ಪಾಪ್ ಸಂಸ್ಕೃತಿಯಾಗಿ ಹಿಂದುತ್ವ

ಸಂಗೀತದ ಪ್ರಕಾರಗಳಾದ ಪೂರ್ವ ಮತ್ತು ಪಾಶ್ಚಾತ್ಯ, ಜಾನಪದ ಮತ್ತು ಶಾಸ್ತ್ರೀಯ, ವಾದ್ಯಸಂಗೀತ ಮತ್ತು ಗಾಯನ ಶತಮಾನಗಳಿಂದ ಮಾನವಕುಲಕ್ಕೆ ಹಿತದ ಭಾವ ಮತ್ತು ಸಂತೋಷವನ್ನು ಒದಗಿಸಿವೆ. ನಾನು ಭಾರತೀಯ ಶಾಸ್ತ್ರೀಯ ಸಂಗೀತದಿಂದ ನನ್ನ ಜೀವನದುದ್ದಕ್ಕೂ ಮತ್ತು ಈಗಲೂ ಪ್ರಭಾವಿತನಾಗಿದ್ದೇನೆ. ಬಿಸ್ಮಿಲ್ಲಾ ಖಾನ್, ಎಂ.ಎಸ್. ಸುಬ್ಬುಲಕ್ಷ್ಮಿ, ಕಿಶೋರಿ ಅಮೋನ್ಕರ್, ಕಿಶೋರ್ ಕುಮಾರ್ ಅವರ ದೇಶದಲ್ಲಿ ಸಂಗೀತ ಈಗ ಬಲಪಂಥೀಯ ಪ್ರಚಾರದ ಸಾಧನವಾಗಿ ಮಾರ್ಪಟ್ಟಿದೆ, ಪ್ರತೀಕಾರ ಮತ್ತು ಹಿಂಸೆಯ ವಾಹಕವಾಗಿದೆ.

Update: 2023-12-02 06:23 GMT

ಹಿಂದುತ್ವದ ಸಿದ್ಧಾಂತ ಮತ್ತು ಆಚರಣೆಯನ್ನು ವಿಶ್ಲೇಷಿಸುವ ಪುಸ್ತಕಗಳು ಮತ್ತು ಲೇಖನಗಳ ರಾಶಿಯೇ ಇತ್ತೀಚಿನ ವರ್ಷಗಳಲ್ಲಿ ಬಂದಿದೆ. ಬಿಜೆಪಿ ಮತ್ತು ಆರೆಸ್ಸೆಸ್ನ ಹೆಚ್ಚುತ್ತಿರುವ ಪ್ರಭಾವವನ್ನು ಬೇರೆಯದೇ ಬಗೆಯಲ್ಲಿ ವಿವರಿಸಲು, ಟೀಕಿಸಲು ಅಥವಾ ಸಮರ್ಥಿಸಲು ಅವೆಲ್ಲವೂ ಪ್ರಯತ್ನಿಸಿವೆ. ಸಾಂಸ್ಥಿಕ ಪ್ರಶ್ನೆಗಳು, ಸಾಮಾಜಿಕ ಜಾಲತಾಣಗಳ ನೆಲೆಯ ಸಿದ್ಧಪಡಿಸುವಿಕೆ ಮತ್ತು ಪಕ್ಷಕ್ಕೆ ಮತಗಳನ್ನು ಗಳಿಸಲು ಅವು ಹೇಗೆ ಸಹಾಯ ಮಾಡುತ್ತವೆ ಎಂಬುದರ ಮೇಲೆ ಕೆಲವು ಗಮನವಿಟ್ಟಿವೆ. ಸಿದ್ಧಾಂತದ ಪಾತ್ರ, ಹಿಂದೂ ಅಭಿಮಾನ ಮತ್ತು ಅಲ್ಪಸಂಖ್ಯಾತರ ರಾಕ್ಷಸೀಕರಣದ ಮೇಲೆ ಸ್ಥಾಪಿಸಲಾದ ನಂಬಿಕೆ ವ್ಯವಸ್ಥೆಯನ್ನು ಅಭಿವ್ಯಕ್ತಿಸುವುದರ ಶೋಧನೆ ಕೆಲವದರಲ್ಲಿದೆ. ಮತ್ತೆ ಕೆಲವು ಜೀವನಚರಿತ್ರೆಯ ವಿಧಾನವನ್ನು ಅಳವಡಿಸಿಕೊಂಡಿದ್ದು, ಗೋಳ್ವಾಲ್ಕರ್, ಸಾವರ್ಕರ್, ವಾಜಪೇಯಿ, ಅಡ್ವಾಣಿ ಮತ್ತು ಮೋದಿಯಂತಹ ವ್ಯಕ್ತಿಗಳು ಹಿಂದುತ್ವದ ಬೆಳವಣಿಗೆಯಲ್ಲಿ ವಹಿಸಿದ ಪಾತ್ರದ ಬಗ್ಗೆ ಹೇಳುತ್ತವೆ.

ಹಿಂದುತ್ವದ ಸಾಹಿತ್ಯವು ಈಗ ಒಂದು ಒಳ್ಳೆಯ ಗಾತ್ರದ ಗ್ರಂಥಾಲಯಕ್ಕೆ ಹೊಂದುವಷ್ಟು ದೊಡ್ಡದಾಗಿದೆ. ಅದು ಒಳಗೊಂಡ ಪುಸ್ತಕಗಳು ಮತ್ತು ಪ್ರಬಂಧಗಳು ಅತ್ಯಂತ ವೈವಿಧ್ಯಮಯ ಗುಣಮಟ್ಟವನ್ನು ಹೊಂದಿವೆ. ಈ ದಟ್ಟತೆ ಮತ್ತು ಕಿಕ್ಕಿರಿದಿರುವಿಕೆಯ ನಡುವೆಯೂ ಹೊಸತನ ಮತ್ತು ಪ್ರತಿಭೆಗೆ ಕೂಡ ಜಾಗವಾಗಿದೆ. ಈ ಎರಡೂ ಗುಣಗಳಿದ್ದ ಪುಸ್ತಕವೊಂದು ಕಳೆದ ತಿಂಗಳ ಕೊನೆಯಲ್ಲಿ ಬಿಡುಗಡೆಯಾಯಿತು. ‘H-Pop: The Secretive World of Hindutva Pop Stars’ ಎಂಬ ಹೆಸರಿನ ಈ ಪುಸ್ತಕದ ಲೇಖಕ ಮುಂಬೈ ಮೂಲದ ಯುವ ಬರಹಗಾರ ಕುನಾಲ್ ಪುರೋಹಿತ್. ಅವರ ಪುಸ್ತಕದ ಕರಡು ಪ್ರತಿ ನನಗೆ ಬರುವವರೆಗೂ ನಾನು ಅವರನ್ನು ಕಂಡಿರಲಿಲ್ಲ ಮತ್ತು ಅವರ ಬಗ್ಗೆ ಕೇಳಿರಲಿಲ್ಲ.

ನನಗೆ ತಿಳಿದಿರುವಂತೆ, ಹಿಂದೂ ಬಲಪಂಥೀಯರಿಂದ ಜನಪ್ರಿಯ ಸಂಸ್ಕೃತಿಯ ಬಳಕೆ ಮತ್ತು ದುರ್ಬಳಕೆಯನ್ನು ನಿಕಟವಾಗಿ ಪರಿಶೀಲಿಸುವ ಮೊದಲ ಪುಸ್ತಕ ಅದಾಗಿದೆ. ಅದು ಒಳಗೊಂಡಿರುವ ಪಾತ್ರಗಳನ್ನು ಎಚ್ಚರಿಕೆಯಿಂದ ಚಿತ್ರಿಸಲಾಗಿದೆ. ಪುಸ್ತಕದ ಪ್ರಮುಖ ಭಾಗಗಳು ಸಂಗೀತಗಾರರ ಮೇಲೆ ಇದ್ದು, ಅವರ ಹಾಡುಗಳ ಪದಗಳು ಮತ್ತು ಭಾವನೆಗಳನ್ನು ಮತ್ತು ಅವು ಮುಸ್ಲಿಮರನ್ನು ಹೇಗೆ ಅಮಾನವೀಯಗೊಳಿಸುತ್ತವೆ ಎನ್ನುವುದನ್ನು ವಿಶ್ಲೇಷಿಸುತ್ತವೆ. ಸಂಗೀತದ ಜೊತೆಗೇ, ಅದು ಹಿಂದುತ್ವವನ್ನು ತುಂಬಿಕೊಂಡ ಕಾವ್ಯ ಮತ್ತು ಪುಸ್ತಕಗಳನ್ನೂ ಪರಿಶೀಲನೆಗೆ ಒಳಪಡಿಸುತ್ತದೆ.

ಕುನಾಲ್ ಪುರೋಹಿತ್ ಅವರ ಪುಸ್ತಕದ ಅರ್ಹತೆಗಳಲ್ಲಿ ಅದರ ತುಲನಾತ್ಮಕ ವಿಧಾನವೂ ಸೇರಿದೆ. ಲೇಖಕರು ಬಲಪಂಥೀಯ ಪಾಪ್ ಸಂಸ್ಕೃತಿಯಲ್ಲಿನ ಜಾಗತಿಕ ಪ್ರವೃತ್ತಿಗಳ ಬಗ್ಗೆ ಜಾಗರೂಕರಾಗಿದ್ದಾರೆ ಮತ್ತು ಈ ವಿಶಾಲ ವ್ಯಾಪ್ತಿಯಲ್ಲಿ ಭಾರತೀಯ ಸಂದರ್ಭವನ್ನೂ ಗುರುತಿಸುತ್ತಾರೆ. ನಾಝಿಗಳು, ಇಟಾಲಿಯನ್ ಫ್ಯಾಶಿಸ್ಟ್ಗಳು, ಅಲ್-ಖಾಯಿದಾ, ರುವಾಂಡಾ ನರಮೇಧದಲ್ಲಿ ಮತ್ತು ಸಮಕಾಲೀನ ಯುರೋಪ್ ಮತ್ತು ಉತ್ತರ ಅಮೆರಿಕದಲ್ಲಿ ಬಿಳಿಯ ಪ್ರಾಬಲ್ಯವಾದಿಗಳು ಪ್ರಚುರಗೊಳಿಸಿದ ಪ್ರಚಾರಕ ಕವಿತೆಗಳು/ಗೀತೆಗಳ ಬಗ್ಗೆ ಈ ಪುಸ್ತಕ ಹೇಳುತ್ತದೆ.

ಪುರೋಹಿತ್ ಸ್ವತಃ ಹಾಡನ್ನು ಬರೆಯುತ್ತಾರೋ ಅಥವಾ ಹಾಡುತ್ತಾರೋ ಗೊತ್ತಿಲ್ಲ. ಅವರು ಖಂಡಿತವಾಗಿಯೂ ಅವುಗಳಲ್ಲಿ ಆಳವಾದ ಆಸಕ್ತಿ ಹೊಂದಿದ್ದಾರೆ. ಈ ಪುಸ್ತಕವು H-Pop ಪ್ರಪಂಚವನ್ನು ರೂಪಿಸುವ ಹಾಡುಗಳ ಸಂಯೋಜನೆ ಮತ್ತು ಅವುಗಳನ್ನು ಹೇಗೆ ದೃಶ್ಯೀಕರಿಸಲಾಗಿದೆ ಮತ್ತು ಧ್ವನಿಮುದ್ರಿಸಲಾಗಿದೆ ಎಂಬುದರ ಜಾಡು ಹಿಡಿದು ಹೋಗುತ್ತದೆ. ಈ ಹಾಡುಗಳು ಹೇಗೆ ತಮ್ಮ, ಅನೇಕ ಸಲ ದೊಡ್ಡ ಮತ್ತು ಹೆಚ್ಚು ತೊಡಗಿಸಿಕೊಂಡಿರುವ ಪ್ರೇಕ್ಷಕರನ್ನು ಕಂಡುಕೊಳ್ಳುತ್ತವೆ ಎಂಬುದನ್ನು ಅವರು ಓದುಗರಿಗೆ ಹೇಳುತ್ತಾರೆ. ಈ ಕವಿತೆಗಳು ಮತ್ತು ಹಾಡುಗಳು ಮತ್ತು ಅವುಗಳ ದ್ವೇಷದ ಸಂದೇಶಗಳನ್ನು ಹರಡುವಲ್ಲಿ ಇಂಟರ್ನೆಟ್, ಯೂಟ್ಯೂಬ್, ಫೇಸ್ಬುಕ್, ವಾಟ್ಸ್ಆ್ಯಪ್ಗಳ ಪಾತ್ರವನ್ನು ನಾವು ತಿಳಿಯಬಹುದು. (ಹಿಂದುತ್ವವಾದಿಗಳಂತೆ, ಹಿಟ್ಲರ್ ಮತ್ತು ಮುಸ್ಸೋಲಿನಿಗೆ ಈ ಆಧುನಿಕೋತ್ತರ ತಂತ್ರಜ್ಞಾನಗಳು ಲಭ್ಯವಿರಲಿಲ್ಲ. ಆದರೆ ನವ-ನಾಝಿಗಳು ಮತ್ತು ISISಗೆ ಲಭ್ಯವಿತ್ತು.)

ಪುರೋಹಿತ್ ಅವರು ಪರಿಶೀಲಿಸಿದ ಹಾಡುಗಳ ಸಾಹಿತ್ಯವು ಹಿಂದೂಗಳು ಹಿಂದೆ ಎದುರಿಸಿದ್ದರು ಮತ್ತು ಈಗ ಎದುರಿಸುತ್ತಿದ್ಧಾರೆ ಎನ್ನಲಾಗುವ ಅಪಾಯಕಾರಿ ಶತ್ರುಗಳ ಬಗ್ಗೆ ಹೇಳುತ್ತದೆ. ಅದೇನೇ ಇದ್ದರೂ, ಕೊನೆಯಲ್ಲಿ ಅವರೇ ಜಯಶಾಲಿಗಳಾಗುವುದು ಎಂಬ ಭರವಸೆಯನ್ನು ನೀಡುತ್ತದೆ. ಇಂದಿನ ಹಿಂದುತ್ವ ಸಿದ್ಧಾಂತದ ವ್ಯಾಖ್ಯಾನವಾಗಿ ‘ಮತಿಭ್ರಮಿತ ವಿಜಯೋನ್ಮಾದ’ ಎಂದು ನಾನು ಬೇರೆಡೆ ಕರೆದಿರುವುದನ್ನು ಅವರು ಹೀಗೆ ಕಾಣಿಸುತ್ತಾರೆ. ಹರಿಯಾಣ್ವಿ ಗಾಯಕರೊಬ್ಬರು ಹಾಡಿದ ಜನಪ್ರಿಯ ಗೀತೆಯ ಒಂದು ಪದ್ಯ ಇಲ್ಲಿದೆ. ಅದು ಮುಸ್ಲಿಮರನ್ನು ಉದ್ದೇಶಿಸಿ ಹೀಗೆ ಹೇಳುತ್ತದೆ ಅಥವಾ ಆಜ್ಞೆ ಮಾಡುತ್ತದೆ:

‘‘ವಂದೇಮಾತರಂ, ನೀವು ಪಠಿಸಬೇಕು/ಅಥವಾ ನೀವು ಈ ದೇಶವನ್ನು ತೊರೆಯಬೇಕಾಗುತ್ತದೆ/ನೀವು ಮಾಡದಿದ್ದರೆ, ನಿಮ್ಮನ್ನು ಹೊರಗೆ ತಳ್ಳಲಾಗುತ್ತದೆ/ನಿಮ್ಮ ಸ್ಥಳವನ್ನು ನಾವು ನಿಮಗೆ ತೋರಿಸುತ್ತೇವೆ.’’

ಇತರ ಹಾಡುಗಳು ತೈಮೂರ್ನಂತಹ ಮುಸ್ಲಿಮ್ ವೀರರ ಉಗ್ರ ಸ್ವಭಾವವನ್ನು ಎತ್ತಿ ತೋರಿಸುತ್ತವೆ. ಪುರೋಹಿತ್ ಉಲ್ಲೇಖಿಸಿದ ಒಂದು ಕವಿತೆಯು ಜೋಗ ರಾಜ್ ಸಿಂಗ್ ಗುರ್ಜರ್ ಎಂಬ ಸಂಪೂರ್ಣ ಕಾಲ್ಪನಿಕ ಯೋಧನನ್ನು, ಅವನು ತೈಮೂರ್ನ ಸೈನ್ಯವನ್ನು ಸೋಲಿಸಿದ ಮತ್ತು ಅವರನ್ನೆಲ್ಲ ಹರಿದ್ವಾರದ ಪ್ರವೇಶದ್ವಾರದಲ್ಲಿಯೇ ತಡೆದು ನಿಲ್ಲಿಸಿದನೆಂದು ಕೊಂಡಾಡುತ್ತದೆ. ೨೦೨೨ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಮುನ್ನಾದಿನ ನಟಿ ಕಂಗನಾ ರಣಾವತ್ ತಮ್ಮ ಫೇಸ್ಬುಕ್ ಪುಟದಲ್ಲಿ ಕಪೋಲಕಲ್ಪಿತ ಕಥೆಯುಳ್ಳ ಈ ಕವಿತೆಯ ವೀಡಿಯೊವನ್ನು ಹಂಚಿಕೊಂಡಿದ್ದರು ಮತ್ತು ಕ್ರೂರ ಆಕ್ರಮಣಕಾರ ತೈಮೂರ್ನನ್ನು ಸೋಲಿಸಿದ ಪ್ರಬಲ, ಧೈರ್ಯಶಾಲಿ ಜೋಗರಾಜ್ ಸಿಂಗ್ ಗುರ್ಜರ್ನ ಕಥೆಯನ್ನು ಕೇಳಿ ಎಂದು ಸಂದೇಶವನ್ನು ಬರೆದಿದ್ದರು. ‘‘ನಮ್ಮ ವೀರ ಪೂರ್ವಜರ ತ್ಯಾಗವನ್ನು ಗೌರವಿಸುವಂತೆ ನಾನು ಎಲ್ಲ ಮತದಾರರಲ್ಲಿ ಮನವಿ ಮಾಡುತ್ತೇನೆ. ಮತದಾನದ ದಿನಾಂಕದಂದು ನೀವು ನಮ್ಮ ರಾಷ್ಟ್ರದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಿ’’ ಎಂದಿದ್ದರು.

H-Pop ಜಗತ್ತನ್ನು ರೂಪಿಸುವ ಕವಿತೆಗಳು ಮತ್ತು ಹಾಡುಗಳು ಮುಸ್ಲಿಮರನ್ನು ದ್ರೋಹಿಗಳು ಮತ್ತು ಹಿಂದೂಗಳನ್ನು ಉದಾತ್ತರು ಮತ್ತು ಧೀರರು ಎಂದು ಬಣ್ಣಿಸಲು ಚರಿತ್ರೆಯನ್ನು ತಿರುಗಿ ಬರೆಯುವ ಉದ್ದೇಶವನ್ನು ಹೊಂದಿವೆ. ಅವು ಕೇಳುಗರನ್ನು ಕಾರಣ ಮತ್ತು ತಾರ್ಕಿಕತೆಯಿಂದ ದೂರವಿರುವಂತೆ ಮಾಡುತ್ತವೆ ಮತ್ತು ಅದರ ಬದಲಿಗೆ ಭಾವನೆಗಳಲ್ಲಿ ಸಿಕ್ಕಿಹಾಕಿಸುತ್ತವೆ. ಪುರೋಹಿತ್ ಹೇಳುವಂತೆ, ‘‘ಹಿಂದುತ್ವ ಉಳಿಯಲು ಮತ್ತು ಪ್ರವರ್ಧಮಾನಕ್ಕೆ ಬರಲು, ಅದಕ್ಕೆ ಶತ್ರುಗಳು ಬೇಕು. ಸಮಯ ಹೋದಂತೆ ನಿರಂತರವಾಗಿ ತಾಜಾತನವನ್ನು ಉಳಿಸಲು ಅದು ನೆರವಾಗುತ್ತದೆ.’’

ಅನೇಕ ಹಾಡುಗಳು ಮತ್ತು ಕವಿತೆಗಳು ಮುಸ್ಲಿಮ್ ಜನಸಂಖ್ಯೆ ಹೆಚ್ಚುತ್ತಿರುವುದೆಂಬ ಅತಾರ್ಕಿಕ ಭಯವನ್ನು ಬಿಂಬಿಸುತ್ತವೆ. ಅವುಗಳಲ್ಲಿನ ಮಾತುಗಳು ಮುಸ್ಲಿಮರು ಸಂಖ್ಯೆಯಲ್ಲಿ ಎಷ್ಟು ವೇಗವಾಗಿ ಬೆಳೆಯುತ್ತಿದ್ದಾರೆ, ಅವರು ಶೀಘ್ರವೇ ಹಿಂದೂಗಳನ್ನು ಹಿಂದಿಕ್ಕಿ ಸ್ವಂತ ನೆಲದಲ್ಲೇ ಅವರನ್ನು ಅಲ್ಪಸಂಖ್ಯಾತರನ್ನಾಗಿ ಮಾಡುತ್ತಾರೆ ಎಂಬ ಸುಳ್ಳು ವಾದಗಳನ್ನು ಉತ್ತೇಜಿಸುತ್ತವೆ. ಈ ಪದ್ಯವನ್ನು ನೋಡಿ: ‘‘ಕೆಲವರು ಪಿತೂರಿ ಮಾಡುತ್ತಿದ್ದಾರೆ/ಅವರು ಅನೇಕ ಮಕ್ಕಳನ್ನು ಹಡೆಯುತ್ತಾರೆ/ಅವರ ಸಂಖ್ಯೆ ನಮ್ಮನ್ನು ದಾಟಿದಾಗ/ಅವರು ನಮ್ಮನ್ನು ಅವರ ತಾಳಕ್ಕೆ ಕುಣಿಯುವಂತೆ ಮಾಡುತ್ತಾರೆ.’’

ಮಹಾತ್ಮಾ ಗಾಂಧಿಯವರ ಜೀವನಚರಿತ್ರೆಕಾರನಾಗಿ, ಗಾಂಧಿಯವರ ಮೇಲೆ ಆಕ್ರಮಣ ಮಾಡುವ ಮತ್ತು ನಾಥೂರಾಮ್ ಗೋಡ್ಸೆಯನ್ನು ಹೊಗಳುವ ಕವಿತೆಯ ಕುರಿತ ಪುರೋಹಿತ್ ಅವರ ವಿವರಣೆಯಿಂದ ನಾನು ನಿಜಕ್ಕೂ ಆಘಾತಗೊಂಡೆ. ಅದರ ವಾಚನದ ಕುರಿತು ಅವರು ಬರೆಯುತ್ತಾ, ‘‘ಮುಂದಿನ ಹದಿಮೂರು ನಿಮಿಷಗಳ ಕಾಲ ಕವಿ, ಗಾಂಧಿ ಮತ್ತು ಗೋಡ್ಸೆ ಕುರಿತಾದ ತನ್ನ ಕವಿತೆಯ ಮೂಲಕ, ಅದೇ ವೇಳೆ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಯವರ ಪಾತ್ರದ ಬಗ್ಗೆ ಗಂಭೀರವಾದ ದೋಷಾರೋಪಣೆ ಮಾಡುತ್ತಾನೆ. ಗೋಡ್ಸೆಯ ಕೃತ್ಯವನ್ನು ಸಮರ್ಥಿಸುತ್ತಾನೆ ಮತ್ತದನ್ನು ವೈಭವೀಕರಿಸುತ್ತಾನೆ. ಮೂವರು ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರುಗಳ ಗಲ್ಲುಶಿಕ್ಷೆಯನ್ನು ತಡೆಯದೆ ಭಾರತಕ್ಕೆ ‘ದ್ರೋಹ’ ಮಾಡುವುದರಿಂದ ಹಿಡಿದು ಸ್ವತಂತ್ರ ಭಾರತದ ಪ್ರಧಾನಿ ಹುದ್ದೆಗೆ ಇತರ ನಾಯಕರ ಬದಲಿಗೆ ನೆಹರೂ ಅವರನ್ನು ಬೆಂಬಲಿಸುವವರೆಗೆ ಎಲ್ಲದಕ್ಕೂ ಗಾಂಧಿಯನ್ನೇ ಕವಿತೆ ದೂಷಿಸುತ್ತದೆ. ಕವಿತೆಯ ಉದ್ದೇಶವಂತೂ ಸ್ಪಷ್ಟವಾಗಿತ್ತು. ಏನೆಂದರೆ, ಗಾಂಧಿ ಹತ್ಯೆ ಸಮರ್ಥನೀಯ ಮತ್ತು ಅಗತ್ಯವಾಗಿತ್ತು ಎಂಬುದನ್ನು ಹೇಳುವುದು.’’

ಪುರೋಹಿತ್ ಅವರು ಗೋಡ್ಸೆ ಮತ್ತು ಗಾಂಧಿ ಮೇಲಿನ ಈ ಕವಿತೆಯ ಕೊನೆಯ ಪದ್ಯವನ್ನು ಉಲ್ಲೇಖಿಸುತ್ತಾರೆ:

‘‘ಗೋಡ್ಸೆ ಆ ಬುಲೆಟ್ ಅನ್ನು ಗಾಂಧಿಗೆ ಹೊಡೆಯದಿದ್ದರೆ,

ಪ್ರತಿಯೊಬ್ಬ ಹಿಂದೂವೂ ಇಂದು ಮಕ್ಕಾ ಮತ್ತು ಮದೀನಾದಲ್ಲಿ ಪ್ರಾರ್ಥನೆ ಮಾಡುತ್ತಿದ್ದರು.

ಸೌಮ್ಯವಾದ ಅಹಿಂಸೆಯು ಭಾರತವನ್ನು ಛಿದ್ರಗೊಳಿಸುತ್ತಿತ್ತು,

ಗಾಂಧೀಜಿ ಬದುಕಿದ್ದರೆ ದೇಶ ಇನ್ನಷ್ಟು ಭಾಗಗಳಾಗಿ ಒಡೆಯುತ್ತಿತ್ತು.’’

ಪುರೋಹಿತ್ ಅವರ ಪುಸ್ತಕವು ಜನಪ್ರಿಯ ಸಂಸ್ಕೃತಿಯನ್ನು ಅಸ್ತ್ರವಾಗಿ ಬಳಸಿಕೊಳ್ಳುವ ಈ ರೀತಿಯು ಹೇಗೆ ಬಿಜೆಪಿಯ ರಾಜಕೀಯ ಏಳಿಗೆಗೆ ಸಹಾಯ ಮಾಡಿದೆ ಎಂಬುದನ್ನು ದಾಖಲಿಸುತ್ತದೆ. (ಕುತೂಹಲಕಾರಿಯಾಗಿ, ಈ ವಿಷಪೂರಿತ ಸಾಂಸ್ಕೃತಿಕ ರೂಪಗಳು ದಕ್ಷಿಣಕ್ಕಿಂತ ಉತ್ತರದಲ್ಲಿ, ಉತ್ತರ ಪ್ರದೇಶ ಮತ್ತು ಹರ್ಯಾಣದಂತಹ ರಾಜ್ಯಗಳಲ್ಲಿ ಹೆಚ್ಚು ಒಪ್ಪಿಕೊಳ್ಳುವ ಪ್ರೇಕ್ಷಕರನ್ನು ಕಂಡುಕೊಳ್ಳುವಂತೆ ತೋರುತ್ತದೆ.) ಮೋದಿ ಮತ್ತು ಆದಿತ್ಯನಾಥ್ ಅವರ ಆರಾಧನೆಯು ಆಗಾಗ ಈ ಕವಿತೆಗಳು ಮತ್ತು ಹಾಡುಗಳಲ್ಲಿರುವುದನ್ನು ನಿಜವಾಗಿ ಕಾಣಿಸುತ್ತದೆ. ಉತ್ತರ ಪ್ರದೇಶ ಸರಕಾರದಿಂದ ನಗದು ಬಹುಮಾನವನ್ನು ಪಡೆದ ಬಲಪಂಥೀಯ ಕವಿಯ ಪ್ರಕರಣವನ್ನು ಪುರೋಹಿತ್ ಉಲ್ಲೇಖಿಸುತ್ತಾರೆ. ಸರಕಾರ ಹೊಸ ಬುಲ್ಡೋಜರ್ ಅನ್ನು ಖರೀದಿಸಬೇಕು (ಬಹುಶಃ ಮುಸ್ಲಿಮ್ ಮನೆಗಳನ್ನು ಕೆಡವಲು) ಎಂದು ಹೇಳಿ ಅವರು ಅದನ್ನು ಹಿಂದಿರುಗಿಸಿದ್ದರು.

ಕುನಾಲ್ ಪುರೋಹಿತ್ ಅವರ ಪುಸ್ತಕವು ಹಿಂದೂ ಬಲಪಂಥೀಯರ ಮತಿವಿಕಲ್ಪಗಳು ಮತ್ತು ಕಲ್ಪನೆಗಳಿಗೆ ಆಗಾಗ ಎದುರಾಗುವ ಗೊಂದಲದ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಲೇಖಕರು ಕೊನೆಯಲ್ಲಿ ಬರೆದಂತೆ, ‘‘ಪ್ರಚಾರವನ್ನು ಜನಪ್ರಿಯ ಸಂಸ್ಕೃತಿಯೊಂದಿಗೆ ಹೆಣೆಯುವ ಪ್ರಯತ್ನಗಳು ಹೆಚ್ಚು ಲಜ್ಜೆಗೆಟ್ಟಿವೆ, ಅದರ ಪರಿಣಾಮಗಳು ಹೆಚ್ಚು ಕಪಟವಾಗಿವೆ. ಹಿಂದುತ್ವದ ಚಿಯರ್ ಲೀಡರ್ ಆಗಿರುವುದು ಆರ್ಥಿಕವಾಗಿ ಲಾಭದಾಯಕವಾಗಿದೆ. ಕುತೂಹಲಕಾರಿಯಾಗಿ, ಯಾವುದೇ ಪ್ರಮುಖ ಬಿಜೆಪಿ ನಾಯಕರು ಈ ಪ್ರಚಾರಕ ಕವಿತೆಗಳು, ಹಾಡುಗಳು ಮತ್ತು ಕರಪತ್ರಗಳೊಂದಿಗೆ ಸ್ಪಷ್ಟವಾಗಿ ಗುರುತಿಸಿಕೊಂಡಿಲ್ಲ ಅಥವಾ ಅವನ್ನು ಒಪ್ಪಿಲ್ಲ. ಬದಲಿಗೆ, ಜನಸಮೂಹವನ್ನು ಸಜ್ಜುಗೊಳಿಸುವುದು ಮತ್ತು ಹಿಂಸಾಚಾರವನ್ನು ಕಾರ್ಯಗತ ಗೊಳಿಸುವುದನ್ನು ಹೊರಗಿನವರಿಗೆ ಒಪ್ಪಿಸುವುದು ತೋರಿಕೆಗೆ ಸಂಬಂಧವಿಲ್ಲದಂತೆ ಕಂಡರೂ, ಹಿಂದೂ ಬಲಪಂಥದ ಜೊತೆ ಅದೃಶ್ಯ ಸಂಬಂಧವನ್ನು ಹೊಂದಿದೆ.’’

ನಾನು ಈ ಪುಸ್ತಕವನ್ನು ಮೋಹ ಮತ್ತು ಭಯಮಿಶ್ರಿತ ಭಾವದೊಂದಿಗೆ ಓದಿದೆ. ಮನಸ್ಸನ್ನು ಖುಷಿಗೊಳಿಸುವ ಮತ್ತು ರಂಜಿಸುವ ಸಂಗೀತವನ್ನು ಒಂದು ಕಲಾ ಪ್ರಕಾರವೆಂದು ಗ್ರಹಿಸುವುದನ್ನು ನಾನು ಬಹಳ ಹಿಂದಿನಿಂದಲೂ ರೂಢಿಸಿಕೊಂಡಿದ್ದೇನೆ. ಸಂಗೀತದ ಪ್ರಕಾರಗಳಾದ ಪೂರ್ವ ಮತ್ತು ಪಾಶ್ಚಾತ್ಯ, ಜಾನಪದ ಮತ್ತು ಶಾಸ್ತ್ರೀಯ, ವಾದ್ಯಸಂಗೀತ ಮತ್ತು ಗಾಯನ ಶತಮಾನಗಳಿಂದ ಮಾನವಕುಲಕ್ಕೆ ಹಿತದ ಭಾವ ಮತ್ತು ಸಂತೋಷವನ್ನು ಒದಗಿಸಿವೆ. ನಾನು ಭಾರತೀಯ ಶಾಸ್ತ್ರೀಯ ಸಂಗೀತದಿಂದ ನನ್ನ ಜೀವನದುದ್ದಕ್ಕೂ ಮತ್ತು ಈಗಲೂ ಪ್ರಭಾವಿತನಾಗಿದ್ದೇನೆ. ಬಿಸ್ಮಿಲ್ಲಾ ಖಾನ್, ಎಂ.ಎಸ್. ಸುಬ್ಬುಲಕ್ಷ್ಮಿ, ಕಿಶೋರಿ ಅಮೋನ್ಕರ್, ಕಿಶೋರ್ ಕುಮಾರ್ ಅವರ ದೇಶದಲ್ಲಿ ಸಂಗೀತ ಈಗ ಬಲಪಂಥೀಯ ಪ್ರಚಾರದ ಸಾಧನವಾಗಿ ಮಾರ್ಪಟ್ಟಿದೆ, ಪ್ರತೀಕಾರ ಮತ್ತು ಹಿಂಸೆಯ ವಾಹಕವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ರಾಮಚಂದ್ರ ಗುಹಾ

contributor

Similar News