ಕಾಶ್ಮೀರ:ಉಗ್ರರೊಂದಿಗೆ ಕಾಳಗದಲ್ಲಿ ಇನ್ನಿಬ್ಬರು ಯೋಧರ ಬಲಿ,ಸಾವಿನ ಸಂಖ್ಯೆ ಐದಕ್ಕೇರಿಕೆ

Update: 2016-02-21 12:04 GMT

ಶ್ರೀನಗರ,ಫೆ.21: ಪಾಂಪೋರ ಪಟ್ಟಣದಲ್ಲಿ ಸರಕಾರಿ ಕಟ್ಟಡವೊಂದರಲ್ಲಿ ಅಡಗಿಕೊಂಡಿರುವ ಉಗ್ರರೊಂದಿಗೆ ರವಿವಾರ ನಡೆದ ಭೀಷಣ ಗುಂಡಿನ ಕಾಳಗದಲ್ಲಿ ಓರ್ವ ಕ್ಯಾಪ್ಟನ್ ಸೇರಿದಂತೆ ಪಾರಾ ಘಟಕದ ಇಬ್ಬರು ಸೇನಾ ಸಿಬ್ಬಂದಿಗಳು ಬಲಿಯಾಗಿದ್ದಾರೆ. ಇದರೊಂದಿಗೆ ಎರಡು ದಿನಗಳಿಂದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೇರಿದೆ. ಬೆಳಗಿನ ಜಾವ ಭದ್ರತಾ ಪಡೆಗಳು ಉಗ್ರರು ಅಡಗಿಕೊಂಡಿರುವ ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆ(ಇಡಿಐ)ಯ ಕಟ್ಟಡದೊಳಕ್ಕೆ ನುಗ್ಗಲು ಯತ್ನಿಸಿದಾಗ ಉಗ್ರರು ಗುಂಡುಗಳನ್ನು ಹಾರಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಕ್ಯಾ.ಪವನ ಕುಮಾರ ಅವರು ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕುಮಾರ ಹರ್ಯಾಣದ ಜಿಂದ್ ನಿವಾಸಿಯಾಗಿದ್ದರು.

ಕಾಳಗ ಮುಂದುವರಿದಾಗ ಪಾರಾ ಘಟಕದ ಇನ್ನೋರ್ವ ಯೋಧ ಓಂ ಪ್ರಕಾಶ ತೀವ್ರವಾಗಿ ಗಾಯಗೊಂಡು ಬಳಿಕ ಬದಾಮಿಬಾಗ್ ಕಂಟೋನ್ಮೆಂಟ್ ಆಸ್ಪತ್ರೆಯಲ್ಲಿ ಅಸು ನೀಗಿದರು.

ಶನಿವಾರ ಮಧ್ಯಾಹ್ನ ಉಗ್ರರು ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ವಾಹನಗಳ ಸಾಲಿನ ಮೇಲೆ ಗುಂಡು ಹಾರಿಸಿದಾಗ ಇಬ್ಬರು ಸಿಆರ್‌ಪಿಎಫ್ ಜವಾನರು ಮತ್ತು ಓರ್ವ ನಾಗರಿಕ ಸಾವನ್ನಪ್ಪಿದ್ದರು. ಬಳಿಕ ಉಗ್ರರು ಇಡಿಐ ಕಟ್ಟಡದೊಳಕ್ಕೆ ಆಶ್ರಯ ಪಡೆದಿದ್ದರು.

ಇಡಿಐ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 100 ಜನರನ್ನು ಕಟ್ಟಡದಿಂದ ತೆರವುಗೊಳಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸುವಲ್ಲಿ ಭದ್ರತಾ ಸಿಬ್ಬಂದಿಗಳು ಯಶಸ್ವಿಯಾಗಿದ್ದು,ರವಿವಾರ ಮಧ್ಯಾಹ್ನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಉಗ್ರರು ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿರುವುದರಿಂದ ಕಾರ್ಯಾಚರಣೆಯು ಇನ್ನಷ್ಟು ಸಮಯ ಮುಂದುವರಿಯಬಹುದೆಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News