ವೃತ್ತಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ- ಡಾ.ಬೋರಲಿಂಗಯ್ಯಸಮಿತಿ ವರದಿ ಜಾರಿಗೆ ಒತ್ತಾಯ

Update: 2016-01-20 18:37 GMT

ತಿಪಟೂರು, ಜ.20:ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು ಕೃಷಿ ಇತ್ಯಾದಿ ತರಗತಿಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಬೋಧಿಸುವ ಕುರಿತು ಹಂಪಿ ವಿವಿ ವಿಶ್ರಾಂತ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ ನೀಡಿರುವ ವರದಿಯನ್ನು ಸರಕಾರ ಕೂಡಲೇ ಜಾರಿಗೆ ತರಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಕೆ.ಎಸ್. ಸದಾಶಿವಯ್ಯ ಆಗ್ರಹಿಸಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ವೃತ್ತಿಪರ ಕೋರ್ಸುಗಳಲ್ಲಿ ಕನ್ನಡ ಕಡ್ಡಾಯ ಕುರಿತು ಅಧ್ಯಯನ ನಡೆಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ ಹಿ.ಚಿ.ಬೋರಲಿಂಗಯ್ಯ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯ ವರದಿಯನ್ನು ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ರವರಿಗೆ ವರದಿ ಸಲ್ಲಿಸಿದ್ದು, ಸರಕಾರ ಕೂಡಲೇ ಜಾರಿಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದರು.


ಪದವಿ, ಉನ್ನತ ಶಿಕ್ಷಣ ಕಾಲೇಜುಗಳಲ್ಲಿ ಇಂಗ್ಲಿಷ್ ಕಡ್ಡಾಯವಾಗಿದ್ದು, ಕನ್ನಡ ಕಡ್ಡಾಯವಾಗಿಲ್ಲ. ನಮ್ಮ ವಿವಿಗಳಲ್ಲಿ ವೃತ್ತಿಶಿಕ್ಷಣದಲ್ಲಿ ಕನ್ನಡಬೋಧನೆ ಕಡ್ಡಾಯಮಾಡುವ ಪ್ರಯತ್ನಗಳು ಹಿಂದಿನಿಂದಲೂ ನಡೆದಿದ್ದವು. ಆದರೆ ಉನ್ನತ ಶಿಕ್ಷಣ ಇಲಾಖೆಯು ಅಧಿಕೃತವಾಗಿ ಆದೇಶ ಹೊರಡಿಸದೆ ಇದ್ದುದರಿಂದ ಈ ವರೆಗೆ ಜಾರಿಯಾಗಲು ಸಾಧ್ಯವಾಗಿಲ್ಲ ಎಂದರು. ವೃತ್ತಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯದ ಜೊತೆಗೆ ಪದವಿ ಕಾಲೇಜುಗಳಲ್ಲೂ ಇಂಗ್ಲಿಷನ್ನು ಒಂದು ಭಾಷೆಯಾಗಿ ಬೋಧಿಸುವಂತೆ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಬೋಧಿಸಬೇಕು ಎಂದು ಸಮಿತಿ ತನ್ನ ಶಿಫಾರಸ್ಸಿನಲ್ಲಿ ತಿಳಿಸಿದೆ. ಕನ್ನಡಕಡ್ಡಾಯ ಭೋದನೆ ಕುರಿತಂತೆ 10 ಪ್ರಮುಖ ಶಿಫಾರಸು ಮಾಡಲಾಗಿದೆ. ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳು ಕನ್ನಡ ಭೋದನೆ ಕಡ್ಡಾಯಗೊಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಈ ಕುರಿತು ಸರಕಾರ ಆದೇಶ ಹೊರಡಿಸಿದರೆ ಅದನ್ನು ಪಾಲಿಸಲು ಸಿದ್ಧ ಎಂದು ಹೇಳಿದೆ. ಆದ್ದರಿಂದ ಸರಕಾರ ಹಿ.ಚಿ.ಬೋರಲಿಂಗಯ್ಯ ಸಮಿತಿ ಶಿಫಾಸುಗಳನ್ನು ಉನ್ನತ ಶಿಕ್ಷಣ ಪರಿಷತ್ ಮುಂದಿಟ್ಟು ಚರ್ಚಿಸಿದ ಬಳಿಕ ಕೂಡಲೇ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಸದಾಶಿವಯ್ಯ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News