ಕನ್ಹಯ್ಯ ಬಿಡುಗಡೆಗಾಗಿ ಪ್ರತಿಭಟನೆಯ ಮುಂಚೂಣಿಯಲ್ಲಿದ್ದು ಏಕತೆ ಮೆರೆದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರು

Update: 2016-03-06 14:02 GMT

ಹೊಸದಿಲ್ಲಿ,ಮಾ.6: ರಾಷ್ಟ್ರಾದ್ಯಂತ ಕಾವೇರಿರುವ ಚರ್ಚೆಯನ್ನು ಹುಟ್ಟುಹಾಕಿರುವ ಜೆಎನ್‌ಯು ವಿವಾದದಲ್ಲಿ ಜೈಲು ಸೇರಿದ್ದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ ಅವರ ಮೇಲೆ ದೇಶದ್ರೋಹದ ಆರೋಪವನ್ನು ಹೊರಿಸಿದ್ದನ್ನು ವಿರೋಧಿಸಿ ನಡೆಸಲಾದ ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಸಂಘದ ಹಿಂದಿನ ಅಧ್ಯಕ್ಷರು ಮುಂಚೂಣಿಯಲ್ಲಿದ್ದರು. ವಿವಿಯನ್ನು ‘‘ದೇಶ ವಿರೋಧಿ’’ಎಂದು ಹಣೆಪಟ್ಟಿಯನ್ನು ಅಂಟಿಸುವ ಯಾವುದೇ ಪ್ರಯತ್ನವನ್ನು ತಾವು ಶತಾಯಗತಾಯ ವಿರೋಧಿಸುವುದಾಗಿ ಈ ಮಾಜಿ ನಾಯಕರು ಪಣ ತೊಟ್ಟಿದ್ದಾರೆ.

ಜೆಎನ್‌ಯು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ದೇಶಾದ್ಯಂತದ ಚಿಂತಕರು ಮತ್ತು ವಿದ್ಯಾರ್ಥಿಗಳು ಬೆಂಬಲಿಸಿದ್ದರೆ, ಕನ್ಹಯ್ಯಾರ ಈ ಪೂರ್ವಾಧಿಕಾರಿಗಳು ಪ್ರತಿಭಟನೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.

‘‘ಏಕತೆ ಜೆಎನ್‌ಯು ಸಂಸ್ಕೃತಿಯಲ್ಲಿಯೇ ಇದೆ. ನಾನು ಮತ್ತು ಕನ್ಹಯ್ಯ ಬೇರೆ ಬೇರೆ ರಾಜಕೀಯ ಪಕ್ಷಗಳಿಗೆ ಸೇರಿದ್ದೇವೆ,ಆದರೆ ಈ ಪ್ರತಿಭಟನೆ ವಿದ್ಯಾರ್ಥಿಗಳು ಮತ್ತು ಅವರ ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ದಾಳಿಯ ವಿರುದ್ಧವಾಗಿದೆ’’ಎಂದು 2012ರಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿದ್ದ ಪಿಎಚ್‌ಡಿ ವಿದ್ಯಾರ್ಥಿನಿ ಸುಚೇತಾ ಡೇ ಹೇಳಿದರು. ಇಡೀ ವಿವಿಯನ್ನು ದೇಶ ವಿರೋಧಿ ಎಂದು ಹಣೆಪಟ್ಟಿ ಹಚ್ಚುವುದರ ವಿರುದ್ಧ ನಮ್ಮ ಪ್ರತಿಭಟನೆ ನಡೆಯುತ್ತಿದೆ ಎಂದರು.

ಜೆಎನ್‌ಯು ವಿವಿಯಲ್ಲಿಯೇ ಈಗ ಬೋಧಕರಾಗಿರುವ,ಎರಡು ಬಾರಿ(2002-2004) ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ರೋಹಿತ್ ಅವರು ಫೆ.15ರಂದು ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ವಕೀಲರಿಂದ ಹಲ್ಲೆಗೊಳಗಾದವರ ಪೈಕಿ ಓರ್ವರಾಗಿದ್ದರು.

‘‘ಇದೇ ವಿವಿಯಲ್ಲಿ ಓದಿ ಇದೇ ವಿವಿಯಲ್ಲಿ ಬೋಧಕನಾಗಿ ಸೇರಿದ ನಂತರ ಬೀದಿಗಳಲ್ಲಿ ಜಾಥಾಗಳನ್ನು ನಡೆಸುವ ಮತ್ತು ಪೊಲೀಸರಿಂದ ಏಟುಗಳನ್ನು ತಿನ್ನುವ ದಿನಗಳು ಮುಗಿದವು ಎಂದು ನಾನು ಭಾವಿಸಿದ್ದೆ. ಆದರೆ ಅವೆಲ್ಲವನ್ನೂ ಮತ್ತೆ ಎದುರಿಸಬೇಕಾಗುತ್ತದೆ ಎನ್ನುವುದು ಗೊತ್ತಿರಲಿಲ್ಲ’’ ಎಂದರು.

ಸರಕಾರವು ಈ ಬಾರಿ ತಪ್ಪಾಗಿ ವಿವಿಯನ್ನು ಆಯ್ಕೆ ಮಾಡಿಕೊಂಡಿದೆ. ವಿದ್ಯಾರ್ಥಿ ನಾಯಕರಾಗಿ ನಾವು ಪಕ್ಷಭೇದವನ್ನು ಮರೆತು ಹಲವಾರು ವಿಷಯಗಳಿಗಾಗಿ ಹೋರಾಡಿದ್ದೇವೆ. ಕನ್ಹಯ್ಯಾ ಬಂಧನವೂ ಅವುಗಳಲ್ಲೊಂದು ಎಂದು 2013ರಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಪಿಎಚ್‌ಡಿ ವಿದ್ಯಾರ್ಥಿ ವಿ.ಲೆನಿನ್ ಕುಮಾರ್ ಹೇಳಿದರು.

ಕನ್ಹಯ್ಯಗಿಂತ ಮೊದಲು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಅಶುತೋಷ ಕುಮಾರ್ ಅವರು ಕನ್ಹಯ್ಯಾ ಜೊತೆ ದೇಶದ್ರೋಹ ಆರೋಪ ಹೊರಿಸಲ್ಪಟ್ಟಿರುವ ಐವರು ವಿದ್ಯಾರ್ಥಿಗಳಲ್ಲಿ ಓರ್ವರಾಗಿದ್ದಾರೆ.ಕ್ಯಾಂಪಸ್‌ನಲ್ಲಿ ಉಪಸ್ಥಿತರಿದ್ದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಾಜಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಲ್ಲಿ ಮೋನಾ ದಾಸ್(2004), ಸಂದೀಪ ಸಿಂಗ್(2007), ಅಕ್ಬರ್ ಚೌಧರಿ(2013) ಮತ್ತು ಧನಂಜಯ ತ್ರಿಪಾಠಿ ಅವರೂ ಸೇರಿದ್ದಾರೆ.

1989ರಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಅಮಿತ್ ಸೇನಗುಪ್ತಾ ಅವರು ಜೆಎನ್‌ಯು,ಎಫ್‌ಟಿಐಐ ಮತ್ತು ಹೈದರಾಬಾದ ಕೇಂದ್ರೀಯ ವಿ.ವಿ.ಗಳ ವಿದ್ಯಾರ್ಥಿಗಳ ಚಳವಳಿಯನ್ನು ಬೆಂಬಲಿಸಿದ್ದಕ್ಕಾಗಿ ತನ್ನನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ಸ್‌ನಲ್ಲಿಯ ತನ್ನ ಹುದ್ದೆಗೆ ಕಳೆದ ವಾರ ರಾಜೀನಾಮೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News