ವಿದೇಶಿ ಶಕ್ತಿಗಳಿಂದ ಭಾರತದ ಚುನಾವಣೆ ಮೇಲೆ ಪ್ರಭಾವ ಯತ್ನ: ಮೋದಿ

Update: 2024-05-07 02:28 GMT

Photo: PTI

ಹೊಸದಿಲ್ಲಿ: ವಿದೇಶಿ ಶಕ್ತಿಗಳು ಭಾರತದ ಚುನಾವಣೆ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿವೆ. ಆದರೆ ಅಂಥ ಪ್ರಯತ್ನ ವಿಫಲವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

"ನಮ್ಮ ಚುನಾವಣೆ ಮೇಲೆ ಪ್ರಭಾವ ಬೀರಲು ವಿಶ್ವದ ಕೆಲ ಶಕ್ತಿಗಳು ಪ್ರಯತ್ನಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅವರು ತಮ್ಮ ಅಭಿಪ್ರಾಯಗಳನ್ನು ಹೇಳುವುದು ಮಾತ್ರವಲ್ಲದೇ ಚುನಾವಣೆಯ ಮೇಲೆ ಪ್ರಭಾವ ಬೀರುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಆದರೆ ಅಂಥ ಪ್ರಯತ್ನ ಯಶಸ್ವಿಯಾಗದು" ಎಂದು ವಿಶ್ಲೇಷಿಸಿದರು.

ಭಾರತದ ಜನತೆ ಪ್ರಭಾವಕ್ಕೆ ಒಳಗಾಗುವುದಿಲ್ಲ. ತುರ್ತು ಪರಿಸ್ಥಿತಿಯ ಬಳಿಕ ಬಡವರು ಸೇರಿದಂತೆ ಭಾರತದ ಜನತೆ ಭಾರತದ ಪ್ರಜಾಪ್ರಭುತ್ವದ ಸೊಬಗನ್ನು ಪ್ರದರ್ಶಿಸಿದ್ದಾರೆ. ದೀಪ ಆರುವ ಮುನ್ನ ಪ್ರಜ್ವಲಿಸುತ್ತದೆ. ಈಗ ಪ್ರಜ್ವಲಿಸುತ್ತದೆ ಎಂದು ಕಂಡುಬಂದರೂ, ಅದು ಕತ್ತಲೆಗೆ ತಳ್ಳಲಿದೆ ಎಂದರು.

ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಮೋದಿ, ಕಾನೂನಾತ್ಮಕವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಕರ್ನಾಟಕ ಸರ್ಕಾರ ಜೆಡಿಎಸ್ ಸಂಸದರ ವಿರುದ್ಧ ಕ್ರಮ ಕೈಗೊಳ್ಳದೇ, ಚುನಾವಣಾ ಪರಿಗಣನೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದರು. "ಇದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ.  ಬಿಜೆಪಿ ವಿಚಾರದಲ್ಲಿ, ಸಂವಿಧಾನದ ವಿಚಾರದಲ್ಲಿ, ನನ್ನ ನಿಲುವು ಸ್ಪಷ್ಟ. ಇಂಥ ಜನರ ಬಗ್ಗೆ ಶೂನ್ಯ ಸಹಿಷ್ಣುತೆ ಎಂಬ ಸ್ಪಷ್ಟ ನಿಲುವು ನನ್ನದು" ಎಂದರು.

ಇದೇ ಮೊದಲ ಬಾರಿಗೆ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ ಅವರು, ಪ್ರಜ್ವಲ್ ರೇವಣ್ಣ ಇರುವ 2976 ವಿಡಿಯೊಗಳೆಲ್ಲವೂ ಒಂದೇ ದಿನಕ್ಕೆ ಸಂಬಂಧಿಸಿದವಲ್ಲ. ಅಂದರೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಇದ್ದ ದಿನದಿಂದಲೂ ಇವು ಇವೆ. ಈ ವಿಡಿಯೊಗಳನ್ನು ಸಂಗ್ರಹಿಸಿಕೊಂಡು ಚುನಾವಣೆ ಸಂದರ್ಭದಲ್ಲಿ ನಿರ್ದಿಷ್ಟ ಸಮುದಾಯ ಮತ ಚಲಾಯಿಸಿದ ಬಳಿಕ ಬಿಡುಗಡೆ ಮಾಡಿದೆ" ಎಂದು ಆಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News