ವೇಮುಲ ಆತ್ಮಹತ್ಯೆ ಪ್ರಕರಣ; ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2016-02-02 14:52 GMT

ಹೊಸದಿಲ್ಲಿ,ಫೆ.2: ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಪೊಲೀಸರ ಹಲ್ಲೆಯಿಂದ ಆಕ್ರೋಶಗೊಂಡ ದಿಲ್ಲಿಯ ವಿವಿಧ ವಿವಿಗಳ ವಿದ್ಯಾರ್ಥಿಗಳು ಮಂಗಳವಾರ ಇಲ್ಲಿಯ ಪೊಲೀಸ್ ಕೇಂದ್ರ ಕಚೇರಿಯೆದುರು ಪ್ರತಿಭಟನೆ ನಡೆಸಿದರಲ್ಲದೆ,ಆದಾಯ ತೆರಿಗೆ ಕಚೇರಿ ಕಟ್ಟಡ(ಐಟಿಒ)ದ ಬಳಿ ವಾಹನಗಳ ಸಂಚಾರಕ್ಕೆ ತಡೆಯನ್ನೊಡ್ಡಿದರು.
ಸೋಮವಾರ ಇಲ್ಲಿಯ ಆರೆಸ್ಸೆಸ್ ಮುಖ್ಯ ಕಚೇರಿಯೆದುರು ಹೈದ್ರಾಬಾದ್ ವಿವಿಯ ದಲಿತ ವಿದ್ಯಾರ್ಥಿ ರೋಹಿತ್ ವೇಮುಲರ ಆತ್ಮಹತ್ಯೆಯನ್ನು ಖಂಡಿಸಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ವಿದ್ಯಾರ್ಥಿಗಳ ಗುಂಪೊಂದನ್ನು ಲಾಠಿಗಳಿಂದ ಥಳಿಸುತ್ತಿರುವ ಮತ್ತು ವಿದ್ಯಾರ್ಥಿನಿಯರ ಕೂದಲನ್ನು ಹಿಡಿದು ಎಳೆದೊಯ್ಯುತ್ತಿರುವ ವೀಡಿಯೊ ವ್ಯಾಪಕ ಆಕ್ರೋಶವನ್ನು ಸೃಷ್ಟಿಸಿದೆಯಲ್ಲದೆ, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳುವಂತೆ ಕಾಂಗ್ರೆಸ್ ಮತ್ತು ಆಪ್ ಆಗ್ರಹಿಸಿವೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೆಸಗಿದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕ್ರಾಂತಿಕಾರಿ ಯುವ ಸಂಘಟನ್(ಕೆವೈಎಸ್) ಮತ್ತು ಎಡರಂಗ ಬೆಂಬಲಿತ ಅಖಿಲ ಭಾರತ ವಿದ್ಯಾರ್ಥಿ ಸಂಘ(ಎಐಎಸ್‌ಎ)ಗಳಿಗೆ ಸೇರಿದ ವಿದ್ಯಾರ್ಥಿಗಳು ಪೊಲೀಸ್ ಕೇಂದ್ರಕಚೇರಿಯೆದುರು ಮತಪ್ರದರ್ಶನ ನಡೆಸಿದರು.
ಸರಕಾರವು ನಮ್ಮ ಬೇಡಿಕೆಗಳನ್ನು ಆಲಿಸುತ್ತಿಲ್ಲ. ಪೊಲೀಸರು ನಮ್ಮ ಮೇಲೆ ದಾಳಿಗಳನ್ನು ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು? ರೋಹಿತ್‌ರಂತೆ ನಾವೂ ನೇಣು ಹಾಕಿಕೊಂಡು ಅವರ ದೌರ್ಜನ್ಯಗಳಿಗೆ ಬಲಿಯಾಗಬೇಕೇ ಎಂದು ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಶೋರಾ ಪ್ರಶ್ನಿಸಿದರು.
ಪೊಲೀಸರು ಏಕೆ ಮತ್ತು ಯಾರ ಸೂಚನೆಗಳ ಮೇಲೆ ಈ ರೀತಿ ವರ್ತಿಸಿದರು ಎನ್ನುವುದನ್ನು ಪೊಲೀಸ್ ಆಯುಕ್ತರು ದೇಶಕ್ಕೆ ವಿವರಿಸಬೇಕಾದ ಅಗತ್ಯವಿದೆ. ವಿದ್ಯಾರ್ಥಿಗಳ ವಿರುದ್ಧ ಚುರುಕಾಗಿ ಕ್ರಮಗಳನ್ನು ಕೈಗೊಳ್ಳುವ ಅವರು ಈಗೇಕೆ ತಮ್ಮದೇ ಪೊಲೀಸರ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಕೆವೈಎಸ್‌ನ ಪ್ರತಿಭಟನಾಕಾರನೋರ್ವ ಪ್ರಶ್ನಿಸಿದ.
ವಿದ್ಯಾರ್ಥಿಗಳು ವಾಹನಗಳಿಗೆ ತಡೆಯೊಡ್ಡಿದ್ದರಿಂದ ಐಟಿಒ ಬಳಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು.
ತಾವು ಯಾವುದೇ ಪ್ರತಿಭಟನೆಗಿಳಿದಾಗೆಲ್ಲ ಮತ್ತು ಯಾವುದೇ ವಿಷಯದ ವಿರುದ್ಧ ಧ್ವನಿಯೆತ್ತಿದಾಗೆಲ್ಲ ಪೊಲೀಸರು ತಮ್ಮಿಂದಿಗೆ ಇದೇ ರೀತಿ ವರ್ತಿಸುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಪ್ರತಿಭಟನಾನಿರತ ವಿದ್ಯಾರ್ಥಿಗಳು ಕೇಂದ್ರ ಸಚಿವರಾದ ಸ್ಮತಿ ಇರಾನಿ ಮತ್ತು ಬಂಡಾರು ದತ್ತಾತ್ರೇಯ ಹಾಗೂ ಹೈದರಾಬಾದ್ ಕೇಂದ್ರೀಯ ವಿವಿ ಕುಲಪತಿಗಳ ರಾಜೀನಾಮೆಗಾಗಿ ಆಗ್ರಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News