ಬ್ರಸೆಲ್ಸ್ ದಾಳಿ ಸಂದರ್ಭ ಮುಸ್ಲಿಂ ವ್ಯಕ್ತಿಯ ಸಹಾಯಕ್ಕೆ ಯಹೂದಿ ಸಂತ್ರಸ್ತನ ಪ್ರತಿಸ್ಪಂದನೆ

Update: 2016-04-06 04:07 GMT

ಬ್ರಸೆಲ್ಸ್: ಐಸಿಸ್ ಉಗ್ರರು ಇಲ್ಲಿನ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿದ ಘಟನೆಯಲ್ಲಿ ಬದುಕಿ ಉಳಿದ ವಾಲ್ಟರ್ ಬೆಂಜಮಿನ್, ಆಸ್ಪತ್ರೆಯಿಂದಲೇ ತಮ್ಮ ಫೇಸ್‌ಬುಕ್ ಖಾತೆ ಮೂಲಕ ತಮ್ಮ ರೋಚಕ ಅನುಭವಗಳ ಕಥಾನಕವನ್ನು ಪುಂಖಾನುಪುಂಖವಾಗಿ ಹರಿಯಬಿಟ್ಟಿದರು. ಯಾರೂ ಧೃತಿಗೆಡುವ ಅಗತ್ಯ ಇಲ್ಲ ಎಂದು ಧೈರ್ಯ ತುಂಬಿದ್ದರು.

ಬೆಲ್ಜಿಯಂನ ರಾಜ, ರಾಣಿ ಹಾಗೂ ಮುಖ್ಯಸ್ಥ ರಬ್ಬಿ ಹೀಗೆ ಎಲ್ಲರನ್ನೂ, ಈ ವಿಮಾನ ನಿಲ್ದಾಣದ ಉದ್ಯೋಗಿ ಭೇಟಿಯಾಗಿ, ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದರು.

ದಾಳಿಯ ಬಳಿಕ ವಿಮಾನ ನಿಲ್ದಾಣದಲ್ಲಿ ಹೆಣಗಳ ರಾಶಿಯನ್ನು ದಾಟಿಕೊಂಡು ಹಸನ್ ಫ್ಲವೊಪಿ ಬೆಂಜಮಿನ್ ಅವರತ್ತ ದೂರವಾಣಿ ಚಾಚಿ, "ನೀವು ಸುರಕ್ಷಿತವಾಗಿರುವುದಾಗಿ ತಾಯಿಗೆ ಹೇಳಿ" ಎಂದು ಆತ್ಮೀಯವಾಗಿ ಹೇಳಿದ್ದರು. ಕೆಲವರ ಕೃತ್ಯದಿಂದ ಮುಸ್ಲಿಮರನ್ನು ಭಯೋತ್ಪಾದಕರಾಗಿ ಕಾಣುವ ಸಂದರ್ಭದಲ್ಲಿ ಬೆಂಜಮಿನ್ ಹಸನ್ ಅವರ ಕಥೆ ಹೇಳುವುದು ಮುಖ್ಯ ಎಂದುಕೊಂಡರು.

"ಹಸನ್ ನನ್ನ ತೋಳುಗಳಲ್ಲಿ ಮುಖವಿಟ್ಟು ಬಿಕ್ಕುತ್ತಾ, ನೀವು ಉಳಿದುಕೊಂಡಿರುವುದು ಸಂತೋಷ ಎಂದಿದ್ದರು. ಬೆಲ್ಜಿಯಂನ ಮುಸ್ಲಿಂ ಆಗಿ, ನಾಲ್ಕು ಮಕ್ಕಳ ತಂದೆಯಾದ ಹಸನ್, ಭಯೋತ್ಪಾದಕನಲ್ಲ. ಯಹೂದಿಯಾದ ಬೆಂಜಮಿನ್ ಫೇಸ್‌ಬುಕ್‌ನಲ್ಲಿ ಹೀಗೆ ಬರೆದಿದ್ದರು: "ಅವರು ಒಬ್ಬ ಮಾನವೀಯತೆಯ ವ್ಯಕ್ತಿಯಾಗಿ ಕಂಡುಬಂದರು. ಒಳ್ಳೆಯ ವ್ಯಕ್ತಿ. ಆತನ ಹೆಸರಲ್ಲಿ, ಆತನ ಪತ್ನಿ ಹಾಗೂ ಮಕ್ಕಳ ಹೆಸರಲ್ಲಿ ಇಸ್ರೇಲ್‌ನಲ್ಲಿ ಗಿಡ ಬೆಳೆಸುತ್ತೇನೆ"

ದಾಳಿಯಲ್ಲಿ ಕಾಲು ಕಳೆದುಕೊಂಡು ಚೇತರಿಸಿಕೊಳ್ಳುತ್ತಿರುವ ಬೆಂಜಮಿನ್ ಇದೀಗ ಎಲ್ಲ ಗಾಯಾಳುಗಳ ಧ್ವನಿಯಾಗಿದ್ದಾರೆ. ಘಟನೆಯ ಬಳಿಕ ಮುಸಲ್ಮಾನರನ್ನು ದ್ವೇಷಿಸುವ ಅಥವಾ ಅವರ ಬಗ್ಗೆ ಅನಗತ್ಯ ಭಯಪಡುವುದನ್ನು ಬಿಡುವಂತೆ ವಿಶ್ವಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿದ್ದಾರೆ. ಇಸ್ಲಾಂ ಧರ್ಮವನ್ನು ದ್ವೇಷಿಸುವುದೇ ಸಮಸ್ಯೆಗೆ ಉತ್ತರವಲ್ಲ ಎನ್ನುವುದು ಅವರ ಸ್ಪಷ್ಟ ನುಡಿ.

"ಇದರಿಂದ ನನ್ನನ್ನು ಮುಸಲ್ಮಾನರ ಪರ ನಿಂತ ಆದರ್ಶವಾದಿ ಎಂದು ಕೆಲವರು ಕರೆಯಬಹುದು. ಆದರೆ ನಾನು ಅವರನ್ನಷ್ಟೇ ರಕ್ಷಿಸುತ್ತಿಲ್ಲ. ಇಂದಿಗೂ ನಾನು ಶೇಕಡ 99.99ರಷ್ಟು ಮುಸ್ಲಿಮರು ಒಳ್ಳೆಯವರು. ಅದ್ಭುತ ವ್ಯಕ್ತಿಗಳು ಹಾಗೂ ನಮ್ಮನಿಮ್ಮಂತೆಯೇ ಇರುವವರು. ಅವರು ಭಯೋತ್ಪಾದಕರಲ್ಲ" ಎಂದು ಬೆಂಜಮಿನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News