ವಿನಾಶಕ ಮೋದಿ ದಶಕ ಬರ್ಬರಗೊಂಡ ಭಾರತದ ದುರ್ಭರ ವರದಿಗಳು

Update: 2024-05-09 05:00 GMT
Editor : Thouheed | Byline : ಶಿವಸುಂದರ್,

ಭಾಗ- 2

3. ಮೋದಿ ಸರಕಾರ- ನಿರ್ಭರ ಸರ್ವಾಧಿಕಾರ

-ವಿ-ಡೆಮ್ ವರದಿ

ಇದರ ಜೊತೆಗೆ ಸ್ವೀಡನ್‌ನ ಗೊಥೆನ್‌ಬರ್ಗ್ ವಿಶ್ವವಿದ್ಯಾನಿಲಯದೊಂದಿಗೆ ಐರೋಪ್ಯ ಒಕ್ಕೂಟ, ಅಮೆರಿಕ ಸರಕಾರ ಮತ್ತು ವಿಶ್ವಬ್ಯಾಂಕ್‌ಗಳೆಲ್ಲವೂ ಸೇರಿಕೊಂಡು ಜಗತ್ತಿನ ಪ್ರಜಾತಂತ್ರದ ಆರೋಗ್ಯದ ಏರಿಳಿವುಗಳನ್ನು ಐತಿಹಾಸಿಕವಾಗಿ ಮೌಲ್ಯಮಾಪನ ಮಾಡುವ ಯೋಜನೆಯನ್ನು ಕೈಗೆತ್ತಿಕೊಂಡಿವೆ. ಇದಕ್ಕೆ ‘Varieties Of Democracy Projecy’ (v-Dem Project) ಎಂದು ಹೆಸರಿಡಲಾಗಿದೆ. ಇದರಡಿಯಲ್ಲಿ ಜಗತ್ತಿನ 196 ದೇಶಗಳಲ್ಲಿ 1901ರಿಂದ ಪ್ರಜಾತಾಂತ್ರಿಕ ಸಂಸ್ಥೆಗಳು ಮತ್ತು ಮೌಲ್ಯಗಳು ಯಾವ ರೀತಿ ಏರಿಳಿವುಗಳನ್ನು ಕಾಣುತ್ತಿವೆಯೆಂದು ಪ್ರತಿವರ್ಷ ದಾಖಲಿಸಲಾಗುತ್ತದೆ. ಇದಕ್ಕಾಗಿ ಉದಾರವಾದಿ ಪ್ರಜಾತಂತ್ರಕ್ಕೆ ಸಂಬಂಧಿಸಿದ ಐದು ಮಾನದಂಡಗಳನ್ನು ಇಟ್ಟುಕೊಳ್ಳಲಾಗಿದೆ. ಚುನಾವಣಾ ಪ್ರಜಾತಂತ್ರದ ಸೂಚ್ಯಂಕ, ಉದಾರವಾದಿ ಮೌಲ್ಯಗಳ ಸೂಚ್ಯಂಕ, ಜನರ ಜೊತೆ ಸಮಾಲೋಚನಾ ಸೂಚ್ಯಂಕ, ಜನರ ಪಾಲುದಾರಿಕೆ ಸೂಚ್ಯಂಕ ಹಾಗೂ ಆದರ್ಶವಾದಿ ಸೂಚ್ಯಂಕ. ಸ್ಪಷ್ಟವಾಗಿ ಕಾಣುವಂತೆ ಇಲ್ಲಿ ಒಂದು ದೇಶವನ್ನು ಪ್ರಜಾತಾಂತ್ರಿಕ ದೇಶ ಎಂದು ಪರಿಗಣಿಸಲು ಕೇವಲ ಚುನಾವಣೆ ನಡೆಸುವುದನ್ನು ಮಾತ್ರ ಏಕೈಕ ಮಾನದಂಡವನ್ನಾಗಿ ಪರಿಗಣಿಸುವುದಿಲ್ಲ.

ಈ v-Dem ಮೌಲ್ಯಮಾಪನ ಮಾಡುತ್ತಿರುವ ಪರಿಣಿತರ ಪ್ರಕಾರ ಕಳೆದ ಐದು-ಹತ್ತು ವರ್ಷಗಳಿಂದ ಜಗತ್ತಿನಲ್ಲಿ ಪ್ರಜಾತಂತ್ರದ ವಿರುದ್ಧವಾಗಿ ಮೂರನೇ ಸರ್ವಾಧಿಕಾರಿ ಅಲೆಯು ಬೀಸುತ್ತಿದೆ. ಹೀಗಾಗಿಯೇ ಈ ಹಿಂದೆ ಪ್ರಜಾತಂತ್ರವಾಗಿದ್ದ 27 ರಾಷ್ಟ್ರಗಳಲ್ಲಿ ಬಲಪಂಥೀಯ ಮತ್ತು ಸರ್ವಾಧಿಕಾರಿ ಅಂಶಗಳು ಬಲವಾಗಿ ನೆಲೆಯೂರುತ್ತಿವೆ ಎಂಬ ಅಂಶವನ್ನು ಬಯಲುಪಡಿಸಿದ್ದಾರೆ. ಅದರ ಪ್ರಕಾರ ಟ್ರಂಪ್‌ನ ಅಮೆರಿಕವೂ ಒಳಗೊಂಡಂತೆ, ಬ್ರೆಝಿಲ್, ಹಂಗೇರಿ, ರಶ್ಯ, ಟರ್ಕಿ ಮತ್ತು ಏಶ್ಯದಲ್ಲಿ ಮೋದಿ ಸರಕಾರದಡಿಯಲ್ಲಿರುವ ಭಾರತದಲ್ಲಿ ಸರ್ವಾಧಿಕಾರಿ ಅಂಶಗಳು ತೀವ್ರವಾಗಿ ಹೆಚ್ಚಾಗುತ್ತಿವೆ ಎಂದು ಅವರು ಗುರುತಿಸುತ್ತಾರೆ! ಭಾರತವು ಚುನಾವಣಾ ಸೂಚ್ಯಂಕದಲ್ಲಿ 10ರಲ್ಲಿ 7ಕ್ಕಿಂತ ತುಸು ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದರೂ ಉಳಿದ ನಾಲ್ಕೂ ಸೂಚ್ಯಂಕಗಳಲ್ಲಿ 10ಕ್ಕೆ 2-3 ಅಂಕಗಳನ್ನು ಮಾತ್ರ ಪಡೆದುಕೊಂಡಿದೆ!

ದುರ್ಭರ ಮೋದಿ-ಬರ್ಬರ ಭಾರತ!

(https://www.v-dem.net/documents/29/V-dem_democracyreport2023_lowres.pdf)

4. ಭ್ರಷ್ಟಾಚಾರ ಸೂಚ್ಯಂಕ

-ಮೋದಿ ಭಾರತ ಏಶ್ಯಕ್ಕೆ ನಂಬರ್ 1!

ಇವೆಲ್ಲಾ ಹಾಳಾಗಲಿ.. ಭ್ರಷ್ಟಾಚಾರವನ್ನು ಬುಡಮಟ್ಟ ಕೀಳುತ್ತೇವೆಂದು ಕಾಂಗ್ರೆಸನ್ನು ಕಿತ್ತುಹಾಕಿ ಅಧಿಕಾರಕ್ಕೆ ಬಂದ ಮೋದಿಯವರ ಬಿಜೆಪಿ ಸರಕಾರ ಅದನ್ನಾದರೂ ಕಡಿಮೆ ಮಾಡಿದೆಯೇ?

ಜಾಗತಿಕವಾಗಿ ಸರಕಾರಗಳು ಮಾಡುವ ಭ್ರಷ್ಟಾಚಾರದ ರೀತಿನೀತಿಗಳನ್ನು ಅಧ್ಯಯನ ಮಾಡುವ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಎನ್ನುವ ಸಂಸ್ಥೆಯ ಪ್ರಕಾರ ಮೋದಿಯವರ ಭಾರತ ಈಗ ಭ್ರಷ್ಟಾಚಾರದಲ್ಲಿ ಏಶ್ಯಕ್ಕೆ ನಂಬರ್ 1 ಆಗಿದೆಯಂತೆ. ಈ ಸಂಸ್ಥೆ ಅಧ್ಯಯನಕ್ಕಾಗಿ ಸಂಪರ್ಕಿಸಿದ ವ್ಯಕ್ತಿಗಳಲ್ಲಿ ಶೇ. 50ಕ್ಕೂ ಹೆಚ್ಚೂ ಜನರ ಬಳಿ ಅಧಿಕಾರಸ್ಥರು ಬಾಯಿಬಿಟ್ಟು ಕೇಳಿ ಲಂಚ ಪಡೆದುಕೊಂಡಿದ್ದರೆ ಶೇ. 31ರಷ್ಟು ಜನರು ಸೂಕ್ತ ಸಂಪರ್ಕದ ಮೂಲಕ ಲಂಚ ಪಾವತಿಸಿದ್ದಾರೆ.

ಅದರ 2020ರ ವರದಿಯ ಪ್ರಕಾರ ಭಾರತದಲ್ಲಿ ಸರಕಾರದ ನೀತಿಗಳನ್ನು ನೇರಾನೇರ ಕಾರ್ಪೊರೇಟುಗಳೇ ನಿಯಂತ್ರಿಸುವುದರಿಂದಾಗಿ ಮತ್ತು ರಾಜಕೀಯ ಪಕ್ಷಗಳ ಫಂಡಿಂಗ್ ನೀತಿಗಳು ಹೆಚ್ಚೆಚ್ಚು ಅಪಾರದರ್ಶಕವಾಗುತ್ತಿರುವುದರಿಂದ ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಈ ವರ್ಷ ಭಾರತವು ಎರಡು ಸ್ಥಾನಗಳಷ್ಟು (78 ರಿಂದ 80ಕ್ಕೆ) ಕೆಳಗಿಳಿದಿದೆ.

(https://www.transparency.org/en/cpi/2022/index/ind)

ಇದು ಎಲೆಕ್ಟ್ರಾಲ್ ಬಾಂಡ್ ಭ್ರಷ್ಟಾಚಾರ ಬಯಲಾಗುವ ಮುನ್ನ ಭಾರತದ ಸ್ಥಿತಿ. ಈಗ ?

5. ಕಪ್ಪುಹಣ ಸೃಷ್ಟಿ-ಮೋದಿ ಸರಕಾರ ಏಶ್ಯಕ್ಕೆ ನಂ.3!

ಮೋದಿ ಸರಕಾರ ಕೊಚ್ಚಿಕೊಂಡ ಬಡಾಯಿಗಳಲ್ಲಿ ಮತ್ತೊಂದು ಪ್ರಮುಖ ಬಡಾಯಿ ಕಪ್ಪುಹಣದ ನಿಯಂತ್ರಣ ಹಾಗೂ ವಿದೇಶದಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ವಾಪಸ್ ತರುವುದು.

ಆದರೆ ಮೋದಿ ಸರಕಾರ ತುಂಬು ಆರು ವರ್ಷ ಆಡಳಿತ ನಡೆಸಿದ ನಂತರ ಕಪ್ಪುಹಣ ಸೃಷ್ಟಿಯಲ್ಲಿ ಈಗ ಏಶ್ಯದಲ್ಲೇ ಮೂರನೇ ಸ್ಥಾನಕ್ಕೆ ಏರಿದೆ! ‘ಗ್ಲೋಬಲ್ ಫೈನಾನ್ಷಿಯಲ್ ಇಂಟೆಗ್ರಿಟಿ’-ಜಿಎಫ್‌ಐ-ಎಂಬ ಗೌರವಾನ್ವಿತ ಪರಿಣಿತ ಸಂಸ್ಥೆಯ ಪ್ರಕಾರ ಕೇವಲ ಅಂತರ್‌ರಾಷ್ಟ್ರೀಯ ವಾಣಿಜ್ಯ ವಹಿವಾಟುಗಳಲ್ಲಿ ಪ್ರತೀ ವರ್ಷ ಮೋದಿ ಸರಕಾರದಡಿಯಲ್ಲಿ ಸರಕಾರಕ್ಕೆ ತೆರಿಗೆ ಕಟ್ಟದೆ 83.5 ಬಿಲಿಯನ್ ಡಾಲರುಗಳಷ್ಟು ಅಂದರೆ 6.5 ಲಕ್ಷ ಕೋಟಿ ರೂಪಾಯಿಗಳು ಭಾರತದ ಗಡಿ ದಾಟಿ ಹೋಗುತ್ತಿವೆ. ಕೇವಲ ಒಂದು ಬಾಬತ್ತಿನಲ್ಲಿ. ಇದು ಕಳ್ಳ ಹಣ ಸೃಷ್ಟಿಯಲ್ಲಿ ಭಾರತದ ಸ್ಥಾನವನ್ನು 135 ದೇಶಗಳಲ್ಲಿ 3ನೇ ಸ್ಥಾನಕ್ಕೇ ಏರಿಸಿದೆ..

ಆಸಕ್ತರು ಪೂರ್ತಿ ವರದಿಯನ್ನು ಇಲ್ಲಿ ಓದಬಹುದು:

https://gfintegrity.org/report/trade-related-illicit-financial-flows-in-135-developing-countries-೨೦೦೮-೨೦೧೭

6. ಮಾನವ ಸ್ವಾತಂತ್ರ್ಯ ಸೂಚ್ಯಂಕ-17 ಸ್ಥಾನ ಕುಸಿತ:

ಅಮೆರಿಕ ಮೂಲದ ಜಾಗತಿಕ ಸ್ವಾಯತ್ತ ಚಿಂತಕರ ಚಾವಡಿಯಾದ ಕ್ಯಾಟೋ ಸಂಸ್ಥೆಯು ಪ್ರತಿವರ್ಷ ಜಗತ್ತಿನ ವಿವಿಧ ದೇಶಗಳಲ್ಲಿ ಜನರಿಗಿರುವ ಸ್ವಾತಂತ್ರ್ಯದ ಬಗ್ಗೆ ಸ್ವತಂತ್ರವಾಗಿ ಹಾಗೂ ಸರಕಾರವು ಕೊಡಮಾಡುವ ಅಂಕಿಅಂಶಗಳನ್ನು ಆಧರಿಸಿದ ಅಧ್ಯಯನ ವರದಿಗಳನ್ನು ಬಿಡುಗಡೆ ಮಾಡುತ್ತದೆ. ಅದು, ಕಾನೂನಿನ ಆಡಳಿತ, ಸುರಕ್ಷತೆ ಮತ್ತು ಭದ್ರತೆ, ಧಾರ್ಮಿಕ ಹಾಗೂ ನಾಗರಿಕ ಸ್ವಾತಂತ್ರ್ಯ, ಹಕ್ಕುಗಳು ಮತ್ತು ಅಧಿಕಾರಗಳು ಇನ್ನಿತ್ಯಾದಿ ಮಾನವರ ನಾಗರಿಕ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟ 76 ಅಂಶಗಳನ್ನು ಪರಿಗಣಿಸಿ ಆಯಾ ದೇಶಗಳ ಮಾನವ ಸ್ವಾತಂತ್ರ್ಯ ಸೂಚ್ಯಂಕಗಳನ್ನು ನಿಗದಿಪಡಿಸುತ್ತದೆ.

ಜಗತ್ತಿನ 165 ದೇಶಗಳ ಸ್ವಾತಂತ್ರ್ಯ ಸೂಚ್ಯಂಕಗಳ ಬಗ್ಗೆ ತನ್ನ 2022ನೇ ಸಾಲಿನ ವರದಿಯನ್ನು ಇತ್ತೀಚೆಗೆ ಕ್ಯಾಟೋ ಬಿಡುಗಡೆ ಮಾಡಿದೆ. 165 ದೇಶಗಳಲ್ಲಿರುವ ಮಾನವ ಸ್ವಾತಂತ್ರ್ಯ ಸೂಚ್ಯಂಕಗಳಲ್ಲಿ ಭಾರತದ ಸ್ಥಾನ 112ಕ್ಕೆ ಇಳಿದಿದೆಯೆಂದು ಆ ವರದಿಯು ತಿಳಿಸುತ್ತದೆ. 2014ರಲ್ಲಿ ಭಾರತವು 106ನೇ ಸ್ಥಾನದಲ್ಲಿತ್ತು.

ಹಾಗೆ ನೋಡಿದರೆ ಮೋದಿ ಸರಕಾರ ಅಧಿಕಾರಕ್ಕೆ ಬಂದು ಭಾರತದ ಪ್ರಧಾನಿ ನಿರ್ಭರವಾದಷ್ಟು ಭಾರತದ ಪರಿಸ್ಥಿತಿ ಬರ್ಬರವಾಗುತ್ತಲೇ ಸಾಗುತ್ತಾ ಈಗ 112ನೇ ಸ್ಥಾನಕ್ಕೆ ಕುಸಿದಿದೆ.

ಈ ಅಧ್ಯಯನದ ಪ್ರಕಾರ ಒಂದು ದೇಶ ಸಾಪೇಕ್ಷವಾಗಿ ಸರಾಸರಿ ಸ್ವಾತಂತ್ರ್ಯವನ್ನು ಪಡೆದಿದೆ ಎಂದು ಭಾವಿಸಬೇಕೆಂದರೂ, ಅದು ಪರಿಗಣಿಸುವ 76 ಅಂಶಗಳಲ್ಲಿ ಕನಿಷ್ಠ ಸರಾಸರಿ 6.5 ಅಂಶಗಳನ್ನು ಪಡೆಯಬೇಕು. ಆದರೆ ಮೋದಿ ಭಾರತ ಪಡೆದುಕೊಂಡಿರುವುದು ಕೇವಲ 6.3. ಪಕ್ಕದ ಭೂತಾನ್, ಶ್ರೀಲಂಕಾ ಹಾಗೂ ನೇಪಾಳ ಕೂಡ ನಮಗಿಂತ ಹತ್ತಿಪ್ಪತ್ತು ಸ್ಥಾನಗಳು ಮುಂದಿವೆ.

ಹಾಗೆಯೇ, ಕೆನಡಾದ ಫ್ರೇಸರ್ ಅಧ್ಯಯನ ಸಂಸ್ಥೆಯು ಪ್ರಕಟಿಸುವ ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕಗಳ ಪಟ್ಟಿಯಲ್ಲೂ ಭಾರತದ ಸ್ಥಾನವು ಕಳೆದ ಎರಡು ವರ್ಷಗಳಲ್ಲಿ 26 ಸ್ಥಾನಗಳು ಕುಸಿತಗೊಂಡು 162 ದೇಶಗಳಲ್ಲಿ 105ನೇ ಸ್ಥಾನಕ್ಕೆ ತಲುಪಿದೆ.

ಆಸಕ್ತರು ವರದಿಯನ್ನು ಈ ವೆಬ್ ವಿಳಾಸದಲ್ಲಿ ಪಡೆಯಬಹುದು:

https://www.cato.org/sites/cato.org/files/2023-01/human-freedom-index-2022-country-profiles.pdf

7. ಸಂತಸ ಸೂಚ್ಯಂಕ: ಪಾತಾಳ ತಲುಪಲು ಸ್ಪರ್ಧೆ

ಒಂದು ದೇಶದ ಅಭಿವೃದ್ಧಿಯನ್ನು ಆಯಾ ದೇಶಗಳ ಜನರು ಎಷ್ಟು ಆನಂದ ಮತ್ತು ಸಂತಸದಿಂದ ಇದ್ದಾರೆ ಎಂಬುದನ್ನು ಆಧರಿಸಿ ಅರ್ಥಮಾಡಿಕೊಳ್ಳಬೇಕೆಂಬ ತಿಳುವಳಿಕೆ 2012ರಿಂದ ಜಗತ್ತಿನಾದ್ಯಂತ ಹಬ್ಬಿದೆ. ಹೀಗಾಗಿ ವಿಶ್ವ ಸಂಸ್ಥೆಯು ದೇಶಗಳ ಅಭಿವೃದ್ಧಿಯನ್ನು ಅಳೆಯಲು 2012ರಿಂದ ‘World Happiness Index’-‘ಸಂತಸದ ಸೂಚ್ಯಂಕ’-ಎಂಬ ಹೊಸ ಮಾನದಂಡವನ್ನು ಅಳವಡಿಸುತ್ತಿದೆ. ಇದರಲ್ಲಿ ಒಬ್ಬ ವ್ಯಕ್ತಿಗೆ ತನ್ನ ಇಚ್ಛೆಗೆ ತಕ್ಕಂತೆ ಬದುಕನ್ನು ಆಯ್ಕೆ ಮಾಡಿಕೊಳ್ಳಲು ಇರುವ ಸ್ವಾತಂತ್ರ್ಯ, ಅದಕ್ಕೆ ಸರಕಾರ ಮತ್ತು ಸಮಾಜದಿಂದ ಸಿಗುವ ಬೆಂಬಲ.. ಇನ್ನಿತ್ಯಾದಿಗಳನ್ನು ಮಾನದಂಡಗಳನ್ನಾಗಿ ಬಳಸಿಕೊಳ್ಳಲಾಗುತ್ತದೆ. ಭಾರತವು ಮೋದಿಮಯವಾಗುವ ಮುನ್ನ ಈ ಮಾನದಂಡದಲ್ಲಿ ಜಗತ್ತಿನ 122ನೇ ಸ್ಥಾನದಲ್ಲಿತ್ತು. ಆದರೆ ನಂತರದ ವರ್ಷಗಳಲ್ಲಿ ಒಂದೇ ಸಮನೆ ಕುಸಿತ ಕಂಡು ಈ ವರ್ಷ 146 ದೇಶಗಳಲ್ಲಿ 126ನೇ ಸ್ಥಾನವನ್ನು ತಲುಪಿದೆ ಹಾಗೂ ಪ್ರಥಮ ಬಾರಿಗೆ ಕೊನೆಯ ಹತ್ತು ದೇಶಗಳ ಗುಂಪಿಗೆ ಭಾರತವು ಸೇರಿಕೊಂಡಿದೆ.

ಸಬ್ ಚಂಗಾ ಸಿ!

ಆಸಕ್ತರು ವರದಿಯನ್ನು ಈ ವೆಬ್ ವಿಳಾಸದಲ್ಲಿ ಓದಬಹುದು: https://worldhappiness.report/

8. ನರಮೇಧ-ಮೋದಿ ಹೈ ತೋ ಮುಮ್ಕಿನ್ ಹೈ!

ವಿಶ್ವಸಂಸ್ಥೆಯ ಪ್ರಕಾರ ಜಿನೋಸೈಡ್-ನರಮೇಧ ಎಂದರೆ:

‘‘ಒಂದು ರಾಷ್ಟ್ರೀಯ, ಜನಾಂಗಿಯ, ಧಾರ್ಮಿಕ ಅಥವಾ ವರ್ಣೀಯ ಗುಂಪನ್ನು, ಸಂಪೂರ್ಣವಾಗಿ ಅಥವಾ ಪಾಕ್ಷಿಕವಾಗಿ ನಾಶಮಾಡುವ ಉದ್ದೇಶದಿಂದ ಈ ಕೆಳಗಿನ ಯಾವುದೇ ಕ್ರಮಗಳನ್ನು ಎಸಗುವುದನ್ನು ನರಮೇಧದ ಕ್ರಮ-ಜಿನೋಸೈಡಲ್-ಎಂದು ಪರಿಗಣಿಸಲಾಗುವುದು: ಒಂದು ನಿರ್ದಿಷ್ಟ ಗುಂಪಿನ ಸದಸ್ಯರನ್ನು ಕೊಲ್ಲುವುದು; ಆ ಗುಂಪಿನ ಸದಸ್ಯರಿಗೆ ಗಂಭೀರವಾದ ಮಾನಸಿಕ ಅಥವಾ ದೈಹಿಕ ಹಾನಿಗಳನ್ನು ಉಂಟುಮಾಡುವುದು; ಆ ನಿರ್ದಿಷ್ಟ ಗುಂಪಿನ ಭೌತಿಕ ಅಸ್ತಿತ್ವವು ಸಂಪೂರ್ಣವಾಗಿ ಅಥವಾ ಪಾಕ್ಷಿಕವಾಗಿ ನಾಶಮಾಡಬೇಕೆಂಬ ಉದ್ದೇಶದಿಂದಲೇ ದುರ್ಭರ ಜೀವನಸ್ಥಿತಿಗತಿಗಳನ್ನು ಸೃಷ್ಟಿಸುವುದು; ಆ ನಿರ್ದಿಷ್ಟ ಗುಂಪಿನ ಸದಸ್ಯರ ಸಂತಾನ ವೃದ್ಧಿಯಾಗದಂತಹ ಕ್ರಮಗಳನ್ನು ಜಾರಿ ಮಾಡುವುದು ಅಥವಾ ಆ ಗುಂಪಿನ ಮಕ್ಕಳನ್ನು ಮತ್ತೊಂದು ಗುಂಪಿಗೆ ಹಸ್ತಾಂತರಿಸುವುದು.

ಆದರೆ ಇಂತಹ ಪರಿಸ್ಥಿತಿಯು ರಾತ್ರೋರಾತ್ರಿ ಸೃಷ್ಟಿಯಾಗುವುದಿಲ್ಲ ಮತ್ತು ಇಂತಹ ನರಮೇಧಗಳು ಆಯಾ ದೇಶಗಳ ದುರ್ಬಲ ಮತ್ತು ಅಲ್ಪಸಂಖ್ಯಾತ ವರ್ಗಗಳ ಮೇಲೆ ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ಹಂತಕ ಪಡೆಗಳು ಬಹುಪಾಲು ಜನರ ಸಮ್ಮತಿಯೊಂದಿಗೆ ಹಾಗೂ ಪ್ರಭುತ್ವದ ಸಕ್ರಿಯ ಅಥವಾ ಪರೋಕ್ಷ ಭಾಗೀದಾರಿಕೆಯೊಂದಿಗೆ ನಡೆಸುತ್ತಾರೆ.

ಪ್ರಪಂಚ ಮಟ್ಟದಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಮತ್ತು ‘ಜಿನೋಸೈಡ್ ವಾಚ್’ ಎಂಬ ಸಂಸ್ಥೆ ಜಿನೋಸೈಡ್ ಸಂದರ್ಭವನ್ನು ಮೂರು ವರ್ಗಗಳಾಗಿ ವಿಂಗಡಿಸಿವೆ.

ಅದರಲ್ಲಿ ಅತ್ಯಂತ ಗಂಭೀರವಾದ ಘಟ್ಟ ‘ಜಿನೋಸೈಡ್ ಎಮರ್ಜೆನ್ಸಿ’ ಹಂತ.

ಇದಕ್ಕೆ ಮುಂಚಿನ ಹಂತ ‘ಜಿನೋಸೈಡ್ ವಾರ್ನಿಂಗ್’ ಹಂತ.

ಅದಕ್ಕೆ ಪೂರ್ವಭಾವಿಯಾದ ಹಂತ ‘ಜಿನೋಸೈಡ್ ವಾಚ್’ ಘಟ್ಟ.

ಆದರೆ 2019ರ ನಂತರ ಭಾರತದ ಪರಿಸ್ಥಿತಿ ‘ಜಿನೊಸೈಡ್ ವಾಚ್’ನಿಂದ ‘ಜಿನೋಸೈಡ್ ಎಮರ್ಜೆನ್ಸಿ’ ಹಂತವನ್ನು ಮುಟ್ಟಿದೆ ಎಂದು ಈ ಸಂಸ್ಥೆಯು ಎಚ್ಚರಿಸಿದೆ.

ಆಸಕ್ತರು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪಡೆದುಕೊಳ್ಳಬಹುದು:

https://www.genocidewatch.com/_files/ugd/2c7d82_1052586e4d234d6dbdd1b4d08

2267daa.pdf

ಅಷ್ಟೇ ಹೆಚ್ಚೇನಿಲ್ಲ..

ಉಳಿದಂತೆ ಭಾರತದಲ್ಲಿ ಎಲ್ಲವೂ ಚೆನ್ನಾಗಿಯೇ ನಡೆದಿದೆ.

ಅಂಬಾನಿ-ಅದಾನಿ ಚೆನ್ನಾಗಿದ್ದಾರೆ. ಭಾರತವೂ ಚೆನ್ನಾಗಿದೆ.

ಸಬ್ ಚೆಂಗಾ ಸಿ..

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್,

contributor

Similar News