ಕಾನೂನು ಬಾಹಿರ ಮೂತ್ರಪಿಂಡ ದಾನ ನಿಯಂತ್ರಣಕ್ಕೆ ಕೇಂದ್ರದ ಕರಡು

Update: 2016-01-02 18:31 GMT

ಹೊಸದಿಲ್ಲಿ, ಜ.2: ಮೂತ್ರಪಿಂಡ ಕಸಿಯ ತುರ್ತು ಅಗತ್ಯವಿರುವವರಿಗೆ ಆದ್ಯತೆ ನೀಡುವುದರೊಂದಿಗೆ ಹೆಚ್ಚಿನ ಪಾರದರ್ಶಕತೆ ತರಲು ಹಾಗೂ ಕಾನೂನು ಬಾಹಿರ ಕಿಡ್ನಿ ವ್ಯಾಪಾರವನ್ನು ತಡೆಗಟ್ಟಲು ಕೇಂದ್ರ ಸರಕಾರವು ದಾನಿಯಿಂದ ಮೂತ್ರಪಿಂಡ ಪಡೆಯುವ ವಿಧಾನವನ್ನು ನಿಗದಿಪಡಿಸುವ ಗುರಿ ಹೊಂದಿರುವ ಕರಡು ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.
ಪ್ರಸ್ತಾಪಿತ ನಿಯಮಗಳಂತೆ, ಕಿಡ್ನಿ ಕಸಿ ಅಗತ್ಯವಿರುವ ರೋಗಿಗಳು ಆನ್‌ಲೈನ್ ಪ್ರಕ್ರಿಯೆಯ ಮೂಲಕ ಆಸ್ಪತ್ರೆಗಳಿಂದ ಕೇಂದ್ರಕ್ಕೆ ನೋಂದಾಯಿಸಲ್ಪಡಬೇಕು. ಕಿಡ್ನಿ ಕಸಿಯ ಅಗತ್ಯವನ್ನು ವೌಲ್ಯಮಾಪನ ನಡೆಸಿದ ಬಳಿಕ ಕಿಡ್ನಿ ಸಲಹಾ ಸಮಿತಿಯೊಂದು ಆ ನೋಂದಣಿಗೆ ಮಂಜೂರಾತಿ ನೀಡುತ್ತದೆ. ಒಮ್ಮೆ ಮಂಜೂರಾತಿ ದೊರಕಿತೆಂದರೆ ರೋಗಿಯನ್ನು ನಿರ್ದಿಷ್ಟ ಮಾರ್ಗಸೂಚಿಯ ಆಧಾರದಲ್ಲಿ ‘ಸಕ್ರಿಯ’ ಅಥವಾ ‘ಆದ್ಯತೆ’ಯ ಪಟ್ಟಿಯಲ್ಲಿರಿಸಲಾಗುವುದು.
ಪ್ರಕೃತ, ಮೂತ್ರಪಿಂಡ ದಾನವು ಕಾನೂನು ತೊಡಕಿನಿಂದ ಕೂಡಿದೆ. ಬಹುದೊಡ್ಡ ಬೇಡಿಕೆ-ಪೂರೈಕೆಗಳ ಕಂದರವು ಕಾಳ ಸಂತೆಗೆ ಕಾರಣವಾಗಿದೆ. ಭಾರತದಲ್ಲಿ 1ರಿಂದ 1.5 ಲಕ್ಷ ರೋಗಿಗಳಿಗೆ ಮೂತ್ರಪಿಂಡ ಕಸಿ ಅಗತ್ಯವಿದೆ. ಆದರೆ, ಕೇವಲ 3.5ರಿಂದ 4 ಸಾವಿರ ರೋಗಿಗಳಷ್ಟೇ ಅದನ್ನು ಪಡೆಯುತ್ತಾರೆಂದು ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಯಡಿ ಕೆಲಸ ಮಾಡುತ್ತಿರುವ ಅಂಗಾಂಗ ಮರುಜೋಡಣೆ ಬ್ಯಾಂಕಿಂಗ್ ಸಂಘಟನೆ (ಒಆರ್‌ಬಿಒ) ಅಂದಾಜಿಸಿದೆ. ಆದಾಗ್ಯೂ, ಈ ಅಂದಾಜು ವಾಸ್ತವ ಬೇಡಿಕೆಗಿಂತ ಬಹಳ ಕಡಿಮೆಯಿದೆ. ಏಕೆಂದರೆ, ಅನೇಕ ಪ್ರಕರಣಗಳು ಸಕಾಲದಲ್ಲಿ ಪತ್ತೆ ಹಚ್ಚಲ್ಪಡುವುದಿಲ್ಲ ಅಥವಾ ನೋಂದಾಯಿಸಲ್ಪಡುತ್ತಿಲ್ಲವೆಂಬುದು ಪರಿಣತರ ಅಂಬೋಣವಾಗಿದೆ.
ಆರೋಗ್ಯ ಸಚಿವಾಲಯದ ಅಧೀನದ ರಾಷ್ಟ್ರೀಯ ಅಂಗಾಂಗ ಹಾಗೂ ಅಂಗಾಂಶ ಕಸಿ ಸಂಘಟನೆಯು (ಎನ್‌ಒಟಿಟಿಒ) ಕಸಿಯನ್ನು ಬಯಸುವ ರೋಗಿಗಳ ದಾಖಲೆಯನ್ನು ಇಟ್ಟುಕೊಳ್ಳಲಿದೆ.
ಮೊದಲಿಗೆ, ನಗರದ ವೈಟಿಂಗ್ ಲಿಸ್ಟ್‌ನ ಆಧಾರದಲ್ಲಿ ಮಂಜೂರಾತಿ ನೀಡಲಾಗುವುದು. ಅದರಲ್ಲಿ ಪಡೆಯಲರ್ಹರಾದವರು ಇರದಿದ್ದಲ್ಲಿ ಬಳಿಕ ರಾಜ್ಯ ಹಾಗೂ ಆಮೇಲೆ ಇತರ ರಾಜ್ಯಗಳಿಗೆ ಮಂಜೂರಾತಿ ನೀಡಲಾಗುವುದು. ಅದರ ಬಳಿಕ ಇತರ ರಾಷ್ಟ್ರೀಯ ‘ರೊಟ್ಟೊ’ಗೆ ಮಂಜೂರಾತಿ ನೀಡಲಾಗುವುದೆಂದು ಕರಡು ಮಾರ್ಗಸೂಚಿ ತಿಳಿಸಿದೆ.
ತಮಿಳುನಾಡಿನಂತಹ ಕೆಲವು ರಾಜ್ಯಗಳು ಈಗಾಗಲೇ ಅಂತಹ ಸಮಿತಿಗಳನ್ನು ರಚಿಸಿಕೊಂಡಿದ್ದರೂ, ದೇಶಾದ್ಯಂತ ಕಿಡ್ನಿ ದಾನ ಬಹುತೇಕ ಅನಿಯಂತ್ರಿತವಾಗಿದೆ. ಇದುವರೆಗೆ ಅಂತಹ ದಾನಗಳ ಮೇಲೆ ನಿಗಾ ಇರಿಸಲು ಕೇಂದ್ರೀಯ ಮಾರ್ಗಸೂಚಿ ಇರಲಿಲ್ಲ.
ಈ ಕರಡು ಮಾರ್ಗಸೂಚಿಯನ್ನು ಕೇಂದ್ರ ಆರೋಗ್ಯ ಸಚಿವಾಲಯವು ಜ.1ರಂದು ಹೊರಡಿಸಿದ್ದು ಸಲಹೆ ಸೂಚನೆ ನೀಡಲು ಸಾರ್ವಜನಿಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News