ಸಬ್ಸಿಡಿ ಎಲ್ಪಿಜಿ ಸಿಲಿಂಡರ್‌ಗಳ ಸಂಖ್ಯೆ 10ಕ್ಕೆ ಇಳಿಕೆ

Update: 2016-02-26 18:22 GMT

ಆರ್ಥಿಕ ಸಮೀಕ್ಷೆ ಶಿಫಾರಸು

ಹೊಸದಿಲ್ಲಿ, ಫೆ.26: ಎಲ್‌ಪಿಜಿ ಸಬ್ಸಿಡಿ ನೀಡಿಕೆಯಲ್ಲಿ ತಾರ್ಕಿಕವಾದ ನೀತಿಯನ್ನು ಅನುಸರಿಸಬೇಕೆಂದು ಬಜೆಟ್‌ಪೂರ್ವ ಆರ್ಥಿಕ ಸಮೀಕ್ಷೆ ಪ್ರತಿಪಾದಿಸಿದ್ದು, ಪ್ರಸಕ್ತ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಪೂರೈಕೆ ಮಾಡಲಾಗುವ ಅಡುಗೆ ಅನಿಲವನ್ನು ವರ್ಷಕ್ಕೆ 12 ಸಿಲಿಂಡರ್‌ನಿಂದ 10ಕ್ಕೆ ಇಳಿಸಬೇಕೆಂದು ಶಿಫಾರಸು ಮಾಡಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ 575 ರೂ. ಬೆಲೆಯಿರುವ ತಲಾ 14.2 ಕೆ.ಜಿ.ತೂಕದ 12 ಎಲ್‌ಪಿಜಿ ಸಿಲಿಂಡರ್‌ಗಳನ್ನು ಗೃಹ ಬಳಕೆಗೆ 419.26 ರೂ. ಸಬ್ಸಿಡಿದರದಲ್ಲಿ ನೀಡಲಾಗುತ್ತಿದೆ.

ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು 2012ರ ಸೆಪ್ಟೆಂಬರ್‌ನಲ್ಲಿ ಪ್ರತಿ ವರ್ಷವೂ ಮನೆಗಳಿಗೆ ಸಬ್ಸಿಡಿ ದರದಲ್ಲಿ ನೀಡಲಾಗುವ ಎಲ್‌ಪಿಜಿ ಸಿಲಿಂಡರ್‌ಗಳ ಸಂಖ್ಯೆಯನ್ನು ಆರಕ್ಕೆ ಇಳಿಸಿತ್ತು. ಆನಂತರ 2013 ಜನವರಿಯಲ್ಲಿ ಅದನ್ನು 9ಕ್ಕೇರಿಸಿತ್ತು.

2014ರ ಜನವರಿಯಲ್ಲಿ ಕೇಂದ್ರ ಸರಕಾರವು ಈ ಮಿತಿಯನ್ನು 12 ಸಿಲಿಂಡರ್‌ಗಳಿಗೇರಿಸಿತ್ತು. ಪ್ರಸ್ತುತ 14.2 ಕೆ.ಜಿ. ಸಬ್ಸಿಡಿದರದ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಯಾವುದೇ ಅಬಕಾರಿ ಸುಂಕವನ್ನು ವಿಧಿಸಲಾಗುವುದಿಲ್ಲ. ಆದರೆ ಅದೇ ಗಾತ್ರದ ಗೃಹಬಳಕೆಯೇತರ ಸಿಲಿಂಡರ್‌ಗಳಿಗೆ ಶೇ.8ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಸಬ್ಸಿಡಿ ದರದಲ್ಲಿ ದೊರೆಯುವ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಅಬಕಾರಿ ಸುಂಕ ದಿಂದ ವಿನಾಯಿತಿ ನೀಡಲಾಗುತ್ತಿದೆ.

ಗೃಹಬಳಕೆಯೇತರ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಶೇ.5ರಷ್ಟು ಅಮದು ಸುಂಕ ವಿಧಿಸಲಾಗುತ್ತಿದೆ. ಸರಕಾರಿ ಸ್ವಾಮ್ಯದ ತೈಲಕಂಪೆನಿಗಳು ಎಲ್‌ಪಿಜಿಯನ್ನು 5 ಕೆ.ಜಿ, 14.2 ಕೆ.ಜಿ. ಹಾಗೂ 19 ಕೆ.ಜಿ.ಯ ವಿಭಿನ್ನ ಸಿಲಿಂಡರ್‌ಗಳಲ್ಲಿ ಮಾರಾಟ ಮಾಡುತ್ತಿವೆ.ಗೃಹಬಳಕೆಯ ಎಲ್‌ಪಿಜಿ ಗ್ರಾಹಕನಿಗೆ ತಲಾ 14.2 ಕಿ.ಜಿ. ಗಾತ್ರದ 12 ಸಿಲಿಂಡರ್‌ಗಳು ಅಥವಾ ತಲಾ 5 ಕೆ.ಜಿ.ಗಾತ್ರದ 34 ಸಿಲಿಂಡರ್‌ಗಳನ್ನು ಸಬ್ಸಿಡಿದರದಲ್ಲಿ ವಿತರಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News