ಕಪ್ಪು ಹಣ ಘೋಷಣೆಗೆ 4 ತಿಂಗಳು ಕಾಲಾವಕಾಶ

Update: 2016-02-29 19:21 GMT

ಹೊಸದಿಲ್ಲಿ, ಫೆ.29: ದೇಶದಲ್ಲಿ ಕಪ್ಪುಹಣ ಹೊಂದಿರುವವರು ನಾಲ್ಕು ತಿಂಗಳುಗಳೊಳಗೆ ತೆರಿಗೆ ಹಾಗೂ ಶೇ. 45ರಷ್ಟು ದಂಡವನ್ನು ಪಾವತಿಸುವ ಮೂಲಕ,ಶುದ್ಧಹಸ್ತರಾಗಬಹುದೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರಕಟಿಸಿದ್ದಾರೆ.
     ಲೋಕಸಭೆಯಲ್ಲಿ ಸೋಮವಾರ ಬಜೆಟ್ ಭಾಷಣ ಮಾಡುತ್ತಿದ್ದ ಅವರು, ಈವರೆಗೆ ಅಕ್ರಮ ಸಂಪತ್ತನ್ನು ಘೋಷಿಸದವರು ಶೇ.30 ರಷ್ಟು ತೆರಿಗೆ, ಶೇ.7.5 ಸರ್ಚಾರ್ಜ್ ಹಾಗೂ ಶೇ.7.5 ದಂಡ ಹೀಗೆ ತಮ್ಮ ಅಘೋಷಿತ ಆದಾಯದ ಶೇ. 45ರಷ್ಟು ಮೊತ್ತವನ್ನು ಪಾವತಿಸುವ ಮೂಲಕ ಕಾನೂನುಕ್ರಮದಿಂದ ಪಾರಾಗಬಹುದು ಎಂದು ತಿಳಿಸಿದರು.
ಆದರೆ ಬೇನಾಮಿ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿ ಪ್ರಕರಣಗಳಲ್ಲಿ ನೀಡಲಾಗುವ ಕ್ಷಮಾದಾನವು ಕೆಲವೊಂದು ನಿರ್ದಿಷ್ಟ ಶರತ್ತುಗಳಿಗೆ ಒಳಪಟ್ಟಿರುತ್ತದೆಯೆಂದು ಅವರು ತಿಳಿಸಿದರು.
   ಕೇಂದ್ರ ಸರಕಾರವು ಅಕ್ರಮ ಸಂಪತ್ತಿನ ಘೋಷಣೆ ಯೋಜನೆಯನ್ನು ಈ ವರ್ಷದ ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ತೆರೆದಿಡಲಿದೆ.ಅಘೋಷಿತ ಆದಾಯದ ಮೇಲೆ ವಿಧಿಸಲಾಗುವ ಮೇಲ್ತೆರಿಗೆಯನ್ನು 'ಕೃಷಿ ಕಲ್ಯಾಣ್ ಸಚಾರ್ಜ್' ಎಂದು ಕರೆಯಲಾಗುವುದು ಹಾಗೂ ಆ ಮೊತ್ತವನ್ನು ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆಗೆ ಬಳಸಲಾಗುವುದೆಂದು ಸಚಿವರು ತಿಳಿಸಿದರು. ಆದಾಗ್ಯೂ ತೆರಿಗೆಗಳ್ಳವನ್ನು ಸರಕಾರವು ಮಟ್ಟಹಾಕಲಿದೆಯೆಂದು ಅವರು ತಿಳಿಸಿದರು. ಕಳೆದ ಬಜೆಟ್‌ನಲ್ಲಿಯೂ ಕೇಂದ್ರ ಸರಕಾರವು,ಅಘೋಷಿತ ಸಂಪತ್ತನ್ನು ಹೊಂದಿರುವವರಿಗೆ ತಮ್ಮ ಸಂಪತ್ತನ್ನು ಘೋಷಿಸುವ ಅವಕಾಶವನ್ನು ನೀಡಿತ್ತು. ಆರ್ಥಿಕತೆಯಿಂದ ಕಪ್ಪು ಹಣವನ್ನು ಕಿತ್ತು ಹಾಕಲು ನಮ್ಮ ಸರಕಾರವು ಸಂಪೂರ್ಣ ಬದ್ಧವಾಗಿದೆ ಎಂದು ಜೇಟ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News