×
Ad

ಶೃಂಗೇರಿಗೆ ರೈಲು ಸಂಪರ್ಕ ಯೋಜನೆ |ಬದುಕಿನ ಕೊಂಡಿಗಳ ಕೂಡಿಸುತ್ತದೆಯೇ ಕಳಚುತ್ತದೆಯೇ..?

Update: 2026-06-16 10:23 IST

3,300 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಶಿವಮೊಗ್ಗ-ಶೃಂಗೇರಿ- ಮಂಗಳೂರು ರೈಲು ಯೋಜನೆಯ ಸುದ್ದಿ ಸದ್ದು ಮಾಡತೊಡಗಿದೆ. ರೈಲ್ವೇ ಸಚಿವ ಡಿ. ಸೋಮಣ್ಣ ಈ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ. ಸುಮಾರು 332 ಕಿ. ಮೀಟರ್‌ಗಳ ಇದರ ಯೋಜನಾ ವರದಿ ತಯಾರಿಗೆ ಚಾಲನೆ ನೀಡಲಾಗಿದೆ. ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಶುರುವಾಗಿದೆ.

ಇದು ಸುಮಾರು 258 ಹಿರಿ ಕಿರಿ ಸೇತುವೆಗಳನ್ನು 57 ಸುರಂಗ ಮಾರ್ಗಗಳನ್ನು ಹೊಂದಿರುತ್ತದೆ. ಈ ಯೋಜನೆಯಿಂದಾಗಿ ಆಗುಂಬೆ, ಶಿರಾಡಿ, ಚಾರ್ಮಾಡಿ ಮೊದಲಾದ ಘಾಟಿ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿತಗೊಂಡು ಈ ಭಾಗದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುತ್ತದೆ. ಧಾರ್ಮಿಕ ಪ್ರವಾಸೋದ್ಯಮಕ್ಕೆ ಹಾಗೂ ಆರೋಗ್ಯ ಸಂಬಂಧಿ ಸಾರಿಗೆಗೆ ಅನುಕೂಲ ಕಲ್ಪಿಸುತ್ತದೆ ಎಂದೆಲ್ಲಾ ಹೇಳಲಾಗುತ್ತಿದೆ.

ಆದರೆ ಇದು ಜಾರಿಯಾದರೆ ಶಿವಮೊಗ್ಗ ತೀರ್ಥಹಳ್ಳಿ, ಕೊಪ್ಪ ಶೃಂಗೇರಿ, ಕಾರ್ಕಳ, ಮಂಗಳೂರು ಹೀಗೆ ಈ ಭಾಗದ ಅರಣ್ಯ ಹಾಗೂ ಪರಿಸರದ ಮೇಲೆ ನೇರವಾಗಿ ತೀವ್ರ ಪರಿಣಾಮಗಳಿಗೆ ಕಾರಣವಾಗಲಿದೆ. ಸಾವಿರಾರು ಮರಗಿಡಗಳನ್ನು ನಾಶಮಾಡಬೇಕಾಗುತ್ತದೆ, ಹಲವು ಬೆಟ್ಟಗುಡ್ಡಗಳನ್ನು ಒಡೆಯಬೇಕಾಗುತ್ತದೆ. ಇಲ್ಲವೇ ಕೊರೆಯಬೇಕಾಗುತ್ತದೆ. ಜನವಸತಿ ಪ್ರದೇಶಗಳು ಮತ್ತು ಕೃಷಿ ಪ್ರದೇಶಗಳಿಗೆ ಹಾನಿಗಳಾಗುತ್ತವೆ, ವನ್ಯಜೀವಿಗಳ ಮೇಲೆ ಮಾರಕ ಪರಿಣಾಮಗಳಿಗೆ ಕಾರಣವಾಗುತ್ತದೆ. ಈ ಯೋಜನೆ ಈ ಭಾಗದಲ್ಲಿ ಹರಿಯುವ ನೂರಾರು ಸರಕಲುಗಳು, ಜಲಮೂಲಗಳು, ಹಳ್ಳ ನದಿ ಮೂಲಗಳ ಮೇಲೆ ನೇರ ಹಾಗೂ ಪರೋಕ್ಷವಾಗಿ ಕೆಟ್ಟ ಪರಿಣಾಮಗಳಿಗೆ ಕಾರಣವಾಗುವುದರಲ್ಲಿ ಅನುಮಾನ ಪಡಬೇಕಿಲ್ಲ. ಅದೂ ಅಲ್ಲದೆ ಪಶ್ಚಿಮ ಘಟ್ಟದ ಭೂಪರಿಸ್ಥಿತಿ ಕೂಡ ಸೂಕ್ಷ್ಮವಾದದ್ದು. ಮಳೆಗಾಲದಲ್ಲಿ ಭೂ ಕುಸಿತದ ಆತಂಕ ಇಂತಹ ಯೋಜನೆಗಳಿಂದಾಗಿ ಹೆಚ್ಚಾಗುತ್ತವೆ. ಈಗಲೇ ಕೊಂಕಣ ರೈಲ್ವೆ ಜಾಲ ಮಳೆಗಾಲದಲ್ಲಿ ಕಾರ್ಯಾಚರಿಸಲು ಬಹಳ ಕಷ್ಟಪಡುತ್ತಿದೆ. ಹಲವಾರು ಭೂಕುಸಿತಗಳಿಗೆ ಕಾರಣವಾಗುತ್ತಿದೆ.

ಅದೂ ಅಲ್ಲದೆ ಶೃಂಗೇರಿಗೆ ರೈಲು ಸಂಪರ್ಕ ಬೇಕೆಂಬ ಜನಾಗ್ರಹ ವೇನೂ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿರಲಿಲ್ಲ. ಶೃಂಗೇರಿಗೆ ಈಗಾಗಲೇ ಇರುವ ರಸ್ತೆ ಸಂಪರ್ಕವನ್ನು ಸುಸ್ಥಿರವಾಗಿಡುವುದರಲ್ಲಿ ಗಮನ ನೀಡದ ಸರಕಾರಗಳು ಜನರು ಕೇಳದಿರುವ ಇಂತಹ ಭಾರೀ ಯೋಜನೆಗಳಿಗಾಗಿ ಟೊಂಕ ಕಟ್ಟಿ ನಿಂತಿರುವುದರ ಹಿಂದೆ ಹಲವು ಭಾರೀ ಕಾರ್ಪೊರೇಟು ಲಾಬಿಗಳು ಕೆಲಸ ಮಾಡುತ್ತಿರುವುದರಲ್ಲಿ ಅನುಮಾನ ಇರಬೇಕಿಲ್ಲ.

ಶೃಂಗೇರಿಗೆ ಆ ಮಟ್ಟದ ಸಂಚಾರ ದಟ್ಟಣೆ ಕೂಡ ಇಲ್ಲ. ಈಗಾಗಲೇ ಇರುವ ಶಿವಮೊಗ್ಗ, ತರೀಕೆರೆ, ಕಡೂರು ಚಿಕ್ಕಮಗಳೂರು ಹಾಸನ, ಸಕಲೇಶಪುರ, ಬೆಂಗಳೂರು ಹಾಗೂ ಮಂಗಳೂರು ರೈಲು ಸೌಕರ್ಯಗಳನ್ನು ಸುಸ್ಥಿರಗೊಳಿಸಿ ಉನ್ನತೀಕರಿಸಿ ರೈಲು ಓಡಾಟಗಳನ್ನು ಹೆಚ್ಚಿಸಿ ಸಾಮಾನ್ಯ ಬೋಗಿಗಳ ಸಂಖ್ಯೆಗಳನ್ನು ಹೆಚ್ಚಿಸಿದರೆ ಬಹಳಷ್ಟು ರೈಲು ಸಂಪರ್ಕ ಹಾಗೂ ಸಂಚಾರ ಸಮಸ್ಯೆಗಳು ಬಗೆಹರಿಯುತ್ತವೆ. ಆರೋಗ್ಯ ಸಂಬಂಧಿ ಕಾರಣಗಳ ಪರಿಹಾರಗಳಿಗೆ ಅಗತ್ಯ ಆಧುನಿಕ ಸುಸಜ್ಜಿತ ಆಸ್ಪತ್ರೆಗಳ ವ್ಯವಸ್ಥೆ ಮಾಡಬೇಕು. ಉಡುಪಿ-ಮಂಗಳೂರಿನ ಕಾರ್ಪೊರೇಟ್ ವೈದ್ಯಕೀಯ ಸೇವೆಗಳ ಮೇಲಿನ ಅವಲಂಬನೆಯನ್ನು ತಗ್ಗಿಸಬೇಕು. ಆ ದಿಸೆಯಲ್ಲಿ ಕಾರ್ಯ ನಿರ್ವಹಿಸುವ ಆಸಕ್ತಿ ಆಡಳಿತಗಾರರಲ್ಲಿ ಕಾಣುತ್ತಿಲ್ಲ.

ಶೃಂಗೇರಿ ಕೊಪ್ಪ ಭಾಗದ ಅಡಿಕೆ ಕೃಷಿಕರು ಅಡಿಕೆಗೆ ಬಂದಿರುವ ಹಲವಾರು ರೋಗಗಳಿಂದಾಗಿ ಕುಸಿದು ಕುಳಿತಿದ್ದಾರೆ. ಉಳಿದೆಡೆಗಳಲ್ಲೂ ಅಡಿಕೆ ರೈತರು ಅಡಿಕೆ ರೋಗಬಾಧೆಗಳಿಂದ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಕ್ಯಾಸನೂರು ಅರಣ್ಯ ಕಾಯಿಲೆ (ಮಂಗನ ಕಾಯಿಲೆ)ಯಿಂದ ಪ್ರತೀ ವರ್ಷವೂ ಜನರು ಸಾಯುತ್ತಿರುವುದು ನಿಂತಿಲ್ಲ. ಈ ಬಗ್ಗೆ ಪರಿಹಾರದ ಗಂಭೀರ ಪ್ರಯತ್ನಗಳನ್ನು ಸರಕಾರಗಳು ಮಾಡುತ್ತಿಲ್ಲ.

ಕಾಡಾನೆಗಳ ದಾಳಿಗಳಿಗೆ ಪ್ರತೀ ವರ್ಷವೂ ಸಾವುಗಳ ಸಂಖ್ಯೆ ಜಾಸ್ತಿಯಾಗತೊಡಗಿವೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಸುಮಾರು ಹದಿನೈದರಿಂದ ಇಪ್ಪತ್ತು ಜನರು ಕಾಡಾನೆ ದಾಳಿಗಳಿಗೆ ಬಲಿಯಾಗಿದ್ದಾರೆ. ಇನ್ನು ಹಾಸನ, ಕೊಡಗು ಜಿಲ್ಲೆಗಳಲ್ಲೂ ಹತ್ತಾರು ಸಾವುಗಳಾಗಿವೆ. ಇವುಗಳ ಪರಿಹಾರಕ್ಕಾಗಿ ಜನರು ಬೀದಿಗಿಳಿದು ಹೋರಾಡುತ್ತಾ ಬರುತ್ತಿದ್ದಾರೆ. ಈ ರೈಲು ಯೋಜನೆ ಜಾರಿಯಾದರೆ ವನ್ಯಪ್ರಾಣಿಗಳು ಜನಸಾಮಾನ್ಯ ವಸತಿ ಪ್ರದೇಶಗಳ ಮೇಲಿನ ದಾಳಿಗಳು ಹೆಚ್ಚಾಗುವುದರಲ್ಲಿ ಅನುಮಾನವೇ ಬೇಕಾಗಿಲ್ಲ.

ಪಶ್ಚಿಮ ಘಟ್ಟ ಪ್ರದೇಶದ ಜನಸಾಮಾನ್ಯರ ಮೇಲೆ ಸರಕಾರಿ ವ್ಯವಸ್ಥೆಯು ಹತ್ತುಹಲವು ಅನಿಶ್ಚತತೆಗಳನ್ನು ಹೇರುತ್ತಾ ಬರುತ್ತಿದೆ. ಜನಸಾಮಾನ್ಯರನ್ನು ಒಕ್ಕಲೆಬ್ಬಿಸುವ ಅರಣ್ಯ ಯೋಜನೆಗಳಾದ ರಾಷ್ಟ್ರೀಯ ಉದ್ಯಾನಗಳು, ಅಭಯಾರಣ್ಯಗಳು, ರಕ್ಷಿತಾರಣ್ಯಗಳು ಮೀಸಲು ಅರಣ್ಯಗಳು, ಹುಲಿ ಯೋಜನೆಗಳು ಇತ್ಯಾದಿಗಳನ್ನು ಅರಣ್ಯ ರಕ್ಷಣೆ ಹಾಗೂ ಪರಿಸರ ರಕ್ಷಣೆ ಹೆಸರುಗಳಲ್ಲಿ ಜಾರಿ ಮಾಡುತ್ತಾ ಬರಲಾಗುತ್ತಿದೆ. ಆದರೆ ಇಂತಹ ಭಾರೀ ಯೋಜನೆಗಳ ಜಾರಿಗೆ ಇವುಗಳು ಅಡ್ಡಿಯಾಗದಂತೆ ಮಾಡಲಾಗುತ್ತಿದೆ.

ವಿಕೇಂದ್ರೀಕೃತ ಸಣ್ಣ ಹಾಗೂ ಮಧ್ಯಮ ಕೈಗಾರಿಕೀಕರಣ ಇಲ್ಲದೆ ಪಶ್ಚಿಮಘಟ್ಟ ಭಾಗದ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿಲ್ಲ.

ಆಗುಂಬೆ ಘಾಟಿಗೆ ಪರ್ಯಾಯವಾಗಿ ಮೇಗರವಳ್ಳಿ-ಆಗುಂಬೆ- ಸೋಮೇಶ್ವರ ನಡುವೆ ಸುರಂಗ ತೋಡಿ ಚತುಷ್ಪಥ ರಸ್ತೆ ಯೋಜನೆಯ ಸಾಧ್ಯಾಸಾಧ್ಯತೆಗಳ ಬಗ್ಗೆ ವರದಿಗಾಗಿ ಈಗಾಗಲೇ ಕೆಲಸಗಳು ನಡೆಯುತ್ತಿವೆ. ಇದು ಕೂಡ ಸುಮಾರು ರೂ. 3,500 ಕೋಟಿಗಳಿಗೂ ಹೆಚ್ಚಿನ ಯೋಜನೆಯಾಗಿದೆ. ಸಾಗರದ ಬಳಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಸರಕಾರಗಳು ತಯಾರಾಗುತ್ತಿವೆ. ಅದರ ವಿರುದ್ಧ ಅಲ್ಲಿನ ಜನರು ಹೋರಾಡುತ್ತಿದ್ದಾರೆ. ಹೀಗೆ ಭಾರೀ ಅಭಿವೃದ್ಧಿಯ ಯೋಜನೆಗಳಂತೆ ಬಿಂಬಿಸುತ್ತಾ ಕಾರ್ಪೊರೇಟ್‌ಪರ ಯೋಜನೆಗಳು ಒಂದೊಂದೇ ಹೊರಬೀಳತೊಡಗಿವೆ.

ಪಶ್ಚಿಮ ಘಟ್ಟ ಪ್ರದೇಶದ ಅಭಿವೃದ್ಧಿಯ ಹೆಸರಿನಲ್ಲಿ ಹಲವಾರು ಇಂತಹ ದೊಡ್ಡ ಯೋಜನೆಗಳು ಈಗಾಗಲೇ ಜಾರಿಯಾಗಿ ಭಾರೀ ನಷ್ಟಗಳಿಗೂ ಕಾರಣವಾಗುತ್ತಿವೆ. ಅದರಲ್ಲಿ ವರಾಹಿ, ಬೇಡ್ತಿ, ಚಕ್ರಾ, ಲಿಂಗನಮಕ್ಕಿ ಸೂಫಾದಂತಹ ಜಲವಿದ್ಯುತ್ ಯೋಜನೆಗಳು, ಕೈಗಾದ ಅಣುವಿದ್ಯುತ್‌ಸ್ಥಾವರ, ತುಂಗಾ ಹಾಗೂ ಭದ್ರಾ ಜಲಾಶಯಗಳು ಈಗಾಗಲೇ ಕಾರ್ಯಾಚರಿಸುತ್ತಿವೆ. ಇದರಲ್ಲಿ ತುಂಗಾ ಹಾಗೂ ಭದ್ರಾ ಜಲಾಶಯಗಳು ನೀರಾವರಿ ಯೋಜನೆಗಳಾಗಿದ್ದರೆ ಉಳಿದವುಗಳು ಭಾರೀ ವಿದ್ಯುತ್‌ಯೋಜನೆಗಳಾಗಿವೆ. ಇವೆಲ್ಲದರಿಂದಾಗಿ ಸಾವಿರಾರು ಹೆಕ್ಟೇರ್ ಅರಣ್ಯ ಹಾಗೂ ಜನವಸತಿ ಪ್ರದೇಶಗಳು ಮುಳುಗಡೆಯಾಗಿವೆ. ಸಕಲೇಶಪುರ ಬಳಿಯ ನದಿತಿರುವು ಯೋಜನೆಯ ಹೆಸರಿನಲ್ಲಿ ನಡೆಸಿರುವ ಪರಿಸರ ಹಾನಿ ಬಗ್ಗೆ ನೆನಪು ಮಾಡಿಕೊಳ್ಳಬೇಕಾಗಿದೆ. ಸದರಿ ಯೋಜನೆಯ ಸಫಲತೆಗಳು ಇನ್ನೂ ಖಾತ್ರಿಯಾಗಿಲ್ಲವಾದರೂ ಆಗುತ್ತಿರುವ ಹಾನಿಗಳು ಈಗಲೇ ಎದ್ದು ಕಾಣತೊಡಗಿವೆ.

ಕೆಮ್ಮಣ್ಣುಗುಂಡಿ ಹಾಗೂ ಕುದುರೆಮುಖ ಗಣಿಗಾರಿಕೆಗಳ ಪರಿಣಾಮ ಹಾಗೂ ಪಳೆಯುಳಿಕೆಗಳು ಈಗಲೂ ಕಾಡುತ್ತಿವೆ. ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯು ಹೊರಹಾಕಿದ ಗಣಿಕೊಳಚೆಯನ್ನು ಹೊತ್ತುಕೊಂಡಿರುವ ಲಕ್ಯಾ ಜಲಾಶಯದ ಭದ್ರತೆಯ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾಗಿವೆ. ಈ ಗಣಿಗಾರಿಕೆಗಳು ದೇಶದ ಜನರಿಗಾಗಿ ನಡೆಸಿದ್ದಲ್ಲ ಎನ್ನುವುದನ್ನು ಗಮನಿಸಬೇಕು. ಕರ್ನಾಟಕದಲ್ಲಿದ್ದ ಏಕೈಕ ಸರಕಾರಿ ಸ್ವಾಮ್ಯದ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಮುಚ್ಚಿ ಹಾಕಿರುವುದನ್ನೂ ಗಮನಿಸಬೇಕು.

ನಮ್ಮ ದೇಶದ ಪಶ್ಚಿಮ ಘಟ್ಟ ಪ್ರದೇಶವನ್ನು ಜಾಗತಿಕ ಪಾರಂಪರಿಕ ತಾಣವೆಂದು ಯುನೆಸ್ಕೊ (UNESCO) 2012ರಲ್ಲೇ ಪರಿಗಣಿಸಿತ್ತು. ಇದಕ್ಕೆ ಕಾರಣ ಇಲ್ಲಿನ ಬಹಳ ವಿಶೇಷವಾದ ಪಾರಿಸಾರಿಕ ವೈವಿಧ್ಯ. ಈ ಪ್ರದೇಶವನ್ನು ಪಾರಿಸಾರಿಕ ವೈವಿಧ್ಯದ ಜಗತ್ತಿನ ಎಂಟು ಹಾಟೆಸ್ಟ್ ಸ್ಪಾಟ್‌ಗಳಲ್ಲಿ ಒಂದು ಎಂದು ಘೋಷಿಸಬೇಕೆಂದು ಅಧಿಕೃತವಾಗಿ ಪ್ರಸ್ತಾವವನ್ನು ಸರಕಾರವೇ ನಿಯಮಿಸಿದ್ದ ಪಶ್ಚಿಮ ಘಟ್ಟದ ಪಾರಿಸಾರಿಕ ಪರಿಣತರ ನಿಯೋಗ ಕೇಂದ್ರ ಸರಕಾರಕ್ಕೆ 2011ರಲ್ಲೇ ಶಿಫಾರಸು ಮಾಡಿತ್ತು.

ಮೊದಲಿನಿಂದಲೂ ಪಶ್ಚಿಮ ಘಟ್ಟವು ನಮ್ಮ ದಕ್ಷಿಣ ಭಾರತ, ಉತ್ತರ ಭಾರತ ಮಾತ್ರವಲ್ಲದೆ ಜಾಗತಿಕ ಪ್ರಾಮುಖ್ಯದ ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಸರ ವಿಜ್ಞಾನಿಗಳು, ಪರಿಸರವಾದಿಗಳು ಪ್ರತಿಪಾದಿಸುತ್ತಲೇ ಬಂದಿದ್ದರು. ಈ ಪ್ರದೇಶಕ್ಕೆ ಹಾನಿಯಾದರೆ ನಮ್ಮ ದೇಶಕ್ಕೆ ಮಾತ್ರವಲ್ಲದೆ ಜಾಗತಿಕ ಪಾರಿಸಾರಿಕ ಹಾಗೂ ಹವಾಮಾನ ವೈಪರೀತ್ಯಗಳಿಗೆ ನೇರ ಕಾರಣವಾಗುತ್ತದೆ. ಈ ಪ್ರದೇಶದಲ್ಲಿ ಭಾರೀ ಗಣಿಗಾರಿಕೆ, ಜಲಾಶಯಗಳು, ವಿದ್ಯುತ್ ಯೋಜನೆ ಮೊದಲಾದ ಇಲ್ಲಿನ ಗುಡ್ಡ ಬೆಟ್ಟ, ಅರಣ್ಯ, ಸಸ್ಯ ಸಂಕುಲ, ಪ್ರಾಣಿಸಂಕುಲ, ಈ ಪರಿಸರದ ಅವಿಭಾಜ್ಯ ಭಾಗವಾದ ಆದಿವಾಸಿ ಇನ್ನಿತರ ಜನಸಮುದಾಯಗಳ ಬದುಕಿಗೆ ಕುತ್ತಾಗುವಂತಹ ಭಾರೀ ಯೋಜನೆಗಳನ್ನು ಜಾರಿ ಮಾಡಬಾರದು ಎಂದೇ ಪ್ರತಿಪಾದಿಸುತ್ತಾ ಬರಲಾಗಿತ್ತು. ಅದೂ ಅಲ್ಲದೆ ಪಶ್ಚಿಮ ಘಟ್ಟ ಪ್ರದೇಶವು ಭೂಕಂಪನ ಸಾಧ್ಯತೆಯ ಪ್ರದೇಶವಾಗಿದೆ ಎನ್ನುವುದನ್ನು ತಜ್ಞರುಗಳ ವರದಿಗಳು ಹೇಳುತ್ತಿವೆ. ಅದಕ್ಕೆ ಪೂರಕವಾಗಿ ಹಲವು ಬಾರಿ ಭೂಕಂಪನವಾದ ವರದಿಗಳೂ ಹೊರಬಿದ್ದಿವೆ.

ಮಾಧವ ಗಾಡ್ಗೀಳರಂತೂ ಈ ಪ್ರದೇಶದಲ್ಲಿ ಜನವಸತಿಗಳನ್ನೂ ಸೇರಿದಂತೆ ಈಗಿರುವ ಎಲ್ಲಾ ಜಲಾಶಯಗಳು, ವಿದ್ಯುತ್ ಯೋಜನೆಗಳು ಈ ಪ್ರದೇಶದಿಂದಲೇ ತೆರವುಗೊಳಿಸಬೇಕೆಂದು ತಮ್ಮ ವರದಿಯಲ್ಲಿ ಹೇಳಿದ್ದರು. ಇದರಲ್ಲಿ ಅವರು ಇಲ್ಲಿ ತಲೆತಲಾಂತರದಿಂದ ವಾಸಿಸುತ್ತಿರುವ ಜನಸಮುದಾಯಗಳನ್ನು ಪರಿಸರದ ಭಾಗವಾಗಿ ಗ್ರಹಿಸದೇ ಹೋಗಿದ್ದರು. ಪರಿಸರವೆಂದರೆ ಅಲ್ಲಿನ ಜನಸಮುದಾಯಗಳನ್ನು ಹೊರತು ಪಡಿಸಿದ ಸಂಗತಿಯೆಂಬ ಅವೈಜ್ಞಾನಿಕ ಮತ್ತು ಯಾಂತ್ರಿಕ ಚಿಂತನೆಯಿಂದ ಅವರು ತಮ್ಮ ವರದಿಯಲ್ಲಿ ಈ ಶಿಫಾರಸನ್ನು ಮಾಡಿದ್ದರು.

ಅದಕ್ಕೆ ಹಲವು ರಾಜ್ಯಗಳಲ್ಲಿ ದೊಡ್ಡಮಟ್ಟದ ವಿರೋಧ ಬಂದ ಕಾರಣದಿಂದಾಗಿ ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್‌ರ ಮೂಲಕ ಮತ್ತೊಂದು ವರದಿಯನ್ನು ತಯಾರಿಸಲಾಯಿತು. ಅದರಲ್ಲಿ ಪಶ್ಚಿಮ ಘಟ್ಟದಲ್ಲಿ ಪರಿಸರ ರಕ್ಷಣೆಯನ್ನು ಅಲ್ಲಿನ ಜನಸಮುದಾಯಗಳನ್ನು ಒಳಗೊಳಿಸುತ್ತಾ ಮಾಡಬೇಕೆಂಬ ಶಿಫಾರಸು ಸೇರಿಕೊಂಡಿತು. ಈಗಾಗಲೇ ಇರುವ ಯೋಜನೆಗಳ ಹೊರತಾಗಿ ಹೊಸದಾಗಿ ದೊಡ್ಡ ಯೋಜನೆಗಳನ್ನು ಜಾರಿಮಾಡಬಾರದು, ಅಲ್ಲಿ ಪರಿಸರ ಪ್ರವಾಸೋದ್ಯಮಯನ್ನು ಸ್ಥಳೀಯರನ್ನು ಒಳಗೊಳಿಸುತ್ತಾ ಅದರ ಲಾಭವು ಅವರಿಗೂ ಸಿಗುವಂತೆ ಮಾಡಬೇಕು, ಅನಧಿಕೃತವಾಗಿರುವವರನ್ನು ತೆರವುಗೊಳಿಸಬೇಕು ಮೊದಲಾದ ಶಿಫಾರಸುಗಳಿದ್ದವು. ಸಾರಾಂಶದಲ್ಲಿ ಇದು ಮಾಧವ ಗಾಡ್ಗೀಳ್ ವರದಿಯ ಸುಧಾರಿತ ರೂಪವಾಗಿತ್ತು. ಇದರಲ್ಲಿ ಈ ಭಾಗದ ಭಾರೀ ಆಸ್ತಿವಂತ ವರ್ಗಗಳ ಹಿತಾಸಕ್ತಿಗಳಿಗೆ ಹಾನಿಯಾಗದಂತಹ ರೀತಿಗಳಲ್ಲಿ ಶಿಫಾರಸುಗಳಿದ್ದವು. ಆದರೂ ಅದು ಪ್ರಾಯೋಗಿಕವಾಗಿ ಸಾಧ್ಯವಾಗದೆಂದಾದಾಗ ಕೇರಳ, ತಮಿಳುನಾಡು, ಕರ್ನಾಟಕ ರಾಜ್ಯಗಳ ಸರಕಾರಗಳು ಕಸ್ತೂರಿ ರಂಗನ್ ವರದಿಯನ್ನು ಜಾರಿಮಾಡಲಾಗದು ಎಂಬ ನಿರ್ಣಯ ತೆಗೆದುಕೊಂಡವು.

ಕರ್ನಾಟಕದಲ್ಲಿರುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಲಕ್ಷಾಂತರ ರೈತಾಪಿಗಳಿದ್ದಾರೆ. ಇದರಲ್ಲಿ ಸಮಾಜದ ತಳಪಾಯದ ಸಮುದಾಯಗಳಾದ ದಲಿತ-ದಮನಿತರು, ಆದಿವಾಸಿಗಳು ಇನ್ನಿತರ ಬಡಸಮುದಾಯಗಳು ಸೇರಿವೆ. ಇವರು ಭೂಮಿಯನ್ನೇ ನಂಬಿ ಬದುಕುತ್ತಿರುವವರು. ಕೂಲಿ ಕಾರ್ಮಿಕರು, ಬಡರೈತರು ಇದರಲ್ಲಿ ಹೆಚ್ಚಿದ್ದಾರೆ. ಇದರಲ್ಲಿ ಬಹುತೇಕರಿಗೆ ಅವರ ವಸತಿಗಾಗಲೀ, ಅವರು ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ತುಂಡು ಭೂಮಿಗಾಗಲೀ ಯಾವುದೇ ಹಕ್ಕುಪತ್ರ ಇದುವರೆಗೂ ಸರಕಾರಗಳು ನೀಡಿಲ್ಲ. ಕೆಲವರಿಗೆ ನೀಡಿರುವ ಹಂಗಾಮಿ ಹಕ್ಕುಪತ್ರಗಳು ಚುನಾವಣಾ ರಾಜಕೀಯ ಪ್ರಹಸನಗಳಾಗಿದ್ದು ಬಿಟ್ಟರೆ ಅವುಗಳಿಗೆ ಬೇರೆ ಬೆಲೆಯೇನೂ ಇಲ್ಲವೆಂಬುದು ಸಾಬೀತಾಗಿರುವ ಸಂಗತಿ. ಒಂದಷ್ಟು ಭೂಮಿಗೆ ಹಕ್ಕುಪತ್ರ ಇರುವ ಮಧ್ಯಮ ರೈತರು ಶ್ರೀಮಂತ ರೈತರು ನಂತರದ ಸ್ಥಾನದಲ್ಲಿದ್ದಾರೆ.

ಕಸ್ತೂರಿ ರಂಗನ್ ವರದಿಯನ್ನು ಅಧಿಕೃತವಾಗಿ ತಿರಸ್ಕರಿಸಲಾಗಿದ್ದರೂ ಈ ಭಾಗದ ಜನರೆಲ್ಲರ ಬದುಕು ಹಾಗೂ ಅಸ್ತಿತ್ವಗಳಿಗೇ ಕಂಟಕವಾಗುವ ಭಾರೀ ಕಾರ್ಪೋರೇಟ್ ಪರ ನಡೆಗಳನ್ನು ಸರಕಾರಗಳು ಹಲವು ರೂಪಗಳಲ್ಲಿ ನಡೆಸುತ್ತಾ ಸಾಗಿವೆ. ಈ ಹಿಂದೆ ಕಂದಾಯ ಇಲಾಖೆಯಡಿ ಇದ್ದ ಪ್ರದೇಶಗಳನ್ನು ಅರಣ್ಯವೆಂದು ಪರಿಗಣಿಸಲು ಸರ್ವೇಯೊಂದನ್ನು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನೆಪದಲ್ಲಿ ಜಂಟಿ ವಿಶೇಷ ದಳಗಳ ಮೂಲಕ ಮಾಡಿಸಲಾಗುತ್ತಿದೆ. ಅದರ ಪ್ರಕಾರ ಕಂದಾಯ ಇಲಾಖೆಯ ಮೂಲಕ ಹಕ್ಕುಪತ್ರ ಪಡೆದಿರುವ ಜಮೀನುಗಳನ್ನೂ ಕೂಡ ಅರಣ್ಯವೆಂದು ಘೋಷಿಸಿ ಅರಣ್ಯ ಇಲಾಖೆ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ. ಹೀಗೆ ಪಶ್ಚಿಮ ಘಟ್ಟ ಪ್ರದೇಶದ ಜನಸಾಮಾನ್ಯರ ಬದುಕು ಹಾಗೂ ಅಸ್ತಿತ್ವಗಳಿಗೆ ಮುಳುವಾಗುವ ಹಲವಾರು ಯೋಜನೆಗಳು ಮುನ್ನೆಲೆಗೆ ಬರತೊಡಗಿವೆ. ಈ ಯೋಜನೆಗಳೆಲ್ಲವೂ ಕಾರ್ಪೊರೇಟು ಹಿತಾಸಕ್ತಿಗಳ ಭಾಗವಾಗಿಯೇ ಅಭಿವೃದ್ಧಿಯ ಹೆಸರಿನಲ್ಲಿ ಮುಂದಿಡಲಾಗುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ಸಾಮಾನ್ಯ ಜನರಿಗೆ ತುಂಡು ಭೂಮಿಗಳಿಗೆ ಹಕ್ಕುಪತ್ರ ಹಾಗೂ ವಿದ್ಯುತ್ ಮೊದಲಾದ ಮೂಲಭೂತ ಸೌಕರ್ಯ ನೀಡಲು ಅರಣ್ಯ ಯೋಜನೆಗಳು, ಅರಣ್ಯ ಕಾಯ್ದೆ, ಪರಿಸರ ಕಾಯ್ದೆ ಮೊದಲಾದವುಗಳ ವಿವಿಧ ಕಲಮುಗಳನ್ನು ತೋರಿಸಿ ನಿರಾಕರಿಸುತ್ತಾ ಬರಲಾಗುತ್ತಿದೆ. ಆದರೆ ಅದೇ ಸಮಯದಲ್ಲಿ ಪರಿಸರ ಹಾಗೂ ಮನುಷ್ಯ ಸೇರಿದಂತೆ ಪ್ರಾಣಿಸಂಕುಲಗಳಿಗೇ ಶಾಶ್ವತವಾಗಿ ವಿನಾಶಕಾರಿಯಾಗುವ ಇಂತಹ ಬೃಹತ್ ಯೋಜನೆಗಳನ್ನು ಅಭಿವೃದ್ಧಿಯ ಮುಸುಕಲ್ಲಿ ಹೇರಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯಾವುದೇ ಹಿಂಜರಿಕೆ ತೋರದಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ ಬಿಡಿ. ನಮ್ಮ ಸರಕಾರಗಳು ಈಗ ಕಾರ್ಪೊರೇಟ್ ಹಿತಾಸಕ್ತಿಯೇ ತಮ್ಮ ಪ್ರಧಾನ ಆದ್ಯತೆಯನ್ನಾಗಿ ಮಾಡಿಕೊಂಡು ಬಹಳ ಕಾಲವಾಗಿದೆ ತಾನೆ?

ಇನ್ನು ನೂರಾರು ಎಕರೆಗಳ ಹಿಡುವಳಿ ಹೊಂದಿರುವ ಕಾಫಿ, ಅಡಿಕೆ, ಕಾಳು ಮೆಣಸು, ಏಲಕ್ಕಿ, ರಬ್ಬರ್ ಮೊದಲಾದ ತೋಟಗಳ ಮಾಲಕರು, ಸಾವಿರಾರು ಎಕರೆಗಳ ಹಿಡುವಳಿ ಹೊಂದಿರುವ ಕಾಫಿ, ಟಿ, ಕೋಕೋ, ರಬ್ಬರ್ ಮೊದಲಾದ ತೋಟಗಾರಿಕಾ ಕಂಪೆನಿಗಳಿಗೆ ಇಂತಹ ಯೋಜನೆಗಳಿಂದಾಗಿ ನೇರ ಸಮಸ್ಯೆಗಳಾಗದಂತೆ ನೋಡಿ ಕೊಳ್ಳುವುದು ನಮ್ಮ ಆಡಳಿತಗಾರರ ಮಾಮೂಲಿ ವಿಚಾರ ತಾನೇ?

ಪಶ್ಚಿಮ ಘಟ್ಟ ಪ್ರದೇಶಗಳು ಜಾಗತಿಕ ಪರಿಸರ ಸೂಕ್ಷ್ಮ ಪ್ರದೇಶ ವಾಗಿರುವುದರಿಂದಾಗಿ ಇಲ್ಲಿ ಬೃಹತ್ ಯೋಜನೆಗಳ ಜಾರಿಯಿಂದ ಜಾಗತಿಕ ತಾಪಮಾನ ಹೆಚ್ಚಳವೂ ಸೇರಿದಂತೆ ಅನೇಕ ಪ್ರಾಕೃತಿಕ ವಿಕೋಪಗಳಿಗೆ ನೇರ ಹಾಗೂ ಪರೋಕ್ಷವಾಗಿ ಕಾರಣವಾಗುತ್ತದೆ.

ಈಗಾಗಲೇ ಅವೈಜ್ಞಾನಿಕವಾಗಿ ರಸ್ತೆ ಅಗಲೀಕರಣ ಮಾಡಿದ್ದ ರಿಂದಾಗಿ ಮಲೆನಾಡು ಭಾಗಗಳಲ್ಲಿ ಪ್ರತಿವರ್ಷವೂ ಮಳೆಗಾಲದಲ್ಲಿ ಭೂಕುಸಿತಗಳಾಗುತ್ತಿವೆ. ಭೂ ಸವಕಳಿಗಳು ಹೆಚ್ಚಾಗಿವೆ.

ಈಗ ಪಶ್ಚಿಮ ಘಟ್ಟ ಹಾಗೂ ಕರಾವಳಿಯ ಭಾಗಗಳು ಮೊದಲಿನಂತೆ ಇಲ್ಲ ಬೇಸಿಗೆಗಳು 40 ಡಿಗ್ರಿ ಉಷ್ಣತೆಯನ್ನು ಮೀರತೊಡಗಿವೆ. ಬೇಸಿಗೆ ಹಾಗೂ ಮಳೆಗಾಲಗಳಲ್ಲಿ ಕೃಷಿ ಗಿಡಗಳನ್ನು ಉಳಿಸಿಕೊಳ್ಳುವುದೇ ಮಹಾಸಾಹಸವಾಗುತ್ತಿದೆ. ಮಳೆ ಪ್ರಮಾಣದಲ್ಲಿ ಬಹಳ ಏರುಪೇರಾಗತೊಡಗಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಭೀತಿ ಸದಾ ಇರುವಂತಾಗಿದೆ.

ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಯೋಜನೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕಿದೆ. ಕಿರು ನಿರಾವರಿ, ಕಿರು ವಿದ್ಯುತ್, ಕಿರುಗಾಲುವೆ, ವಿಕೇಂದ್ರೀಕೃತ ಕೈಗಾರಿಕೀಕರಣಗಳತ್ತ ಹೊರಳಬೇಕಿದೆ. ಇರುವ ರಸ್ತೆ ಸೌಲಭ್ಯಗಳನ್ನು ಸುಸ್ಥಿತಿಯಲ್ಲಿಡುವುದು, ಹಳ್ಳಿಗಾಡಿನ ಜನಸಾಮಾನ್ಯರ ಅಗತ್ಯಗಳಿಗಾಗಿ ಸುಸ್ಥಿರ ರಸ್ತೆ ಸೇತುವೆಗಳು ಹಾಗೂ ಮೂಲಭೂತ ಅವಶ್ಯಕತೆಗಳ ನಿರ್ಮಾಣ ಮಾಡಬೇಕಿದೆ.

ಜನಸಾಮಾನ್ಯರ ಕೃಷಿ ಭೂಮಿಗಳಿಗೆ ಹಕ್ಕುಪತ್ರ ನೀಡುವುದು, ಭೂ ರಹಿತರಿಗೆ ಭೂಮಿ ಹಂಚುವುದು, ಸುಸ್ಥಿರ ಕೃಷಿ ಉತ್ಪಾದನೆಗಳಲ್ಲಿ ರೈತರನ್ನು ತೊಡಗಿಸುತ್ತಾ ಬೆಂಬಲಿಸುವುದು ಮೊದಲಾದ ಜನ ಹಾಗೂ ಪರಿಸರ ಸ್ನೇಹಿ ಅಭಿವೃದ್ಧಿ ಮಾದರಿಗಳತ್ತ ಹೊರಳಬೇಕಾದ ತುರ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಂದಕುಮಾರ್ ಕುಂಬ್ರಿ ಉಬ್ಬು

contributor

Similar News