ಲಂಚ ಪ್ರಕರಣ: ಮಾಜಿ ಕೇಂದ್ರ ಸಚಿವನಿಗೆ ಮೂರುವರೆ ವರ್ಷ ಸಜೆ

Update: 2016-03-01 18:30 GMT

ಹೊಸದಿಲ್ಲಿ, ಮಾ.1: ಸರಕಾರಿ ಅಂಗಡಿಗಳನ್ನು ಮಂಜೂರು ಮಾಡುವುದಕ್ಕೆ ಸಂಬಂಧಿಸಿದ 1993-94ರ ಲಂಚ ಪ್ರಕರಣವೊಂದರಲ್ಲಿ ಮಾಜಿ ಕೇಂದ್ರ ಸಚಿವ ಪಿ.ಕೆ. ತುಂಗನ್‌ರಿಗೆ ಸೋಮವಾರ ಮೂರುವರೆ ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ಇದಲ್ಲದೆ, ವಿಶೇಷ ಸಿಬಿಐ ನ್ಯಾಯಾಧೀಶ ಸಂಜೀವ ಅಗರ್ವಾಲ್, ಅರುಣಾಚಲಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ತುಂಗನ್‌ರಿಗೆ ರೂ. 1 ಲಕ್ಷ ದಂಡವನ್ನೂ ವಿಧಿಸಿದ್ದಾರೆ.

ಆದಾಗ್ಯೂ, ಪ್ರಕರಣದ ಇನ್ನಿಬ್ಬರು ಆರೋಪಿಗಳಾಗಿದ್ದ ಲಖ್ಪಾತ್ಸೆರಿಂಗ್ ಹಾಗೂ ಕೃಷ್ಣ ಎಂಬವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಪ್ರಧಾನಿ ಪಿ.ವಿ. ನರಸಿಂಹ ರಾವ್ ಸರಕಾರದಲ್ಲಿ ತುಂಗನ್ ನಗರ ವ್ಯವಹಾರ ಹಾಗೂ ಉದ್ಯೋಗ ಸಹಾಯಕ ಸಚಿವರಾಗಿದ್ದ ವೇಳೆ ಈ ಹಗರಣ ನಡೆದಿತ್ತು.ನಗರ ವ್ಯವಹಾರ ಮತ್ತು ನೇಮಕಾತಿ ಸಚಿವೆ ಶೀಲಾ ಕೌಲ್ ಹಾಗೂ ಇನ್ನೊಬ್ಬರು ತುಳಸಿ ಬಾಲೋಡಿ ಎಂಬವರೂ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.

ವಿಚಾರಣೆಯ ಕಾಲದಲ್ಲಿ ಅವರಿಬ್ಬರು ಮರಣ ಹೊಂದಿದುದರಿಂದಾಗಿ ಅವರ ವಿರುದ್ಧ ವಿಚಾರಣೆಯನ್ನು ಕೈ ಬಿಡಲಾಗಿತ್ತು.

ಆದಾಗ್ಯೂ, ಕಾನೂನುಬಾಹಿರ ಕೃತ್ಯ ಹಾಗೂ ಪಿತೂರಿ ನಡೆಸಿದ ಆರೋಪದಲ್ಲಿ ಕೌಲ್ ತಪ್ಪಿತಸ್ಥರೆಂದು ನ್ಯಾಯಾಲಯ ಉಲ್ಲೇಖಿಸಿದೆ. 2015ರ ಜೂನ್‌ನಲ್ಲಿ ಕೇಂದ್ರದ ನಿಧಿಯ ದುರ್ಬಳಕೆಯ ಸಂಬಂಧದ 1998ರ ಲಂಚ ಪ್ರಕರಣವೊಂದರಲ್ಲಿ ತುಂಗನ್‌ರಿಗೆ ನಾಲ್ಕುವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News