ಕಾಂಗ್ರೆಸ್ ಮುಖಂಡರು ನ್ಯಾಯಾಲಯಕ್ಕೇಕೆ ಹೆದರಬೇಕು?

Update: 2015-12-21 08:14 GMT

ಕಾಂಗ್ರೆಸಿಗರೆಲ್ಲ ಬೀದಿಗಿಳಿದಿದ್ದಾರೆ. ರಸ್ತೆ ತಡೆ ಘೇರಾವ್ ಇತ್ಯಾದಿಗಳೆಲ್ಲ ಬಿರುಸಿನಿಂದ ನಡೆಯುತ್ತಿವೆ. ಆದರೆ ಇವರು ಬೀದಿಗಿಳಿದಿರುವುದು ಜನಸಾಮಾನ್ಯರ ಸಮಸ್ಯೆಗಳನ್ನು ಮುಂದಿಟ್ಟು ಎಂದು ನಾವು ಯೋಚಿಸಿದರೆ ಮೋಸ ಹೋದಂತೆಯೇ ಸರಿ. ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ, ದಾದ್ರಿ ಹತ್ಯೆ, ದಲಿತರ ಹತ್ಯೆ, ಕಲಬುರ್ಗಿ ಹತ್ಯೆ...ಹೀಗೆ ಯಾವ ಸಂದರ್ಭದಲ್ಲೂ ಬೀದಿಗಿಳಿಯದ ಕಾಂಗ್ರೆಸಿಗರು ಈಗ ಪ್ರತಿಭಟನೆಗಿಳಿದಿರುವುದು ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ರಕ್ಷಿಸಲು. ಹಾಗೆಂದು ಆ ನಾಯಕರ ಜೀವವೇನೂ ಅಪಾಯದಲ್ಲಿಲ್ಲ. ಒಂದು ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ನ್ಯಾಯಾಲಯ ಆ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿ, ಸೋನಿಯಾ ಮತ್ತು ರಾಹುಲ್ ಅವರನ್ನು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಬರಲು ಸೂಚಿಸಿದೆ. ಇಷ್ಟಕ್ಕೇ ದೇಶಾದ್ಯಂತ ಕಾಂಗ್ರೆಸ್ ನಾಯಕರು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ಇಲ್ಲಿ ಈ ಕಾರ್ಯಕರ್ತರು ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುವುದು ಕೂಡ ಸ್ಪಷ್ಟವಿಲ್ಲ. ರಾಹುಲ್ ಮತ್ತು ಸೋನಿಯಾ ಗಾಂಧಿಯವರನ್ನು ವಿಚಾರಣೆ ನಡೆಸುತ್ತಿರುವುದು ನ್ಯಾಯಾಲಯ. ಇವರು ಪ್ರತಿಭಟನೆ ಮಾಡುವುದಿದ್ದರೆ ನ್ಯಾಯಾಲಯದ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ. ಅಭಿವೃದ್ಧಿಯ ವಿಷಯ ಮಾತನಾಡಬೇಕಾದ ಸಂಸತ್‌ನಲ್ಲಿ ಈ ಹಗರಣಕ್ಕೆ ಸಂಬಂಧಿಸಿದಂತೆ ಗದ್ದಲ ಎಬ್ಬಿಸುವುದು ಹಾಸ್ಯಾಸ್ಪದ. ನ್ಯಾಯಾಲಯದ ಆದೇಶದ ವಿರುದ್ಧ ತೀರ್ಪು ನೀಡುವುದು ಸಂಸತ್‌ನ ಕೆಲಸವೇ? ಇಷ್ಟಕ್ಕೂ ನ್ಯಾಶನಲ್ ಹೆರಾಲ್ಡ್ ಪ್ರಕರಣ ಏನು ಎನ್ನುವುದರ ಕಡೆಗೆ ಒಂದಿಷ್ಟು ಗಮನ ಹರಿಸೋಣ. ಸೋನಿಯಾ ಮತ್ತು ಅವರ ತಂಡದ ಮೇಲಿರುವುದು ವಂಚನೆಯ ಆರೋಪ. ‘ಅಸೋಸಿಯೇಟೆಡ್ ಜರ್ನಲ್ಸ್ ಲಿ.’ ಎಂಬ ಮಾಧ್ಯಮ ಸಂಸ್ಥೆಯ ಆಸ್ತಿ ಪಾಸ್ತಿಗಳನ್ನು ಕಾಂಗ್ರೆಸ್ ನಾಯಕರದ್ದೇ ಮಾಲಕತ್ವದ ‘ಯಂಗ್ ಇಂಡಿಯನ್ ಲಿ.’ ಕಂಪೆನಿ ಸ್ವಾಧೀನ ಪಡಿಸಿಕೊಂಡಿದ್ದು ಈ ಸಂದರ್ಭದಲ್ಲಿ ಅಪಾರ ಅವ್ಯವಹಾರ ನಡೆದಿದೆ. ಇದರಲ್ಲಿ ಸೋನಿಯಾ ಬಳಗ ಪಾಲ್ಗೊಂಡಿದೆ ಎನ್ನುವುದು ಇರುವ ಆರೋಪ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಜರ್ನಲ್ಸ್‌ಗೆ ನೀಡಿದ ಸಾಲದ ವರ್ಗಾವಣೆಯ ಕುರಿತಂತೆ ಸುಬ್ರಮಣಿಯನ್‌ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದಾಯ ತೆರಿಗೆ ಕಾನೂನುಮತ್ತು ಜನಪ್ರತಿನಿಧಿಗಳ ಕಾಯ್ದೆಗಳ ಪ್ರಕಾರ ಯಾವುದೇ ರಾಜಕೀಯ ಪಕ್ಷ ಯಾವುದೇ ವಾಣಿಜ್ಯ ಸಂಸ್ಥೆಗೆ ಸಾಲ ನೀಡುವುದು ಕಾನೂನು ಬಾಹಿರ ಎನ್ನುವುದು ಸುಬ್ರಮಣಿಯನ್‌ಸ್ವಾಮಿಯ ವಾದ. ಸುಬ್ರಮಣಿಯನ್‌ಸ್ವಾಮಿ ಸುಳ್ಳು ದೂರನ್ನೇ ದಾಖಲಿಸಿರಬಹುದು ಎಂದು ಇಟ್ಟುಕೊಳ್ಳೋಣ. ಅಥವಾ ಮೋದಿಯ ಪರವಾಗಿಯೇ ಅವರು ಸೋನಿಯಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಎಂದೇ ನಾವು ಭಾವಿಸೋಣ. ಆದರೂ ಅವರು ಇದನ್ನು ಒಟ್ಟಾರೆಯಾಗಿ ಸಂತೆಯಲ್ಲಿ ನಿಂತು ಆರೋಪ ಮಾಡಿರುವುದಲ್ಲ. ಕಾನೂನಿನ ಮೂಲಕವೇ ತನ್ನ ಆರೋಪವನ್ನು ಮಂಡಿಸಿದ್ದಾರೆ. ನ್ಯಾಯಾಲಯ ಎಲ್ಲ ಸಾಕ್ಷಿಗಳ ವಿಚಾರಣೆ ನಡೆಸಿದ ಬಳಿಕ ಸಹಜವಾಗಿಯೇ ಸೋನಿಯಾ ಮತ್ತು ರಾಹುಲ್ ಗಾಂಧಿಗೆ ಸಮನ್ಸ್ ನೀಡಿದೆ. ಇವನ್ನೆಲ್ಲ ನ್ಯಾಯಾಲಯದ ಮೂಲಕ ಸೋನಿಯಾ ತಂಡ ಎದುರಿಸಬೇಕೇ ಹೊರತು, ನ್ಯಾಯಾಲಯದ ಹೊರಗೆ ಅದನ್ನು ಇತ್ಯರ್ಥಗೊಳಿಸಲು ಸಾಧ್ಯವಿಲ್ಲ. ಅವರನ್ನು ಅಪರಾಧಿಗಳು ಎಂದು ಯಾರೂ ಘೋಷಿಸಿಲ್ಲ. ನರೇಂದ್ರ ಮೋದಿಯೂ ಕೂಡ ಈ ಬಗ್ಗೆ ಯಾವುದೇ ಬಹಿರಂಗ ಹೇಳಿಕೆಯನ್ನು ನೀಡಲು ಹೋಗಿಲ್ಲ. ಹೀಗಿರುವಾಗ, ನ್ಯಾಯಾಲಯದ ಮೆಟ್ಟಿಲೇರಿ ವಿಚಾರಣೆಗೊಳಗಾಗುವುದೇ ಅವಮಾನ ಎಂದು ಅವರು ಭಾವಿಸುವುದು ಎಷ್ಟು ಸರಿ? ಒಂದು ಆರೋಪ ಕೇಳಿ ಬಂದಾಗ ಅದನ್ನು ಸಾಂವಿಧಾನಿಕ ವ್ಯಾಪ್ತಿಯಲ್ಲಿ ಎದುರಿಸಿ ತನ್ನ ನಿರಪರಾಧಿತ್ವವನ್ನು ಸಾಬೀತು ಪಡಿಸುವುದು ನಾಯಕರ ಹೊಣೆ. ಬದಲಿಗೆ ಹೊರಗಿನಿಂದ ನ್ಯಾಯಾಲಯದ ಮೇಲೆ ಒತ್ತಡ ಹೇರಲು ಹವಣಿಸುವುದು ಇನ್ನಷ್ಟು ಅನುಮಾನಗಳನ್ನು ಸೃಷ್ಟಿಸುತ್ತವೆ. ಈ ಹಿಂದೆ ರಾಜ್ಯದಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪರ ಮೇಲೇ ಮೊಕದ್ದಮೆ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿದಾಗ ಬಿಜೆಪಿ ನಡೆಸಿದ್ದ ಅವಾಂತರಗಳನ್ನೇ ಇದು ಹೋಲುತ್ತದೆ. ಮೊಕದ್ದಮೆ ದಾಖಲಾದಾಗ ಬಿಜೆಪಿ ಸ್ವಯಂ ರಾಜ್ಯ ಬಂದ್ ಘೋಷಿಸಿ ಅನಾಹುತಗಳನ್ನು ಸೃಷ್ಟಿಸಿತ್ತು. ಒಂದು ಸರಕಾರವೇ ರಾಜ್ಯದಲ್ಲಿ ಬಂದ್ ಘೋಷಿಸಿದ ಉದಾಹರಣೆ ಅದೇ ಮೊದಲಿರಬೇಕು. ಮುಂದೆ ಆ ಪ್ರಕರಣ ಯಡಿಯೂರಪ್ಪನವರ ಅಧಿಕಾರವನ್ನೇ ಬಲಿ ತೆಗೆದುಕೊಂಡಿತ್ತು ಎನ್ನುವುದನ್ನೂ ನಾವು ನೋಡಿದ್ದೇವೆ. ಇದೀಗ ನ್ಯಾಶನಲ್ ಹೆರಾಲ್ಡ್ ಪ್ರಕರಣವನ್ನೂ ಕಾಂಗ್ರೆಸಿಗರು ಅದೇ ರೀತಿ ನಿಭಾಯಿಸಲು ಹೊರಟಿದ್ದಾರೆ. ಇದು ಸೋನಿಯಾ ಮತ್ತು ರಾಹುಲ್ ಅವರ ವಿಶ್ವಾಸಾರ್ಹತೆಯನ್ನು ಇನ್ನಷ್ಟು ಕೆಡಿಸಿ ಹಾಕುತ್ತದೆ. ಬದಲಿಗೆ ನ್ಯಾಯಾಲಯಕ್ಕೆ ಗೌರವ ನೀಡಿ, ವಿಚಾರಣೆಗೆ ಹಾಜರಾಗಿ ತಾವು ನಿರ್ದೋಷಿ ಎನ್ನುವುದನ್ನು ದೇಶಕ್ಕೆ ಸಾಬೀತು ಮಾಡುವುದು ಅವರ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದೇ ಸಂದರ್ಭದಲ್ಲಿ ನಾವು ಇನ್ನೂ ಒಂದು ಪ್ರಶ್ನೆಯನ್ನು ಕೇಳಬಹುದು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತಮ್ಮದೇ ತಾತನ ಆಸ್ತಿಗಾಗಿ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿ ವಿಚಾರಣೆ ಎದುರಿಸುವಂತಾಯಿತು. ಆದರೆ ಬಿಜೆಪಿಯೊಳಗಿರುವ ಬ್ರಹ್ಮಾಂಡ ಭ್ರಷ್ಟರು ಯಾಕೆ ನ್ಯಾಯಾಲಯದ ಕಟಕಟೆಯನ್ನು ಹತ್ತುವ ವಾತಾವರಣ ನಿರ್ಮಾಣವಾಗಿಲ್ಲ? ವ್ಯಾಪಂ ಹಗರಣ ಕೇವಲ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದಷ್ಟೇ ಅಲ್ಲ, ನಿಗೂಢ ಸಾವುಗಳೂ ಆ ಹಗರಣವನ್ನು ಸುತ್ತುವರಿದಿವೆ. ಆದರೆ ಮಧ್ಯಪ್ರದೇಶದ ಮುಖ್ಯಮಂತ್ರಿಯ ವಿಚಾರಣೆ ಈವರೆಗೆ ನಡೆದಿಲ್ಲ. ಹಲವು ಅಪರಾಧ ಪ್ರಕರಣದಲ್ಲಿ ಅಮಿತ್ ಶಾ ನ್ಯಾಯಾಲಯದ ಮೆಟ್ಟಿಲು ಏರಿಲ್ಲ. ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ನರೇಂದ್ರ ಮೋದಿಯ ಕೂದಲನ್ನು ಕೊಂಕಿಸಲೂ ನಮ್ಮ ನ್ಯಾಯಾಲಯಕ್ಕೆ ಆಗಲಿಲ್ಲ. ಜೇಟ್ಲಿ, ವಸುಂಧರಾ ರಾಜೇ ಹೀಗೆ ಬಿಜೆಪಿಯೊಳಗಿರುವ ಬೃಹತ್ ಭ್ರಷ್ಟಾಚಾರಿಗಳು ಅಧಿಕಾರವನ್ನನುಭವಿಸುತ್ತಾ ಮೆರೆಯುತ್ತಿರುವುದು ನ್ಯಾಯಾಲಯದ ಅಣಕವೇ ಆಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೇಗೆ ನ್ಯಾಯಾಲಯದ ಮುಂದೆ ನಿಂತು ವಿಚಾರಣೆಗೊಳಗಾದರೋ, ಬಿಜೆಪಿಯೊಳಗಿರುವ ಈ ಗಣ್ಯ ನಾಯಕರ ವಿಚಾರಣೆಯೂ ನಡೆಯಬೇಕಾಗಿದೆ. ಆಗ ಮಾತ್ರ ಜನರಲ್ಲಿ ನ್ಯಾಯವ್ಯವಸ್ಥೆಯ ಕುರಿತಂತಿರುವ ನಂಬಿಕೆ ಇನ್ನಷ್ಟು ಗಟ್ಟಿಯಾಗಬಹುದು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News