ಏರ್ ಇಂಡಿಯಾ ಅಲ್ಲ ವಿಮೆನ್ ಇಂಡಿಯಾ

Update: 2016-03-07 18:32 GMT

ದಿಲ್ಲಿಯಿಂದ ಅಮೆರಿಕಕ್ಕೆ ಹಾರಿದ ಸಂಪೂರ್ಣ ಮಹಿಳಾ ಸಿಬ್ಬಂದಿ ವಿಮಾನ

ಹೊಸದಿಲ್ಲಿ, ಮಾ.7: ದೇಶದ ರಾಜಧಾನಿ ದಿಲ್ಲಿಯಿಂದ ಸ್ಯಾನ್‌ಫ್ರಾನ್ಸಿಸ್ಕೊಗೆ ಮಹಿಳೆಯರೇ ನಡೆಸುವ ಹಾಗೂ ಬೆಂಬಲಿಸುವ ‘ವಿಶ್ವದ ಅತಿಡಿ ದೀರ್ಘ ಅಂತರ’ದ ವಿಮಾನವನ್ನು ತಾನು ಹಾರಿಸಿದ್ದೇನೆಂದು ರಾಷ್ಟ್ರೀಯ ವಿಮಾನ ಸಂಸ್ಥೆ ಏರ್ ಇಂಡಿಯಾ ಸೋಮವಾರ ಹೇಳಿದೆ.

ಸುಮಾರು 17 ತಾಸುಗಳಲ್ಲಿ 14,500 ಕಿ.ಮೀ. ದೂರ ಸಂಚರಿಸಿರುವ ಈ ವಿಮಾನವು, ಅಂತಾರಾಷ್ಟ್ರೀಯ ಮಹಿಳಾ ದಿನ ಸಮಾರಂಭಗಳ ಅಂಗವಾಗಿ ಕಾರ್ಯಾಚರಿಸಿದೆ.

ತಡೆ ರಹಿತ ವಿಮಾನವು ಮಾ.6ರಂದು ಹೊಸದಿಲ್ಲಿಯಿಂದ ಸ್ಯಾನ್‌ಫ್ರಾನ್ಸಿಸ್ಕೊಗೆ ಪ್ರಯಾಣಿಸಿದೆ.

ಮೊದಲ ಬಾರಿಗೆ ಈ ವರ್ಷ, ವಿಶ್ವದ ಅತಿ ಉದ್ದದ ವಿಮಾನದಲ್ಲಿ ಕಾಕ್‌ಪಿಟ್ ಸಿಬ್ಬಂದಿಯಿಂದ ಹಿಡಿದು ಕ್ಯಾಬಿನ್ ಸಿಬ್ಬಂದಿ, ಚೆಕ್-ಇನ್ ಸಿಬ್ಬಂದಿ, ವೈದ್ಯರು, ಗ್ರಾಹಕ ನಿಗಾ ಸಿಬ್ಬಂದಿ, ವಿಮಾನ ಸಂಚಾರ ನಿಯಂತ್ರಣ (ಎಟಿಸಿ) ಹಾಗೂ ಇಡೀ ನಿಲ್ದಾಣ ನಿಭಾವಣೆ ಸಿಬ್ಬಂದಿ ಸಂಪೂರ್ಣ ಮಹಿಳೆಯರಾಗಿದ್ದಾರೆಂದು ಏರ್ ಇಂಡಿಯಾ ಪ್ರಕಟನೆಯೊಂದು ತಿಳಿಸಿದೆ.

ಇದೊಂದು ಚಾರಿತ್ರಿಕ ಹಾರಾಟವಾಗಿದೆ. ಹಾಗೂ ಸರ್ವ ಮಹಿಳಾ ಸಿಬ್ಬಂದಿಯಿಂದ ಕಾರ್ಯಾಚರಿಸಲ್ಪಟ್ಟಿರುವ ಅತಿ ದೂರ ಪ್ರಯಾಣದ ವಿಮಾನವಾಗಿದೆ. ಏರ್ ಇಂಡಿಯಾಕ್ಕೆ ಮಹಿಳೆಯರ ಕುರಿತು ಭಾರೀ ಗೌರವವಿದೆ. ಇದೊಂದು ಮಹಿಳಾ ಸಬಲೀಕರಣದ ದ್ಯೋತಕವಾಗಿದೆಯೆಂದು ಏರ್ ಇಂಡಿಯಾದ ಸಿಎಂಡಿ, ಅಶ್ವನಿ ಲೊಹಾನಿ ಹೇಳಿದ್ದಾರೆ. ವಿಮಾನವನ್ನು ಕ್ಷಮತಾ ಬಾಜಪೇಯಿ ಹಾಗೂ ಶುಭಾಂಗಿ ಸಿಂಗ್ ನಡೆಸಿದ್ದು, ರಮ್ಯಾ ಕೀರ್ತಿಗುಪ್ತಾ ಹಾಗೂ ಅಮೃತ್ ನಾಮಧಾರಿ ಫಸ್ಟ್ ಆಫೀಸರ್‌ಗಳಾಗಿದ್ದರು.

ಏರ್ ಇಂಡಿಯಾದಲ್ಲಿ ಪೈಲಟ್‌ಗಳು, ಕ್ಯಾಬಿನ್ ಸಿಬ್ಬಂದಿ, ಎಂಜಿನಿಯರ್‌ಗಳು, ತಂತ್ರಜ್ಞರು, ವೈದ್ಯರು, ಭದ್ರತಾ ಸಿಬ್ಬಂದಿ ಹಾಗೂ ಕಾರ್ಯಾವಾಹಿಗಳು ಸೇರಿ ಒಟ್ಟು 3,800ರಷ್ಟು ಮಹಿಳಾ ಸಿಬ್ಬಂದಿಯಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News