ಅಕ್ರಮ ವಲಸಿಗರೆಂಬ ನಿಗೂಢ ಭೂತ

‘‘ದೊಡ್ಡ ಸಂಖ್ಯೆಯಲ್ಲಿ ವಿದೇಶಿ ವಲಸಿಗರು ಮತ್ತು ನುಸುಳುಕೋರರು ಭಾರತದೊಳಗೆ ನುಸುಳಿ ಬಂದಿದ್ದು, ಇಲ್ಲಿಯ ಧರ್ಮ, ಸಂಸ್ಕೃತಿ, ಶಾಂತಿ, ಸುಭಿಕ್ಷೆಗೆ ಮಾತ್ರವಲ್ಲ ದೇಶದ ಏಕತೆ ಮತ್ತು ಅಖಂಡತೆಗೆ ಅಪಾಯ ತಂದೊಡ್ಡಿದ್ದಾರೆ’’ ಎಂಬ ವದಂತಿ ಭಾರತದಲ್ಲಿ ಹಲವಾರು ದಶಕಗಳಿಂದ ಚಲಾವಣೆಯಲ್ಲಿದೆ. ರಾಜಕೀಯ ಅಗತ್ಯಗಳಿಗನುಸಾರವಾಗಿ ಈ ವದಂತಿಗಳು ಬೇರೆಬೇರೆ ಕಡೆ ಬೇರೆ ಬೇರೆ ಬಣ್ಣ, ಆಕಾರ ಮತ್ತು ರೂಪಗಳನ್ನು ತಾಳುತ್ತಾ, ಬೆಳೆಯುತ್ತಾ, ವ್ಯಾಪಿಸುತ್ತಾ ಹೋಗುತ್ತವೆ. ಆದರೆ ಈ ರೀತಿಯ ವದಂತಿಗಳನ್ನು ಹಬ್ಬುವ ಮೂಲಕ ದೇಶದ ಒಂದು ಸಮುದಾಯವನ್ನು ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಿ ಬಿಡುವ ಮತ್ತು ಸಾರ್ವಜನಿಕರ ದೃಷ್ಟಿಯಲ್ಲಿ ಅವರನ್ನು ಅಪರಾಧಿಗಳು ಹಾಗೂ ಶಂಕಿತರು ಎಂದು ಚಿತ್ರಿಸುವವರ ಬಳಿ, ತಮ್ಮ ಘೋರ ಆರೋಪವನ್ನು ಪುಷ್ಟೀಕರಿಸುವುದಕ್ಕೆ ಒಂದೇ ಒಂದು ಸೂಕ್ತ ತರ್ಕವಾಗಲಿ, ಪುರಾವೆಯಾಗಲಿ, ದಾಖಲೆಯಾಗಲಿ ಇಲ್ಲ.

Update: 2024-05-05 05:06 GMT

ಭಾಗ- 3

‘‘ಅಜ್ಞಾನವೆಂದರೆ ಜ್ಞಾನದ ಅಭಾವವಲ್ಲ - ಅದು ಜ್ಞಾನದ ನಿರಾಕರಣೆ ಅಥವಾ ಅದರ ತುಚ್ಛೀಕರಣ’’ (ಪೀಟರ್ ಗಾಲಿಸನ್)

ರಾಜಸ್ಥಾನದಲ್ಲಿ ಪ್ರಧಾನಿ ಮೋದಿಯವರು ಎಪ್ರಿಲ್ 21ರಂದು ಮಾಡಿದ ಕುಖ್ಯಾತ ಭಾಷಣದಲ್ಲಿ ಮುಸಲ್ಮಾನರತ್ತ ಬೆರಳು ತೋರಿಸಿ ಹೊರಿಸಿದ ಇನ್ನೊಂದು ಹೊಣೆರಹಿತ ಸುಳ್ಳಾರೋಪ ಅವರು ‘ಅಕ್ರಮ ವಲಸಿಗರು’ ಎಂಬುದಾಗಿತ್ತು.

‘‘ದೊಡ್ಡ ಸಂಖ್ಯೆಯಲ್ಲಿ ವಿದೇಶಿ ವಲಸಿಗರು ಮತ್ತು ನುಸುಳುಕೋರರು ಭಾರತದೊಳಗೆ ನುಸುಳಿ ಬಂದಿದ್ದು, ಇಲ್ಲಿಯ ಧರ್ಮ, ಸಂಸ್ಕೃತಿ, ಶಾಂತಿ, ಸುಭಿಕ್ಷೆಗೆ ಮಾತ್ರವಲ್ಲ ದೇಶದ ಏಕತೆ ಮತ್ತು ಅಖಂಡತೆಗೆ ಅಪಾಯ ತಂದೊಡ್ಡಿದ್ದಾರೆ’’ ಎಂಬ ವದಂತಿ ಭಾರತದಲ್ಲಿ ಹಲವಾರು ದಶಕಗಳಿಂದ ಚಲಾವಣೆಯಲ್ಲಿದೆ. ರಾಜಕೀಯ ಅಗತ್ಯಗಳಿಗನುಸಾರವಾಗಿ ಈ ವದಂತಿಗಳು ಬೇರೆಬೇರೆ ಕಡೆ ಬೇರೆ ಬೇರೆ ಬಣ್ಣ, ಆಕಾರ ಮತ್ತು ರೂಪಗಳನ್ನು ತಾಳುತ್ತಾ, ಬೆಳೆಯುತ್ತಾ, ವ್ಯಾಪಿಸುತ್ತಾ ಹೋಗುತ್ತವೆ. ಆದರೆ ಈ ರೀತಿಯ ವದಂತಿಗಳನ್ನು ಹಬ್ಬುವ ಮೂಲಕ ದೇಶದ ಒಂದು ಸಮುದಾಯವನ್ನು ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಿ ಬಿಡುವ ಮತ್ತು ಸಾರ್ವಜನಿಕರ ದೃಷ್ಟಿಯಲ್ಲಿ ಅವರನ್ನು ಅಪರಾಧಿಗಳು ಹಾಗೂ ಶಂಕಿತರು ಎಂದು ಚಿತ್ರಿಸುವವರ ಬಳಿ, ತಮ್ಮ ಘೋರ ಆರೋಪವನ್ನು ಪುಷ್ಟೀಕರಿಸುವುದಕ್ಕೆ ಒಂದೇ ಒಂದು ಸೂಕ್ತ ತರ್ಕವಾಗಲಿ, ಪುರಾವೆಯಾಗಲಿ ದಾಖಲೆಯಾಗಲಿ ಇಲ್ಲ. ದೇಶದಲ್ಲಿ ನಿಖರವಾಗಿ ಎಷ್ಟು ಮಂದಿ ಅಕ್ರಮ ವಲಸಿಗರಿದ್ದಾರೆ? ಅವರು ಎಲ್ಲಿಂದ, ಯಾವ ಮಾರ್ಗವಾಗಿ, ದೇಶದ ಯಾವ ರಾಜ್ಯಕ್ಕೆ ಬಂದಿದ್ದಾರೆ ಮತ್ತು ಎಲ್ಲಿ ನೆಲೆಸಿದ್ದಾರೆ? ಸದ್ಯ ಅವರು ಯಾವ ಸ್ಥಿತಿಯಲ್ಲಿದ್ದಾರೆ?... ಇತ್ಯಾದಿ ಪ್ರಶ್ನೆಗಳಿಗೆ ಆರೋಪ ಹೊರಿಸುವವರಾಗಲಿ ಕೇಂದ್ರ ಅಥವಾ ಯಾವುದೇ ರಾಜ್ಯ ಸರಕಾರವಾಗಲಿ ಯಾರೂ ಈವರೆಗೆ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ. ಅವರ ಬಳಿ ಸುಳ್ಳು ಆರೋಪಗಳ ದೊಡ್ಡ ಕಂತೆಯೊಂದನ್ನು ಬಿಟ್ಟರೆ ಬೇರೇನೂ ಇಲ್ಲ ಎಂಬುದು ದೇಶದ ಸಂಸತ್ತಿನಲ್ಲಿ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಪದೇ ಪದೇ ಸಾಬೀತಾಗಿದೆ. ಆದರೂ ಪ್ರಸ್ತುತ ವದಂತಿಯ ಆಧಾರದಲ್ಲಿ ಜನರನ್ನು ವಿಂಗಡಿಸುವ, ಅವರ ಮಧ್ಯೆ ದ್ವೇಷ ಬಿತ್ತುವ, ಅವರನ್ನು ಪರಸ್ಪರ ಹಿಂಸೆಗೆ ಇಳಿಸುವ ಮತ್ತು ಧ್ರುವೀಕರಣದ ಮೂಲಕ ರಾಜಕೀಯ ಲಾಭ ಪಡೆಯುವ ಕೆಲಸ ಮಾತ್ರ ಅಬಾಧಿತವಾಗಿ ನಡೆಯುತ್ತಲೇ ಇದೆ. ಈ ಕೆಲಸವನ್ನು ಆರೆಸ್ಸೆಸ್, ಬಿಜೆಪಿ ಮತ್ತು ಬಜರಂಗಿಗಳು ಮಾತ್ರವಲ್ಲ, ಹಲವೊಮ್ಮೆ ಕಾಂಗ್ರೆಸ್‌ನಂತಹ ಸೆಕ್ಯುಲರ್ ಮುಖವಾಡ ಧರಿಸಿರುವ ಪಕ್ಷಗಳ ನಾಯಕರು ಕೂಡಾ ಧಾರಾಳವಾಗಿ ಮಾಡಿದ್ದಾರೆ. ಉದಾ:

2004ರಲ್ಲಿ, ಆಗಿನ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಶ್ರೀ ಪ್ರಕಾಶ್ ಜೈಸ್ವಾಲ್ ‘‘ಭಾರತದಲ್ಲಿ ಬಾಂಗ್ಲಾದೇಶದಿಂದ ಬಂದ 1.2 ಕೋಟಿ ಅಕ್ರಮ ವಲಸಿಗರಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಪಶ್ಚಿಮ ಬಂಗಾಳ ಮತ್ತು ಅಸ್ಸಾಮ್‌ನಲ್ಲಿ ಕಂಡು ಬರುತ್ತಾರೆ’’ ಎಂಬ ಆಧಾರ ರಹಿತ ಹೇಳಿಕೆ ನೀಡಿ ಸಿಕ್ಕಿಬಿದ್ದಿದ್ದರು. ಅವರ ಬಳಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಕ್ಕೆ ಯಾವುದೇ ಆಧಾರವಾಗಲಿ ಪುರಾವೆಯಾಗಲಿ ಇರಲಿಲ್ಲ. ಪ್ರಸ್ತುತ ಎರಡೂ ರಾಜ್ಯಗಳು ಈ ಹೇಳಿಕೆಯ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದವು. ಜೈಸ್ವಾಲ್ ತಮ್ಮ ಅಸಂಬದ್ಧ ಹೇಳಿಕೆಯನ್ನು ಹಿಂದೆಗೆದುಕೊಳ್ಳಬೇಕಾಯಿತು.

2012ರಲ್ಲಿ ಈಶಾನ್ಯ ಭಾರತದ ಮೂರು ಮಂದಿ ಸಂಸದರು ಸಂಸತ್ತಿನಲ್ಲಿ ಕೆಲವು ಮಹತ್ವದ ಪ್ರಶ್ನೆಗಳನ್ನು ಕೇಳಿದರು. ಪ್ರಶ್ನೆಗಳು ಬಹಳ ಸರಳ ಹಾಗೂ ನೇರವಾಗಿದ್ದವು. ಈಶಾನ್ಯ ಭಾರತದೆಲ್ಲೆಡೆ ಬಾಂಗ್ಲಾದೇಶದ ಅಕ್ರಮ ವಲಸಿಗರು ತುಂಬಿದ್ದಾರೆ ಮತ್ತು ಅವರಿಂದಾಗಿ ಸ್ಥಳೀಯ ಸಂಸ್ಕೃತಿಗೆ, ಆರ್ಥಿಕತೆಗೆ ಮತ್ತು ರಾಷ್ಟ್ರೀಯ ಭದ್ರತೆಗೆ ತೀವ್ರ ಅಪಾಯ ಉಂಟಾಗಿದೆ ಎಂಬ ವದಂತಿಗಳು ದೇಶದೆಲ್ಲೆಡೆ ಚಲಾವಣೆಯಲ್ಲಿದ್ದ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರಶ್ನೆಗಳು ತುಂಬಾ ಮಹತ್ವಪೂರ್ಣವೂ ಆಗಿದ್ದವು. ಉದಾ: ‘‘ಅಸ್ಸಾಮ್ ಸಹಿತ ಈಶಾನ್ಯ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶಿಗಳ ಸಂಖ್ಯೆ ಎಷ್ಟೆಂಬ ಬಗ್ಗೆ ಸರಕಾರದ ಬಳಿ ಮಾಹಿತಿ ಇದೆಯೇ? ಇದ್ದರೆ ಆ ಕುರಿತು ವಿವರಗಳನ್ನು ಒದಗಿಸಿ.’’ ಇಂತಹ ಒಟ್ಟು 7 ಪ್ರಶ್ನೆಗಳಿದ್ದವು. ಪ್ರಸ್ತುತ ಪ್ರಶ್ನೆಗಳಿಗೆ ಉತ್ತರವಾಗಿ ಆ ವರ್ಷ ಸೆಪ್ಟಂಬರ್ 4ರಂದು, ಆಗ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವರಾಗಿದ್ದ ಮುಳ್ಳಪ್ಪಲ್ಲಿ ರಾಮಚಂದ್ರನ್ ಅವರ ಕಡೆಯಿಂದ ಒಂದು ದೀರ್ಘ ಲಿಖಿತ ಹೇಳಿಕೆಯನ್ನು ಮಂಡಿಸಲಾಯಿತು. ಗಮ್ಮತ್ತೇನೆಂದರೆ ಅಷ್ಟೊಂದು ಸರಳವಾಗಿದ್ದ 7 ಪ್ರಶ್ನೆಗಳ ಪೈಕಿ ಯಾವ ಒಂದು ಪ್ರಶ್ನೆಗೂ ನೇರ ಉತ್ತರ ಲಭ್ಯವಿರಲಿಲ್ಲ. ಸಚಿವರು ಮೊದಲ ನಾಲ್ಕು ಪ್ರಶ್ನೆಗಳನ್ನು ಒಟ್ಟುಸೇರಿಸಿ ಅವುಗಳಿಗೆ ಮತ್ತು ಉಳಿದ ಮೂರು ಪ್ರಶ್ನೆಗಳನ್ನು ಒಟ್ಟುಸೇರಿಸಿ ಅವುಗಳಿಗೆ ಅನೇಕ ತಾಂತ್ರಿಕ ಪದಗಳನ್ನೊಳಗೊಂಡ, ಸಂಕೀರ್ಣವಾದ, ಸಗಟು ಉತ್ತರವೊಂದನ್ನು ನೀಡಿದ್ದರು. ಪಾಪ, ಪ್ರಶ್ನಿಸಿದವರು ಸೂಕ್ಷ್ಮ ದರ್ಶಕ ಹಿಡಿದು ಹುಡುಕಿದರೂ ಅವರಿಗೆ ತಮ್ಮ ಸರಳ ಪ್ರಶ್ನೆಗಳ ಉತ್ತರ ಎಲ್ಲೂ ಕಾಣಿಸಲಿಲ್ಲ.

2016ರಲ್ಲಿ ಆಗಿನ ಭಾರತದ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಸಂಸತ್ತಿನಲ್ಲಿ ‘‘ಲಭ್ಯ ಮಾಹಿತಿಗಳ ಪ್ರಕಾರ ಬಾಂಗ್ಲಾದೇಶದಿಂದ ಬಂದ 2 ಕೋಟಿ ಅಕ್ರಮ ವಲಸಿಗರು ಭಾರತದಲ್ಲಿದ್ದಾರೆ’’ ಎಂಬ ಹೇಳಿಕೆ ನೀಡಿದ್ದರು. ಆದರೆ ಈ ಬಗ್ಗೆ ತಮ್ಮ ಬಳಿ ಯಾವ ಪುರಾವೆ ಇದೆ? ಯಾವ ದಾಖಲೆಗಳ ಆಧಾರದಲ್ಲಿ ತಾವು ಈ ಹೇಳಿಕೆ ನೀಡಿದ್ದೀರಿ ಎಂದು ವಿಚಾರಿಸಿದಾಗ ಅವರ ಬಳಿಯೂ ತಾವು ಹೇಳಿಕೊಂಡ ಮಾಹಿತಿಯನ್ನು ಸಮರ್ಥಿಸುವುದಕ್ಕೆ ಯಾವುದೇ ದಾಖಲೆಯಾಗಲಿ ಪುರಾವೆಯಾಗಲಿ ಇರಲಿಲ್ಲ.

2017 ಎಪ್ರಿಲ್ ತಿಂಗಳಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಒಂದು ಅರ್ಜಿಯನ್ನು ವಿಚಾರಣೆಗೆತ್ತಿಕೊಳ್ಳಲಾಯಿತು. ‘ಸತ್ಯಮೇವ ಜಯತೇ’ ಎಂಬ ಸರಕಾರೇತರ ಸಂಸ್ಥೆಯು ಸಲ್ಲಿಸಿದ್ದ ಅರ್ಜಿಯಲ್ಲಿ, ‘‘ಸದ್ಯ ಬಾಂಗ್ಲಾದೇಶದಿಂದ ಬಂದಿರುವ 2 ಕೋಟಿಗೂ ಹೆಚ್ಚಿನ ಸಂಖ್ಯೆಯ ವಿದೇಶೀಯರು ಭಾರತದೊಳಗೆ ಅಕ್ರಮವಾಗಿ ಆಶ್ರಯ ಪಡೆದಿದ್ದಾರೆ. ಅವರು ಭಯೋತ್ಪಾದನೆ ಸಮೇತ ಅನೇಕ ಬಗೆಯ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದು ಅವರಿಂದಾಗಿ ದೇಶದ ಏಕತೆ ಮತ್ತು ಭದ್ರತೆಗೆ ಅಪಾಯವಿದೆ. ಅಂಥವರನ್ನೆಲ್ಲಾ ತಕ್ಷಣ ಗುರುತಿಸಿ ಮತದಾರರ ಪಟ್ಟಿಯಿಂದ ಅವರ ಹೆಸರುಗಳನ್ನು ಕಿತ್ತು ಹಾಕುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಆದೇಶ ನೀಡಬೇಕು’’ ಎಂದು ಮನವಿ ಮಾಡಲಾಗಿತ್ತು. ಆಗಿನ ಸುಪ್ರೀಮ್ ಕೋರ್ಟ್‌ನ ಮುಖ್ಯ ನ್ಯಾಯಾಧೀಶ ಜಸ್ಟಿಸ್ ಕೆ.ಎಸ್. ಕೇಹರ್ ನೇತೃತ್ವದ ಪೀಠವು ಅರ್ಜಿದಾರರ ಪರವಾದ ಎಲ್ಲಾ ವಾದಗಳನ್ನು ಆಲಿಸಿದ ಬಳಿಕ, ಅದನ್ನು ಗಂಭೀರವಾಗಿ ಪರಿಗಣಿಸುವುದಕ್ಕೆ ಬೇಕಾದ ಯಾವುದೇ ಮಾಹಿತಿ ಅಥವಾ ಆಧಾರವು ನ್ಯಾಯಾಲಯದ ಮುಂದೆ ಬಂದಿಲ್ಲವಾದ್ದರಿಂದ ಈ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ತೀರ್ಪು ನೀಡಿತು.

2018ರಲ್ಲಿ ಭಾರತದ ಗೃಹ ಸಚಿವ ಅಮಿತ್ ಶಾ ಅವರು, ಅಸ್ಸಾಮ್‌ನಲ್ಲಿ ರಾಜ್ಯ ಬಿಜೆಪಿ ಸರಕಾರವು ಹೊರಡಿಸಿದ ಓಖಅ ಮಸೂದೆಯ ಕುರಿತು ಮಾತನಾಡುತ್ತಾ, ಬಾಂಗ್ಲಾದೇಶದಿಂದ ಬರುವ ಅಕ್ರಮ ವಲಸಿಗರನ್ನು ಗೆದ್ದಲುಗಳಿಗೆ ಹೋಲಿಸಿದ್ದರು. ‘‘ನಮಗೆ ಸಿಗಬೇಕಾಗಿದ್ದ ಆಹಾರ ಮತ್ತು ಉದ್ಯೋಗಗಳನ್ನೆಲ್ಲಾ ಅವರು ಕಬಳಿಸುತ್ತಿದ್ದಾರೆ’’ ಎಂದು ಅವರು ಆರೋಪಿಸಿದರು. ‘‘ಅಸ್ಸಾಮ್‌ನಲ್ಲಿ ಬಿಜೆಪಿ ಸರಕಾರವು ಅಂತಹ 40 ಲಕ್ಷ ಆಕ್ರಮ ವಲಸಿಗರನ್ನು ಗುರುತಿಸಿದೆ. ನಮ್ಮ ಸರಕಾರವು ಅಂತಹ ಒಬ್ಬೊಬ್ಬ ವಲಸಿಗರನ್ನೂ ಹೆಕ್ಕಿಹೆಕ್ಕಿ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕುವ ಕೆಲಸ ಮಾಡಲಿದೆ’’ ಎಂದೂ ಅವರು ಹೇಳಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಬಾಂಗ್ಲಾದೇಶದ ವಾರ್ತಾ ಸಚಿವ ಹಸನುಲ್ ಹಕ್, ‘‘ಇದು ತೀರಾ ಅನಪೇಕ್ಷಿತ ಹೇಳಿಕೆ. ಬಾಂಗ್ಲಾದೇಶದ ಒಬ್ಬ ಪ್ರಜೆ ಕೂಡ ಅಕ್ರಮವಾಗಿ ಭಾರತದಲ್ಲಿ ನೆಲೆಸಿಲ್ಲ. ಬಂಗಾಳಿ ಭಾಷೆ ಮಾತನಾಡುವವರೆಲ್ಲಾ ಬಾಂಗ್ಲಾದೇಶೀಯರಲ್ಲ ಎಂಬುದನ್ನು ಅವರು ಗಮನಿಸಬೇಕು. ಈವರೆಗೆ ಭಾರತ ಸರಕಾರವು ಭಾರತದಲ್ಲಿ ಇದ್ದಾರೆನ್ನಲಾಗುವ ಬಾಂಗ್ಲಾದೇಶದ ಅಕ್ರಮ ವಲಸಿಗರ ಕುರಿತು ಬಾಂಗ್ಲಾದೇಶದ ಸರಕಾರದ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ. ಅವರ ಪಕ್ಷದವರು ಅವರಿಗೆ ಈ ವಿಷಯವನ್ನು ತಿಳಿಸುವರೆಂದು ಆಶಿಸುತ್ತೇನೆ’’ ಎಂದು ಸ್ಪಷ್ಟೀಕರಿಸಿದರು.

ವಲಸಿಗರ ಸಮಸ್ಯೆ ಎಂಬುದು ಒಂದು ಕಾಲ್ಪನಿಕ ಪೆಡಂಭೂತ ಎಂಬುದಕ್ಕೆ ಅತಿದೊಡ್ಡ ಪುರಾವೆ ಏನೆಂದರೆ ದೇಶದ ಗೃಹ ಸಚಿವಾಲಯ ಮತ್ತು ಗೃಹ ಸಚಿವರ ಸಹಿತ ಯಾರಿಗೂ ಈತನಕ ಆ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಲು ಸಾಧ್ಯವಾಗಿಲ್ಲ. ಒಂದೇ ಸರಕಾರದ ಬೇರೆಬೇರೆ ಸಚಿವರು ಬೇರೆಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅಂಕೆ ಸಂಖ್ಯೆಗಳನ್ನು ಮುಂದಿಡುತ್ತಿದ್ದಾರೆ.

1979ರಲ್ಲಿ ಅಸ್ಸಾಮ್ ವಿದ್ಯಾರ್ಥಿ ಆಂದೋಲನ ಆರಂಭವಾದಾಗಿನಿಂದ ಈತನಕ ಮತ್ತು ವಿಶೇಷವಾಗಿ 2014ರಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಕುರಿತು ಸಂಸತ್ ಸಹಿತ ವಿವಿಧ ವೇದಿಕೆಗಳಲ್ಲಿ ನಿಖರವಾದ ಪ್ರಶ್ನೆಗಳನ್ನು ಕೇಳಲಾಗಿದ್ದು, ಈ ತನಕವೂ ಈ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಒದಗಿಸಲಾಗಿಲ್ಲ. ಆದ್ದರಿಂದ ಅಕ್ರಮ ವಲಸಿಗರೆಂಬ ಪೆಡಂಭೂತದ ನಾಮ ಜಪಿಸುವವರ ನಡುವೆಯೇ ಕಲ್ಪಿತ ವಲಸಿಗರ ಸಂಖ್ಯೆಯ ಬಗ್ಗೆ ಘೋರ ಗೊಂದಲವಿದೆ. ಈ ಸಂಖ್ಯೆ ಸಾವಿರಗಳಿಂದ ಲಕ್ಷಗಳಿಗೆ ಮತ್ತು ಲಕ್ಷಗಳಿಂದ ಕೋಟಿಗಳಿಗೆ ತಲುಪುತ್ತಾ ಮತ್ತೆ ಸಾವಿರಗಳಿಗೆ ಮರಳಿ ಬರುತ್ತಲಿರುತ್ತವೆ. ಅಸ್ಸಾಮ್‌ನಲ್ಲಿ ಅಕ್ರಮ ವಲಸಿಗರನ್ನು ವಿರೋಧಿಸುವ ಹೆಸರಲ್ಲಿ ಭಾವುಕತೆ ಮತ್ತು ವಿದ್ವೇಷದ ಆಂದೋಲನ ನಡೆಸಿದವರು ಆ ಮೂಲಕ ಸಮಾಜವನ್ನು ಧ್ರುವೀಕರಿಸಿ ರಾಜ್ಯದಲ್ಲಿ ತಮ್ಮದೇ ಸರಕಾರವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು. ವಲಸಿಗರ ವಿಷಯವು ಅಧಿಕಾರ ಗದ್ದುಗೆಯನ್ನು ತಲುಪಲು ಒಂದು ಸುಲಭದ ಏಣಿಯಾಗಬಲ್ಲದು ಎಂದು ಅನೇಕರು ನಂಬುವುದಕ್ಕೆ ಇದು ಕಾರಣವಾಗಿ ಬಿಟ್ಟಿತು. ಆ ನಂಬಿಕೆ ಈಗಲೂ ಬಲಿಷ್ಠವಾಗಿದೆ ಮತ್ತು ವಲಸಿಗರ ವಿಷಯವನ್ನು ಈಗಲೂ ಸಮಾಜದ ಧ್ರುವೀಕರಣಕ್ಕಾಗಿ ಮತ್ತು ರಾಜಕೀಯ ಲಾಭಕ್ಕಾಗಿ ಧಾರಾಳ ಬಳಸಲಾಗುತ್ತಿದೆ.

ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬರುವವರೆಲ್ಲಾ ಮುಸ್ಲಿಮರಲ್ಲ

2013 ಜನವರಿಯ ಇಕೊನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ (EPW)ಯಲ್ಲಿ ಐರ್ಲಾಂಡ್‌ನ ಅಲ್‌ಸ್ಟರ್ (Ulster) ವಿಶ್ವವಿದ್ಯಾನಿಲಯದ ಭಾರತೀಯ ಸಂಜಾತ ಪ್ರೊಫೆಸರ್ ವಾನಿ ಬರೂವಾ ಅವರ ಸಂಶೋಧನಾತ್ಮಕ ಪ್ರಬಂಧವೊಂದು ಪ್ರಕಟವಾಗಿತ್ತು. ಅದರಲ್ಲಿ ಅವರು ಅಸ್ಸಾಮ್ ಮತ್ತು ಬಾಂಗ್ಲಾದೇಶದ ನಡುವೆ ನಡೆದ ವಲಸೆಗಳ ಕುರಿತಂತೆ ಹಲವು ಮಹತ್ವದ ಮಾಹಿತಿಗಳನ್ನು ಒದಗಿಸಿದ್ದಾರೆ. ಆ ಪ್ರಕಾರ ಕೆಲವು ನಿರ್ಣಾಯಕ ಮಾಹಿತಿಗಳು ಹೀಗಿವೆ:

1951 ಮತ್ತು 1961ರ ನಡುವೆ ಸುಮಾರು 9.41 ಲಕ್ಷ ಮಂದಿ ಹೊರಗಿನಿಂದ ಅಸ್ಸಾಮ್ ನೊಳಗೆ ಪ್ರವೇಶಿಸಿದ್ದಾರೆ. ಆದರೆ ಹಾಗೆ ಒಳಬಂದವರೆಲ್ಲರೂ ಮುಸ್ಲಿಮರಲ್ಲ. ಅವರಲ್ಲಿ 1.37ಲಕ್ಷ ಮಂದಿ (ಶೇ.15) ಮಾತ್ರ ಮುಸ್ಲಿಮರಾಗಿದ್ದರು ಮತ್ತು 8.04 ಲಕ್ಷ ಮಂದಿ (ಶೇ. 85) ಹಿಂದೂಗಳು ಅಥವಾ ಇತರ ಮತಸ್ಥರಾಗಿದ್ದರು!

ಹಾಗೆಯೇ ಮುಂದಿನ ದಶಕದಲ್ಲಿ ಅಂದರೆ 1961 ಮತ್ತು 1971ರ ನಡುವೆ ಸುಮಾರು 12.33 ಲಕ್ಷ ಮಂದಿ ಬಾಂಗ್ಲಾದೇಶದಿಂದ ಅಸ್ಸಾಮ್‌ಗೆ ವಲಸೆ ಬಂದಿದ್ದರು. ಅವರಲ್ಲಿ ಕೇವಲ 52,000 ಮಂದಿ (ಶೇ. 4) ಮಾತ್ರ ಮುಸ್ಲಿಮರಾಗಿದ್ದರು. ಉಳಿದ 11.81 ಲಕ್ಷ ಮಂದಿ (ಶೇ. 89) ಹಿಂದೂಗಳು ಮತ್ತು ಇತರ ಮತಸ್ಥರಾಗಿದ್ದರು!

ಆನಂತರದ ಎರಡು ದಶಕಗಳಲ್ಲಿ ಅಂದರೆ 1971 ಮತ್ತು 91ರ ನಡುವೆ ಸುಮಾರು 7.30 ಲಕ್ಷ ಮಂದಿ ಅಸ್ಸಾಮ್‌ಗೆ ವಲಸೆ ಬಂದಿದ್ದು ಅವರಲ್ಲಿ 5.02 ಲಕ್ಷ ಜನ (ಶೇ. 69) ಮುಸ್ಲಿಮರಾಗಿದ್ದರು ಹಾಗೂ 2.28 ಲಕ್ಷ ಜನ (ಶೇ. 31) ಹಿಂದೂಗಳು ಮತ್ತು ಇತರ ಮತಸ್ಥರಾಗಿದ್ದರು.

ವಲಸೆಯು ಒಳಮುಖವಾಗಿ ಮಾತ್ರವಲ್ಲ, ಹೊರಮುಖವಾಗಿಯೂ ನಡೆದಿದೆ

ಆದರೆ ಮುಂದಿನ ಎರಡು ದಶಕಗಳಲ್ಲಿ ಅಂದರೆ 1991 ಮತ್ತು 2001ರ ನಡುವೆ ಪರಿಸ್ಥಿತಿ ತದ್ವಿರುದ್ಧವಾಯಿತು. ‘‘ವಲಸೆಕೋರರು, ವಲಸೆಕೋರರು’’ ಎಂದೆಲ್ಲಾ ಸದಾ ಅರಚಾಡುತ್ತಿರುವ ಮಂದಿ ಇದನ್ನು ಎಂದೂ ಎಲ್ಲೂ ಪ್ರಸ್ತಾಪಿಸಿದ್ದೇ ಇಲ್ಲ. ಆ ಅವಧಿಯಲ್ಲಿ ಸುಮಾರು 4.52 ಲಕ್ಪ ಮಂದಿ ಅಸ್ಸಾಮ್‌ನಿಂದ ಹೊರಕ್ಕೆ ಹೋಗಿದ್ದಾರೆ. ಅವರಲ್ಲಿ 2.09 ಲಕ್ಷ ಮಂದಿ (ಶೇ. 47) ಮುಸ್ಲಿಮರು ಮತ್ತು 2.43 ಮಂದಿ (ಶೇ. 53) ಹಿಂದೂಗಳು ಮತ್ತು ಇತರ ಮತಸ್ಥರಾಗಿದ್ದರು. ಮತ್ತೆ ಮುಂದಿನ ದಶಕದಲ್ಲಿ ಅಂದರೆ 2001 ಮತ್ತು 2011ರ ನಡುವೆ ಸುಮಾರು 2.83 ಲಕ್ಷ ಮಂದಿ ಅಸ್ಸಾಮ್‌ನಿಂದ ಹೊರಹೋಗಿದ್ದಾರೆ. ಅವರಲ್ಲಿ 1.68 ಲಕ್ಷ ಮಂದಿ (ಶೇ. 59) ಮುಸ್ಲಿಮರು ಮತ್ತು 1.15 ಲಕ್ಷ ಮಂದಿ (ಶೇ. 40) ಹಿಂದೂಗಳು ಮತ್ತು ಇತರ ಮತಸ್ಥರಾಗಿದ್ದರು.

ನಮ್ಮ ದೇಶದಲ್ಲಿ ಅಪಪ್ರಚಾರದ ದುಷ್ಪ್ರಭಾವ ಎಷ್ಟು ದಟ್ಟವಾಗಿದೆಯೆಂದರೆ ಧರ್ಮವನ್ನು ಪ್ರಸ್ತಾಪಿಸದೆ, ಮೇಲೆ ನೀಡಲಾದ ಅಂಕಿ ಅಂಶಗಳನ್ನೇ ಮುಂದಿಟ್ಟರೆ, ಲಕ್ಷಗಟ್ಟಲೆ ಮಂದಿ ಬಾಂಗ್ಲಾದೇಶದಿಂದ ಅಸ್ಸಾಮ್‌ಗೆ ವಲಸೆ ಬಂದಿದ್ದಾರೆ ಮತ್ತು ಆ ವಲಸಿಗರೆಲ್ಲರೂ ಮುಸ್ಲಿಮರೇ ಆಗಿದ್ದರು ಎಂದು ಜನರು ಪ್ರಶ್ನಾತೀತವಾಗಿ ನಂಬಿಬಿಡುತ್ತಾರೆ. ಮಾತ್ರವಲ್ಲ, ಎಲ್ಲ ವಲಸೆಗಳೂ ಏಕಮುಖವಾಗಿ ಹೊರಗಿನವರು ಅಸ್ಸಾಮ್‌ನೊಳಕ್ಕೆ ಬರುವ ಸ್ವರೂಪದಲ್ಲಿ ಮಾತ್ರ ನಡೆದಿವೆಯೇ ಹೊರತು ಅಸ್ಸಾಮ್‌ನಲ್ಲಿದ್ದವರು ಬೇರೆಡೆಗೆ ವಲಸೆ ಹೋಗಿರುವ ಸಾಧ್ಯತೆಯೇ ಇಲ್ಲ ಎಂದು ಕೂಡಾ ಅವರು ನಂಬಿರುತ್ತಾರೆ.

ಬಾಂಗ್ಲಾದೇಶದಲ್ಲಿ ‘ಭಾರತೀಯ ಅಕ್ರಮವಲಸಿಗರು’ ಎಂಬ ಭೂತಕಾಟ

ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು ಭಾರತವನ್ನು ನಾಶಮಾಡುತ್ತಿದ್ದಾರೆಂಬ ಬೊಬ್ಬೆ ಭಾರತದಲ್ಲಿ ಮಾರ್ದನಿಸುತ್ತಿರುವಂತೆ, ಇದಕ್ಕೆ ಪರ್ಯಾಯ ಸ್ವರೂಪದ ಒಂದು ಬೊಬ್ಬೆ ಬಾಂಗ್ಲಾದೇಶದಲ್ಲೂ ಮೊಳಗುತ್ತಿದೆ. ಉದಾ:

2019 ಸೆಪ್ಟಂಬರ್ 29ರಂದು ಢಾಕಾದ ‘ಬಾಂಗ್ಲಾದೇಶ್ ಪ್ರೊತಿದಿನ್’ ಎಂಬ ಬಂಗಾಳಿ ಭಾಷೆಯ ದೈನಿಕದಲ್ಲಿ ಪ್ರಕಟವಾದ ಒಂದು ಲೇಖನದಲ್ಲಿ ‘‘ಭಾರತದಿಂದ ಬಂದಿರುವ ಹಿಂದಿ, ಬಿಹಾರಿ ಭಾಷೆ ಮಾತನಾಡುವ 5 ಲಕ್ಷದಷ್ಟು ಮಂದಿ, ಬಾಂಗ್ಲಾದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಇಂತಹ ಅಕ್ರಮ ವಲಸಿಗರ ಉಪಸ್ಥಿತಿಯು ದೇಶದ ಮೇಲೆ ತೀವ್ರ ದುಷ್ಪರಿಣಾಮಗಳನ್ನು ಬೀರುತ್ತಿದೆ. ಅವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಒಟ್ಟು ಬಾಂಗ್ಲಾದೇಶದಲ್ಲಿ ಈಗಾಗಲೇ 10 ಲಕ್ಷ ಅಕ್ರಮ ವಲಸಿಗರು ಇರುವ ಸಾಧ್ಯತೆ ಇದೆ.’’ ಎಂದು ಬರೆಯಲಾಗಿದೆ. ಲೇಖನದಲ್ಲಿ ಢಾಕಾ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿರುವ ಶೇಕ್ ಹಫೀಝುರ್ ರಹ್ಮಾನ್ ಅವರನ್ನು ಉದ್ಧರಿಸಿ, ‘‘ಬಾಂಗ್ಲಾದೇಶದ ಸರಕಾರವು ಇಲ್ಲಿರುವ ಅಕ್ರಮ ವಲಸಿಗರನ್ನು ತಡೆಯುವುದಕ್ಕೆ ಮತ್ತು ಅವರನ್ನು ಹುಡುಕಿ ಹೊರದಬ್ಬುವುದಕ್ಕೆಂದೇ ಒಂದು ವಿಶೇಷ ಸಂಸ್ಥೆಯನ್ನು ರಚಿಸಬೇಕು. ವಲಸಿಗರ ವಿಷಯದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದರೆ ದೇಶದ ಭದ್ರತೆಗೆ ಅಪಾಯವಿದೆ’’ ಎಂದು ಹೇಳಿದೆ.

ಇದು ಕೇವಲ ಒಂದು ಉದಾಹರಣೆ. ಬಾಂಗ್ಲಾದೇಶದ ಮಾಧ್ಯಮಗಳಲ್ಲಿ ಭಾರತದಿಂದ ಬರುವ ಅಕ್ರಮ ವಲಸಿಗರ ವಿರುದ್ಧ ಪದೇ ಪದೇ ಆಕ್ರೋಶ ಪ್ರಕಟವಾಗುತ್ತಲೇ ಇದೆ. ಭಾರತದ ಜೊತೆ ಅವರು ಪಾಕಿಸ್ತಾನದಿಂದ ಬರುವ ಅಕ್ರಮ ವಲಸಿಗರ ವಿರುದ್ಧವೂ ಬೆಂಕಿ ಉಗುಳುತ್ತಿರುತ್ತಾರೆ. ಆದರೆ ಈ ವಲಸಿಗರ ಭೂತ ಅಲ್ಲಿ ರಾಜಕೀಯ ಮಟ್ಟದಲ್ಲಿ ದೊಡ್ಡ ಯಶಸ್ಸನ್ನೇನೂ ಸಾಧಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎ.ಎಸ್. ಪುತ್ತಿಗೆ

contributor

Similar News