ಇದನ್ನು ಪ್ರಜಾತಂತ್ರ ಎನ್ನುತ್ತಾರೆಯೇ?

Update: 2016-02-11 11:58 GMT

ಗಾಗಲೇ ಬಹುಪಾಲು ಎಲ್ಲಾ ಐತಿಹಾಸಿಕ ಮಹತ್ವದ ಸ್ಥಳಗಳನ್ನೂಹಾಗೆಯೇ ಮೃತಾತ್ಮಗಳ ಥಳಥಳಿಸುವ ‘ಸ್ಥಳ್’,‘ಭೂಮಿ’, ‘ಘಾಟ್’, ‘ವನ್’ಗಳೆಲ್ಲಾ ನೋಡಿಯಾಗಿತ್ತು. ಇವುಗಳಲ್ಲೆಲ್ಲಾ ಹಾಳುಬಿದ್ದು, ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದ್ದ ಒಂದೇ ಒಂದು ಸ್ಥಳ್ ಎಂದರೆ ಬಾಬು ಜಗಜೀವನರಾಮ್‌ರ ಸಮಾಧಿ ಸ್ಥಳವಾದ ‘ಸಮತಾಸ್ಥಳ್’, ನೋಡಿ ಖೇದವೆನಿಸಿತ್ತು. ಈ ಭವ್ಯ-ದಿವ್ಯರ ಸಮಾಧಿ ಜಾಗಗಳನ್ನು ವ್ಯವಸ್ಥಿತವಾಗಿ ವಸತಿ ಸಂಕೀರ್ಣವಾಗಿ ಅಭಿವೃದ್ಧಿ ಪಡಿಸುವುದಾದರೆ ಹಳೆ ದಿಲ್ಲಿಯ ಬಹು ಪಾಲು ನಿರಾಶ್ರಿತರಿಗೆ ಮತ್ತು ವಸತಿಹೀನರಿಗೆ ಡಬ್ಬಲ್ ಬೆಡ್‌ರೂಮಿನ ಮನೆ ಗಳನ್ನು ಕಟ್ಟಿಕೊಡಬಹುದು ಅನಿಸಿತ್ತು (ಈ ಬಗ್ಗೆ ನಂತರ ವಿವರವಾಗಿ ಬರೆಯುತ್ತೇನೆ). ಏಕೆಂದರೆ, ಹೀಗೆಂದು ಒಬ್ಬರ ಬಳಿ ಹೇಳಿಬಿಟ್ಟಿದ್ದೆ. ‘ದೇಶ ವನ್ನಾಳಿದ ಮಹಾತ್ಮರುಗಳ ಬಗ್ಗೆ ಹಾಗೆಲ್ಲಾ ಚೀಪಾಗಿ ಯೋಚಿಸಬಾರದು’ ಎಂದು ಆ ಹಿರಿಯರು ಬುದ್ಧಿ ಹೇಳಿದ ಮೇಲೆ ಅತ್ತ ಕಡೆ ತಿರುಗಿ ನೋಡು ವುದನ್ನೂ ಬಿಟ್ಟು ಬಿಟ್ಟೆ.

ಹಾಗಾಗಿ, ಈ ನನ್ನ ಮುಂದಿದ್ದ ಬೃಹತ್ ಪ್ರಶ್ನೆ ಎಲ್ಲಿಗೆ ಹೋಗುವುದು? ಮಗಳನ್ನು ಕೇಳಿದೆ. ಕಾನೂನು ಸ್ನಾತಕೋತ್ತರ ವಿದ್ಯಾರ್ಥಿಯಾದ ಅವಳು ಅದ್ಯಾಕೋ ಗೊತ್ತಿಲ್ಲ, ತಟ್ಟನೆ ಪಾರ್ಲಿಮೆಂಟ್ ಭವನ್ ಅಂದಳು. ಒಬ್ಬ ಪತ್ರಕರ್ತನಾಗಿ ನನಗೂ ಅದರ ಬಗ್ಗೆ ಭಾರೀ ಕುತೂಹಲವಿತ್ತಾದರೂ, ಯಾಕೋ ಏನೋ ಒಂದು ಬಗೆಯ ಅಳುಕಿತ್ತು. ಮಗಳು ಸೂಚಿಸಿದ ಮೇಲೆ ಅಪೀಲೇ ಇಲ್ಲ. ಹೋಗುವುದೆಂದು ನಿರ್ಧಾರವಾಯಿತು. ಪಾಸನ್ನು ಪಡೆದು ಕೊಳ್ಳಲು ನನ್ನ ಮುಂದೆ ಅನೇಕ ಸಾಧ್ಯತೆಗಳಿದ್ದವು. ಅವುಗಳಲ್ಲಿ ಯಾವ ಕಿರಿ ಕಿರಿಯೂ ಇಲ್ಲದೆ ಆ ಕ್ಷಣದಲ್ಲಿ ಆಗುಮಾಡುವ ಗೆಳೆಯ ದಿನೇಶ್ ಅಮೀನ್ ಮಟ್ಟು. ಆಗಲೂ ಈತ ಸಾಮಾನ್ಯನಲ್ಲ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ. ಈಗಾಗಲೇ, ಅನೇಕ ಬಾರಿ ಇವರ ನೆರವನ್ನು ಪಡೆದಾಗಿತ್ತು!. ನಂತರದಲ್ಲಿ ತೀರಾ ಸರಳವಾದ್ದು, ನಮ್ಮ ನಾಡಿನವನೇ ಆದ ಅಲ್ಲಿನ ಕರ್ನಾಟಕ ಭವನ್-1ನಲ್ಲಿದ್ದ ಕಿರಿಯ ಗೆಳೆಯ ರಫೀಕ್. ಅವನಿಗೆ ಫೋನ್ ಮಾಡಿದೆ. ಅವನು ಒಂದು ಗಂಟೆಯ ಒಳಗೆ ವ್ಯವಸ್ಥೆ ಮಾಡುವುದಾಗಿ ಹೇಳಿದ, ಹಾಗೂ ಹೇಳಿದಂತೆ ಮಾಡಿದ. ಅಂದು ಲೋಕಸಭೆ ಇರಲಿಲ್ಲ ವಾದ್ದರಿಂದ ರಾಜ್ಯಸಭೆಗೆ ಜನರಲ್ ಪಾಸ್ ಸಿಕ್ಕಿತ್ತು. ಅಂತೂ ಇಂತೂ ನಿಗದಿ ಪಡಿಸಿದ್ದ, 3 ಗಂಟೆಯ ಹೊತ್ತಿಗೆ, ಸೂಚಿಸಿದ್ದ 3ನೆ ಗೇಟಿನ ಮುಂದಕ್ಕೆ ಬರುವ ಲ್ಲಿಗೆ ಸ್ವಲ್ಪ ತಡವಾಗಿ ಬಿಟ್ಟಿತ್ತು. ಗೇಟಿನ ಮುಂದಂತೂ ಭಯಹುಟ್ಟಿಸುವಷ್ಟು ಸೆಕ್ಯೂರಿಟಿಯವರ ಸೈನ್ಯ, ಯಥಾರೀತಿ ಜನರಿಗಿಂತ ಅವರೇ ಹೆಚ್ಚು!!


  


ಗೇಟ್-3; ಚೆಕಪ್-1: ಹೆಚ್ಚು ಕಡಿಮೆ ಉಕ್ಕಿನ ಕೋಟೆ; ಒಂದು ಬಾರಿಗೆ ಮಾತ್ರ ಹೆಚ್ಚೆಂದರೆ ಮೂರು-ನಾಲ್ಕು ಜನ ಸಂದರ್ಶಕರನ್ನು ಮೆಟಲ್ ಡಿಟೆಕ್ಟರ್‌ಗಳ ಮೂಲಕ ಮಾತ್ರ ಒಳ ಬಿಡಲಾಗುತ್ತದೆ. ಒಳಗೆ ಕಿಕ್ಕಿರಿದಿರುವ ಸೆಕ್ಯುರಿಟಿಯ ಜನ ಮತ್ತು ಆಧುನಿಕ ಯಂತ್ರೋಪಕರಣಗಳು. ಮೊದಲು ಪಾಸಿನ ಜೆನ್ಯೂನಿಟಿಯ ಪರೀಕ್ಷೆಯಾಗುತ್ತದೆ. ಆಮೇಲೆ ನಿಮ್ಮ ಬ್ಯಾಗನ್ನು ಕಸಿದುಕೊಳ್ಳಲಾಗುತ್ತದೆ, ಅದನ್ನು ಪರೀಕ್ಷಿಸಲಾಗುತ್ತದೆ, ಮತ್ತೆ ನಿಮ್ಮ ದೇಹದ ಮೇಲೆ ಇರುವ ಎಲ್ಲಾ ಹೊರ ಕಾಣುವ ವಸ್ತುಗಳನ್ನು ಬಿಚ್ಚಿಸಲಾಗುತ್ತದೆ; ತೊಟ್ಟ ಬಟ್ಟೆಗಳ ಹೊರತಾಗಿ, ಮೊಬೈಲು, ಬೆಲ್ಟು, ಬೂಟು, ಕೊನೆಗೆ ಪೆನ್ನನ್ನು ಸಹ. ಮರ್ಮಾಂಗಗಳನ್ನು ಹಿಸುಕುವುದೊಂದನ್ನು ಹೊರತುಪಡಿಸಿ ನಿಮ್ಮ ದೇಹವನ್ನು ಆಮೂಲಾಗ್ರವಾಗಿ ಕೈಯಲ್ಲಿ ಮತ್ತು ಯಂತ್ರೋಪಕರಣಗಳ ಮೂಲಕ ತಪಾಸಣೆ ಮಾಡಲಾಗುತ್ತದೆ. ಒಂದಲ್ಲ ಎರಡೆರಡು ಸಾರಿ. ನಮ್ಮ ಬಳಿ ಇದ್ದ ಎಲ್ಲವನ್ನೂ ಬಹುಪಾಲು ಒಂದೇ ಒಂದು ಕಾಗದದ ಚೂರನ್ನೂ ಬಿಡದೆ ಜಪ್ತಿ ಮಾಡಲಾಗುತ್ತದೆ. ಆ ನಂತರದಲ್ಲಿ ನಿಮ್ಮ ಬಳಿ ಅಪಾಯಕಾರಿ ಯಾದ ಮತ್ತು ನಿರಪಾಯಕಾರಿಯಾದ ಏನೊಂದೂ ಇಲ್ಲ ಎಂದಾದ ಮೇಲೆ ಎಲ್ಲಾ ಎಲೆಕ್ಟ್ರಾನಿಕ್ ಮತ್ತು ನಾನ್ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಸಿದು ಕೊಂಡು ಹೆಚ್ಚು ಕಡಿಮೆ ನಿಮ್ಮ ಖಾಲಿ ಬ್ಯಾಗನ್ನು ಕೊಟ್ಟು ಒಳಗೆ ಬಿಡಲಾಗು ತ್ತದೆ. ಅಲ್ಲಿಂದ ಕೆಲವೇ ಮೀಟರುಗಳ ದೂರದಲ್ಲಿರುವ ಕಟ್ಟಡದ ಆವರಣ ದೊಳಕ್ಕೆ ಪ್ರವೇಶಿಸುವಲ್ಲಿಗೆ ನೀವು ಇನ್ನಷ್ಟು ಜನ ಸೆಕ್ಯುರಿಟಿಯವರ ಇರಿಸು ಮುರಿಸಾಗುವಂಥ ದೃಷ್ಟಿ ಪರೀಕ್ಷೆಗೆ ಒಳಗಾಗಿರುತ್ತೀರಿ. ಇದನ್ನು ಮುಗಿಸಿಕೊಂಡು ವಿಶಾಲವಾದ ಆವರಣವನ್ನು ಹಾಯ್ದು ಕಟ್ಟಡದ ಒಳಗೆ ಎಂಟ್ರಿ ತೆಗೆದುಕೊಳ್ಳುತ್ತಿದ್ದಂತೆಯೇ ಮತ್ತೊಮ್ಮೆ ಸೆಕ್ಯುರಿಟಿ ಚೆಕ್ ಆಗುತ್ತದೆ. ಮೆಟ್ಟಿಲುಗಳ ಪಕ್ಕದಲ್ಲಿ ಒಂದು ರಿಸೆಪ್ಷನ್ ಮಾದರಿಯ ಕೇಂದ್ರವಿದೆ. ಅಲ್ಲಿ ನೀವು ನಿಮ್ಮ ಪಾಸನ್ನು ತೋರಿಸಿ, ಬ್ಯಾಗುಗಳನ್ನು ಡೆಪಾ ಸಿಟ್ ಮಾಡಿ, ಚೀಟಿ ಪಡೆಯಬೇಕು. ಅಲ್ಲಿಂದ ಮೇಲೆ ಹತ್ತಿ ಕಾರಿಡಾರ್‌ಗೆ ಹೆಜ್ಜೆ ಇಟ್ಟಿರಿ, ಅಗೋ... ಮೆಟಲ್ ಡಿಟೆಕ್ಟರ್, ಅದಾಯಿತು, ಇಲ್ಲಿ ಇನ್ನೊಂದು ಸೆಕ್ಯುರಿಟಿಯ ಸೈನ್ಯ. ಮತ್ತೆ ಮೊದಲಿಂದ ತಪಾಸಣೆ. ಇಲ್ಲಿಂದ ಹತ್ತಿ ಮೇಲೆ ಹೋದಿರಿ...., ಇನ್ನೇನು ಪರಿಷತ್ ಬಾಗಿಲು ಕಾಣುತ್ತಿದೆ ಎನ್ನುವಷ್ಟರಲ್ಲಿ ಇನ್ನೊಂದು ಸೈನ್ಯ! ಮತ್ತೆ ತಪಾಸಣೆ!!. ಆಯಿತು, ಇವನ್ನೆಲ್ಲಾ ದಾಟಿಕೊಂಡು ಒಳಗೆ ರಾಜ್ಯಸಭೆಯ ಪ್ರೇಕ್ಷಕರ ಗ್ಯಾಲರಿಯ ಬಾಗಿಲಲ್ಲಿ ನಿಂತಿದ್ದೀರಿ, ಮಗಳು ಹೆಂಗಸರ ಗ್ಯಾಲರಿಯತ್ತ ಹೋದಳು. ಆ ಕ್ಷಣದಿಂದ ನಾವು ಒಳಗಿನ ಸಿಬ್ಬಂದಿಯ ಕೈವಶವಾದ ಕೈದಿಗಳು. ಮೇಲಿಂದ ಕೆಳಗೆ ಕಣ್ಣೋಟದಲ್ಲಿಯೇ ಇಡೀ ದೇಹದೊಂದಿಗೆ ಭಾವಗಳನ್ನೂ ಕೂಡಿಸಿ ಸ್ಕ್ಯಾನ್‌ಮಾಡಲಾಗುತ್ತದೆ. ಕಣ್ಣಿಗೆ ಅಗತ್ಯವಿಲ್ಲದಾಗ ತಲೆಯ ಮೇಲಕ್ಕೆ ಕನ್ನಡಕ ಸರಿಸುವುದು ನನ್ನ ಅಭ್ಯಾಸ. ಇದನ್ನು ನೋಡಿದ ಅಲ್ಲಿನ ಸೆಕ್ಯುರಿಟಿ ನನ್ನತ್ತ ಗದರುತ್ತಾ ಕನ್ನಡಕ ತಗೆಯುವಂತೆ ಸೂಚಿಸಿದ, ತಗೆದೆ. ಈಗಾಗಲೇ ಅಲ್ಲಿ ಜನರಿದ್ದರು. ಇನ್ನೂ ಅನೇಕ ಕುರ್ಚಿಗಳು ಖಾಲಿ ಇದ್ದವು. ಆತ ನನಗೆ ಕುರ್ಚಿ ಯನ್ನು ತೋರಿಸಲಿಲ್ಲ. ಅವನೇ ನನ್ನೊಂದಿಗೆ ಬಂದು ಒಂದು ಕುರ್ಚಿಯಲ್ಲಿ ಕೂರಿಸಿದ. ಎಲ್ಲರೂ ಕುಳಿತರು. ಒಬ್ಬ ಯಾಕೋ ಏನೋ ಸ್ವಲ್ಪ ಮುಂದಕ್ಕೆ ಬಾಗಿ ಕುಳಿತ. ಕೂಡಲೇ ಸೆಕ್ಯೂರಿಟಿ ಅವನ ಭುಜವನ್ನು ಬಲವಾಗಿ ಅದುಮಿ ನೆಟ್ಟಗೆ ಕೂರುವಂತೆ ಹೇಳಲಿಲ್ಲ, ಎಳೆದು ಕುಳ್ಳಿರಿಸಿದ. ಹಾಗೇ ಅವರ ಹದ್ದಿನ ಕಣ್ಣುಗಳು ಹೇಗೆ ಅಲ್ಲಿದ್ದವರನ್ನು ಕಾವಲು ಕಾಯುತ್ತಿದ್ದವೆಂದರೆ ಬಹುಶಃ ಮರಣದಂಡನೆಗೀಡಾದ ಕೈದಿಗಳನ್ನೂ ಹಾಗೆ ಕಾಯಲಾರರೇನೋ? ನಾನು ನಂಬುವ ಮತ್ತು ಪ್ರತಿಪಾದಿಸುವ ಪ್ರಜಾಪ್ರಭುತ್ವದ ವೌಲ್ಯ ಗಳು ಮತ್ತು ಅತೀವವಾಗಿ ಗೌರವಿಸುವ ನಮ್ಮ ಸಂವಿಧಾನದ ಪ್ರದರ್ಶಕ, ಅನುಷ್ಠಾನಕ ಸ್ಥಳ ಅದು. ನನ್ನಂಥವನಿಗೆ ಅದು ನಿಜಾರ್ಥದ ದೇವಾಲಯ. ನಾನಂತೂ ಗೌರವಪೂರ್ವಕವಾಗಿಯೇ ಇದ್ದೆ. ಉತ್ತರ ಪ್ರದೇಶದಲ್ಲಿ ಹೆಣ್ಣು ಮಗಳೊಬ್ಬಳ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ, ದಿಲ್ಲಿ ನಿರ್ಭಯಾಅತ್ಯಾಚಾರ ಪ್ರಕರಣಗಳು ನಡೆದು ಸ್ತ್ರೀ ಸುರಕ್ಷೆಯೆನ್ನುವುದು ತೀರಾ ಆತಂಕ ಕ್ಕೀಡಾಗಿ, ಮರುಪರೀಕ್ಷಿಸುವಂಥಾಗಿದ್ದ ಅವಧಿ ಅದು. ಇದರ ಮೇಲೆಯೇ ಚರ್ಚೆ ನಡೆದಿತ್ತು. ಬಹುಶಃ ಉತ್ತರ ಪ್ರದೇಶದ ಒಬ್ಬ ರಾಜ್ಯಸಭಾ ಸದಸ್ಯೆ ಈ ಬಗ್ಗೆ ಎದ್ದು ನಿಂತು ತುಂಬಾ ಗಟ್ಟಿ ಧ್ವನಿಯಲ್ಲಿ, ಗಂಭೀರವಾಗಿ ವಿಷಯ ಮಂಡಿಸುತ್ತಿದ್ದರು. ಈ ನಡುವೆ ನಮಗೆ ಗುರುತಿರುವ ಅಥವಾ ಪರಿಚಿತ ಮುಖಗಳಿಗಾಗಿ ನಾನು ಹುಡುಕಾಡುತ್ತಿದ್ದೆ. ಆ ಹುಡುಕಾಟದಲ್ಲಿ ಹಾಗೇ ನೋಡುತ್ತಿದ್ದಾಗ ಅನೇಕ ಪರಿಚಿತ ಮುಖಗಳು ಕಂಡವು. ಆ ನಡುವೆಯೇ ವಾದ ಮಂಡಿಸುತ್ತಿದ್ದ ಸದಸ್ಯೆಯ ಯಾವುದೋ ಮಾತಿಗೆ ತಿದ್ದುಪಡಿ ಸೂಚಿಸ ಲೆಂದೇನೋ ಒಬ್ಬ ಸದಸ್ಯರು ಎದ್ದು ನಿಂತರು. ನೋಡಿದೆ, ತಕ್ಷಣ ಗುರುತು ಹತ್ತಲಿಲ್ಲ, ಆದರೆ ಪರಿಚಿತ ಮುಖ, ಅವರು ಬಾಯಿತೆರೆದ ಮೇಲೆ ತಿಳಿಯಿತು! ನಮ್ಮ ಮಲ್ಲಿಕಾರ್ಜುನ ಖರ್ಗೆಯವರು!! ಅವರು ಮಾತಾಡಿ ಕೂರುವಷ್ಟರಲ್ಲಿ ಒಬ್ಬ ಯುವಕನ ಆಗಮನವಾಯಿತು. ಗುರುತು ಹಚ್ಚಲು ಕಷ್ಟವಾಗಲಿಲ್ಲ. ಅವರು ರಾಹುಲ್ ಗಾಂಧಿ. ಬರುಬರುತ್ತಲೇ ಸದಸ್ಯರಿಗೆ ವಿಷ್ ಮಾಡುತ್ತಾ ಒಂದು ಸೀಟಿನಲ್ಲಿ ಕುಳಿತರು. ಆದರೆ ನನಗೆ ಕಾಣುತ್ತಿದ್ದುದು ಅರ್ಧ ಸಭೆ ಮಾತ್ರ. ಇನ್ನರ್ಧ ನಮ್ಮ ಗ್ಯಾಲರಿಯ ಕೆಳಗಿತ್ತು. ನಾನು ಇನ್ನೂ ಯಾರ್ಯಾರು ಕಾಣುತ್ತಾರೆ ಎಂದು ಸ್ವಲ್ಪ ಬಗ್ಗಿ ನೋಡಲು ಹೋದೆ. ಹಿಂದೆಯೇ ನನ್ನ ಭುಜದ ಮೇಲೆ ಬಲವಾದ ಕೈಯೊಂದು ಕುಳಿತು, ಹಿಂದಕ್ಕೆ ಜಗ್ಗಿ, ಹೇಗೆ ಕೂರಿಸಿತು ಎಂದರೆ, ಪಕ್ಕಾ ಗೊಂಬೆಯಂತೆ. ಹೌದು, ಅಲ್ಲಿ ನಾವು ಕೂರಬೇಕಾಗಿದ್ದು ಹಾಗೆಯೇ! ಹಾಗೇಸ್ವಲ್ಪಹೊತ್ತು ಕಳೆಯಿತು. ಹಾಗೆಲ್ಲಾ ಕುಳಿತು ಅಭ್ಯಾಸವಿಲ್ಲದ ನಾನು ಅಭ್ಯಾಸ ಬಲದಿಂದ ಕಾಲಿನ ಮೇಲೆ ಕಾಲು ಹಾಕಲು ಹೋದೆ. ಇನ್ನೂ ಹಾಕಿರಲಿಲ್ಲ. ಅಷ್ಟರಲ್ಲಿ ಎದುರು ಮುಖದಲ್ಲಿದ್ದ ಸೆಕ್ಯುರಿಟಿ ನನ್ನನ್ನು ಹೇಗೆ ನೋಡಿತು ಮತ್ತು ನನ್ನತ್ತ ಧಾವಿಸಿ ಬಂದಿತು ಎಂದರೆ..., ಹೊಡೆದೇ ಬಿಡುತ್ತಾನಾ ಎಂದು ಗಾಬರಿಬಿದ್ದೆ. ಆದರೆ ಆತನ ನೋಟ, ಮಾಡಿದ ಸನ್ನೆ ಗಳು ಈಗಲೂ ನನಗೆ ಕಣ್ಣಿಗೆ ಕಟ್ಟಿದಂತಿವೆ. ಒಂದುಕ್ಷಣ ನನ್ನ ಬಗ್ಗೆ ನನಗೇ ಅಸಹ್ಯವೆನಿಸಿತು. ಅಷ್ಟರಲ್ಲಿ ಸಭೆಯಲ್ಲಿ ಒಂದಷ್ಟು ಜನ ಕರತಾಡನ ಮಾಡುತ್ತಿದ್ದರು, ಅದನ್ನು ಕಂಡು ಗ್ಯಾಲರಿಯಲ್ಲಿದ್ದ ಒಬ್ಬ ಸುಮ್ಮನೆ ಕೈಗಳನ್ನು ಹತ್ತಿರಕ್ಕೆ ತಂದ ಅಷ್ಟೇ, ಅವನ ಪಕ್ಕದಲ್ಲಿದ್ದ ಸೆಕ್ಯುರಿಟಿ ಎಷ್ಟು ಕ್ರೂರವಾಗಿ ಗುರ್ರಾ ಯಿಸಿದನೆಂದರೆ, ಆ ವ್ಯಕ್ತಿ ಬೆವತು ಹೋದ! ಯಾಕೋ ಅಲ್ಲಿ ಕೂರುವುದು ತೀರಾ ಹಿಂಸಾತ್ಮಕ ಅನಿಸಿತು. ಹೊರಡೋಣವೆಂದು ಏಳಲು ಹೋದೆ. ಹಿಂದಿನಿಂದ ಬಲವಾದ ಕೈಯೊಂದು ಹೇಗೆ ಅದುಮಿತು ಎಂದರೆ..!? ಅಲ್ಲಿಂದಾಚೆಗೆ ಸಭೆಯಲ್ಲಿ ಏನು ನಡೆಯುತೋ ನನಗೆ ಗೊತ್ತಿಲ್ಲ. ನಾನು ಮಾನಸಿಕವಾಗಿ ಜಜ್ಜರಿತನಾಗಿಹೋಗಿದ್ದೆ. ಯಾಕೋ ‘ಈ ಜಾಗ ನನ್ನದಲ್ಲ’ ಅನಿಸತೊಡಗಿತು, ಪರಕೀಯತೆಯ ಭಾವ ಕಾಡತೊಡಗಿತು. ಕ್ರಿಮಿನಲ್‌ಗಳನ್ನು ಹೇಗೇಗೋ ನಡೆಸಿಕೊಳ್ಳಲಾಗುತ್ತದೆ, ಸರಿಯೋ ಅಲ್ಲವೋ? ಆದರೆ ನಿಜ!? ಆದರೆ ಒಬ್ಬ ಸೀದಾಸಾದಾ ಮನುಷ್ಯನನ್ನು ಅಥವಾ ನನ್ನೊಂದಿಗಿದ್ದ ಅಂಥದ್ದೇ ಮನುಷ್ಯರನ್ನು, ಹಾಗೇ ನಿತ್ಯವೂ ಬಂದು ಹೋಗುವ, ಮುಂದೆ ಯೂ ಬರಲಿಚ್ಛಿಸುವ ಅಂಥದ್ದೇ ಸಿದಾಸಾದಾ ‘ಪ್ರಜೆ ಎಂಬ ಪ್ರಭು’ವನ್ನು.... ಹೀಗೆ ನಡೆಸಿಕೊಳ್ಳುವುದಾದರೆ?!


 ಜೀವಭಯಗ್ರಸ್ಥರಾದ ಒಂದಷ್ಟು ಜನ ಅವರ ಸುರಕ್ಷತೆಗೆ ಬೇಕಾದ ಕಾನೂನುಗಳನ್ನು ಮಾಡಿಕೊಂಡು ಪ್ರಜೆ ಎಂಬ ಪ್ರಭುಗಳನ್ನು ಇಷ್ಟೊಂದು ಹೀನಾಯವಾಗಿ ಟ್ರೀಟ್ ಮಾಡುತ್ತಾರೆಂದಾದರೆ...? ಹೇಳಿ ಸ್ವಾಮಿ...! ನೀವು, ‘ಪ್ರಜೆ ಎಂಬ ಪ್ರಭುಗಳು’!! ನಾವಿನ್ನೂ ಈ ವ್ಯವಸ್ಥೆಯನ್ನು ಸಹಿಸಿಕೊ ಳ್ಳಬೇಕೇ? ಏಕೆಂದರೆ, ಇದೇ ದಿಲ್ಲಿಯಲ್ಲಿ 2004ರಿಂದ ಇಂದಿನವರೆಗೆ ವಸತಿ ಹೀನರಾದ, ಈ ಸರಕಾರಗಳೇ ಸೃಷ್ಟಿಸಿದ ಅಭಿವೃದ್ಧಿ ದುರಂತಗಳ ಕಾರಣ ಗಳಿಂದಾಗಿ ಫುಟ್‌ಪಾತ್‌ಗಳಲ್ಲಿ ರಾತ್ರಿ ಕಳೆಯುವ ಅನಿವಾರ್ಯತೆ ಇದ್ದ 34,000 ಜನ ಸತ್ತಿದ್ದಾರೆ!!, ಕೇವಲ ನೆತ್ತಿಯ ಮೇಲೆ ಸೂರಿಲ್ಲದೆ!?. ಗೆದ್ದವರ ರಕ್ಷಣೆಗೆ ನಮ್ಮನ್ನು ಅಪಮಾನಿಸುವ ಅಸಂಖ್ಯ ಕಾನೂನುಗಳು ಮತ್ತು ಅವುಗಳ ನಿರ್ದಾಕ್ಷಿಣ್ಯ ಜಾರಿಯ ಬಗ್ಗೆ ಅಷ್ಟೊಂದು ಕಠಿಣರಾಗಿರುವ ನೀವು. ನೂರೋ ಸಾವಿರವೋ ಅಪಾಯಕಾರಿ ಮನುಷ್ಯರನ್ನು ಗುರುತಿಸಿ, ಅವರನ್ನು ಪ್ರತಿಬಂಧಿಸುವ ಯೋಗ್ಯತೆ ಇಲ್ಲದೆ, ‘ಈ’ ಪ್ರಭುತ್ವದ ‘ಆ’ ಹೆಸರಿನಲ್ಲಿ’ 120 ಕೋಟಿ ಬೃಹತ್ ಜನಸಮೂಹವನ್ನು ಅಪಮಾನಿಸುವ ಹಕ್ಕು ನಿಮಗೆ ಬಂದಿದ್ದು ಎಲ್ಲಿಂದ?. ನಮ್ಮ ರಕ್ಷಣೆಗೆ ಸಂವಿಧಾನ ದತ್ತವಾದ ನಮ್ಮ ಮೂಲಭೂತ ಅಗತ್ಯಗಳನ್ನೂ ಪೂರೈಸಲು ನೀವು ಈ ಮಟ್ಟದ ಘೋರ ನಿರ್ಲಕ್ಷ ತೋರುತ್ತಿದ್ದೀರಿ! ಹಾಗಾದರೆ ಈ ನಿಮ್ಮ ಪ್ರಜಾತಂತ್ರದ ಅಟ್ಟಹಾಸಗಳನ್ನು, ಆತ್ಮವಂಚನೆಯನ್ನು ನಾವು ಹೇಗೆ ಸ್ವೀಕರಿಸಬೇಕು?
ಇದೇ ದಿಲ್ಲಿಯಲ್ಲಿ ವಿಐಪಿ, ವಿವಿಐಪಿ ಮೃತಾತ್ಮರ ಹೆಸರಿನಲ್ಲಿ ‘ರಾಜ್‌ಘಾಟ್’ ಎಂಬ ಒಂದು ಮೇಜರ್ ಲಾಟ್‌ನಲ್ಲಿ 245 ಎಕರೆ ಭೂಮಿ ಸುಮ್ಮನೆ ಬಿದ್ದಿದೆ, ಸತ್ತವರ ಹೆಸರಿನಲ್ಲಿ?!
ಆದರೆ ನಿತ್ಯ ನೂರಾರು ಜನ ಪರಿಸರ ನಿರಾಶ್ರಿತರು ಅವರ ಪಾಡಿಗೆ ಅವರು ದಿವಂಗತರಾಗುತ್ತಿದ್ದಾರೆ!. ಕೇವಲ ಸಾಮಾಜಿಕ ನ್ಯಾಯದ ಕೊರತೆಯ ಕಾರಣದಿಂದ!!. ಇದನ್ನು ಲೆಕ್ಕಹಾಕಲು ಈ ಪ್ರಭುತ್ವಕ್ಕೆ 67 ವರ್ಷಗಳು ಬೇಕಾಗಿದೆ! ನನ್ನ ಸಂವಿಧಾನ ಹೇಳಿರುವುದು ಸ್ಪಷ್ಟವಾಗಿದೆ, ಇದು ‘

 ಛ್ಝ್ಛಿಚ್ಟಛಿ ಖಠಿಠಿಛಿ ಯಾ ಕಲ್ಯಾಣರಾಜ್ಯದ ಪರಿಕಲ್ಪನೆಯಿಂದ ರೂಪಿಸಲಾಗಿರುವುದು’ಎಂದು, ಅಂದರೆ ಈ ದೇಶದ ಪ್ರತಿಯೊಬ್ಬ ನಾಗರಿ ಕನೂ ಸರ್ವ ಸಮಾನ. ಯಾರೂ ಸಹಜವಾಗಿಯಲ್ಲದೆ ಆಹಾರದ ಕೊರತೆ ಯಿಂದಲೋ ಇಲ್ಲಾ ವಸತಿಯ ಕೊರತೆಯಿಂದಲೋ ಅಸಹಾಯಕರಾಗಿ ಸಾವು/ನೋವಿಗೀಡಾಗಬಾರದೆಂದು!? ಒಂದು ಪಕ್ಷ ಆದಲ್ಲಿ ಅದು, ಪ್ರಭುತ್ವದ ಕಡೆಯಿಂದಾದ ಅದು ಕೆಮ್. ಹಾಗಾದರೆ....ಇದೇ ಅಸಹಾ ಯಕರ ಓಟುಗಳ ಮೂಲಕ ಗೆದ್ದು ಬಂದ ನೀವು ‘ಮಹಾತ್ಮರು’!! ನಿಮ್ಮನ್ನು ಗೆಲ್ಲಿಸಿದ ನಾವು ‘ತಿರುಕರು!?, ವಸತಿಹೀನರು’!!. ಹಾಗಾದರೆ ಗೆದ್ದು ಬಂದಿ ರುವ ನಿಮ್ಮ ಯೋಗ್ಯತೆ ಏನು? ನೀವು ಸಂವಿಧಾನದ ಯಾವ ಯಾವ ನಿರ್ದೇಶನಗಳನ್ನು ಪಾಲಿಸುತ್ತಿದ್ದೀರಿ? ಇದರ ಅಂತಿಮ ಉದ್ದೇಶ ಯಾ ಫಲಿತಾಂಶವೇನು? ನೀವು ಹೊರಟಿರುವ ದಾರಿಯಲ್ಲಿ ಈ ದೇಶದ ಸಂವಿಧಾನ ಹೇಳುವ ನೀತಿ-ನಿಯಮ ರಕ್ಷಣೆಯ ಯಾವುದಾದರೂ ಸೂತ್ರಗಳಿವೆಯೇ?. ಇದ್ದರೆ; ಅವು ಯಾರ ಹಿತರಕ್ಷಣೆಗಾಗಿ ಇವೆ?
ಹೀಗೇ ನೀವು ಮುಂದುವರಿಯುವುದಾದರೆ.....
ಸಂವಿಧಾನದ ದುರ್ಬಳಕೆ ಹೀಗೇ ಮುಂದುವರಿದರೆ ಅದರ ನಿಜವಾದ ಪಾಲಕರಾದ ಜನ ತಾನೆ ನಿಮ್ಮನ್ನು ಎಷ್ಟುದಿನ ಸಹಿಸಿಕೊಳ್ಳಲು ಸಾಧ್ಯ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News