ಆಯುರ್ವೇದ-ಯುನಾನಿ ಜಾಗೃತಿ ಮೂಡಿಸಲು ನಾಳೆ ಸಾಮೂಹಿಕ ಯೋಗ ಪ್ರದರ್ಶನ

Update: 2016-02-12 18:31 GMT

 ಬೆಂಗಳೂರು, ಫೆ.12: ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ಹಾಗೂ ಆಯುಷ್ ಇಲಾಖೆಗಳು 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಫೆ.26 ರಿಂದ ಮೂರು ದಿನಗಳ ಕಾಲ ಅರಮನೆ ಮೈದಾನದಲ್ಲಿ ಗ್ಲೋಬಲ್ ವೆಲ್‌ನೆಸ್ ಮೀಟ್-2016 ಹಮ್ಮಿಕೊಳ್ಳಲಾಗಿದೆ.

ಸುವರ್ಣ ಮಹೋತ್ಸವದ ಪೂರ್ವಭಾವಿಯಾಗಿ ಫೆ.14ರಂದು ಅರಮನೆ ಮೈದಾನದಲ್ಲಿ ಆರೋಗ್ಯ ಹಾಗೂ ವಿಶ್ವ ಶಾಂತಿಗಾಗಿ ಆರೋಗ್ಯಥಾನ್, ಸಾಮೂಹಿಕ ಯೋಗ ಆಯೋಜಿಸಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ಡಾ.ಸತ್ಯಮೂರ್ತಿಭಟ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಚಾಲನೆ ನೀಡಲಿದ್ದು, ಮಾಜಿ ಸಂಸದೆ ರಮ್ಯಾ ಸೇರಿ ಪ್ರಮುಖರು ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ಮಂಡಳಿಯು 50 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಸುವರ್ಣ ಮಹೋತ್ಸವಕ್ಕೆ ವಿವಿಧ ದೇಶಗಳಿಂದ ಆಯುರ್ವೇದ ತಜ್ಞರು ಭಾಗವಹಿಸಲಿದ್ದು, ಆಯುರ್ವೇದ ಯುನಾನಿ, ಆರೋಗ್ಯ ಮತ್ತು ಪ್ರವಾಸೋದ್ಯಮ, ಭಾರತೀಯ ವೈದ್ಯಕೀಯ ಪದ್ಧತಿ, ಗ್ರಾಮೀಣ ಆರೋಗ್ಯ ಸೇವೆ ಹಾಗೂ ಇನ್ನಿತರೆ ಆಯುರ್ವೇದ ಚಿಕಿತ್ಸೆಗಳು ಕುರಿತಂತೆ ಸಮಾವೇಶದಲ್ಲಿ ಚರ್ಚೆಗಳನ್ನು ನಡೆಸಲಿದ್ದಾರೆಂದು ತಿಳಿಸಿದರು.

 ಈ ಸಮಾವೇಶಕ್ಕೆ ರಾಜ್ಯ ಮತ್ತು ದೇಶದಿಂದ ಸುಮಾರು 250 ಕ್ಕೂ ಹೆಚ್ಚು ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಹಾಗೂ 7 ಲಕ್ಷಕ್ಕೂ ಹೆಚ್ಚು ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇದೆ ಎಂದ ಅವರು, ಇದಕ್ಕಾಗಿ ರಾಜ್ಯಾದ್ಯಂತ ಈಗಾಗಲೇ 5 ಸಾವಿರ ಕಿ.ಮೀ ಆಯುರ್ ರಥಯಾತ್ರೆ ಸಂಚರಿಸಿ ಜನರಿಗೆ ಮಾಹಿತಿಯನ್ನು ತಲುಪಿಸಿದೆ ಎಂದರು. ಸಮಾವೇಶದಲ್ಲಿ ಮಹಿಳೆಯರ ಆರೋಗ್ಯ ಸಮಸ್ಯೆಗಳ ಕುರಿತು, ಮನುಷ್ಯನ ಜೀವನ ಶೈಲಿ ಕುರಿತು, ರೋಗ ನಿಯಂತ್ರಣ ಕುರಿತು ಚರ್ಚೆಗಳು ನಡೆಯಲಿವೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರಾದ ಡಾ.ವೇದಾವತಿ, ಡಾ.ತಿಮ್ಮಪ್ಪ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News