ಬಿಡಿಎ ಅಪಾರ್ಟ್‌ಮೆಂಟ್ ಡಿಸೆಂಬರ್‌ಗೆ ಪೂರ್ಣ

Update: 2016-02-12 18:30 GMT

 ಬೆಂಗಳೂರು, ಫೆ.12: ದೊಡ್ಡಬನಹಳ್ಳಿ ವ್ಯಾಪ್ತಿಯಲ್ಲಿ ಬಿಡಿಎ ನಿರ್ಮಿಸುತ್ತಿರುವ 2ನೆ ಹಂತದ ಜನವಸತಿ ಪ್ಲಾಟ್‌ಗಳ ಕಾಮಗಾರಿ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಬಿಡಿಎ ಅಭಿಯಂತರ ಅಧಿಕಾರಿ ಎನ್.ಜಿ.ಗೌಡಯ್ಯ ಹೇಳಿದ್ದಾರೆ.

ಇಂದು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ದೊಡ್ಡಬನಹಳ್ಳಿಯಲ್ಲಿ ನಿರ್ಮಿಸಿರುವ ಮೊದಲ ಹಂತದ ಅಪಾರ್ಟ್‌ಮೆಂಟ್ 20 ಅಂತಸ್ತುಗಳ ಕಟ್ಟಡವಾಗಿದೆ ಎಂದರು.

ಮೊದಲ ಹಂತದ ಅಪಾರ್ಟ್‌ಮೆಂಟ್‌ನಲ್ಲಿ 648 ಪ್ಲಾಟ್‌ಗಳು ನಿರ್ಮಾಣಗೊಂಡಿವೆ. ಅದೇ ರೀತಿ, 3 ಕೊಠಡಿಗಳ ಎಲ್ಲ 144 ಪ್ಲಾಟ್‌ಗಳು ಹಂಚಿಕೆಯಾಗಿವೆ. ಅಲ್ಲದೆ, ಎರಡು ಕೊಠಡಿಗಳ ಒಟ್ಟು 504 ಪ್ಲಾಟ್‌ಗಳಲ್ಲಿ 469 ಪ್ಲಾಟ್‌ಗಳು ಈಗಾಗಲೇ ಹಂಚಲಾಗಿದೆ ಎಂದ ಅವರು, 36 ಪ್ಲಾಟ್‌ಗಳ ಹಂಚಿಕೆಗೆ ಅರ್ಜಿದಾರರ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆಲೂರು ಸಮೀಪ ನಿರ್ಮಿಸುತ್ತಿರುವ ವಸತಿ ಯೋಜನೆಯಲ್ಲಿ ಈಗಾಗಲೇ 906 ಒಂದು ಕೊಠಡಿಯ ವಸತಿ ಘಟಕಗಳನ್ನು ನಿರ್ಮಿಸಿದ್ದು, ಎರಡು ಅಂತಸ್ತಿನ 2-3ಕೊಠಡಿ ಸಾಲು ಮನೆಗಳ ನಿರ್ಮಾಣವನ್ನು ಆರಂಭಿಸಲಾಗುವುದೆಂದು ಭರವಸೆ ನೀಡಿದರು.

ಕೆಂಗೇರಿ ವ್ಯಾಪ್ತಿಯ ವಲಗೇರಹಳ್ಳಿಯಲ್ಲಿ 5 ಹಂತಗಳಲ್ಲಿ ನಿರ್ಮಿಸುತ್ತಿರುವ ಅಪಾರ್ಟ್ ಮೆಂಟ್‌ನಲ್ಲಿ ಈಗಾಗಲೇ ಒಂದು ಕೊಠಡಿಯ 1,392 ಪ್ಲಾಟ್‌ಗಳು, ಎರಡು ಕೊಠಡಿಯ 466 ಪ್ಲಾಟ್‌ಗಳು ಹಾಗೂ ಮೂರು ಕೊಠಡಿಯ 308 ಪ್ಲಾಟ್‌ಗಳನ್ನು ನಿರ್ಮಿಸಲಾಗಿದೆ. ಅಲ್ಲದೆ, ಮೂರು ಕೊಠಡಿಯ 415 ಪ್ಲಾಟ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಹಂಚಿಕೆಗಾಗಿ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಗೌಡಯ್ಯ ವಿವರಿಸಿದರು.

ವಲಗೇರಹಳ್ಳಿ ಅಪಾರ್ಟ್‌ಮೆಂಟ್ ಸಮೀಪದಲ್ಲಿಯೇ 13 ಗುಂಟೆ ಪ್ರದೇಶದಲ್ಲಿ ಕೇಂದ್ರ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ. ಇದರಲ್ಲಿ 54 ವಿವಿಧ ವಿಸ್ತೀರ್ಣದ ವಾಣಿಜ್ಯ ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ. ಅದೇ ರೀತಿ, ಸಮುದಾಯದ ವಹಿವಾಟು ಕೇಂದ್ರವನ್ನು 22.5 ಗುಂಟೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ಎರಡು ಅಂತಸ್ತಿನ ಕಟ್ಟಡದಲ್ಲಿ ಒಂದು ಉಪಹಾರ ಗೃಹ, 38 ವಾಣಿಜ್ಯ ಮಳಿಗೆ ಗಳನ್ನು ನಿರ್ಮಿಸಲಾಗಿದೆ. ಶೀಘ್ರದಲ್ಲಿಯೇ ಸಾರ್ವಜನಿಕ ಹರಾಜು ಮೂಲಕ ಬಾಡಿಗೆಗೆ ನೀಡಲು ಪ್ರಾಧಿಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News