ಕಸ್ತೂರಿ ರಂಗನ್ ವರದಿಯ ಹಿನ್ನೆಲೆಯಲ್ಲಿ ಭಾರತ ಸರಕಾರದ ಪರಿಸರ, ಅರಣ್ಯ ಮತ್ತು ಕ್ಲೈಮೇಟ್ ಚೇಂಜ್ ಸಚಿವಾಲಯವು (MoEFCC) 27, ಜುಲೈ 2026ರಂದು ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಕರಡು ನೋಟಿಫಿಕೇಷನ್ ಅನ್ನು ದಾಖಲೆ ಏಳನೇ ಬಾರಿಗೆ ಹೊರಡಿಸಿದೆ. ಕಳೆದ ಆರು ಬಾರಿ ಕೂಡ ಈ ಪಶ್ಚಿಮ ಘಟ್ಟ ಪ್ರದೇಶದ ಆರು ರಾಜ್ಯಗಳು ಅದನ್ನು ವಿರೋಧಿಸಿದ್ದವು. ಈ ಬಾರಿಯ ನೋಟಿಫಿಕೇಷನ್‌ಗೆ ಆಕ್ಷೇಪ ಸಲ್ಲಿಸಲು ಸೆಪ್ಟಂಬರ್ 25 ಕೊನೆಯ ದಿನ. ಕರಡು ನೋಟಿಫಿಕೇಷನ್‌ಗೆ ಆಕ್ಷೇಪ ಹೇಳಲು 60 ದಿನಗಳ ವಾಯಿದೆ ಮುಗಿಯುವ ಮುನ್ನ ತನ್ನ ಅಭಿಪ್ರಾಯವನ್ನು ತಿಳಿಸುವುದಕ್ಕಾಗಿ ಕರ್ನಾಟಕ ಸರಕಾರವು ವಿಶೇಷ ಅಧಿವೇಶನವನ್ನೇ ಕರೆದಿದೆ. ಅದು ಇಂದು (ಸೆ. 21) ಆರಂಭಗೊಂಡಿದೆ. ಈಗಾಗಲೇ ಬಹುತೇಕ ತೀರ್ಮಾನ ಆಗಿರುವಂತೆ ಕರ್ನಾಟಕ ವಿಧಾನಮಂಡಲವು ಒಕ್ಕೊರಲಿನಿಂದ ಈ ನೋಟಿಫಿಕೇಷನ್‌ಗೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಸ್ವೀಕರಿಸಲಿದೆ. ಅದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಜನರ ಅಹವಾಲು ಕೇಳುವ ಸಭೆಯಲ್ಲಿ ಸ್ವತಃ ಪಾಲ್ಗೊಂಡಿದ್ದಾರೆ.

ಪ. ಘಟ್ಟದ ತಪ್ಪಲಿನಲ್ಲಿ ಬರುವ, ಡಬ್ಬಲ್ ಇಂಜಿನ್ ಸರಕಾರ ಇರುವ ಗುಜರಾತ್, ಗೋವಾ ರಾಜ್ಯಗಳು ಸಣ್ಣಪುಟ್ಟ ಷರತ್ತುಗಳೊಂದಿಗೆ ಈ ಕರಡು ಅಧಿಸೂಚನೆಗೆ ತಾತ್ವಿಕವಾಗಿ ಸಹಮತ ಸೂಚಿಸಿವೆ. ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಲ್ಲಿ ಈ ಕುರಿತ ಚರ್ಚೆಗಳು ಒಂದು ಸಹಮತದ ದಿಕ್ಕಿನತ್ತ ಸಾಗುತ್ತಿವೆ. ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕೇರಳ ಕೂಡ ಜನವಸತಿ ಪ್ರದೇಶಗಳು ಮತ್ತು ತೋಟಗಳಿರುವ ಪ್ರದೇಶಗಳನ್ನು ಅಧಿಸೂಚನೆಯಿಂದ ಹೊರಗಿರಿಸುವ ನಿಟ್ಟಿನಲ್ಲಿ ಭೌತಿಕ ಸಮೀಕ್ಷೆಯ ಷರತ್ತಿನೊಂದಿಗೆ ಅಧಿಸೂಚನೆಗೆ ಒಪ್ಪಿಗೆ ಸೂಚಿಸುವ ಹಾದಿಯಲ್ಲಿದೆ. ಆದರೆ ಕರ್ನಾಟಕ ಮಾತ್ರ ಇನ್ನೂ ಬಲವಾದ ವಿರೋಧ ವ್ಯಕ್ತಪಡಿಸುತ್ತಿದೆ.

ಹಾಲಿ ಕಸ್ತೂರಿರಂಗನ್ ವರದಿ ಆಧರಿತ ಇSಂ ಕರಡು ನೋಟಿಫಿಕೇಷನ್ ಬಗ್ಗೆ ಚರ್ಚಿಸುವಾಗ, ಅದರ ಮೂಲ ಎಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳದಿದ್ದರೆ ಅನಗತ್ಯ ಗೊಂದಲಗಳು ಮೂಡುತ್ತವೆ. 1986ರಲ್ಲಿ ದಿ| ರಾಜೀವ್ ಗಾಂಧಿ ಅವರು ಪ್ರಧಾನಿ ಆದ ಹೊಸದರಲ್ಲಿ ಮಾಡಿದ ಒಂದು ಒಳ್ಳೆಯ ಕೆಲಸ ಎಂದರೆ ಪರಿಸರ ಸಂರಕ್ಷಣಾ ಕಾಯ್ದೆ 1986ನ್ನು ಜಾರಿಗೆ ತಂದದ್ದು. ಆಗಿನ್ನೂ ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದ ಹುಮ್ಮಸ್ಸಿನಲ್ಲಿ ನಿಜ ಕಳಕಳಿಯಿಂದ ಹೊರಬಂದಿದ್ದ ಕಾಯ್ದೆ ಅದು. ಅದಾಗಿ ಈಗ 40ವರ್ಷಗಳು ಕಳೆದಿವೆ. ಇಲ್ಲಿಯ ತನಕವೂ ಈ ಕಾಯ್ದೆಯನ್ನು ಪೂರ್ಣಪ್ರಮಾಣದಲ್ಲಿ ಜಾರಿಗೆ ತರುವುದು ಯಾವುದೇ ಸರಕಾರಕ್ಕೆ ಸಾಧ್ಯ ಆಗಿಲ್ಲ. ‘ನ್ಯಾಯ ಮಾಡುವಲ್ಲಿ ವಿಳಂಬ ಎಂಬುದು ನ್ಯಾಯದ ನಿರಾಕರಣೆ’ ಎಂಬ ಪ್ರಸಿದ್ಧ ನ್ಯಾಯವಾಕ್ಯಕ್ಕೆ ಪಶ್ಚಿಮ ಘಟ್ಟಗಳ ಈ ಪ್ರಸಂಗ ಒಳ್ಳೆಯ ಉದಾಹರಣೆ.

1986ರಲ್ಲಿ ಪರಿಸರ ಕಾಯ್ದೆ ಜಾರಿ ಆದ ಬಳಿಕ, ಮುರುಡು-ಜಂಜೀರಾ, ಡೂನ್ ಕಣಿವೆಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶ (ESA) ಪ್ರಕಟಣೆ ಆಗಿದೆ. 1990ರಲ್ಲಿ ಪರಿಸರ ಸೂಕ್ಷ್ಮ ಪ್ರದೇಶವನ್ನು ವ್ಯಾಖ್ಯಾನಿಸುವ ವರದಿಯನ್ನು MoEFCC ನೀಡಿದೆ. 1991ರಲ್ಲಿ ಡಹಾಣು ಪ್ರದೇಶದ ESA ಪ್ರಕಟಣೆ ಆಗಿದೆ. 1992ರಲ್ಲಿ ಅರಾವಳಿ ಪರ್ವತಗಳ ನೋಟಿಫಿಕೇಷನ್ ಆಗಿದೆ, ನುಮಾಲಿಗಢ ‘ಅಭಿವೃದ್ಧಿರಹಿತ ಪ್ರದೇಶ’ ಎಂಬ ನೋಟಿಫಿಕೇಷನ್ ಆಗಿದೆ, 1996ರಲ್ಲಿ ಯೋಜನಾ ಆಯೋಗ ಪರಿಸರ ಸೂಕ್ಷ್ಮ ಪ್ರದೇಶಗಳ ರಕ್ಷಣೆ ಹೇಗೆಂಬ ಕುರಿತು ವರದಿ ನೀಡಿದೆ. 2000ದಲ್ಲಿ ಪ್ರಣವ್ ಸೇನ್ ಸಮಿತಿ ವರದಿ ಬಂದಿದೆ, ಅಲ್ಲದೆ ಮಹಾಬಲೇಶ್ವರ ಮತ್ತು ಹಿಮಾಲಯ ಪ್ರದೇಶಗಳ ESA ಪ್ರಕಟಣೆ ಆಗಿದೆ. 2001ರಲ್ಲಿ ಮೋಹನ್ ರಾಂ ಸಮಿತಿ ವರದಿ ಬಂದಿದೆ. 2003ರಲ್ಲಿ ಮಾಥೆರಾನ್ ESA ನೋಟಿಫಿಕೇಷನ್ ಆಗಿದೆ. 2009ರಲ್ಲಿ ಸುಲ್ತಾನ್‌ಪುರ್ ESA ನೋಟಿಫಿಕೇಷನ್ ಆಗಿದೆ. ಆ ಬಳಿಕ ಪಶ್ಚಿಮಘಟ್ಟಗಳಿಗೇ ಪ್ರತ್ಯೇಕವಾಗಿ 2011ರಲ್ಲಿ ಮಾಧವ ಗಾಡ್ಗೀಳ್ ಸಮಿತಿ, 2013ರಲ್ಲಿ ಕಸ್ತೂರಿ ರಂಗನ್ ಸಮಿತಿ ವರದಿಗಳು ಬಂದಿವೆ. ಕಸ್ತೂರಿರಂಗನ್ ಸಮಿತಿ ವರದಿಯ ಆಧಾರದಲ್ಲಿ 2014, 2015, 2017, 2018, 2022, 2024 - ಹೀಗೆ ಇಂದಿನ ತನಕ ಆರು ಬಾರಿ ಕರಡು ನೋಟಿಫಿಕೇಷನ್‌ಗಳು ವಿಫಲಗೊಂಡಿದ್ದು, ಈಗ ಏಳನೇ ಪ್ರಯತ್ನ ನಡೆದಿದೆ. ಇದೂ ವಿಫಲಗೊಳ್ಳುವ ಎಲ್ಲ ಲಕ್ಷಣಗಳೂ ಕಾಣಿಸಿಕೊಂಡಿವೆ. ಹೀಗೆ ವಿಫಲವಾದಾಗಲೇ ಅದರ ಲಾಭದ ಸಮಪಾಲು ಎಲ್ಲರಿಗೂ ಸಿಗಲಿದೆ.

ಪರಿಸರ ಪರಿಣತ ಮಾಧವ ಗಾಡ್ಗೀಳ್ ವರದಿಯಲ್ಲಿ ಇಡಿಯ ಪಶ್ಚಿಮ ಘಟ್ಟ ಪ್ರದೇಶವನ್ನು (1,29,037 ಚದರ ಕಿ.ಮೀ.) ಪರಿಸರ ಸೂಕ್ಷ್ಮ ಎಂದು ಗುರುತಿಸಲಾಗಿತ್ತು. ಅದಕ್ಕೆ ಪ್ರತಿರೋಧ ಎದುರಾದ ಹಿನ್ನೆಲೆಯಲ್ಲಿ ಸರಕಾರವು ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ಅವರ ಸಮಿತಿ ರಚಿಸಿ, ಗಾಡ್ಗೀಳ್ ವರದಿ ಅನುಷ್ಠಾನಕ್ಕೆ ಕ್ರಮಗಳನ್ನು ಸೂಚಿಸಲು ತಿಳಿಸಿತ್ತು. ಅವರು ಗಾಡ್ಗೀಳ್ ಸಮಿತಿ ಗುರುತಿಸಿದ್ದರಲ್ಲಿ ಕೇವಲ 37ಶೇ. ಭಾಗವನ್ನು ಮಾತ್ರ ಪರಿಸರ ಸೂಕ್ಷ್ಮ ಎಂದುಗುರುತಿಸಲು ಶಿಫಾರಸು ಮಾಡಿದರು. ಅದರೊಂದಿಗೆ ಪ್ರಸ್ತಾವಿತ ಇSಂ ಅಂದಾಜು 56,825 ಚದರ ಕಿ.ಮೀ.ಗಳಿಗೆ ಇಳಿಯಿತು. ಕರ್ನಾಟಕದಲ್ಲಿ 10 ಜಿಲ್ಲೆಗಳ, 1,576 ಗ್ರಾಮಗಳ 20,668 ಚದರ ಕಿ.ಮೀ. ಭಾಗ ಈಗ ಈ ಕರಡು ನೋಟಿಫಿಕೇಷನ್ ವ್ಯಾಪ್ತಿಗೆ ಬಂದಿದೆ.

ESA ಪ್ರಕಟಣೆ ಆಗದಿದ್ದರೆ ಪರಿಣಾಮ ಏನು?

ಸದ್ಯಕ್ಕೆ ESA ಪ್ರಕಟಣೆ ಆಗದಿದ್ದರೆ ಎರಡು ಮುಖ್ಯ ಪರಿಣಾಮಗಳಿವೆ.

ಮೊದಲನೆಯದಾಗಿ, ಸ್ವತಃ MoEFCC ತನ್ನ ದ್ವೈವಾರ್ಷಿಕ ‘ಭಾರತದ ಅರಣ್ಯ ಸ್ಥಿತಿಗತಿ ವರದಿ 2023’ರಲ್ಲಿ ಗುರುತಿಸಿರುವಂತೆ ಅಲ್ಲಿಂದ ಹಿಂದಿನ 10 ವರ್ಷಗಳಲ್ಲಿ (2013-2023 ನಡುವೆ), ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಗಳ (ಹೊಸದಾಗಿ ನಿರ್ಮಿಸಿದ ಅರಣ್ಯ ಭೂಮಿಯ ಪ್ರಮಾಣವನ್ನು ಕೂಡಿಸಿ, ನಾಶವಾದ ಅರಣ್ಯಭೂಮಿಯ ಪ್ರಮಾಣವನ್ನು ಕಳೆದ ಬಳಿಕ) ಒಟ್ಟು (net) 58 ಚದರ ಕಿಲೋಮೀಟರ್ ಅರಣ್ಯಭೂಮಿ ನಾಶವಾಗಿದೆ. ಘಟ್ಟದ ತಪ್ಪಲಿನ 6 ರಾಜ್ಯಗಳ 45 ಜಿಲ್ಲೆಗಳ ಪೈಕಿ, 25 ಜಿಲ್ಲೆಗಳಲ್ಲಿ ಅರಣ್ಯ ನಾಶ ಆಗಿರುವುದನ್ನು ಗುರುತಿಸಲಾಗಿದೆ. ಈ ದ್ವೈವಾರ್ಷಿಕ ವರದಿಯು ಆ ಬಳಿಕದ ವರ್ಷಗಳಿಗೆ ಲಭ್ಯವಿಲ್ಲ. ನಿಜಕ್ಕೆಂದರೆ, 2020ರ ಬಳಿಕ ಮೂಲಸೌಕರ್ಯಕ್ಕೆ ಪ್ರೋತ್ಸಾಹದ ಹೆಸರಿನಲ್ಲಿ ಅರಣ್ಯ ನಾಶ ವೇಗ ಪಡೆದಿದೆ. ಕರ್ನಾಟಕ ಕರಾವಳಿಯಲ್ಲಿ ಗಣಿಗಾರಿಕೆ, ಕೈಗಾರಿಕೆಗಳು, ಹೆದ್ದಾರಿ, ಮೂಲಸೌಕರ್ಯ ಅಭಿವೃದ್ಧಿ, ಪ್ಲಾಂಟೇಷನ್‌ಗಳ ಹೆಸರಿನಲ್ಲಿ ಪಶ್ಚಿಮ ಘಟ್ಟಗಳ ನಾಶ ಇಂಚಿಂಚಾಗಿ ನಡೆಯುತ್ತಲೇ ಇದೆ. ಈ ಉಖಅ ಪ್ರಕಟಣೆ ಆಗುವುದು ವಿಳಂಬವಾದಷ್ಟೂ, ಅರಣ್ಯ ಅತಿಕ್ರಮಣ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ತಮ್ಮ ಚಟುವಟಿಕೆಗಳನ್ನು ಮುಂದುವರಿಸುವುದಕ್ಕೆ ಅವಕಾಶ ಸಿಗಲಿದೆ.

ಎರಡನೆಯದಾಗಿ, ಭಾರತ ಸರಕಾರ ಈಗ ಆರಂಭಿಸಿರುವ ಅಪರೂಪದ ಖನಿಜಗಳ ಮೈನಿಂಗ್ ಚಟುವಟಿಕೆಗಳಿಗೆ, ಈ ESA ಪ್ರಕಟಣೆ ವಿಳಂಬದ ಕಾರಣದಿಂದ ಪರಿಸರ ಕಾನೂನಿನ ಅಡಚಣೆಗಳು ಇರುವುದಿಲ್ಲ. ಮೇಲಾಗಿ, ಮೈನಿಂಗ್‌ಗೆ ಸಂಬಂಧಪಟ್ಟ ಕಾನೂನುಗಳಲ್ಲೆಲ್ಲ ಭಾರತ ಸರಕಾರವು ವ್ಯಾಪಕವಾದ ತಿದ್ದುಪಡಿಗಳನ್ನು ಮಾಡಿಕೊಳ್ಳುತ್ತಿದ್ದು, ಅದರ ಸಮಗ್ರ ಚಿತ್ರಣವೊಂದು ಸಾರ್ವಜನಿಕರಿಗೆ ಇನ್ನೂ ಲಭ್ಯವಿಲ್ಲ. ಹಾಗಾಗಿ ಜನ ಇಂದು ತಮ್ಮ ಹಿತಾಸಕ್ತಿ ರಕ್ಷಣೆಗೆ ESA ಕರಡನ್ನು ವಿರೋಧಿಸಿದರೂ, ಅದರ ಅಂತಿಮ ಫಲಾನುಭವಿಗಳು ರೇರ್ ಅರ್ಥ್ ಮೈನಿಂಗ್ ಉದ್ಯಮದಲ್ಲಿ ತೊಡಗಿಕೊಳ್ಳಲಿರುವ ‘ಆನಿಗಳು’ ಎಂಬುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ.

ಕಸ್ತೂರಿ ರಂಗನ್ ವರದಿ ಆಧರಿತ ESA ವಿರೋಧಿಸುತ್ತಿರುವವರಲ್ಲಿ ಬಹುತೇಕರು ಅರಣ್ಯದ ಅಂಚಿನ ವಾಸಿಗಳಾದ ಮುಗ್ಧ ಜನಸಮುದಾಯಗಳ ಹೆಗಲ ಮೇಲೆ ತಮ್ಮ ಬಂದೂಕನ್ನು ಇರಿಸಿಕೊಂಡು, ತಮ್ಮ ಗಣಿಗಾರಿಕೆ, ಗುತ್ತಿಗೆ, ಪ್ರವಾಸೋದ್ಯಮ, ಪ್ಲಾಂಟೇಷನ್ ಇತ್ಯಾದಿ ಹಿತಾಸಕ್ತಿಗಳ ರಕ್ಷಣೆಯಲ್ಲಿ ತೊಡಗಿಕೊಂಡಿರುವಂತಿದೆ. ಅರಣ್ಯ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಾದ ಸರಕಾರ ಮತ್ತು ಜನಪ್ರತಿನಿಧಿಗಳು ಕೂಡ ಆ ಕಾನೂನುಗಳಿರುವುದು ಜನಸಾಮಾನ್ಯರಿಗೆ ಕಿರುಕುಳ ನೀಡುವುದಕ್ಕಾಗಿ ಎಂದು ತೀರ್ಮಾನಿಸಿದಂತಿದೆ. ಅರಣ್ಯದ ಅಂಚಿನ ವಾಸಿಗಳಿಗೆ ಕಾನೂನು ಪಾಲನೆಯ ಹೆಸರಿನಲ್ಲಿ ಅನಗತ್ಯ ತೊಂದರೆ ನೀಡುವ ಮೂಲಕ, ಅವರಲ್ಲಿ ಹತಾಶೆ, ಆಕ್ರೋಶ ಮೂಡಿಸುವ ಉದ್ದೇಶ ಅಧಿಕಾರಿಗಳಿಗೆ ಇದೆಯೇ ಹೊರತು, ಅವರ ಬದುಕು-ಪುನರ್ವಸತಿ ಇತ್ಯಾದಿಗಳನ್ನು ಪ್ರಾಮಾಣಿಕವಾಗಿ ಮಾಡುವ ಆಸಕ್ತಿ ಯಾರಿಗೂ ಇದ್ದಂತಿಲ್ಲ. ಈ ಸ್ಟೇಕ್ ಹೋಲ್ಡರುಗಳಿಗೆಲ್ಲ ನಿಜಕ್ಕೂ ಪರಿಸರ ಕಾಪಾಡುವ ಹಿತಾಸಕ್ತಿ ಇದ್ದಿದ್ದರೆ, ಕೇರಳ ಮಾದರಿಯಲ್ಲಿ ಭೌತಿಕ ಸಮೀಕ್ಷೆ ಕರ್ನಾಟಕದಲ್ಲಿ ಈ ಹೊತ್ತಿಗೆ ಆದ್ಯತೆಯ ಮೇರೆಗೆ ಮುಗಿದಿರುತ್ತಿತ್ತು. ಅದು ಸಮಗ್ರವಾಗಿ ನಡೆದರೆ, ವಾಸ್ತವಾಂಶಗಳು ಈಚೆ ಬರುವುದರಿಂದ ಆ ವಿಚಾರದಲ್ಲಿ ಯಾರಿಗೂ ತುರ್ತು ಇಲ್ಲ. ಗಾಳಿಯಲ್ಲಿ ಗುಂಡು ಹಾರಿಸಿದರೇ ಅವರಿಗೆ ಲಾಭ ಜಾಸ್ತಿ. ಗಮನಿಸಬೇಕಾದ ಇನ್ನೊಂದು ಅಂಶ ಎಂದರೆ, ಒಂದು ವೇಳೆ ಭೌತಿಕವಾಗಿ ಸಮೀಕ್ಷೆ ನಡೆದು ಜನವಸತಿ-ಅರಣ್ಯ ಗಡಿ ಗುರುತಿಸಬೇಕೆಂದು ತೀರ್ಮಾನ ಆಯಿತೆಂದಿಟ್ಟುಕೊಳ್ಳಿ. ಗಾಡ್ಗೀಳ್ ವರದಿ ಬಂದಲ್ಲಿಂದ ಈಚೆಗೆ ಹತ್ತು ವರ್ಷಗಳಲ್ಲಿ ಕಾನೂನಿನ ಅರಿವಿದ್ದೇ ಸಂಭವಿಸಿರುವ ಅರಣ್ಯ- ಪರಿಸರ ನಾಶದ ಪ್ರದೇಶಗಳನ್ನು ಈ ಸಮೀಕ್ಷೆಯಲ್ಲಿ ಕಾಡು ಎಂದು ಪರಿಗಣಿಸುತ್ತಾರೋ ಅಥವಾ ನಾಡು ಎಂದು ಪರಿಗಣಿಸುತ್ತಾರೋ?... ಇಂತಹದೆಲ್ಲ ಸಂಗತಿಗಳು ಇನ್ನಷ್ಟು ಕಾನೂನು ಜಿಡುಕುಗಳಿಗೆ ಕಾರಣ ಆಗಲಿವೆಯೇ ಹೊರತು, ಇದರಿಂದ ಪರಿಸರ ರಕ್ಷಣೆ ಆಗುವುದಲ್ಲ. ಈಗಿರುವ ತ್ರಿಶಂಕು ಪರಿಸ್ಥಿತಿ ಇನ್ನೂ ಒಂದೆರಡು ದಶಕಗಳಿಗೆ ಮುಂದುವರಿಯುವ ಲಕ್ಷಣಗಳೇ ಎದ್ದು ಕಾಣಿಸುತ್ತಿವೆ. ಕರ್ನಾಟಕ ಸರಕಾರ ಹಾಲಿ ಕರಡನ್ನು ತಿರಸ್ಕರಿಸಿ, ಭೌತಿಕ ಸಮೀಕ್ಷೆ ನಡೆಯಬೇಕೆಂಬ ತೀರ್ಮಾನ ತೆಗೆದುಕೊಂಡರೂ, ಕರಡು ಮತ್ತೊಮ್ಮೆ ಬಿದ್ದು ಹೋಗಿ, ಎಂಟನೇ ಕರಡು

ಪ್ರಕಟಣೆ ಇನ್ನೊಂದೆರಡು ವರ್ಷಗಳ ಅವಕಾಶದ ಬಳಿಕ ಹೊರಬರುವ ಸಾಧ್ಯತೆಗಳೇ ಹೆಚ್ಚು.

ದಶಕದ ಹಿಂದೆ ಇಲ್ಲದಿದ್ದ ಹುಲಿ, ಚಿರತೆ, ಆನೆ, ಕಾಟಿ ಇತ್ಯಾದಿ ಕಾಡುಪ್ರಾಣಿಗಳ ನಾಡು ಭೇಟಿ, ಕೇರಳದಿಂದ ಕರ್ನಾಟಕದ ಉದ್ದಕ್ಕೂ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿರುವ ಭೂಕುಸಿತ, ಹವಾಮಾನ ವೈಪರೀತ್ಯಗಳು... ಇವೆಲ್ಲ ಕಾಲಕಾಲಕ್ಕೆ ಕೊಡಬೇಕಾದ ಗ್ರೌಂಡ್ ರಿಪೋರ್ಟ್ ಕೊಡುತ್ತಾ ಬರುತ್ತಿವೆ. ಇಷ್ಟರ ಮೇಲೂ ಎಚ್ಚರಗೊಳ್ಳಬೇಕಾದವರು ಎಚ್ಚರಗೊಳ್ಳದಿದ್ದರೆ ಅದಕ್ಕೆ ಯಾರು ಹೊಣೆ?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಾಜಾರಾಂ ತಲ್ಲೂರು

contributor