ರಾಹುಲ್ ಕಾಪಿ ಮಾಡುತ್ತಿದ್ದಾರಾ ಮೋದಿ?
2001ರ ಅಕ್ಟೋಬರ್ 7ರಿಂದ 2014ರ ಮೇ 22ರವರೆಗೆ 12 ವರ್ಷ 7 ತಿಂಗಳು 15 ದಿನ ಗುಜರಾತ್ ಮುಖ್ಯಮಂತ್ರಿ ಮತ್ತು 12 ವರ್ಷದಿಂದ ದೇಶದ ಪ್ರಧಾನ ಮಂತ್ರಿಯಾಗಿರುವ ನರೇಂದ್ರ ಮೋದಿಗೆ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದ ನಂತರ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮಾತ್ರ ಎದುರಾಳಿಗಳು. ಆದರೆ ಮೋದಿ ಒಮ್ಮೆಯಾದರೂ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಹೆಸರು ಹೇಳಿರುವುದನ್ನು ಕೇಳಿದ್ದೀರಾ? ಕೇಳಿರುವ ಸಾಧ್ಯತೆಯೇ ಇಲ್ಲ.
ಹೆಸರು ಹೇಳದಿದ್ದರೂ ಅವರನ್ನು ಅತ್ಯಂತ ನಿಕೃಷ್ಟವಾಗಿ ನಿಂದಿಸಿದ್ದಾರೆ. ಕನಿಷ್ಠ ಸೌಜನ್ಯವನ್ನೂ ತೋರದೆ ಬೈದಿದ್ದಾರೆ. ತಮ್ಮ ಹುದ್ದೆಯ ಘನತೆಯನ್ನು ಮಣ್ಣುಪಾಲು ಮಾಡುವಂತೆ ಮೂದಲಿಸಿದ್ದಾರೆ. ಆದರೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹೆಸರನ್ನು ಏಕೆ ಹೇಳಿಲ್ಲ ಎಂದರೆ ತನ್ನ ಬಾಯಿಂದ ಅವರ ಹೆಸರು ಬಂದುಬಿಟ್ಟರೆ ಅವರು ದೊಡ್ಡವರಾಗಿಬಿಡುತ್ತಾರೆ ಎನ್ನುವ ಭ್ರಮೆ, ಭಯ ಮತ್ತು ಕೀಳು ಲೆಕ್ಕಾಚಾರದಿಂದ. ಜೊತೆಗೆ ‘ಅವರು ಯಾವ ಮಹಾ ದೊಡ್ಡ ನಾಯಕರು?’ ಎನ್ನುವ ತಿರಸ್ಕಾರ ಭಾವದಿಂದ.
ಆಡಳಿತ ಮತ್ತು ಪ್ರತಿಪಕ್ಷಗಳು ಟೀಕೆ ಮಾಡಲೆಂದೇ, ವಿರೋಧ ಮಾಡಲೆಂದೇ ಬಳಸುತ್ತಿದ್ದ ರಾಜಕೀಯ ಪರಿಭಾಷೆಯನ್ನು ರಾಷ್ಟ್ರಮಟ್ಟದಲ್ಲಿ ಅತ್ಯಂತ ಕೆಳಮಟ್ಟಕ್ಕೆ ತಂದ ‘ಖ್ಯಾತಿ’ ಮೋದಿ ಅವರದು. ಆದರೆ ಮೋದಿ ಯಾರನ್ನು ಅತ್ಯಂತ ತುಚ್ಛವಾಗಿ ಕಾಣುತ್ತಾರೋ ಅವರನ್ನೇ ಅನುಕರಿಸುತ್ತಾರೆ. ಅವರ ಕಾರ್ಯಕ್ರಮಗಳ ಮತ್ತು ಯೋಜನೆಗಳ ಹೆಸರನ್ನು ಬದಲಿಸಿ ಅವುಗಳನ್ನು ತಾವೇ ಸಾಧಿಸಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಪಂಡಿತ್ ಜವಾಹರಲಾಲ್ ನೆಹರೂ ಅವರಿಂದ ಹಿಡಿದು ರಾಹುಲ್ ಗಾಂಧಿ ಅವರವರೆಗೆ ಮೋದಿ ದ್ವಿಮುಖ ನೀತಿಯ ದಿಗ್ದರ್ಶನ ಆಗುತ್ತಲೇ ಇದೆ.
ನರೇಂದ್ರ ಮೋದಿ, ಅವರು ಪ್ರತಿನಿಧಿಸುವ ಬಿಜೆಪಿ, ಬಿಜೆಪಿಯ ಬುದ್ಧಿ ಹಾಗೂ ಬೆನ್ನುಮೂಳೆ ಎರಡೂ ಆಗಿರುವ ಆರೆಸ್ಸೆಸ್, ಬಿಜೆಪಿ-ಆರೆಸ್ಸೆಸ್ ಎರಡೂ ಸೇರಿ ಸೃಷ್ಟಿಸಿಕೊಂಡಿರುವ Eco System (ಪ್ರಮುಖವಾಗಿ
ವಾಟ್ಸ್‌ಆ್ಯಪ್ ಯುನಿವರ್ಸಿಟಿ, ಭಕ್ತಗಣ, ಇತ್ಯಾದಿ ಇತ್ಯಾದಿ)ಗಳೆಲ್ಲವೂ ಮೋದಿಯನ್ನು ಮಹಾ ನಾಯಕ, ಹಿಂದೂ ಹೃದಯ ಸಾಮ್ರಾಟ್, ವಿಕಾಸ ಪುರುಷ, ಅಭಿವೃದ್ಧಿಯ ಹರಿಕಾರ ಮತ್ತಿತ್ಯಾದಿಯಾಗಿ ಬಿಂಬಿಸಲು ಹಾಕುತ್ತಿರುವ ಶ್ರಮ ಮತ್ತು ಮಾಡುತ್ತಿರುವ ಖರ್ಚು ಅಪಾರವಾದುದು. ಆದರೆ ರಾಹುಲ್ ಗಾಂಧಿಯನ್ನು ಪಪ್ಪು ಎಂದು ಬಿಂಬಿಸಲು ವ್ಯಯಿಸುತ್ತಿರುವ ಶ್ರಮ ಮತ್ತು ದುಡ್ಡು ಅದಕ್ಕೂ ಮಿಗಿಲಾದುದು, ಅಗಾಧವಾದುದು.
ಹೊರಗಡೆ ‘ರಾಹುಲ್ ಗಾಂಧಿ ರಾಜಕೀಯವನ್ನು ಗಂಭೀರವಾಗಿ ಪರಿಗಣಿಸಿಲ್ಲದ ರಾಜಕಾರಣಿ’ ಎಂದು ಬಿಂಬಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ಒಳಗೊಳಗೆ ರಾಹುಲ್ ಗಾಂಧಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಹೊರಗಡೆ ‘ರಾಹುಲ್ ಗಾಂಧಿ ನಿರ್ಲಕ್ಷ್ಯ ಮಾಡಲು ಸೂಕ್ತವಾದ ನಾಯಕ’ ಎಂದು ಬಿಂಬಿಸಲು ಶ್ರಮಪಡುತ್ತಿದ್ದಾರೆ. ಒಳಗೆ ರಾಹುಲ್ ಗಾಂಧಿ ಅವರನ್ನು ಆದ್ಯತೆಯನ್ನಾಗಿ ಸ್ವೀಕರಿಸಿದ್ದಾರೆ. ಬಾಹ್ಯ ಪ್ರಪಂಚದಲ್ಲಿ ರಾಹುಲ್ ಗಾಂಧಿ ಅವರನ್ನು ನಾಲಾಯಕ್ ಎಂದು ಸಾಬಿತುಪಡಿಸಲು ಯತ್ನಿಸುತ್ತಾರೆ. ಆಂತರ್ಯದಲ್ಲಿ ರಾಹುಲ್ ಗಾಂಧಿ ಲಾಯಕ್ ಆಗಿರುವ ರಾಜಕಾರಣಿ ಎನ್ನುವ ಕಾರಣಕ್ಕಾಗಿಯೇ ಅವರ ಚಾರಿತ್ರ್ಯ ಹರಣ ಮಾಡಿ ಆಪೋಶನ ತೆಗೆದುಕೊಳ್ಳಲು ಕುಟಿಲ ತಂತ್ರಗಳನ್ನು ರೂಪಿಸುತ್ತಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಮೋದಿ, ಬಿಜೆಪಿ, ಆರೆಸ್ಸೆಸ್ ಹಾಗೂ ಇನ್ನಿತರ ಅವರ ಇಛಿo Sಥಿsಣem ಅತ್ಯಂತ ಗಂಭೀರವಾಗಿ ಪರಿಗಣಿಸಿವೆ ಎನ್ನುವುದಕ್ಕೆ ನೂರು ಉದಾಹರಣೆಗಳು ಸಿಗುತ್ತವೆ. ಇದೇ ಕಾರಣಕ್ಕೆ ಜೆನ್-ಝಿ ಸಮೂಹವನ್ನು ತಮ್ಮತ್ತ ಸೆಳೆಯಲೆಂದೇ ರಾಹುಲ್ ಗಾಂಧಿ ನಡೆಸುತ್ತಿರುವ ‘ಛಾತ್ರೋಂ ಕೀ ಗೂಂಜ್’ ಕಾರ್ಯಕ್ರಮಗಳಿಗೆ ಎಲ್ಲೆಡೆ ಅಡೆತಡೆ ಮಾಡಲಾಗುತ್ತಿದೆ. ಮೊದಲಿಗೆ ರಾಜಸ್ಥಾನದ ಕೋಟಾದಲ್ಲಿ (ನಾಗರಿಕ ಸೇವಾ ಪರೀಕ್ಷೆಗಳಿಗೆ ತರಬೇತಿ ನೀಡುವ ಕೋಚಿಂಗ್ ಸೆಂಟರ್ ಗಳ ಹಬ್), ನಂತರ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ, ಇದಾದ ಮೇಲೆ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ (ರಾಹುಲ್ ಗಾಂಧಿ ಮುತ್ತಾತ ಜವಾಹರಲಾಲ್ ನೆಹರೂ ಹುಟ್ಟಿದ ಊರಾದ ಅಲಹಾಬಾದ್‌ನಲ್ಲಿ), ಬಳಿಕ ಮಹಾರಾಷ್ಟ್ರದ ಪುಣೆಯಲ್ಲಿ, ಕಡೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಒಂದಲ್ಲ ಒಂದು ಕಾರಣ ನೀಡಿ ಕಾರ್ಯಕ್ರಮಕ್ಕೆ ತೊಂದರೆ ನೀಡಲಾಗಿದೆ.
ಇದಕ್ಕೂ ಮಿಗಿಲಾಗಿ ನರೇಂದ್ರ ಮೋದಿ ಈಗ ನೇರಾನೇರ ರಾಹುಲ್ ಗಾಂಧಿ ಅವರನ್ನು ಕಾಪಿ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಬೇರೆ ಬೇರೆ ನಗರಗಳಲ್ಲಿ ಛಾತ್ರೋಂ ಕೀ ಗೂಂಜ್ ಕಾರ್ಯಕ್ರಮ ಮಾಡುತ್ತಿರುವಾಗಲೇ ಮೋದಿ ತಮ್ಮ ತವರು ರಾಜ್ಯ ಗುಜರಾತಿನ ವಡೋದರಲ್ಲಿ ಛಾತ್ರೋಂ ಕೀ ಗೂಂಜ್ ರೀತಿಯಲ್ಲೇ ‘ನಮೋ ಫಾರ್ ವಿಕಸಿತ್ ಭಾರತ್’ ಕಾರ್ಯಕ್ರಮ ಮಾಡಿದ್ದಾರೆ. ಅದೇ ಛಾತ್ರೋಂ ಕೀ ಗೂಂಜ್ ವೇದಿಕೆಯಂತೆ ಙ-ಆಕಾರದ ರ್ಯಾಂಪ್. ಪ್ರೇಕ್ಷಕರಿಗೆ ಹತ್ತಿರವಾಗುವ ವೇದಿಕೆ. ರಾಹುಲ್ ಗಾಂಧಿ ಅವರ ಪ್ರೇಕ್ಷಕರು ಕೂಡ ಯುವಕರು. ಮೋದಿ ಪ್ರೇಕ್ಷಕರು ಕೂಡ ಯುವಕರೇ. ವೇದಿಕೆಗೆ ಮೋದಿ ಆಗಮನವಾದದ್ದೇ ರಾಹುಲ್ ಗಾಂಧಿ ಛಾತ್ರೋಂ ಕೀ ಗೂಂಜ್ ಕಾರ್ಯಕ್ರಮಗಳ ವೇದಿಕೆಗೆ ಬರುವಂತೆ. ಮೋದಿ ಯುವಕರತ್ತ ಕೈಬಿಸಿದ್ದು ಕೂಡ ರಾಹುಲ್ ಗಾಂಧಿ ರೀತಿಯಲ್ಲೇ. ಸಂಗೀತವೂ ಕೂಡ ಅದೇ ರೀತಿ. ಇದು ಅಪ್ಪಟ ಕಾಪಿ. ನೂರಕ್ಕೆ ನೂರರಷ್ಟು ನಕಲು.
ಸ್ವಲ್ಪ ಹಿಂದಿರುಗಿ ನೋಡಿ. ರಾಹುಲ್ ಗಾಂಧಿ ಟೀ ಶರ್ಟ್ ತೊಟ್ಟ ಕೆಲವೇ ದಿನಗಳಲ್ಲಿ 76 ವರ್ಷದ ಮೋದಿಯೂ ಟೀ ಶರ್ಟ್ ತೊಟ್ಟು ಕಂಗೊಳಿಸಿದ್ದರು. ರಾಹುಲ್ ಗಾಂಧಿ ಸಮುದ್ರಕ್ಕೆ ಧುಮುಕಿದ ಕೆಲವೇ ದಿನಗಳ ಅಂತರದಲ್ಲಿ ಮೋದಿ ಕೂಡ ನೀರಿಗೆ ಇಳಿದಿದ್ದರು. ರಾಹುಲ್ ಗಾಂಧಿ ಮಕ್ಕಳ ಜೊತೆ ಬೆರೆತ ಬೆನ್ನಲ್ಲೇ ಮೋದಿ ಮಕ್ಕಳೊಂದಿಗೆ ಕಾಲ ಕಳೆದಿದ್ದರು. ರಾಹುಲ್ ಗಾಂಧಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ ನಂತರ ಮೋದಿ ಮೆಟ್ರೋ ಯಾನ ಮಾಡಿದ್ದರು. ರಾಹುಲ್ ಗಾಂಧಿ ಯುವಕರ ಜೊತೆ ಸಂವಾದ ನಡೆಸಿದ ನಂತರ ಮೋದಿ ಯುವಕರ ಜೊತೆ ಮಾತಿಗಿಳಿದಿದ್ದರು. ರಾಹುಲ್ ಗಾಂಧಿ ಬೀದಿ ಬದಿ ವ್ಯಾಪಾರಿಗಳ ಜೊತೆ ಬೆರೆತು, ಅವರ ಜೊತೆ ಊಟ ತಿಂಡಿ ತಿಂದ ನಂತರ ಮೋದಿಯೂ ಪಶ್ಚಿಮ ಬಂಗಾಳದ ಝಾರ್ಗ್ರಾಮ್‌ನ ಬೀದಿ ಬದಿ ಅಂಗಡಿಯಲ್ಲಿ ಚುರುಮುರಿ ಖರೀದಿಸಿದ್ದರು.
ನಕಲು ಮಾಡುವುದು ತಪ್ಪಲ್ಲ. ಅನುಕರಣೆಯಿಂದ ಅಪಾಯವಿಲ್ಲ. ಒಬ್ಬ ನಾಯಕನ ಯಶಸ್ವಿ ತಂತ್ರವನ್ನು ಮತ್ತೊಬ್ಬ ನಾಯಕ ಅನುಸರಿಸುವುದು ಅಪರಾಧವಲ್ಲ. ಜನರನ್ನು ತಲುಪಲು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಆರೋಪಿಸುವ ವಿಷಯವಲ್ಲ. ಹೊಸ ಪೀಳಿಗೆಯೊಂದಿಗೆ ಹೊಸ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುವುದೂ ಪ್ರಮಾದವಲ್ಲ. ಆದರೆ ನೀವು ಯಾರನ್ನು ಅನುಕರಿಸುತ್ತಿದ್ದೀರಿ? ಯಾವ ಉದ್ದೇಶಕ್ಕೆ ನಕಲು ಮಾಡುತ್ತೀರಿ? ಯಾವ ರೀತಿ ಕಾಪಿ ಮಾಡುತ್ತೀರಿ? ಎನ್ನುವುದು ಮುಖ್ಯ. ಮೋದಿ ನಕಲು ಮಾಡುವಾಗಲೂ ಪ್ರಾಮುಖ್ಯತೆ ಕೊಟ್ಟಿರುವುದು ನಕಾರಾತ್ಮಕ ಅಂಶಗಳಿಗೆ. ಇದು ಗಮನಿಸಬೇಕಾದ ಅಂಶ. ರಾಹುಲ್ ಗಾಂಧಿ ಬಳಸುತ್ತಿರುವ ಛಾತ್ರೋಂ ಕೀ ಗೂಂಜ್ ಎಂಬ ಮಾತನ್ನು ಮೋದಿ ಝೂಠ್ ಕೀ ಗೂಂಜ್ ಎಂದು ನಿಂದಿಸಿದ್ದಾರೆ.
ರಾಹುಲ್ ಗಾಂಧಿ ಛಾತ್ರೋಂ ಕೀ ಗೂಂಜ್ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವುದು ರಾಜಕೀಯ ಲಾಭಕ್ಕಾಗಿ ಎನ್ನುವುದನ್ನು ಅಲ್ಲಗಳೆಯಲಾಗದು. ಆದರೆ ಅವರು ಆ ವೇದಿಕೆಗಳಲ್ಲಿ ಮಾತನಾಡುತ್ತಿರುವುದು ವ್ಯವಸ್ಥೆಯ ಬಗ್ಗೆ, ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ, ದೇಶದ ಆರ್ಥಿಕತೆಯ ಬಗ್ಗೆ, ನಿರುದ್ಯೋಗದ ಬಗ್ಗೆ. ಇವೆಲ್ಲವೂ ವಿಪಕ್ಷ ನಾಯಕನೊಬ್ಬ ಚರ್ಚೆ ಮಾಡಲೇಬೇಕಾಗಿರುವ ವಿಷಯಗಳು. ರಾಹುಲ್ ಗಾಂಧಿ ವಿದ್ಯಾರ್ಥಿಗಳ ನಡುವೆ ಹೋಗಿ ಪ್ರಶ್ನೆಪತ್ರಿಕೆಗಳು ಏಕೆ ಸೋರಿಕೆಯಾಗುತ್ತಿವೆ? ಯುವಕರಿಗೆ ಉದ್ಯೋಗ ಏಕೆ ಸಿಗುತ್ತಿಲ್ಲ? ಶಿಕ್ಷಣ ಏಕೆ ದುಬಾರಿಯಾಗುತ್ತಿದೆ? ನೇಮಕಾತಿ ಪ್ರಕ್ರಿಯೆ ಏಕೆ ವಿಳಂಬವಾಗುತ್ತಿದೆ? ವಿದ್ಯಾರ್ಥಿಗಳ ಧ್ವನಿಗೆ ರಾಜಕೀಯದಲ್ಲಿ ಎಷ್ಟು ಜಾಗವಿದೆ? ಎಂಬ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ. ಇವು ವಿಪಕ್ಷ ನಾಯಕನೊಬ್ಬ ಕೇಳಲೇಬೇಕಾದ ಪ್ರಶ್ನೆಗಳು.
ಆದರೆ ಮೋದಿ? ಎಲ್ಲೆಡೆ ಮಾಡುವಂತೆ ವಡೋದರಾದಲ್ಲೂ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಅವರನ್ನು ಅಣಕಿಸಿದರು. ಮೋದಿ ಈಗ ಅಧಿಕಾರದ ದಂಡ ಹಿಡಿದಿರುವ ಪ್ರಧಾನಿ. ಅವರು ಕೆಲಸ ಮಾಡಿ ತೋರಿಸಬೇಕೆ ಹೊರತು ಹಿಂದಿನವರು ತಪ್ಪು ಮಾಡಿದ್ದಾರೆ ಎಂದು ದೂರುತ್ತಾ ಕೂರುವುದಲ್ಲ. ಜನ ಇವರಿಗೆ ಅಧಿಕಾರ ಕೊಟ್ಟಿರುವುದಾದರೂ ಏಕೆ? ರಾಹುಲ್ ಗಾಂಧಿ ಯುವಕರ ಪ್ರಶ್ನೆಗಳನ್ನು ರಾಜಕೀಯದ ಕೇಂದ್ರಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಮೋದಿ ಯುವಕರ ಮುಂದೆ ಎದುರಾಳಿಯ ರಾಜಕೀಯ ಕಥನವನ್ನು ಪ್ರಶ್ನಿಸುತ್ತಿದ್ದಾರೆ.
ಈ ಚರ್ಚೆ ವಡೋದರಾ ಕಾರ್ಯಕ್ರಮಕ್ಕೆ ಸೀಮಿತಗೊಳ್ಳುವುದಿಲ್ಲ. ಇತ್ತೀಚಿನ ರಾಜಕೀಯದಲ್ಲಿ ನಾಯಕನ ಉಡುಪು, ಜನರೊಂದಿಗೆ ಬೆರೆಯುವ ರೀತಿ, ಮೆಟ್ರೋ ಪ್ರಯಾಣ, ಮಕ್ಕಳೊಂದಿಗೆ ಸಂವಹನ, ಬೀದಿ ವ್ಯಾಪಾರಿಗಳೊಂದಿಗೆ ಊಟ, ಯುವಕರೊಂದಿಗೆ ನೇರ ಸಂವಾದ, ಸಾಮಾಜಿಕ ಮಾಧ್ಯಮದ ದೃಶ್ಯಗಳು, ಇವೆಲ್ಲವೂ ರಾಜಕೀಯ ಸಂವಹನದ ಭಾಗವಾಗಿವೆ. ಹಾಗಾಗಿ ಯಾರು ಯಾರನ್ನು ಅನುಸರಿಸುತ್ತಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಬಿಜೆಪಿ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪಕ್ಷ. ಅತ್ಯಂತ ಶ್ರೀಮಂತ ಪಕ್ಷ. ಅತ್ಯಂತ ಪ್ರಭಾವಿ ನಾಯಕನನ್ನು ಹೊಂದಿರುವ ಪಕ್ಷ. ಆರೆಸ್ಸೆಸ್‌ನಂತಹ ಸಂಘಟನೆಯ ಬಲ ಇರುವ ಪಕ್ಷ. ಬಿಜೆಪಿ ಮತ್ತು ಮೋದಿ ಮನಸ್ಸು ಮಾಡಿದರೆ ಬಹಳ ಒಳ್ಳೆಯ ಇವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಗಳನ್ನು ನಿಯೋಜಿಸಿಕೊಳ್ಳಬಹುದು. ಚುನಾವಣಾ ತಂತ್ರಜ್ಞರನ್ನು ಜೊತೆಗಿಟ್ಟುಕೊಳ್ಳಬಹುದು. ಆದರೆ ಮೋದಿ ಮಾಡುತ್ತಿರುವುದು ರಾಹುಲ್ ಗಾಂಧಿ ಅವರ ಕಾಪಿಯನ್ನು.
ಅದೂ ಯಾವ ರಾಹುಲ್ ಗಾಂಧಿ ಅವರನ್ನು? ದುರ್ಬಲ ನಾಯಕ, ಪಪ್ಪು, ರಾಜಕೀಯವಾಗಿ ಅಪ್ರಸ್ತುತ ವ್ಯಕ್ತಿ ಎಂದು ತಾವೇ ಜರಿಯುವ ರಾಹುಲ್ ಗಾಂಧಿ ಅವರನ್ನು. ಮೋದಿ ಬಳಿ, ಅವರ ಐಟಿ ಸೆಲ್ ಬಳಿ ‘ಮಾಸ್ಟರ್ ಸ್ಟ್ರೋಕ್’ಗಳು ಖಾಲಿಯಾದವಾ? ಅದೇ ಕಾರಣಕ್ಕೆ ಅವರು ರಾಹುಲ್ ಗಾಂಧಿ ಅವರ ಹಾದಿಯಲ್ಲಿ ಸಾಗುತ್ತಿದ್ದಾರಾ? ರಾಹುಲ್ ಗಾಂಧಿ ವ್ಯಕ್ತಿತ್ವವನ್ನು ದಮನ ಮಾಡುವ ವಿಕೃತ ಕೆಲಸಕ್ಕೆ ತಮ್ಮೆಲ್ಲಾ ಶಕ್ತಿಯನ್ನು ವಿನಿಯೋಗಿಸುತ್ತಿದ್ದವರು ಈಗ ಅವರನ್ನೇ ಯಥಾವತ್ತು ನಕಲು ಮಾಡುತ್ತಿರುವುದು ಏನನ್ನು ಸೂಚಿಸುತ್ತದೆ?
ಆಫ್ ದಿ ರೆಕಾರ್ಡ್!
ರಾಹುಲ್ ಗಾಂಧಿ ಅವರನ್ನು ಮೋದಿ ನೂರಕ್ಕೆ ನೂರಷ್ಟು ನಕಲು ಮಾಡುತ್ತಿರುವುದನ್ನು ಪಕ್ಕಕ್ಕಿಟ್ಟು ಡಿ.ಕೆ. ಶಿವಕುಮಾರ್, ಮೋದಿಯನ್ನು ಅನುಕರಣೆ ಮಾಡುತ್ತಿದ್ದಾರೆ, ಪ್ರಚಾರ ಪಡೆಯುವುದರಲ್ಲಿ ಮೋದಿಯನ್ನು ಮೀರಿಸಿಬಿಡುತ್ತಾರೆ ಎಂದು ಮೂದಲಿಸಿದರೆ ಹೇಗೆ? ನಕಲು ಮಾಡುವುದು ತಪ್ಪಲ್ಲ; ಯಾರನ್ನು? ಯಾವ ಉದ್ದೇಶಕ್ಕೆ? ಯಾವ ರೀತಿ ಕಾಪಿ ಮಾಡುತ್ತೀರಿ? ಎನ್ನುವುದು ಮುಖ್ಯ.