಿಸಿದ್ದಾರೆ.
ಇಸ್ರೇಲ್‌ಗಾಗಿ ಮಹಿಳೆಯರು, ಮಕ್ಕಳು ಸಹಿತ ಸಾವಿರಾರು ಅಮಾಯಕರ ಜೀವಗಳನ್ನು ಬಲಿಪಡೆದುಕೊಂಡ ಟ್ರಂಪ್‌ಗೆ ಈಗ ಅವರದೇ ಮತದಾರರು ನಿಮ್ಮ ದುಷ್ಟತನ ನಮಗೆ ದುಬಾರಿಯಾಗಿದೆ ಎಂಬ ಸಂದೇಶ ರವಾನಿಸಿದ್ದಾರೆ
ನೆತನ್ಯಾಹು ರಾಜಕೀಯ ಲಾಭಕ್ಕಾಗಿ ಇರಾನ್ ಮೇಲೆ ದಾಳಿ ಮಾಡಿ ಅಮೆರಿಕದ ಆರ್ಥಿಕತೆಯನ್ನೇ ಹಳಿ ತಪ್ಪಿಸಿದ್ದಕ್ಕಾಗಿ ಅಮೆರಿಕನ್ನರು ಟ್ರಂಪ್‌ಗೆ ದೊಡ್ಡ ಶಿಕ್ಷೆಯನ್ನೇ ನೀಡಿದ್ದಾರೆ
ಇದರರ್ಥ ಸಮಸ್ತ ಅಮೆರಿಕನ್ನರು ಇರಾನ್, ಫೆಲೆಸ್ತೀನ್ ಜನರಿಗಾದ ಘೋರ ಅನ್ಯಾಯಕ್ಕೆ ಮರುಗಿದ್ದಾರೆ ಅಂತಲ್ಲ, ಆದರೆ ಅಲ್ಲಿ ಯುದ್ಧ ಮಾಡಿ ಅದರ ಬೆಲೆಯನ್ನು ನಮ್ಮಿಂದ ವಸೂಲಿ ಮಾಡಿ ನಮ್ಮ ಬದುಕು ದುಸ್ತರ ಮಾಡಿದ್ದೇಕೆ ಎಂಬ ಆಕ್ರೋಶ ಅಲ್ಲಿ ಬ್ಯಾಲಟ್ ಬಾಕ್ಸ್‌ನಲ್ಲಿ ಸ್ಫೋಟಿಸಿದೆ.
ಕಾಂಗ್ರೆಸ್‌ನ ಎರಡೂ ಸದನಗಳು ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಡೆಮಾಕ್ರಟ್‌ಗಳ ಪಾಲಾಗಿವೆ. ಸೆನೆಟ್‌ನಲ್ಲಿ ಡೆಮಾಕ್ರಟ್‌ಗಳು 54 ಸ್ಥಾನಗಳ ಬಲದೊಂದಿಗೆ ಸ್ಪಷ್ಟ ಹಿಡಿತ ಸಾಧಿಸಿದ್ದು, ರಿಪಬ್ಲಿಕನ್ನರು ಕೇವಲ 44 ಸ್ಥಾನಗಳಿಗೆ ಸೀಮಿತವಾಗಿದ್ದಾರೆ.
ಏಳು ಪ್ರಮುಖ ರಿಪಬ್ಲಿಕನ್ ಭದ್ರಕೋಟೆಗಳೇ ಕೈಜಾರಿವೆ.
ಈ ಹೀನಾಯ ಸೋಲಿನ ಶಾಕ್ ಬೆನ್ನಿಗೇ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರೇ ಟ್ರಂಪ್ ಆಡಳಿತದ ಮುಖವಾಡವನ್ನು ಸಾರ್ವಜನಿಕವಾಗಿಯೇ ಕಿತ್ತುಹಾಕಿದ್ದಾರೆ. ‘‘ನಾವು ಈ ಚುನಾವಣೆಯಲ್ಲಿ ಸೋಲಲು ಇರಾನ್ ಯುದ್ಧವೇ ಕಾರಣ’’ ಎಂದು ವ್ಯಾನ್ಸ್ ಯಾವುದೇ ಮುಲಾಜಿಲ್ಲದೆ ಒಪ್ಪಿಕೊಂಡಿದ್ದಾರೆ.
ತಮ್ಮ ಪಕ್ಷದ ಬೆಂಬಲಿಗರು ಮತಗಟ್ಟೆಗೆ ಬರಲಿಲ್ಲ ಎಂಬ ನೆಪವನ್ನು ಅವರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಫ್ಲೋರಿಡಾದಂತಹ ಕಟ್ಟಾ ರಿಪಬ್ಲಿಕನ್ ನೆಲೆಯಲ್ಲೂ ಮತದಾರರು ಸಾಲುಗಟ್ಟಿ ನಿಂತಿದ್ದರು; ಆದರೆ 2024ರಲ್ಲಿ ಟ್ರಂಪ್ ಮತ್ತು ವ್ಯಾನ್ಸ್ ಜೋಡಿಗೆ ಮತ ಹಾಕಿದವರೇ ಈ ಬಾರಿ ರೊಚ್ಚಿಗೆದ್ದು ಡೆಮಾಕ್ರಟಿಕ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆ.
ವ್ಯಾನ್ಸ್ ತಮ್ಮ ಆಂತರಿಕ ಸಮೀಕ್ಷಕರ ವರದಿಯನ್ನು ಬಿಚ್ಚಿಡುತ್ತಾ ನಾಲ್ಕು ಕಟು ಸತ್ಯಗಳನ್ನು ಮುಂದಿಟ್ಟಿದ್ದಾರೆ:
ಇರಾನ್ ಮೇಲಿನ ಯುದ್ಧ ತಕ್ಷಣವೇ ಕೊನೆಗೊಳ್ಳಬೇಕು.
ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು.
‘ಅಮೆರಿಕ ಫಸ್ಟ್’ ನೀತಿಗೆ ಪ್ರಾಮಾಣಿಕವಾಗಿ ಮರಳಬೇಕು.
ಇಸ್ರೇಲ್ ಜತೆಗಿನ ಅಮೆರಿಕದ ಸಂಬಂಧದಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕು.
ಇಸ್ರೇಲ್‌ಗೆ ಪ್ರತೀವರ್ಷ ಶತಕೋಟಿ ಡಾಲರ್ ಮಿಲಿಟರಿ ನೆರವು ಸುರಿಯುತ್ತಾ, ಅವರ ಸಂಘರ್ಷವನ್ನು ಅಮೆರಿಕದ ಸ್ವಂತ ಯುದ್ಧವನ್ನಾಗಿ ಮಾಡಿಕೊಂಡಿದ್ದಕ್ಕೆ ರಿಪಬ್ಲಿಕನ್ ಪಕ್ಷ ಈ ಭಾರೀ ಬೆಲೆ ತೆತ್ತಿದೆ.
‘‘ಮುಂದಿನ ಆರು ವರ್ಷಗಳ ಕಾಲ ಸೆನೆಟ್ ಅನ್ನು ಕಳೆದುಕೊಂಡಿದ್ದು ಈ ಯುದ್ಧಕ್ಕೆ ತಕ್ಕ ಬೆಲೆ ಎಂದು ಯಾರಾದರೂ ವಾದಿಸುವುದಾದರೆ ಧೈರ್ಯವಾಗಿ ವಾದಿಸಿ, ಆದರೆ ಸತ್ಯವನ್ನು ಮುಚ್ಚಿಡಬೇಡಿ’’ ಎಂದು ವ್ಯಾನ್ಸ್ ತಮ್ಮದೇ ಅಧ್ಯಕ್ಷರಿಗೆ ನೇರವಾಗಿ ಚಾಟಿ ಬೀಸಿದ್ದಾರೆ.
ಈ ಒಳಜಗಳಕ್ಕೆ ಮತ್ತಷ್ಟು ತುಪ್ಪ ಸುರಿದದ್ದು ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ನಡೆ.
ವ್ಯಾನ್ಸ್ ಅವರ ಪೋಸ್ಟ್ ಅನ್ನು ಕೇವಲ ಒಂದು ಗಂಟೆಯೊಳಗೆ ಮರುಹಂಚಿಕೊಂಡ ಟ್ರಂಪ್ ಜೂನಿಯರ್ ‘‘ಇದರಲ್ಲಿರುವ ಪ್ರತಿಯೊಂದು ಪದವೂ ನೂರಕ್ಕೆ ನೂರು ಸತ್ಯ’’ ಎಂದು ಅನುಮೋದಿಸಿದ್ದಾರೆ.
ಟ್ರಂಪ್ ಅವರ ವಿದೇಶಾಂಗ ಮತ್ತು ಯುದ್ಧನೀತಿಯ ವಿರುದ್ಧ ಅವರದೇ ಉಪಾಧ್ಯಕ್ಷ ಮತ್ತು ಮಗನೇ ಬಹಿರಂಗ ವಾಗಿ ಒಂದಾಗಿರುವುದು ಶ್ವೇತಭವನದ ಬಿರುಕನ್ನು ಜಗಜ್ಜಾಹೀರು ಮಾಡಿದೆ. ಜೊತೆಗೆ ಟ್ರಂಪ್ ಮೇಲೆ ಇಸ್ರೇಲ್ ಅದೆಷ್ಟು ಒತ್ತಡ ಹಾಕಿದೆ ಎಂಬುದನ್ನೂ ಬಯಲು ಮಾಡಿದೆ.
ಇನ್ನೊಂದೆಡೆ, ವ್ಯಾನ್ಸ್ ಇಷ್ಟೊಂದು ನಿರ್ದಾಕ್ಷಿಣ್ಯವಾಗಿ ಮಾತನಾಡುತ್ತಿರುವುದು ಕೇವಲ ಜನರ ಮೇಲಿನ ಪ್ರೀತಿಯಿಂದಲ್ಲ, ಬದಲಿಗೆ ಮುಳುಗುತ್ತಿರುವ ಟ್ರಂಪ್ ಹಡಗಿನಿಂದ ಜಿಗಿದು ಮುಂಬರುವ 2028ರ ಅಧ್ಯಕ್ಷೀಯ ಚುನಾವಣಾ ರೇಸ್‌ನಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ರಕ್ಷಿಸಿಕೊಳ್ಳಲು ಎಂಬುದು ಸ್ಪಷ್ಟವಾಗಿದೆ.
ಇಷ್ಟೆಲ್ಲಾ ಆದರೂ ಅಧ್ಯಕ್ಷ ಟ್ರಂಪ್ ತಮ್ಮ ಎಂದಿನ ಆತ್ಮರತಿಯ ಭ್ರಮೆಯಲ್ಲೇ ಮುಳುಗಿದ್ದಾರೆ.
ಫಾಕ್ಸ್ ನ್ಯೂಸ್‌ಗೆ ಫೋನ್ ಮೂಲಕ ಮಾತನಾಡಿದ ಟ್ರಂಪ್ ‘‘ನಾನೇನಾದರೂ ಚುನಾವಣಾ ಕಣದಲ್ಲಿದ್ದಿದ್ದರೆ ನಾವು ಭರ್ಜರಿ ಜಯಭೇರಿ ಬಾರಿಸುತ್ತಿದ್ದೆವು, ಕಣದಲ್ಲಿದ್ದ ಅಭ್ಯರ್ಥಿಗಳು ಮತದಾರರನ್ನು ಪ್ರೇರೇಪಿಸಲು ವಿಫಲರಾದರು’’ ಎಂದು ತಮ್ಮದೇ ಪಕ್ಷದ ಅಭ್ಯರ್ಥಿಗಳ ಮೇಲೆ ಗೂಬೆ ಕೂರಿಸಿದರು.
ವ್ಯಾನ್ಸ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ‘‘ಯುದ್ಧ ದಿಂದಾಗಿ ಅಲ್ಪಾವಧಿಗೆ ಗ್ಯಾಸೋಲಿನ್ ಬೆಲೆ ಏರಿದ್ದು ನಿಜವಿರಬಹುದು, ಆದರೆ ಇರಾನ್ ಮೇಲೆ ಯುದ್ಧ ಸಾರಿದ್ದು ಅನಿವಾರ್ಯವಾಗಿತ್ತು ಮತ್ತು ತಾವು ಕೈಗೊಂಡ ತೀರ್ಮಾನ ದಲ್ಲಿ ಯಾವುದೇ ಬದಲಾವಣೆ ಇರುತ್ತಿರಲಿಲ್ಲ’’ ಎಂದು ಟ್ರಂಪ್ ಹಠ ಹಿಡಿದಿದ್ದಾರೆ.
ಅಮೆರಿಕದ ಚಿಲ್ಲರೆ ಮಾರುಕಟ್ಟೆಯಲ್ಲಿ ಹಣದುಬ್ಬರ ಶೇ.3.7ಕ್ಕೆ ಜಿಗಿದಿತ್ತು, ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ ನೂರು ಡಾಲರ್ ಗಡಿ ದಾಟಿದ್ದರಿಂದ ಪೆಟ್ರೋಲ್ ಬೆಲೆಗಳು ಗಗನಕ್ಕೇರಿದವು. ಚುನಾವಣೆಯ ಎಕ್ಸಿಟ್ ಪೋಲ್‌ಗಳಲ್ಲಿ ಶೇ.80ರಷ್ಟು ಜನರು ಬೆಲೆ ಏರಿಕೆಯಿಂದ ಬದುಕು ದುಸ್ತರವಾಗಿದೆ ಎಂದು ಆಕ್ರೋಶ ಹೊರಹಾಕಿದ್ದರು, ಅದರಲ್ಲಿ ಶೇ.60ರಷ್ಟು ಜನ ನೇರವಾಗಿ ಟ್ರಂಪ್ ಆಡಳಿತದ ನೀತಿಗಳೇ ಇದಕ್ಕೆ ಕಾರಣ ಎಂದು ದೂಷಿಸಿದರು.
ದೂರದ ಟೆಹರಾನ್ ಮೇಲೆ ಟ್ರಂಪ್ ಕ್ಷಿಪಣಿ ಹಾರಿಸಿದಾಗ, ವಾಶಿಂಗ್ಟನ್‌ನ ಮತದಾರರು ಬ್ಯಾಲೆಟ್ ಮೂಲಕ ಟ್ರಂಪ್ ಸರಕಾರದ ಬುಡಕ್ಕೇ ಕೊಡಲಿ ಏಟು ನೀಡಿದರು.
ವ್ಯಾನ್ಸ್ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಶೇ.8ರಷ್ಟು ಕುಸಿದು 95 ಡಾಲರ್‌ಗೆ ಇಳಿಯಿತು.
ಈ ಸೋಲಿನಿಂದಾಗಿ ಇರಾನ್ ಮೇಲಿನ ಯುದ್ಧವನ್ನು ಅಮೆರಿಕ ಇನ್ನು ಮುಂದೆ ತೀವ್ರಗೊಳಿಸಲು ಸಾಧ್ಯವಿಲ್ಲ ಎಂಬ ಆಶಾಭಾವನೆಯೇ ಈ ತೈಲ ಬೆಲೆ ಇಳಿಕೆಗೆ ಕಾರಣ.
ಇನ್ನೊಂದೆಡೆ, ಸೆನೆಟ್ ನಾಯಕ ಚಕ್ ಶೂಮರ್ ಫಲಿತಾಂಶ ಬರುತ್ತಿದ್ದಂತೆಯೇ, ಈ ಯುದ್ಧ ತಕ್ಷಣವೇ ಕೊನೆಗೊಳ್ಳಬೇಕು ಎಂದು ಗುಡುಗಿದ್ದು, ಸಂಸತ್ತಿನ ಬಜೆಟ್ ಮಂಜೂರಾತಿ ಅಧಿಕಾರವನ್ನು ಅಸ್ತ್ರವಾಗಿ ಬಳಸಿ ಟ್ರಂಪ್ ಅವರ ಅನಿಯಂತ್ರಿತ ಯುದ್ಧದಾಹಕ್ಕೆ ಕಡಿವಾಣ ಹಾಕುವುದಾಗಿ ಘೋಷಿಸಿದ್ದಾರೆ.
ಸೋತು ನೆಲಕಚ್ಚಿದ ನಂತರವೂ ಶ್ವೇತಭವನವು ಟ್ರಂಪ್ ಇಂದಿಗೂ ನಿಮ್ಮ ಅಧ್ಯಕ್ಷರು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ತನ್ನ ಅಸಹಾಯಕತೆಯನ್ನು ಪ್ರದರ್ಶಿಸಿತು.
ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಹೇಳಿದಂತೆ, ಇದು ರಿಪಬ್ಲಿಕನ್ ಪಕ್ಷಕ್ಕೆ ಕಳೆದ ನೂರು ವರ್ಷಗಳಲ್ಲೇ ಸಂಭವಿಸಿದ ಅತಿ ದೊಡ್ಡ ಹೊಡೆತ.
ಇಸ್ರೇಲ್‌ನ ಆಣತಿಯಂತೆ ಇರಾನ್ ಜೊತೆ ಯುದ್ಧಕ್ಕೆ ಇಳಿದು ಅಮೆರಿಕದ ಪ್ರಜೆಗಳ ಜೇಬಿಗೆ ಕನ್ನ ಹಾಕಿದ ಟ್ರಂಪ್ ಆಡಳಿತಕ್ಕೆ, ಅಮೆರಿಕದ ಮತದಾರರು ಸಂಸತ್ತಿನ ಎರಡೂ ಸದನಗಳಲ್ಲಿ ಬಹುಮತ ಕಸಿದುಕೊಳ್ಳುವ ಮೂಲಕ ಮರೆಯಲಾಗದ ಪಾಠ ಕಲಿಸಿದ್ದಾರೆ.