ತಾನು ಬಾಂಗ್ಲಾದೇಶಿಯಲ್ಲ ಎಂದು ಸಾಬೀತುಗೊಳಿಸಲು ದೀರ್ಘಕಾಲದಿಂದ ಪರದಾಡುತ್ತಿರುವ ರವೀಂದ್ರ ಮಲಿಕ್

Update: 2024-05-02 13:37 GMT

Rokibuz Zaman | PC; scroll.in

ಗುವಾಹಟಿ : ಬಾಂಗ್ಲಾದೇಶದಿಂದ ಅಕ್ರಮ ವಲಸಿಗರ ವಿಷಯವು ಅಸ್ಸಾಂ ರಾಜಕೀಯದಲ್ಲಿ ಸದಾ ಅದೊಂದು ರೀತಿಯ ಉನ್ಮಾದಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಆಡಳಿತದ ಕಳೆದೊಂದು ದಶಕದಲ್ಲಿ ಬಿಜೆಪಿಯು ದೇಶಾದ್ಯಂತ ಎನ್‌ಸಿಆರ್ ಜಾರಿಯ ಭರವಸೆ ನೀಡುವುದರೊಂದಿಗೆ ಈ ರಾಜಕೀಯವು ಈಗ ದೇಶವ್ಯಾಪಿಯಾಗಿದೆ. ಇದರಲ್ಲಿ ಬಹುಮಟ್ಟಿಗೆ ಮರೆತು ಹೋಗಿರುವುದು ಈ ರಾಜಕೀಯದ ಹೊಡೆತಕ್ಕೆ ಸಿಲುಕಿರುವ ರವೀಂದ್ರ ಮಲಿಕ್ ಅವರಂತಹ ವ್ಯಕ್ತಿಗಳ ನೋವು ಮತ್ತು ಸಂಕಟಗಳು.

2016ರ ಸೆಪ್ಟೆಂಬರ್‌ನ ಒಂದು ದಿನ ಬೆಳಿಗ್ಗೆ ಪೋಲಿಸರು ಯಾವುದೇ ಮುನ್ಸೂಚನೆಯಿಲ್ಲದೆ ರವೀಂದ್ರ ಮಲಿಕ್‌ರನ್ನು ಭಾರತ-ಭೂತಾನ ಗಡಿಯ ಕುಗ್ರಾಮ ಒಕ್ಸಿಗುರಿಯ ಅವರ ಮನೆಯಿಂದ ಬಂಧಿಸಿದಾಗ ಆಕಾಶವೇ ಅವರ ತಲೆಯ ಮೇಲೆ ಕುಸಿದಿತ್ತು. ಮುಂದಿನ ನಾಲ್ಕು ವರ್ಷಗಳವರೆಗೆ ಬಾಂಗ್ಲಾದೇಶದಿಂದ ಅಸ್ಸಾಮಿಗೆ ಅಕ್ರಮವಾಗಿ ವಲಸೆ ಬಂದಿದ್ದ ಆರೋಪದಲ್ಲಿ ವಿದೇಶಿಯರು ಎಂದು ಘೋಷಿಸಲ್ಪಟ್ಟಿದ್ದ ಅಸ್ಸಾಮಿನ ಸಾವಿರಾರು ಬಂಗಾಳಿ ಭಾಷಿಕರೊಂದಿಗೆ ಬಂಧನ ಕೇಂದ್ರದಲ್ಲಿ ಅವರು ಕೊಳೆಯುತ್ತಿದ್ದರು.




 


2016,ಫೆ.15ರಂದು ವಿದೇಶಿಯರ ನ್ಯಾಯಮಂಡಳಿಯು ಮಲಿಕ್ ಅವರನ್ನು ವಿದೇಶಿಯರು ಎಂದು ಏಕಪಕ್ಷೀಯವಾಗಿ ಘೋಷಿಸಿತ್ತು. ಅಂದರೆ ತನ್ನ ವಿರುದ್ಧದ ಪ್ರಕರಣದ ಅರಿವೇ ಅವರಿಗೆ ಇರಲಿಲ್ಲ. ತಾನು ಬಾಂಗ್ಲಾದೇಶದಿಂದ ಬಂದಿದ್ದೇನೆ ಎಂಬ ಆರೋಪವನ್ನು ಮಲಿಕ್ ಬಲವಾಗಿ ನಿರಾಕರಿಸುತ್ತಾರೆ. ತನ್ನ ತಂದೆ ಮೂಲತಃ ಪಶ್ಚಿಮ ಬಂಗಾಳದ ಕೂಚ್‌ಬೆಹಾರದವರು ಮತ್ತು ಅವರ ಹೆಸರು 1966 ಮತ್ತು 1970ರಲ್ಲಿ ಅಸ್ಸಾಮಿನ ಒಕ್ಸಿಗುರಿ ಗ್ರಾಮದ ಮತದಾರರ ಪಟ್ಟಿಯಲ್ಲಿತ್ತು ಎಂದು ಮಲಿಕ್ ಪ್ರತಿಪಾದಿಸಿದರು. 1966ರ ಮತದಾರರ ಪಟ್ಟಿಯಲ್ಲಿ ತನ್ನ ತಂದೆಯ ಹೆಸರು ಇರುವಾಗ ತಾನು ವಿದೇಶಿಯನಾಗಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಬಡತನದ ಬೇಗೆಯಲ್ಲಿ ಬೇಯುತ್ತಿರುವ ಮಲಿಕ್ (61) ಹೊಟ್ಟೆಪಾಡಿಗಾಗಿ ಉರುವಲು ಕಟ್ಟಿಗೆಯನ್ನು ಮಾರಾಟ ಮಾಡುತ್ತಿದ್ದು,ತಗಡು ಹೊದಿಸಿರುವ ಮಣ್ಣಿನ ಗುಡಿಸಲಿನಲ್ಲಿ ವಾಸವಿದ್ದಾರೆ.

ನ್ಯಾಯಮಂಡಳಿಯ ಆದೇಶವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಮಲಿಕ್,ಬಡತನ ಮತ್ತು ಕಾನೂನಿನ ಅಜ್ಞಾನದಿಂದಾಗಿ ತನಗೆ ಪ್ರಕರಣದಲ್ಲಿ ಹೋರಾಟ ಸಾಧ್ಯವಾಗಿರಲಿಲ್ಲ ಎಂದ ಅರಿಕೆ ಮಾಡಿಕೊಂಡಿದ್ದರು. ತಮಗೆ ಎರಡು ಸಲ ನೋಟಿಸ್‌ಗಳು ಬಂದಿದ್ದವು,ಆದರೆ ಬಡತನ ಮತ್ತು ಅನಕ್ಷರತೆಯಿಂದಾಗಿ ಅವುಗಳನ್ನು ತಾವು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಮಲಿಕ್‌ರ ಕಿರಿಯ ಸೋದರ ಖಗೇಂದ್ರ ಮಲಿಕ್ ಹೇಳಿದರು.

ಆದರೆ ಮಲಿಕ್ ಅವರ ವಾದವನ್ನು ಉಚ್ಚ ನ್ಯಾಯಾಲಯವು ತಿರಸ್ಕರಿಸಿತ್ತು. ಪರಿಣಾಮವಾಗಿ ಅವರು ನಾಲ್ಕು ವರ್ಷಗಳ ಕಾಲ ಬಂಧನ ಕೇಂದ್ರದಲ್ಲಿ ಕೊಳೆಯಬೇಕಾಗಿತ್ತು. ಬಂಧನ ಕೇಂದ್ರದಲ್ಲಿ ಮೂರು ವರ್ಷಗಳಿಗೂ ಹೆಚ್ಚಿನ ಅವಧಿಯನ್ನು ಕಳೆದವರನ್ನು ಬಿಡುಗಡೆಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯದ ಆದೇಶದ ಬಳಿಕ 2020ರಲ್ಲಿ ಮಲಿಕ್ ಬಂಧಮುಕ್ತರಾಗಿದ್ದರು. ಆದರೆ ಈಗಲೂ ಅವರು ವಾರಕ್ಕೊಮ್ಮೆ ಪೋಲಿಸ್ ಠಾಣೆಗೆ ಹಾಜರಾಗಬೇಕಿದೆ.


 



ಅವರ ಬಡತನದಿಂದಾಗಿ ಇದೂ ಅವರಿಗೆ ಹೊರೆಯಾಗಿದೆ. ‘ಸುಮಾರು 20 ಕಿ.ಮೀ.ದೂರದಲ್ಲಿರುವ ಠಾಣೆಗೆ ತೆರಳಲು ನಾನು ಪ್ರತಿ ಸಲವೂ 100 ರೂ.ಗಳನ್ನು ವ್ಯಯಿಸುತ್ತಿದ್ದೇನೆ. ನನ್ನನ್ನು ಇದರಿಂದ ಮುಕ್ತಗೊಳಿಸಬೇಕು. ನಾವು ಬಡವರು,ಇನ್ನೂ ಎಷ್ಟು ಸಮಯ ನಾವು ಕಂಬದಿಂದ ಕಂಬಕ್ಕೆ ಓಡಬೇಕು?’ ಎಂದು ಮಲಿಕ್ ತನ್ನನ್ನು ಭೇಟಿಯಾದ ಸುದ್ದಿಗಾರರನ್ನು ಪ್ರಶ್ನಿಸಿದರು.

ಮಲಿಕ್ ಅವರ ಬಂಧನವು ಹೆಚ್ಚಾಗಿ ಬಂಗಾಳಿಗಳನ್ನು ಗುರಿಯಾಗಿಸಿಕೊಂಡಿರುವ ಅಸ್ಸಾಮಿನ ಜನಾಂಗೀಯ ರಾಜಕೀಯದ ಸುದೀರ್ಘ ಇತಿಹಾಸದ ಫಲಿತಾಂಶವಾಗಿದೆ.‘ನಾವು ಬಂಗಾಳಿಗಳಾಗಿರುವುದರಿಂದ ನಮಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ಬಂಗಾಳಿ ಮುಸ್ಲಿಮರು ಮತ್ತು ಬಂಗಾಳಿ ಹಿಂದುಗಳನ್ನು ಮಾತ್ರ ಹೊರಗಿನವರು ಎಂದು ಪರಿಗಣಿಸಲಾಗಿದೆ. ಅಸ್ಸಾಮಿಗಳಿಗೆ ಇದು ಅನ್ವಯಿಸುತ್ತಿಲ್ಲ ’ಎಂದು ಮಲಿಕ್ ಹೇಳಿದರು.

‘ನನ್ನ ಬಳಿ ಎಲ್ಲ ದಾಖಲೆಗಳಿದ್ದರೂ,ನಾನು ಭಾರತದಲ್ಲಿಯೇ ಜನಿಸಿದ್ದರೂ ನನ್ನನ್ನು ಬಾಂಗ್ಲಾದೇಶಿ ಎಂದು ಪರಿಗಣಿಸಲಾಗಿದೆ. ಇನ್ನೂ ಎಷ್ಟು ವರ್ಷಗಳ ಕಾಲ ನಾನು ಈ ಪ್ರಕರಣದಲ್ಲಿ ಹೋರಾಡಬೇಕು? ನಾನು ಇನ್ನೂ ಹತ್ತು ವರ್ಷ ಬದುಕುತ್ತೇನೆಯೇ? ಸರಕಾರವು ನೆರವಾಗದಿದ್ದರೆ ಮತ ಹಾಕುವುದಕ್ಕೆ ಏನು ಅರ್ಥವಿದೆ?’ ಎಂದು ಮಲಿಕ್ ಪ್ರಶ್ನಿಸಿದರು.

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ತನ್ನನ್ನು ಬಂಧಿಸಲಾಗಿದ್ದರೂ ಅಸ್ಸಾಮಿನ ಹೆಚ್ಚಿನ ಹಿಂದು ಬಂಗಾಳಿಗಳಂತೆ ಮಲಿಕ್ ಕುಟುಂಬ ಈಗಲೂ ಬಿಜೆಪಿಯನ್ನು ಬೆಂಬಲಿಸುತ್ತಿದೆ. ತಮಗೆ ಬೇರೆ ಆಯ್ಕೆ ಇಲ್ಲ ಎಂದು ಮಲಿಕ್ ಹೇಳಿದರು.

ಸೌಜನ್ಯ : scroll.in

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News