ಧ್ವಜದ ಹೆಸರಿನಲ್ಲಿ ಜನರನ್ನು ಚಚ್ಚಿದವರೇ ರಾಷ್ಟ್ರ ವಿರೋಧಿಗಳು: ಮಾಜಿ ಎಬಿವಿಪಿ ಸದಸ್ಯ

Update: 2016-02-24 05:43 GMT

ಸುಮಾರು ಎರಡು ವಾರಗಳಿಂದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮತ್ತು ಅದರ ಸಹಸಂಸ್ಥೆಗಳು ಯಾರು ರಾಷ್ಟ್ರವಾದಿಗಳು ಮತ್ತು ಯಾರು ರಾಷ್ಟ್ರವಿರೋಧಿಗಳು ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಅವರ ವ್ಯಾಖ್ಯಾನಕ್ಕೆ ಹೊಂದಿಕೊಳ್ಳದವರಿಗೆಲ್ಲ ರಾಷ್ಟ್ರವಿರೋಧಿಗಳು ಎನ್ನಲಾಗುತ್ತಿದೆ. ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ಫೆಬ್ರವರಿ 9ರಂದು ಜೆಎನ್‌ಯುನಲ್ಲಿ ಕಾರ್ಯಕ್ರಮ ನಡೆಸಿದವರನ್ನು ವಿಶ್ವವಿದ್ಯಾಲಯದಿಂದ ಅಮಾನತು ಮಾಡುವಂತೆ ಒತ್ತಾಯಿಸುತ್ತಿದೆ. ಆದರೆ ಈ ನಡುವೆ ತಮ್ಮದೇ ಮೂವರು ಸದಸ್ಯರು ತೊರೆದು ಹೋಗಬಹುದು ಎನ್ನುವ ನಿರೀಕ್ಷೆ ಅವರಿಗೆ ಇರಲಿಲ್ಲ.


ಫೆಬ್ರವರಿ 17ರಂದು ಜೆಎನ್‌ಯು ಎಬಿವಿಪಿ ಘಟಕದ ಸದಸ್ಯರಾದ ಜಂಟಿ ಕಾರ್ಯದರ್ಶಿ ಪ್ರದೀಪ್ ನರ್ವಾಲ್, ಸಮಾಜ ವಿಜ್ಞಾನ ಶಾಲೆಯ ಅಧ್ಯಕ್ಷ ರಾಹುಲ್ ಯಾದವ್ ಮತ್ತು ಸಮಾಜ ವಿಜ್ಞಾನ ಶಾಲೆಯ ಕಾರ್ಯದರ್ಶಿ ಅಂಕಿತ್ ಹಂಸ್ ತಮ್ಮ ಹುದ್ದೆಗಳು ಮತ್ತು ಪಕ್ಷದಿಂದ ರಾಜೀನಾಮೆ ನೀಡಿದರು. ಪ್ರದೀಪ್ ನರ್ವಾಲ್ ತಮ್ಮ ರಾಜೀನಾಮೆಗೆ ಕಾರಣವನ್ನೂ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡರು. ಅವರ ಕಾಳಜಿಗಳಲ್ಲಿ ಮುಖ್ಯವಾಗಿ ಜೆಎನ್‌ಯು ವಿರುದ್ಧ ನಡೆಯುತ್ತಿರುವ ನಕಾರಾತ್ಮಕ ಪ್ರಚಾರವೂ ಸೇರಿದೆ. ಅಲ್ಲದೆ ರೊಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣವನ್ನು ಆಡಳಿತ ಪಕ್ಷ ನಿಭಾಯಿಸಿರುವ ರೀತಿಯೂ ಮತ್ತೊಂದು ಕಾರಣವಾಗಿದೆ. ಯಾದವ್ ಮತ್ತು ಹಂಸ್ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಓದುತ್ತಿದ್ದಾರೆ. ಹಂಸ್ ಜನವರಿಯಲ್ಲಿ ಕಾರ್ಯದರ್ಶಿಯಾಗಿದ್ದರು. 24 ವರ್ಷದ ನಾರ್ವಲ್ ಇತಿಹಾಸ ಓದುತ್ತಿದ್ದಾರೆ. ರಾಜೀನಾಮೆ ನೀಡುವ ಮೊದಲು ಏಳು ತಿಂಗಳಿಂದ ಎಬಿವಿಪಿ ಸದಸ್ಯರಾಗಿದ್ದರು.


ಸಂದರ್ಶನವೊಂದರಲ್ಲಿ ಕೇಂದ್ರ ಸರ್ಕಾರವು ರೋಹಿತ್ ವೆಮುಲ ಪ್ರಕರಣವನ್ನು ನಿಭಾಯಿಸಿದ ರೀತಿಯನ್ನು ಟೀಕಿಸಿದ ನಾರ್ವಲ್, ವಿಶ್ವವಿದ್ಯಾಲಯವು ಸ್ವಾಯತ್ತ ಪ್ರದೇಶ ಮತ್ತು ಸಚಿವರು ಮತ್ತು ರಾಜಕಾರಣಿಗಳ ಮಧ್ಯಪ್ರವೇಶ ಸ್ವಾಗತಾರ್ಹವಲ್ಲ. ಜಾತಿವಾದದ ವಿಷಯದ ಬಗ್ಗೆ ಎಬಿವಿಪಿ ಮಾತನಾಡಲು ಸಿದ್ಧವಿಲ್ಲ ಎಂದು ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ.


ಫೆಬ್ರವರಿ 9ರಂದು ನಡೆದ ಕಾರ್ಯಕ್ರಮದಲ್ಲಿ ನಾರ್ವಲ್ ಉಪಸ್ಥಿತರಿದ್ದರು. ಎಬಿವಿಪಿ ಸದಸ್ಯರಾಗಿ ಅವರೂ ರಾಷ್ಟ್ರವಾದಿ ಘೋಷಣೆಗಳನ್ನು ಕೂಗಿದ್ದರು. ಭಾರತ ವಿರೋಧಿ ಘೋಷಣೆಗಳನ್ನು ಕೂಗಿರುವುದು ತಪ್ಪು. ಆದರೆ ಅದು ಜೆಎನ್‌ಯು ವಿದ್ಯಾರ್ಥಿಗಳ ಕೆಲಸವಲ್ಲ. ಹೊರಗಿನವರು ಅಂತಹ ಘೋಷಣೆಗಳನ್ನು ಕೂಗಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. ಈ ಹೊರಗಿನವರಿಗೆ ಜೆಎನ್‌ಯು ವಿದ್ಯಾರ್ಥಿಗಳ ಬೆಂಬಲವಿದೆ ಎಂದ ಅವರು, ಎಂಟು ಮಂದಿ ಮಾಡಿರುವ ಕೃತ್ಯಕ್ಕೆ ವಿಶ್ವವಿದ್ಯಾಲಯದ 8000 ವಿದ್ಯಾರ್ಥಿಗಳನ್ನು ದೂರುವುದು ತಪ್ಪು ಎನ್ನುತ್ತಾರೆ.


ಮಾಧ್ಯಮಗಳು ಜೆಎನ್‌ಯು ವಿಚಾರವಾಗಿ ನಡೆದುಕೊಂಡ ರೀತಿಯನ್ನೂ ಅವರು ಖಂಡಿಸಿದ್ದಾರೆ. ಜೆಎನ್‌ಯು ಅತೀ ದೊಡ್ಡ ರಾಷ್ಟ್ರವಾದಿ ಸಂಸ್ಥೆಯಾಗಿದೆ ಮತ್ತು ಧ್ವಜದ ಹೆಸರಲ್ಲಿ ಜನರನ್ನು ಚಚ್ಚಿದ ವ್ಯಕ್ತಿಗಳು ಅತೀ ದೊಡ್ಡ ರಾಷ್ಟ್ರವಿರೋಧಿಗಳು ಮತ್ತು ಸಂವಿಧಾನ ವಿರೋಧಿಗಳು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News