ಓಲೈಕೆಯ ಬಜೆಟ್

Update: 2016-02-29 18:43 GMT

ಮೂಲ ಸೌಕರ್ಯಕ್ಕೆ 2.21 ಲಕ್ಷ ಕೋಟಿ ರೂ.

ಹೊಸದಿಲ್ಲಿ, ಫೆ.29: ಹಲವಾರು ರಾಜ್ಯಗಳಲ್ಲಿ ಶೀಘ್ರವೇ ನಡೆಯಲಿರುವ ಚುನಾವಣೆಗಳ ಮೇಲೆ ಕಣ್ಣಿಟ್ಟು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸೋಮವಾರ ರೈತರು ಮತ್ತು ಬಡವರ ಪರವಾದ ಬಜೆಟ್ ಮಂಡಿಸಿದರು. ಹಲವಾರು ಕೃಷಿ ಕಾರ್ಯಕ್ರಮಗಳು, ಗ್ರಾಮೀಣ ನೆರವು ಮತ್ತು ಆರೋಗ್ಯ ಯೋಜನೆಗಳನ್ನು ಅವರು ಘೋಷಿಸಿದ್ದಾರೆ. ಇದೇ ವೇಳೆ, ಜೇಟ್ಲಿ ಜನಮರುಳು ಕಾರ್ಯಕ್ರಮಗಳಿಂದ ಹಿಂದೆ ಸರಿದಿದ್ದಾರೆ ಹಾಗೂ ಸುಧಾರಣೆಗಳನ್ನು ಗುರಿಯಾಗಿಸಿದ ಬಜೆಟ್‌ನಲ್ಲಿ ಹೂಡಿಕೆ, ಬೆಳವಣಿಗೆ ಮತ್ತು ಉದ್ಯೋಗ ಮುಂತಾದ ಮಹತ್ವದ ಆದ್ಯತಾ ಕ್ಷೇತ್ರಗಳಲ್ಲಿ ಸಮತೋಲನ ಸಾಧಿಸಿದ್ದಾರೆ.

ಉದ್ಯೋಗಗಳನ್ನು ಸೃಷ್ಟಿಸುವ, ಮೂಲ ಸೌಕರ್ಯಗಳನ್ನು ನಿರ್ಮಿಸುವ, ತೆರಿಗೆ ನಿಯಮಗಳನ್ನು ಸರಳಗೊಳಿಸುವ ಮತ್ತು ಸಣ್ಣ ಉದ್ದಿಮೆಗಳು ಮತ್ತು ಸ್ಟಾರ್ಟ್- ಅಪ್‌ಗಳು ವಿಜೃಂಭಿಸುವ ವಾತಾವರಣವನ್ನು ರೂಪಿಸುವ ಯೋಜನೆಗಳನ್ನು ಅವರು ಪ್ರಕಟಿಸಿದರು.

ತನ್ನ ಎರಡನೆ ಪೂರ್ಣ ಬಜೆಟ್‌ನಲ್ಲಿ ಹಣಕಾಸು ಸಚಿವರು ಸ್ಪಷ್ಟ ಸಂದೇಶವೊಂದನ್ನು ಹೊರಡಿಸಿದ್ದಾರೆ: ಚುನಾವಣಾ ಹಿನ್ನಡೆಗಳು ಮತ್ತು ಆಕ್ರಮಣಕಾರಿ ಪ್ರತಿಪಕ್ಷಗಳ ಹೊರತಾ ಗಿಯೂ, ಸುಧಾರಣೆಗಳ ಬಗ್ಗೆ ಸರಕಾರ ದೃಢ ನಿರ್ಧಾರ ಹೊಂದಿದೆ.


ಹೂಡಿಕೆ ಮತ್ತು ಬೆಳವಣಿಗೆಗಾಗಿ ಬಜೆಟ್‌ನಲ್ಲಿ ಹಲವಾರು ಕ್ರಮಗಳನ್ನು ಪ್ರಕಟಿಸಲಾಗಿದೆ. ಈ ಪೈಕಿ, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕಾಗಿ ಒಟ್ಟು 97,000 ಕೋಟಿ ರೂಪಾಯಿ ಘೋಷಣೆಯೂ ಒಂದು.
ದೇಶದ ಜನಸಂಖ್ಯೆಯ ಅರ್ಧದಷ್ಟು ಮಂದಿಗೆ ಉದ್ಯೋಗ ನೀಡುವ ಕೃಷಿ ಕ್ಷೇತ್ರದ ಅವನತಿಯನ್ನು ತಡೆಯಲು ಸಚಿವರು ಹಲವಾರು ಕ್ರಮಗಳನ್ನು ಘೋಷಿಸಿದ್ದಾರೆ.
ಈ ಪೈಕಿ ಕೆಲವು: ಪ್ರತೀ ಕುಟುಂಬಕ್ಕೆ ರೂ. 1 ಲಕ್ಷದವರೆಗೆ ಆರೋಗ್ಯ ವಿಮೆ, ಬಡ ಕುಟುಂಬಗಳ ಮಹಿಳಾ ಸದಸ್ಯರಿಗೆ ಎಲ್‌ಪಿಜಿ ಸಂಪರ್ಕ ನೀಡಲು 2,000 ಕೋಟಿ ರೂ. ನಿಧಿ (ಹಾಲಿ ಹಣಕಾಸು ವರ್ಷದಲ್ಲಿ ಬಡತನ ರೇಖೆಯಿಂದ ಕೆಳಗಿರುವ 1.5 ಕೋಟಿ ಕುಟುಂಬಗಳು ಈ ಸೌಲಭ್ಯದ ವ್ಯಾಪ್ತಿಗೆ ಬರುತ್ತವೆ), ಕಡಿಮೆ ವೆಚ್ಚದ ಮನೆಗಳನ್ನು ಉತ್ತೇಜಿಸಲು ಕ್ರಮಗಳು ಮತ್ತು 28.5 ಲಕ್ಷ ಹೆಕ್ಟೇರ್ ಜಮೀನಿಗೆ ನೀರುಣಿಸುವ ಯೋಜನೆ.

ಸಾಮಾಜಿಕ ಕ್ಷೇತ್ರದಲ್ಲಿ ಖರ್ಚು ಮಾಡುವ ಮೊತ್ತದಲ್ಲಿಯೂ ಸಚಿವರು ಏರಿಕೆಯನ್ನು ಘೋಷಿಸಿದರು. ಈ ಮೂಲಕ, ಗ್ರಾಮೀಣ ಮತ್ತು ಸಾಮಾಜಿಕ ಕ್ಷೇತ್ರಗಳು ಹಿಂದುಳಿದರೆ ಎರಡಂಕಿಯ ಬೆಳವಣಿಗೆ ದರವನ್ನು ಸಾಧಿಸುವುದು ಅಸಾಧ್ಯ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

ಗೇಣಿ ರೈತರನ್ನೂ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಅರ್ಹರನ್ನಾಗಿಸುವ ನೂತನ ಕಾರ್ಯಕ್ರಮವೊಂದನ್ನು ಅವರು ಘೋಷಿಸಿದರು. ಈ ರೈತರು ಅತ್ಯಧಿಕ ಬಡ್ಡಿ ವಸೂಲು ಮಾಡುವ ಖಾಸಗಿ ಲೇವಾದೇವಿದಾರರನ್ನು ಅವಲಂಬಿಸುವುದನ್ನು ಈ ಕಾರ್ಯಕ್ರಮವು ತಪ್ಪಿಸಿದೆ.

ಜೇಟ್ಲಿ ಸೇವೆಗಳ ಮೇಲೆ 0.5 ಶೇ. ಸೆಸ್ ವಿಧಿಸಿದ್ದಾರೆ. ಇದರಿಂದಾಗಿ ಸೇವಾ ತೆರಿಗೆ 15 ಶೇ.ಕ್ಕೆ ಏರುತ್ತ ದೆ ಹಾಗೂ ಹೆಚ್ಚಿನ ಸೇವೆಗಳು ತುಟ್ಟಿಯಾಗುತ್ತವೆ.

ಜೆಎನ್‌ಯು ವಿವಾದ ಮತ್ತು ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಒತ್ತಡದಲ್ಲಿರುವ ಸರಕಾರ, ದುರ್ಬಲ ವರ್ಗಗಳು ಮತ್ತು ವಿದ್ಯಾರ್ಥಿಗಳಿಗಾಗಿಯೂ ಕಾರ್ಯಕ್ರಮಗಳನ್ನು ಘೋಷಿಸಿದೆ.

♦♦♦

ಕೃಷಿಗೆ 36,000 ಕೋ.ರೂ.

ಕೃಷಿ ಸಾಲಕ್ಕೆ 9 ಲಕ್ಷ ಕೋಟಿ ರೂ.

ಹೊಸದಿಲ್ಲಿ, ಫೆ.29: 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಹಾಕಿಕೊಂಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೃಷಿ ಕ್ಷೇತ್ರಕ್ಕೆ ಸುಮಾರು 36,000 ಕೋಟಿ ರೂಪಾಯಿ ಅನುದಾನವನ್ನು ಘೋಷಿಸಿದ್ದಾರೆ. ಅದೇ ವೇಳೆ, ಮುಂದಿನ ಹಣಕಾಸು ವರ್ಷದ ಕೃಷಿ ಸಾಲ ಮಿತಿಯನ್ನು 9 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಿದ್ದಾರೆ.

ಕೃಷಿ ಸಾಲದ ಬಡ್ಡಿ ಮನ್ನಾಕ್ಕಾಗಿ ಸಚಿವರು 15,000 ಕೋಟಿ ರೂ.ಯನ್ನು ಒದಗಿಸಿದರು. ನೂತನ ಬೆಳೆ ವಿಮೆಗೆ 5,500 ಕೋಟಿ ರೂ. ಮತ್ತು ದವಸ ಧಾನ್ಯಗಳ ಉತ್ಪತ್ತಿ ಹೆಚ್ಚಿಸಲು 500 ಕೋಟಿ ರೂ.ಯನ್ನು ನಿಗದಿಪಡಿಸಿದರು.

ಏಕೀಕೃತ ಕೃಷಿ ಮಾರುಕಟ್ಟೆಯೊಂದನ್ನು ಎಪ್ರಿಲ್ 14ರಂದು ಆರಂಭಿಸಲಾಗುವುದು ಎಂಬ ಭರವಸೆ ನೀಡಿದ ಸಚಿವರು, ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ಎಲ್ಲ 14 ಕೋಟಿ ರೈತರಿಗೆ 2017 ಮಾರ್ಚ್ ವೇಳೆಗೆ ವಿತರಿಸಲಾಗುವುದು ಎಂದರು.

‘‘ದೇಶದ ಆಹಾರ ಭದ್ರತೆಯ ಬೆನ್ನೆಲುಬಾಗಿರುವ ರೈತರಿಗೆ ನಾವು ಆಭಾರಿಯಾಗಿದ್ದೇವೆ. ನಾವು ಆಹಾರ ಭದ್ರತೆಗಿಂತಲೂ ಮುಂದಕ್ಕೆ ಆಲೋಚಿಸಿ ನಮ್ಮ ರೈತರಿಗೆ ಆದಾಯ ಭದ್ರತೆಯ ಭಾವನೆಯನ್ನು ಒದಗಿಸಬೇಕಾಗಿದೆ’’ ಎಂದರು.

ಲೋಕಸಭೆಯಲ್ಲಿ ಸೋಮವಾರ 2016-17ರ ಬಜೆಟನ್ನು ಮಂಡಿಸಿದ ಬಳಿಕ ಅವರು ಮಾತನಾಡುತ್ತಿದ್ದರು.

2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೃಷಿ ಮತ್ತು ಕೃಷಿಯೇತರ ಕ್ಷೇತ್ರಗಳಲ್ಲಿನ ತನ್ನ ಭಾಗೀದಾರಿಕೆಯನ್ನು ಸರಕಾರ ಪುನರ್ರೂಪಿಸುವುದು ಎಂದು ಹಣಕಾಸು ಸಚಿವರು ತಿಳಿಸಿದರು.

‘‘ಕೃಷಿ ಮತ್ತು ರೈತ ಕಲ್ಯಾಣಕ್ಕಾಗಿ ನಾವು ಒದಗಿಸುವ ಒಟ್ಟು ಮೊತ್ತ 35,984 ಕೋಟಿ ರೂಪಾಯಿ’’ ಎಂದು ಜೇಟ್ಲಿ ನುಡಿದರು.

ರೈತರಿಗೆ ಸರಿಯಾದ ಸಮಯದಲ್ಲಿ ಹಾಗೂ ಸಾಕಷ್ಟು ಪ್ರಮಾಣದಲ್ಲಿ ಸಾಲ ಸಿಗುವಂತೆ ನೋಡಿಕೊಳ್ಳುವುದಕ್ಕೆ ವಿಶೇಷ ಗಮನವನ್ನು ನೀಡಲಾಗಿದೆ ಎಂದು ಹೇಳಿದ ಸಚಿವರು, ‘‘2015-16ರ ಸಾಲಿನ ಕೃಷಿ ಸಾಲದ ಗುರಿ 8.5 ಲಕ್ಷ ಕೋಟಿ ರೂ. ಆಗಿತ್ತು. 2016-17ರ ಸಾಲಿಗೆ ಈ ಗುರಿಯನ್ನು 9 ಲಕ್ಷ ಕೋಟಿ ರೂ.ಗೆ ಏರಿಸಲಾಗಿದೆ. ಹಾಗೂ ಇದು ಸಾರ್ವಕಾಲಿಕ ಏರಿಕೆಯಾಗಿದೆ’’ ಎಂದರು.

ರೈತರ ಮೇಲಿರುವ ಸಾಲ ಮರುಪಾವತಿ ಹೊರೆಯನ್ನು ಕಡಿಮೆಮಾಡುವುದಕ್ಕಾಗಿ, 2016-17ರಲ್ಲಿ ಬಡ್ಡಿ ಮನ್ನಾಕ್ಕಾಗಿ 15,000 ಕೋಟಿ ರೂ.ಯನ್ನು ಬಜೆಟ್ ಅಂದಾಜಿನಲ್ಲಿ ಒದಗಿಸಲಾಗಿದೆ.

♦♦♦

ಆದಾಯ ತೆರಿಗೆ ಮಿತಿ ಯಥಾಸ್ಥಿತಿ

ಆದಾಯ ತೆರಿಗೆ ಹಂತಗಳು ಮತ್ತು ದರದಲ್ಲಿ ಜೇಟ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದರಿಂದ ತಿಂಗಳ ಸಂಬಳದಾರರಿಗೆ ನಿರಾಶೆಯಾಗಿರುವುದು ಖಂಡಿತ. ಆದಾಗ್ಯೂ, ಕಡಿಮೆ ಆದಾಯ ವ್ಯಾಪ್ತಿಯಲ್ಲಿ ಬರುವವರ ವಾರ್ಷಿಕ ಮಿತಿಯನ್ನು ಏರಿಸುವ ಮೂಲಕ ಸಚಿವರು ಆದಾಯ ತೆರಿಗೆ ಪಾವತಿದಾರರಿಗೆ ಕೊಂಚ ನೆಮ್ಮದಿ ಒದಗಿಸಿದ್ದಾರೆ.

♦♦♦

ಎಸ್‌ಸಿ/ಎಸ್‌ಟಿ, ಮಹಿಳಾ ಉದ್ಯಮಿಗಳಿಗೆ 500 ಕೋಟಿ ರೂ.
2016-17ರ ಬಜೆಟ್‌ನಲ್ಲಿ ‘ಸ್ಟಾಂಡ್ ಆಪ್ ಇಂಡಿಯ’ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಉದ್ಯಮಿಗಳಿಗೆ ಸರಕಾರ 500 ಕೋಟಿ ರೂಪಾಯಿ ಒದಗಿಸಿದೆ.

♦♦♦

ವಿತ್ತೀಯ ಕೊರತೆ
2015-16ರಲ್ಲಿ ವಿತ್ತೀಯ ಕೊರತೆ- ಒಟ್ಟು ದೇಶಿ ಉತ್ಪನ್ನ (ಜಿಡಿಪಿ)ದ 3.9 ಶೇ.
2016-17ರಲ್ಲಿ ವಿತ್ತೀಯ ಕೊರತೆ- ಜಿಡಿಪಿಯ 3.5 ಶೇ.
2016-17ರ ಸಾಲಿನ ಯೋಜನಾ ವೆಚ್ಚ- 5.5 ಲಕ್ಷ ಕೋಟಿ ರೂಪಾಯಿ
ವಿತ್ತೀಯ ಹೊಣೆಗಾರಿಕೆ ನಿರ್ವ ಹಣೆ ಕಾಯ್ದೆ ಪರಿಶೀಲನೆಗೆ ಸಮಿತಿ ರಚಿಸುವ ಪ್ರಸ್ತಾಪ

....

ದೇಶಾದ್ಯಂತ 3 ಸಾವಿರ ಮಿತದರದ ಔಷಧ ಅಂಗಡಿಗಳು
ಪ್ರತಿ ಕುಟುಂಬಕ್ಕೆ 1 ಲಕ್ಷ ರೂ. ಆರೋಗ್ಯ ವಿಮೆ

ಹೊಸದಿಲ್ಲಿ,ಫೆ.29: ಜನಸಾಮಾನ್ಯರಿಗೆ ಮಿತದರದಲ್ಲಿ ಗುಣಮಟ್ಟದ ಔಷಧಗಳನ್ನು ಒದಗಿಸಲು ದೇಶಾದ್ಯಂತ ಸುಮಾರು 3 ಸಾವಿರ ಔಷಧ ಅಂಗಡಿಗಳನ್ನು ತೆರೆಯುವ ಜೊತೆಗೆ ಪ್ರತಿ ಕುಟುಂಬಕ್ಕೆ 1 ಲಕ್ಷ ರೂ.ವಿಮೆಯನ್ನು ಒದಗಿಸುವ ನೂತನ ಆರೋಗ್ಯ ರಕ್ಷಣೆ ಕಾರ್ಯಕ್ರಮವನ್ನು ಕೇಂದ್ರ ಸರಕಾರವು ಶೀಘ್ರವೇ ಚಾಲನೆ ನೀಡಲಿದೆ.

ಪ್ರತಿ ವರ್ಷ ಭಾರತದಲ್ಲಿ ಸುಮಾರು 2.2 ಲಕ್ಷ ಮಂದಿ ಮೂತ್ರಪಿಂಡಕ್ಕೆ ಸಂಬಂಧಿಸಿದ ರೋಗಗಳಿಂದ ತೀವ್ರವಾಗಿ ಪೀಡಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ 3.4 ಕೋಟಿ ಡಯಾಲಿಸ್ ಕಲಾಪ (ಸೆಶನ್ಸ್)ಗಳ ಅಗತ್ಯವುಂಟಾಗಿದೆ. ಈ ನಿಟ್ಟಿನಲ್ಲಿ ದೇಶದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೇವೆಗಳನ್ನು ಒದಗಿಸಲು ರಾಷ್ಟ್ರೀಯ ಡಯಾಲಿಸಿಸ್ ಸೇವಾ ಕಾರ್ಯಕ್ರಮವನ್ನು ಕೇಂದ್ರ ಸರಕಾರವು ಉಪಕ್ರಮಿಸಲಿದೆ.

ಲೋಕಸಭೆಯಲ್ಲಿ 2016-17ನೆ ಸಾಲಿನ ಬಜೆಟ್ ಭಾಷಣ ಮಾಡಿದ ಅವರು, 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರಿಗೆ 30 ಸಾವಿರ ರೂ.ಗಳ ಹೆಚ್ಚುವರಿ ಟಾಪ್‌ಅಪ್ ಪ್ಯಾಕೇಜನ್ನು ಒದಗಿಸಲಾಗುವುದು ಎಂದರು.

ಮಿತದರಲ್ಲಿ ಜನಸಾಮಾನ್ಯರಿಗೆ ಗುಣಮಟ್ಟದ ಔಷಧಗಳು ಲಭ್ಯವಾಗುವಂತೆ ಮಾಡುವುದು ಒಂದು ಮಹತ್ವದ ಸವಾಲೆಂದು ಅಭಿಪ್ರಾಯಿಸಿದ ಜೇಟ್ಲಿ,2016-17ರ ಸಾಲಿನಲ್ಲಿ ‘ಪ್ರಧಾನಿಯವರ ಜನ ಔಷಧಿ ಯೋಜನೆ’ಯಡಿ 3 ಸಾವಿರ ಔಷಧಿ ಅಂಗಡಿಗಳನ್ನು ತೆರೆಯುವ ಮೂಲಕ ಜೆನೆರಿಕ್ ಔಷಧಿಗಳ ಪೂರೈಕೆಗೆ ಸರಕಾರವು ಪುನಶ್ಚೇತನ ನೀಡಲಿದೆಯೆಂದು ತಿಳಿಸಿದರು.


ಕುಟುಂಬ ಸದಸ್ಯರಿಗೆ ಗಂಭೀರವಾದ ಅಸ್ವಸ್ಥತೆಯುಂಟಾದಲ್ಲಿ, ಬಡ ಹಾಗೂ ಆರ್ಥಿಕವಾಗಿ ದುರ್ಬಲ ಕುಟುಂಬಗಳ ಆರ್ಥಿಕ ಸ್ಥಿತಿಯ ಮೇಲೆ ತೀವ್ರ ಒತ್ತಡವುಂಟಾಗಲಿದ್ದು, ಅವರ ಆರ್ಥಿಕ ಭದ್ರತೆಯ ಅಡಿಪಾಯವನ್ನೇ ಕಂಪಿಸುವಂತೆ ಮಾಡುತ್ತದೆ.ಇಂತಹ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಸರಕಾರವು ನೂತನ ಆರೋಗ್ಯ ರಕ್ಷಣೆ ಕಾರ್ಯಕ್ರಮನ್ನು ಆರಂಭಿಸಲಿದ್ದು, ಆ ಮೂಲಕ ಪ್ರತಿ ಕುಟುಂಬಕ್ಕೂ 1 ಲಕ್ಷ ರೂ.ಗಳ ಆರೋಗ್ಯ ವಿಮೆಯನ್ನು ಒದಗಿಸಲಾಗುವುದು.
 ಅರುಣ್‌ಜೇಟ್ಲಿ, ಕೇಂದ್ರ ವಿತ್ತ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News