ಚಳಿಗಾಲದ ಅಧಿವೇಶನದಲ್ಲಿ ಸರಕಾರದ ಚಳಿ ಬಿಡಿಸಿದ ಜ್ಯೋತಿರಾದಿತ್ಯ ಸಿಂಧಿಯಾ

Update: 2016-02-24 15:40 GMT

ಹೊಸದಿಲ್ಲಿ , ಫೆ 24 : ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬುಧವಾರ ರೋಹಿತ್ ವೇಮುಲ ಆತ್ಮಹತ್ಯೆ ಹಾಗು ಜೆ ಎನ್ ಯು ಪ್ರಕರಣದಲ್ಲಿ ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಆರೋಪ ಹೊರಿಸಿದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂಸದ, ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಕೇಂದ್ರ ಸರಕಾರದ ಚಳಿ ಬಿಡಿಸಿದರು . 
ಅವರ ಕೆಲವು ಪ್ರಮುಖ ವಾಗ್ಬಾಣಗಳು ಇಲ್ಲಿವೆ :
 # ನಾಥೂರಾಮ್ ಗೋಡ್ಸೆ ದೇಶ ಭಕ್ತ ಎಂದು ಸಾಕ್ಷಿ ಮಹಾರಾಜ್ ಹೇಳುತ್ತಾರೆ. ದೇಶದ ರಾಷ್ಟ್ರಪಿತನನ್ನು ಗುಂಡಿಕ್ಕಿ ಕೊಂದವನು ಈ ಸರಕಾರಕ್ಕೆ ದೇಶಭಕ್ತ. ಆದರೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ವಿದ್ಯಾರ್ಥಿಯೊಬ್ಬನ ಮೇಲೆ ಈ ಸರಕಾರ ದೇಶದ್ರೋಹದ ಆರೋಪ ಹೊರಿಸಿ ಬಂಧಿಸುತ್ತದೆ. 
# ಪಟಿಯಾಲ  ನ್ಯಾಯಾಲಯದ ಹೊರಗೆ ಪತ್ರಕರ್ತರು ಹಾಗು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಯಿತು. ಆದರೆ ಹಲ್ಲೆ ನಡೆಸಿದವರ ಮೇಲೆ ಸರಕಾರ ಯಾವುದೇ ಕ್ರಮ ಕೈ ಗೊಲ್ಲಲಿಲ್ಲ. ವಿಕ್ರಮ್ ಚೌಹಾನ್ ಹಾಗು ಯಶ್ಪಾಲ್ ಸಿಂಗ್ ನಂತಹ ವಕೀಲರು ನಮಗೆ ಪೋಲೀಸರ ಬೆಂಬಲ ಇತ್ತು ಎಂದು ಹೇಳಿದ್ದಾರೆ.
# "ನಾನು ಜೈಲಿನ ಒಳಗೆ ಹೋಗಿ ಕನ್ಹಯ್ಯ ಗೆ ಹೊಡೆಯುತ್ತೇನೆ " ಎಂದು ಯಶ್ಪಾಲ್ ಹೇಳುತ್ತಾನೆ. ಸಿಪಿಐ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಶಾಸಕ ಒ .ಪಿ. ಶರ್ಮ " ನನ್ನ ಕೈಯಲ್ಲಿ ಬಂದೂಕು ಇದ್ದಿದ್ದರೆ ನಾನು ಗುಂಡು ಹಾರಿಸಿ ಬಿಡುತ್ತಿದ್ದೆ " ಎಂದು ಹೇಳಿದ್ದಾರೆ. ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ನೀವು ? 
# ಜೆ ಎನ್ ಯು ಗೆ ಹಫೀಜ್ಹ್ ಸಯೀದ್ ಬೆಂಬಲ ಇತ್ತು ಎಂದು ಗೃಹ ಸಚಿವ ರಾಜ್ ನಾಥ್ ಸಿಂಗ್ ಹೇಳುತ್ತಾರೆ. ಇದನ್ನು ಹೇಳಲು ಸರಕಾರದ ಬಳಿ ಯಾವ ಸಾಕ್ಷ್ಯ ಇದೆ ? ಇದನ್ನು ಹೇಳುವ ಮೊದಲು ನೀವು ಈ ಬಗ್ಗೆ ತನಿಖೆ ನಡೆಸಿದ್ದೀರಾ ? 
# " ನನ್ನ ದಾರಿಯೇ ಸರಿಯಾದ ದಾರಿ " ಎಂಬುದು ಈ ಸರಕಾರದ ನಿಲುವಾಗಿದೆ. 
# ಕಳೆದ ಎರಡು ವರ್ಷಗಳಲ್ಲಿ  ಈ ದೇಶದಲ್ಲಿ ಅಸಹಿಷ್ಣುತೆಯ ವಾತಾವರಣವನ್ನು ನಿರ್ಮಿಸಲಾಗಿದೆ. ಭಿನಾಭಿಪ್ರಾಯವನ್ನು ಹತ್ತಿಕ್ಕಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ಸುಳ್ಳಾರೋಪದಲ್ಲಿ ಬಂಧಿಸುವುದಕ್ಕಿಂತ ಕೆಟ್ಟದು ಯಾವುದೂ ಇಲ್ಲ. 
# 8000 ವಿದ್ಯಾರ್ಥಿಗಳ ವಿವಿಯೊಂದನ್ನು ಕೇವಲ 8 ವಿದ್ಯಾರ್ಥಿಗಳ ಕೃತ್ಯಕ್ಕಾಗಿ ದೇಶವಿರೋಧಿ ಎಂದು ಬ್ರಾಂಡ್ ಮಾಡುವುದನ್ನು ಒಪ್ಪಲಾಗದು. 
# ರೋಹಿತ್ ವೇಮುಲ ನನ್ನು ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ 'ಜಾತಿವಾದಿ ಹಾಗು ದೇಶವಿರೋಧಿ ' ಎಂದು ತಮ್ಮ ಪತ್ರದಲ್ಲಿ ಬರೆದಿದ್ದಾರೆ. ಜಗತ್ತಿನಲ್ಲಿ ಎಲ್ಲಾದರೂ ಮಾನವ ಸಂಪನ್ಮೂಲ ಸಚಿವರೊಬ್ಬರು ಒಂದು ಪ್ರಕರಣದಲ್ಲಿ ಐದು ಪತ್ರ ಬರೆದದ್ದನ್ನು ನೀವು ಕೇಳಿದ್ದೀರಾ ?
# ಪ್ರಧಾನ ಮಂತ್ರಿಗಳು ಯುವಜನತೆ ದೇಶದ ಸಂಪತ್ತು ಎಂದು ಹೇಳುತ್ತಾರೆ. ಆದರೆ ನಾವು ಈಗ ದೇಶದಲ್ಲಿ ನೋಡುತ್ತಿರುವುದೇನು ? ಮಧ್ಯಪ್ರದೇಶದಲ್ಲಿ ವ್ಯಾಪಂ ಹಗರಣವಿದೆ , ಪಂಜಾಬ್ ನಲ್ಲಿ ಡ್ರಗ್ಸ್ ಮಾರಿಯಿದೆ, ಪುಣೆಯ ಫಿಲಂ ಇನ್ಸ್ಟಿ ಟ್ಯೂಟ್ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲಾಯಿತು. ಭಿನಾಭಿಪ್ರಾಯ ಹಾಗು ವಿರೋಧ ವ್ಯಕ್ತ ಪಡಿಸುವವರನ್ನು ಸರಕಾರೀ ಯಂತ್ರವನ್ನು ದುರುಪಯೋಗ ಮಾಡಲಾಗುತ್ತಿದೆ. 
# ಸರಕಾರದ ಮಾತು ಹಾಗು ಕೃತ್ಯದಲ್ಲಿ ಭಾರೀ ವ್ಯತ್ಯಾಸವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News