ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ | ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ: ಗೃಹ ಸಚಿವ ಡಾ.ಪರಮೇಶ್ವರ್

Update: 2023-12-01 05:41 GMT

ಬೆಂಗಳೂರು, ಡಿ.1: ಬೆಂಗಳೂರಿನಲ್ಲಿ 15 ಖಾಸಗಿ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿರುವ ಎಲ್ಲ ಕಡೆಗಳಲ್ಲಿ ಎಲ್ಲ ಕಡೆ ಸಿಐಡಿ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಸ್ಕ್ವಾಡ್ ಗಳನ್ನು ಕಳುಹಿಸಿ ತಪಾಸಣೆ ನಡೆಸುವಂತೆ ಹಾಗೂ ಕಟ್ಟೆಚ್ಚರ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚಿಸಿದ್ದಾರೆ.

ಶಾಲೆಗಳಲ್ಲಿ ಬಾಂಬ್ ಬೆದರಿಕೆ ಪ್ರಕರಣದ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ.

"ಬೆದರಿಕೆ ಬಂದಿರುವ 15 ಶಾಲೆಗಳಲ್ಲೂ ಪೊಲೀಸ್ ಅಧಿಕಾರಿಗಳು ತಪಾಸಣೆ ನಡೆಸಲಿದ್ದಾರೆ. ಕಳೆದ ವರ್ಷವು ಇದೇ ರೀತಿ ಕರೆ ಬಂದಿತ್ತು ಎನ್ನಲಾಗುತ್ತಿದೆ. ಪ್ರಕರಣವನ್ನು ಲಘುವಾಗಿ ತೆಗೆದುಕೊಂಡಿಲ್ಲ. ಗಂಭೀರವಾಗಿ ಪರಿಗಣಿಸಲಾಗಿದೆ. ಬಾಂಬ್ ಬೆದರಿಕೆಯ ಇ ಮೇಲ್ ಬಗ್ಗೆ ಪರಿಶಿಲೀಸುವಂತೆ ಸಿಐಡಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗೃಹಸಚಿವರು ತಿಳಿಸಿದ್ದಾರೆ.

ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮೂಲ ಪತ್ತೆ ಹಚ್ಚುವವರೆಗೂ ಬಿಡುವುದಿಲ್ಲ. ತುಮಕೂರಿನಿಂದ ಬೆಂಗಳೂರಿಗೆ ವಾಪಾಸ್ ಆದ ನಂತರ ಇಲಾಖೆಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಪೋಷಕರು ಮಕ್ಕಳು ಆತಂಕಪಡುವುದು ಬೇಡ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ಬಸವೇಶ್ವರ ನಗರ, ಸದಾಶಿವ ನಗರ ಹಾಗೂ ಯಲಹಂಕದಲ್ಲಿನ 15 ಖಾಸಗಿ ಶಾಲೆಗಳಿಗೆ ಕಿಡಿಗೇಡಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ. ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮಕ್ಕಳನ್ನು ಶಾಲೆಯಿಂದ ಮನೆಗೆ ವಾಪಸ್ ಕಳುಹಿಸಿದ್ದಾರೆ. ಆತಂಕಗೊಂಡ ಪೋಷಕರು ಕೂಡಾ ಶಾಲೆಗಳಿಗೆ ಓಡೋಡಿ ಬಂದು ತಮ್ಮ- ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಕೆಲವು ಶಾಲೆಗಳಿಗೆ ರಜೆ ಕೂಡಾ ಸಾರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News