ಕುಡಿತ ನಿಷೇಧ: ಕೇರಳ ಮಾದರಿಯಾದೀತೇ?

Update: 2016-01-04 18:02 GMT

 ಸಾಮಾಜಿಕ ಮತ್ತು ಕೌಟುಂಬಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ, ಮಹಾತ್ಮರ ಕನಸನ್ನು ನನಸಾಗಿಸುವಲ್ಲಿ ಕೇರಳ ರಾಜ್ಯದ ಹೆಜ್ಜೆ ಸ್ತುತ್ಯಾರ್ಹ. ಇತರ ರಾಜ್ಯಗಳೂ ಇದೇ ಹೆಜ್ಜೆ ಹಾಕಿದರೆ ದೇಶದ ಹಲವು ಸಾಮಾಜಿಕ ಮತ್ತು ಬಡ- ಮಧ್ಯಮ ವರ್ಗದ ಅರ್ಥಿಕ ಸಮಸ್ಯೆಗಳು ಪರಿಹಾರ ಕಾಣುವುದರಲ್ಲಿ ಸಂದೇಹವಿಲ್ಲ.

     ರಾಜ್ಯದಲ್ಲಿ ಸುಮಾರು 1,700 ಮದ್ಯದ ಅಂಗಡಿ ಗಳನ್ನು ತೆರೆಯಲು ಅನುಮತಿ ದೊರಕುವ ನಿರೀಕ್ಷೆ ಇದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಹೊಸ ಅಂಗಡಿಗಳನ್ನು ತೆರೆಯಲು ಅನುಮತಿ ಕೊಡದೇ ಇರುವುದು ಮತ್ತು ಈ ನಿಟ್ಟಿನಲ್ಲಿ ಸಾಕಷ್ಟು ಬೇಡಿಕೆಗಳು ಮತ್ತು ಒತ್ತಾಸೆಗಳಿದ್ದು ಮತ್ತು ತನ್ಮೂಲಕ ರಾಜ್ಯದ ಬೊಕ್ಕಸಕ್ಕೆ ಆದಾಯವನ್ನು ಹೆಚ್ಚಿಸಲು, ಸರಕಾರ ಇಂತಹ ಚಿಂತನೆ ಇಲ್ಲವೆಂದು ಹೇಳಿದರೂ, ಈ ಸಾಧ್ಯತೆಯನ್ನು ಪ್ರಸಕ್ತ ವಿದ್ಯಮಾನದಲ್ಲಿ ತಳ್ಳಿಹಾಕಲಾಗದು. ರಾಜ್ಯದ ಬೊಕ್ಕಸಕ್ಕೆ ಸುಮಾರು ಶೇ. 22 ವರಮಾನವನ್ನು ತಂದು ಕೊಡುವ ಮದ್ಯವನ್ನು ಹಗುರವಾಗಿ ತೆಗೆದುಕೊಳ್ಳುವ ಮಾತೇ ಇಲ್ಲ ಎನ್ನುವ ಸಮಾಜ ಸುಧಾರಕರೊಬ್ಬರ ಅಭಿಪ್ರಾಯದಲ್ಲಿ ಅರ್ಥವಿಲ್ಲದಿಲ್ಲ. ಈ ನಿಟ್ಟಿನಲ್ಲಿ ನಿರ್ಣಯ ತೆಗೆದುಕೊಳ್ಳಲು ಸ್ವಲ್ಪ ವಿಳಂಬವಾಗಬಹುದು. ಸಾರ್ವಜನಿಕರ ಮತ್ತು ಪ್ರಜ್ಞಾವಂತರ ವಿರೋಧದ ಹೊರತಾಗಿಯೂ ಈ ನಿಟ್ಟಿನಲ್ಲಿ ಸಕಾರಾತ್ಮಕ ನಿರ್ಣಯ ಖಂಡಿತ ಎಂದು ರಾಜಕೀಯ ವೀಕ್ಷಕರು ಒಕ್ಕೊರಳಿನಿಂದ ಹೇಳುತ್ತಾರೆ.
    ಸರಕಾರ ಮದ್ಯ ಕುಡಿಯಿರಿ ಎಂದು ಜನತೆಗೆ ನೇರವಾಗಿ ಹೇಳದಿದ್ದರೂ, ಅದರ ಧೋರಣೆ ಪರೋಕ್ಷವಾಗಿ ಇದನ್ನೇ ಹೇಳುತ್ತಿದೆ. ಮುಖ್ಯವಾಗಿ ಟೆಕ್ಕಿಗಳ ಬೇಡಿಕೆಗೆ ಸ್ಪಂದಿಸಿ, ವಾರಾಂತ್ಯ ಎರಡು ದಿನ ರಾತ್ರಿ ಒಂದು ಘಂಟೆಯವರೆಗೂ ಬಾರ್ ಮತ್ತು ರೆಸ್ಟಾರೆಂಟ್‌ಗಳು ತೆರೆದಿಡಲು ಅನುಮತಿ ಕೊಟ್ಟಿದೆ. ಟೆಕ್ಕಿಗಳನ್ನು ಮತ್ತು ಇತರರನ್ನು ಈ ನಿಟ್ಟಿನಲ್ಲಿ ಬೇರ್ಪಡಿಸಲು ಸಾಧ್ಯವೇ? ಕುಡಿದು ಹೊರಬಂದು ವಾಹನ ಅಪಘಾತಗಳಾಗುವುದನ್ನು ತಪ್ಪಿಸಲು ಸಿಟಿ ಬಸ್ಸುಗಳನ್ನು ಕೆಲವು ಮಾರ್ಗದಲ್ಲಿ ಮಧ್ಯರಾತ್ರಿ ನಂತರವೂ ಓಡಿಸಲು ಬೇಡಿಕೆ ಇದ್ದು, ಇದೂ ಕೂಡಾ ಮುಂದಿನ ದಿನಗಳಲ್ಲಿ ಕಾರ್ಯಗತವಾದರೆ ಆಶ್ಚರ್ಯವಿಲ್ಲ. ಅಬಕಾರಿ ಇನ್‌ಸ್ಪೆಕ್ಟರ್‌ಗಳು ಮಾರಾಟ ಹೆಚ್ಚಿಸಿ ಎಂದು ಮದ್ಯದ ಅಂಗಡಿಯ ಮೇಲೆ ಒತ್ತಡ ಹೇರುತ್ತಿದ್ದಾರಂತೆ. ಸರಿಯಾದ ಒಳ ‘‘ರೂಟ್’’ ಗೊತ್ತಿದ್ದರೆ ವೈನ್ ಶಾಪ್ ಹೊರತಾಗಿ ಕೆಲವು ದಿನಸಿ ಅಂಗಡಿಯಲ್ಲೂ ಮದ್ಯ ಸಿಗುತ್ತದೆಯಂತೆ. ಹೊಸ ವರ್ಷದ ಆಚರಣೆ ಸಮಯದಲ್ಲಿ ಕುಡಿದು ತೂರಾಡುತ್ತ ಪಾರ್ಟಿಗಳಿಂದ ಹೊರಬರುವವರನ್ನು ವ್ಯಾಲೆಟ್ ಪಾರ್ಕಿಂಗ್ ಮಾದರಿ ಸುರಕ್ಷಿತವಾಗಿ ಮನೆಮುಟ್ಟಿಸುವ ಚಿಂತನೆ ಕೂಡಾ ಇದೆಯಂತೆ.
       ಮಹಾತ್ಮಾ ಹುಟ್ಟಿದ ನಾಡಿನಲ್ಲಿ, ಅವರ ತತ್ವ ಮತ್ತು ಆದರ್ಶಗಳ ಹಿನ್ನೆಲೆಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ರಾಜಕೀಯ ಪಕ್ಷಗಳು, ಮದ್ಯಪಾನ ಸಂಯಮ ಮಂಡಳಿಗಳನ್ನೂ ಇಟ್ಟುಕೊಂಡು, ಕುಡಿತಕ್ಕೆ ಈ ರೀತಿ ಪ್ರೇರೇಪಿಸುವುದು ಪ್ರಜ್ಞಾವಂತರನ್ನು ಕಂಗೆಡಿಸಿದೆ. ಹಾಗಿದ್ದರೆ ಈ ಮದ್ಯಪಾನ ಸಂಯಮ ಮಂಡಳಿಗಳಾದರೂ ಏಕೆ? ಬಾಟಲಿ ತೆರೆದಿಟ್ಟು ಕಡಿಮೆ ಕುಡಿಯಿರಿ ಎಂದು ಹೇಳುವುದು ಹಾಸ್ಯಾಸ್ಪದವಲ್ಲವೇ? ತಂಬಾಕು ಅವುಗಳನ್ನು ಬಳಸುವವರನ್ನು ಮಾತ್ರ ಸಾವಿನ ದವಡೆಗೆ ನೂಕಬಹುದು. ಆದರೆ, ಮದ್ಯ ಇಡೀ ಕುಟುಂಬವನ್ನು ಬೀದಿಗೆ ದೂಡುತ್ತದೆ ಎನ್ನುವ ಅಭಿಪ್ರಾಯದಲ್ಲಿ ಅರ್ಥವಿಲ್ಲದಿಲ್ಲ. ಬಹುತೇಕ ಪ್ರತಿಯೊಂದು ಕ್ರಿಮಿನಲ್ ಅಪರಾಧಗಳ ಹಿಂದೆ ಕುಡಿತದ ಪರಿಣಾಮ ಇರುತ್ತದೆ ಮತ್ತು ಕುಡಿತದ ಮೂಲಕ ಮಾನಸಿಕ ಸಮತೋಲನ ಕಳೆದುಕೊಂಡಾಗಲೇ ಮನುಷ್ಯ ಅಪರಾಧ ಎಸಗುತ್ತಾನೆ ಎಂದು ಸಮಾಜ ವಿಜ್ಞಾನಿಗಳು ಹೇಳುತ್ತಾರೆ. ಕುಡಿತದ ದುಷ್ಪರಿಣಾಮವನ್ನು ಕಣ್ಣಾರೆ ಕಂಡ ಮಹಾತ್ಮಾ ಗಾಂಧೀಜಿ ಸ್ವಾತಂತ್ರ್ಯ ಸಂಗ್ರಾಮಕ್ಕಿಂತಲೂ ಪಾನನಿರೋಧಕ್ಕೆ ಹೆಚ್ಚಿನ ಒತ್ತು ಕೊಡಲು ಒಮ್ಮೆ ಚಿಂತಿಸಿದ್ದರಂತೆ
       ನೂರಕ್ಕೆ ನೂರರಷ್ಟು ಸಾಕ್ಷರತೆ ಇರುವ ಕೇರಳದಲ್ಲಿ ಮದ್ಯದ ವಾರ್ಷಿಕ ವ್ಯವಹಾರ 20,000 ಕೋಟಿ ರೂ.ಗಳು ಅಗಿದ್ದು, ದೇಶದ 16% ಅಲ್ಕೋಹಾಲ್ ಇಲ್ಲಿ ಖರ್ಚಾಗುತ್ತಿತ್ತಂತೆ. ಈ ಪ್ರಮಾಣವನ್ನು ನೋಡಿದ ಅಲ್ಲಿನ ಸರಕಾರ, ಕುಡಿತದಿಂದಾಗುವ ಸಾಮಾಜಿಕ ಪರಿಣಾಮವನ್ನು ಗ್ರಹಿಸಿ, ಮುಖ್ಯವಾಗಿ ಬಡ ಮಹಿಳೆ ಮತ್ತು ಮಕ್ಕಳ ಒತ್ತಾಸೆಗೆ ಸ್ಪಂದಿಸಿ ರಾಜ್ಯಾದ್ಯಂತ ಮದ್ಯವನ್ನು ನಿಷೇಧಿಸಿದೆ. ಈಗ ಸುಪ್ರಿಮ್ ಕೋರ್ಟ್ ಕೂಡಾ ಈ ನಿಷೇಧವನ್ನು ಎತ್ತಿ ಹಿಡಿದಿದೆ. ಈ ನಿಷೇಧ ಜಾರಿಗೆ ಬಂದ ಮೇಲೆ ಸುಮಾರು 730 ಹೊಟೇಲ್ ಬಾರ್ ಮತ್ತು ರೆಸ್ಟಾರೆಂಟ್‌ಗಳು ಮುಚ್ಚಿದ್ದು, ಮದ್ಯ ಸೇವನೆಯಲ್ಲಿ 20-21% ಕಡಿಮೆಯಾಗಿದೆಯಂತೆ. ಹಾಗೆಯೇ ಸರಕಾರದ ಬೊಕ್ಕಸಕ್ಕೆ 4,000 ಕೋ.ರೂ. ಆದಾಯ ಖೋತಾ ಆಗಿದೆಯಂತೆ. ಈಗ ಕೇರಳ ದಲ್ಲಿ ಕೇವಲ ಪಂಚತಾರಾ ಹೊಟೇಲ್‌ಗಳಲ್ಲಿ ಮಾತ್ರ ಮದ್ಯ ಲಭ್ಯವಿದೆ. ಮುಂದಿನ ದಿನಗಳಲ್ಲಿ ಶೇ. 42 ಆಲ್ಕೋಹಾಲ್ ಇರುವ ಮದ್ಯದ ಬದಲಿಗೆ ಶೇ. 8 ಆಲ್ಕೋಹಾಲ್ ಇರುವ ಬಿಯರ್ ಮತ್ತು ವೈನ್ ಬಾರ್‌ಗಳನ್ನು ರಾಜ್ಯಾದ್ಯಂತ ಕಾಣಬಹುದು. ಅದರೆ, ಶೇ. 8 ಆಲ್ಕೋಹಾಲ್ ಇರುವ ಬಿಯರ್ ಮತ್ತು ವೈನ್‌ನಿಂದ ಕುಡಿಯುವವರು ತೃಪ್ತಿ ಹೊಂದಬಹುದೇ?
  ಈ ನಿಷೇಧ ಯಾವ ರೀತಿ ಜಾರಿಗೆ ಬರಬಹುದು ಎನ್ನುವುದು ಚರ್ಚಾಸ್ಪದ ವಿಷಯ. ಅದರೆ ಸಾಮಾಜಿಕ ಮತ್ತು ಕೌಟುಂಬಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನ ಲ್ಲಿ, ಮಹಾತ್ಮರ ಕನಸನ್ನು ನನಸಾಗಿಸುವಲ್ಲಿ ಕೇರಳ ರಾಜ್ಯದ ಈ ಹೆಜ್ಜೆ ಸ್ತುತ್ಯಾರ್ಹ. ಇತರ ರಾಜ್ಯಗಳೂ ಇದೇ ಹೆಜ್ಜೆ ಹಾಕಿದರೆ ದೇಶದ ಹಲವು ಸಾಮಾಜಿಕ ಮತ್ತು ಬಡ- ಮಧ್ಯಮ ವರ್ಗದ ಆರ್ಥಿಕ ಸಮಸ್ಯೆಗಳು ಪರಿಹಾರ ಕಾಣುವುದರಲ್ಲಿ ಸಂದೇಹವಿಲ್ಲ. ಅದರೆ, ಆ ರಾಜಕೀಯ ಇಚ್ಛಾ ಶಕ್ತಿ ಇದೆಯೇ?

Writer - ರಮಾನಂದ ಶರ್ಮಾ

contributor

Editor - ರಮಾನಂದ ಶರ್ಮಾ

contributor

Similar News