×
Ad

ಪಶ್ಚಿಮ ಬಂಗಾಳ ರಾಜ್ಯಪಾಲರಿಂದ ರಾಜಭವನದ ಮಹಿಳಾ ಉದ್ಯೋಗಿ ಜೊತೆ ಅನುಚಿತ ವರ್ತನೆ : ಮಮತಾ ಬ್ಯಾನರ್ಜಿ ಆರೋಪ

Update: 2024-05-03 21:34 IST

ಮಮತಾ ಬ್ಯಾನರ್ಜಿ | PC : ANI 

ಕೋಲ್ಕತಾ : ರಾಜಭವನದ ಮಹಿಳಾ ಉದ್ಯೋಗಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾರೆನ್ನಲಾದ ರಾಜ್ಯಪಾಲ ಸಿ.ವಿ. ಆನಂದಬೋಸ್ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರ್ಬಾ ಬರ್ದಮಾನ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಟಿಎಂಸಿ ಪಕ್ಷದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು ರಾಜಭವನದಲ್ಲಿ ಕಿರುಕುಳಕ್ಕೊಳಗಾದ ಮಹಿಳೆಗಾಗಿ ನನ್ನ ಹೃದಯ ಮಿಡಿಯುತ್ತಿದೆ ಎಂದು ಹೇಳಿದರು. ಇದೊಂದು ಅತ್ಯಂತ ಲಜ್ಜೆಗೇಡಿತನದ ಘಟನೆ ಎಂದವರು ಕಿಡಿಕಾರಿದರು.

ರಾಜಭವನದ ಮಹಿಳಾ ಉದ್ಯೋಗಿಯೊಬ್ಬರು ಗುರುವಾರ ರಾಜ್ಯಪಾಲರ ಕಿರುಕುಳದ ವಿರುದ್ಧ ಬಹಿರಂಗವಾಗಿ ಮಾತನಾಡಿದ್ದಾರೆ. ಆ ಮಹಿಳೆಯ ಕಣ್ಣೀರು ನನ್ನ ಹೃದಯ ಒಡೆದಂತಾಗಿದೆ. ಆಕೆಯ ವೀಡಿಯೊ ಮೂಲಕ ನೀಡಿದ ಹೇಳಿಕೆಯನ್ನು ನಾನು ನೋಡಿದ್ದೇನೆ. ಬಿಜೆಪಿಯು ಸಂದೇಶಕಾಲಿಯ ಬಗ್ಗೆ ಮಾತನಾಡುವ ಮುನ್ನ, ರಾಜಭವನದಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳೆಗೆ ರಾಜ್ಯಪಾರು ಯಾಕೆ ಹೀಗೆ ಮಾಡಿದರು ಎಂಬುದಕ್ಕೆ ಬಿಜೆಪಿ ಉತ್ತರಿಸಬೇಕು ಎಂದು ಮಮತಾ ಹೇಳಿದರು.

ಗುರುವಾರ ರಾತ್ರಿ ರಾಜಭವನಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಈ ವಿಷಯವಾಗಿ ಚಕಾರವನ್ನೆತ್ತಿಲ್ಲ. ರಾಜಭವನದಲ್ಲಿ ಇನ್ನು ಮುಂದೆ ಕೆಲಸ ಮಾಡಲು ತನಗೆ ಭಯವಾಗುತ್ತಿದೆಯೆಂದು ಅಳುತ್ತಲೇ ಆ ಮಹಿಳೆ ಹೊರನಡೆದಿದ್ದಾಳೆ.ಅಪರ ಹೊತ್ತಿನಲ್ಲಿ ತನ್ನನ್ನು ಕರೆಸಿಕೊಳ್ಳಲಾಗುತ್ತಿತ್ತು ಹಾಗೂ ತನಗೆ ಕಿರುಕುಳ ನೀಡಲಾಗುತ್ತಿತ್ತು ಎಂದು ಆ ಮಹಿಳೆ ಆಪಾದಿಸಿದ್ದಾಳೆ. ನಮ್ಮ ತಾಯಂದಿರು ಹಾಗೂ ಸಹೋದರಿಯರ ಘನತೆ, ಗೌರವದ ಬಗ್ಗೆ ಮಾತನಾಡುವವರು ಇವರೇನಾ? ಎಂದು ಆ ಮಹಿಳೆ ಹೇಳಿದ್ದಾರೆ.

ಶಾಲಾ ಸೇವಾ ಆಯೋಗ ಪ್ರಕರಣದಲ್ಲಿ ಹಲವಾರು ಮಂದಿ ಉದ್ಯೋಗಗಳನ್ನು ಕಳೆದುಕೊಳ್ಳಲು ಬಿಜೆಪಿ ಕಾರಣ ಎಂದು ಟಿಎಂಸಿ ವರಿಷ್ಠೆ ಆಪಾದಿಸಿದರು.

ಈ ಮಧ್ಯೆ ತನ್ನ ವಿರುದ್ಧ ಹೊರಿಸಲಾದ ಕಿರುಕುಳದ ಆರೋಪವನ್ನು ಪಶ್ಚಿಮಬಂಗಾಳ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ಅಲ್ಲಗಳೆದಿದ್ದಾರೆ. ತಾನು ಯಾವುದೇ ರೀತಿಯ ಸುಳ್ಳು ಆರೋಪಗಳಿಗೆ ಹೆದರುವುದಿಲ್ಲ ಹಾಗೂ ಸತ್ಯವು ಗೆಲ್ಲಲಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News