ಭಾಷೆಯೂ ಭಾಷಿತವೂ

Update: 2016-04-07 18:02 GMT

ನಮ್ಮ ಮನಸ್ಸಿನಲ್ಲಿ ಏನು ಹೊಳೆಯುತ್ತದೆಯೋ ಅದನ್ನು ಹೊರಗೆ ಹಾಕುವುದೇ ಭಾಷೆಯ ಮೂಲಕ. ಕೆಲವು ಭಾಷಾ ವಿಜ್ಞಾನಿಗಳು ಭಾಷೆಯನ್ನು ಸಂಕೇತ ಎಂದೂ, ಭಾಷೆಯಿಂದ ಸೂಚಿತವಾದ ಸಂಗತಿಯನ್ನು ಭಾಷಿತ ಎಂದೂ ವಿವರಿಸಿದ್ದಾರೆ. ಮನಸ್ಸಿನಲ್ಲಿ ಮೂಡಿದ, ಭಾಸವಾದ, ಮಿಂಚಿದ ಭಾವನೆಯನ್ನು ಪ್ರಕಟಿಸುವ ಉಪಕರಣವೇ ಭಾಷೆ ಎನ್ನಬಹುದು.

ನೀವು ಸಾಕಿದ ಪ್ರಾಣಿಯಿರಬಹುದು ಅಥವಾ ದಾರಿಯಲ್ಲಿ ಭೇಟಿಯಾದ ಅಪರಿಚಿತ ಪ್ರಾಣಿಯಿರಬಹುದು; ನೀವು ಹೊರಗೆಡಹುವ ಪ್ರೀತಿಯ ಭಾವನೆಗಳನ್ನು ಅರ್ಥಮಾಡಿಕೊಂಡು ನಿಮ್ಮ ಬಳಿಯೇ ಸುಳಿಯುತ್ತಿರುತ್ತದೆ; ನಿಮ್ಮ ಮೈ ಸವರುವುದೋ, ಕೈಕಾಲನ್ನು ನೆಕ್ಕುವುದೋ ಮಾಡುತ್ತಿರುತ್ತದೆ. ಕೆಲವು ದನಗಳು ನಿಮ್ಮನ್ನು ಎಷ್ಟು ಹಚ್ಚಿಕೊಂಡಿರುತ್ತದೆಂದರೆ, ಹಾಲು ಕರೆಯುವಾಗ ನೀವೇ ಅದರ ಬೆನ್ನನ್ನೋ ಗೋನಾಳಿಯನ್ನೋ ಸವರಿದರೆ ಮಾತ್ರ ಹಾಲು ಕೊಡುತ್ತವೆ. ಒಂದೇ ಮನೆಯಲ್ಲಿರುವ ಎಲ್ಲರನ್ನೂ ಒಂದೇ ರೀತಿ ಹಚ್ಚಿಕೊಳ್ಳುತ್ತವೆ ಎಂದೇನೂ ಇಲ್ಲ. ನಾಯಿಯಂತೂ ವಿಶ್ವಾಸಕ್ಕೆ ಇನ್ನೊಂದು ಹೆಸರೆಂಬಂತೆ ನಿಮ್ಮೊಂದಿಗೆ ಹೊಂದಿಕೊಂಡು ಬದುಕುತ್ತದೆ.

ಒಬ್ಬ ವ್ಯಕ್ತಿ ನೀಡಿದ ಪ್ರಚೋದನೆಗೆ ಇನ್ನೊಬ್ಬ ವ್ಯಕ್ತಿ ಪ್ರತಿಕ್ರಿಯೆ ನೀಡಲು ಭಾಷೆ ಸಹಕರಿಸುತ್ತದೆ. ಶ್ರಮ ವಿಭಜನೆ ಮತ್ತು ಅದರೊಂದಿಗೆ ಮಾನವ ಸಮಾಜದ ಒಟ್ಟು ಕ್ರಿಯೆ ಸಾಧ್ಯವಾದುದು ಭಾಷೆಯಿಂದಾಗಿ. ವಕ್ತಾರ ಮತ್ತು ಶ್ರೋತೃವಿನ ನಡುವಣ ಶಾರೀರಿಕಂತರ-ಎರಡು ನರವ್ಯವಸ್ಥೆಗಳ ನಡುವಣ ಅಸಾತತ್ಯ-ಧ್ವನಿತರಂಗದ ಮೂಲಕ ಸೇತುಬಂಧಕ್ಕೊಳಗಾಗುತ್ತದೆ ಎಂಬುದು ಭಾಷಾ ವಿಜ್ಞಾನಿ ಲಿಯೊನಾರ್ಡ್ ಬ್ಲೂಮ್‌ಫೀಲ್ಡ್ ವಿಶ್ಲೇಷಣೆ.

ಲೆಹ್ಮಾನ್ ಹೇಳುವಂತೆ ಭಾಷಾ ವೈಜ್ಞಾನಿಕ ಸಂಕೇತಗಳ ಸಾಂದರ್ಭಿಕ ವ್ಯತ್ಯಾಸಗಳನ್ನು ನಾವು ಅರ್ಥ ವೈಜ್ಞಾನಿಕವಾಗಿ ಹೀಗೆ ವರ್ಗೀಕರಿಸಬಹುದು: (1) ಸಂದರ್ಭವನ್ನು ಸಂಕುಚಿತಗೊಳಿಸುವುದು. (2) ಸಂದರ್ಭವನ್ನು ವಿಸ್ತರಿಸುವುದು; ಮತ್ತು (3) ಸಂದರ್ಭವನ್ನು ಬದಲಾಯಿಸುವುದು. ಈ ಮೂರೂ ಬಗೆಯ ಪ್ರಕ್ರಿಯೆಗಳು ನಮ್ಮ ಬದುಕಲ್ಲಿ ದೀರ್ಘಕಾಲದಿಂದ ನಡೆದುಕೊಂಡು ಬಂದಿರುವುವು.

ಇಂಗ್ಲಿಷ್ ಭಾಷೆಯ ಚರಿತ್ರೆಯನ್ನು ಬರೆದ ಮೇರಿಯೋ ಪೇ ಭಾಷೆಯ ಕುರಿತಾದ ನಮ್ಮ ದೃಷ್ಟಿಕೋನ ಹೇಗಿರಬೇಕೆಂಬುದನ್ನು ಸೊಗಸಾಗಿ ನಿರೂಪಿಸಿದ್ದಾರೆ. ಅವರ ಪ್ರಕಾರ ಒಂದು ಭಾಷೆಯ ವಿಷಯದಲ್ಲಿ ಏನು ನಡೆಯಿತು, ನಡೆಯುತ್ತಿದೆ ಎಂದು ವಿವರಿಸುವುದು ಭಾಷಾ ವಿಜ್ಞಾನಿಯ ಸಂದೇಶವಾಗಿರಬೇಕೇ ವಿನಾ ಅದನ್ನು ಕುರಿತು ತಾತ್ತ್ವಿಕಗೊಳಿಸುವುದಲ್ಲ. ಅಜ್ಞಾನಿಗಳೂ ವೇದಾಂತದ ಕಡೆ ಸುಲಭವಾಗಿ ಸೆಳೆಯಲ್ಪಡುತ್ತಾರೆ. ಲಿಖಿತ ಅಕ್ಷರಕ್ಕೆ ಏನೋ ಕಾರಣಿಕವಿದೆ ಎಂದು ನಂಬುವವರಿದ್ದರು; ಇಂದಿಗೂ ಇದ್ದಾರೆ. ಯಾವುದೇ ಕಾಯಿಲೆಗೆ ಅಗತ್ಯವಾದ ಮದ್ದಿನ ಹೆಸರನ್ನು ಕಾಗದದಲ್ಲಿ ಬರೆದು, ಮುದ್ದೆಮಾಡಿ ನುಂಗಿದರೆ ಕಾಯಿಲೆ ಪರಿಹಾರವಾಗುತ್ತದೆ ಎಂದು ನಂಬುವವರಿದ್ದರು. ಮಾಟ ಮಾಡುವವರು ಲೋಹದ ತಗಡಿನಲ್ಲಿ ನಿರ್ದಿಷ್ಟ ವ್ಯಕ್ತಿಯ ಹೆಸರನ್ನೋ, ರೇಖಾ ಚಿತ್ರವನ್ನೋ ಬರೆದು, ಆತ ಓಡಾಡುವ ಸ್ಥಳದಲ್ಲಿ ಹೂತಿಟ್ಟರೆ ಫಲ ಸಿಗುವುದೆಂದು ನಂಬಿದ ಹಾಗೆ. ಶಾಸನಗಳ ಭಾಷೆ ತಿಳಿಯದವರು ಶಾಸನದ ಫಲಕಕ್ಕೆ ದೀಪವಿಟ್ಟ ಹಾಗೆ. ಬಾರಕೂರಿನಂಥ ಚಾರಿತ್ರಿಕ ಸ್ಥಳದಲ್ಲೇ ಕೆಲವು ತಮ್ಮ ಮನೆಯಲ್ಲಿ ಶಾಸನಗಳನ್ನು ಬಟ್ಟೆ ಒಗೆಯುವುದಕ್ಕೆ, ಮನೆಯೆದುರಿನ ಚರಂಡಿಗೆ ಹಾಸುಗಲ್ಲಾಗಿ ಓಡಾಡಲಿಕ್ಕೆ ಬಳಸುತ್ತಿರುವುದನ್ನು ಗಮನಿಸಬಹುದು. ಇನ್ನು ಕೆಲವು ಶಾಸನಗಳನ್ನು ಜಾನುವಾರುಗಳಿಗೆ ಮೈತಿಕ್ಕಲು ಅಥವಾ ಹುಲ್ಲುಮೇಯುವಾಗ ಹಗ್ಗಕಟ್ಟಲು ಬಳಸಿಕೊಳ್ಳುವುದುಂಟು. ವಿಪರೀತ ಪ್ರಯೋಜನವಾದಿಗಳಿವರು.

 ಭಾಷೆ ಬರುತ್ತದೆಂಬ ಕಾರಣಕ್ಕೆ ಮನುಷ್ಯ ಭಾಷೆ ಬರದ ಜಂತುಗಳಿಗಿಂತ ಮೇಲು ಎನ್ನುವಂತಿಲ್ಲ. ಬಾಯ್ದೆರೆಯಾಗಿ ಆಡುವ ಭಾಷೆ, ಲಿಖಿತ ಭಾಷೆ, ಆಂಶಿಕ ಭಾಷೆ, ಮೂಕ ಭಾಷೆ, ಸಂಜ್ಞಾ ಭಾಷೆ, ಶರೀರ ಭಾಷೆ ಮುಂತಾದ ಪರಿಭಾಷೆಗಳನ್ನು ಬಳಸುತ್ತಿರುತ್ತೇವೆ. ಆಂಶಿಕ/ಮೂಕ/ಸಂಜ್ಞಾ ಭಾಷೆ ವೌಖಿಕ ಭಾಷೆಗಿಂತ ಕೀಳಲ್ಲ. ಎದುರುಗಡೆಯ ವ್ಯಕ್ತಿ ಅದನ್ನು ಅರ್ಥಮಾಡಿಕೊಂಡು ಸೂಕ್ತವಾಗಿ ಪ್ರತಿಕ್ರಿಯೆ ನೀಡಲು ಶಕ್ತನಾಗುವ ವರೆಗೆ ಈ ಮಾತಿಗೆ ಅರ್ಥವಿದೆ. ಕಾಮಿ(ಗಂಡುಬೆಕ್ಕು) ಹೆಣ್ಣು ಬೆಕ್ಕುಗಳಿರುವ ಮನೆಯ ಬಾಗಿಲಲ್ಲಿ ಮೂತ್ರ ಸಿಡಿಸಿ ಮುಂದೆ ಸಾಗುತ್ತದೆ: ಹೆಣ್ಣು ಬೆಕ್ಕಿಗೆ ಅದರ "ಅರ್ಥ" ತಿಳಿಯುತ್ತದೆ. ಒಂದು ಜಾತಿಯ ಇರುವೆ ಎದುರುಗಡೆಯಿಂದ ಸಾಗಿಬರುವ ಇರುವೆಗಳಿಗೆ ತನ್ನ ಮುಂಗಾಲನ್ನೆತ್ತಿ ಆಡಿಸುವ ಮೂಲಕ ಅಪಾಯದ ಸೂಚನೆ ನೀಡುತ್ತದೆ. ಕಾಡಿನಲ್ಲಿ ಉಗ್ರಪ್ರಾಣಿ ಬರುತ್ತಿದ್ದರೆ ಹಕ್ಕಿಗಳು ತಮ್ಮ ಉಲಿಹದ ಮೂಲಕ ಉಳಿದ ಪ್ರಾಣಿಪಕ್ಷಿಗಳಿಗೆ ಮುನ್ಸೂಚನೆ ನೀಡುತ್ತವೆ. ಕಾಜಾಣದಂಥ ಸಣ್ಣ ಹಕ್ಕಿಯಿರುವಲ್ಲಿ ಹತ್ತಾರು ಬಗೆಯ ಹಕ್ಕಿಗಳು ಗೂಡು ಕಟ್ಟಿರುತ್ತವೆ. ಶತ್ರುಗಳಿಂದ ತನ್ನೊಂದಿಗೆ ಇತರ ಹಕ್ಕಿಗಳನ್ನು ಅದು ರಕ್ಷಿಸಬಲ್ಲುದು. ತ್ಸುನಾಮಿ ಬಂದಾಗ ಸಮುದ್ರ ಚರಗಳು ಮುಂದಾಗುವುದನ್ನು ಊಹಿಸಿ ಎತ್ತರದ ಸ್ಥಳಕ್ಕೆ ಬಂದು ಬೀಡುಬಿಟ್ಟು ಸುರಕ್ಷಿತವಾದುವು. ಈ ಸಮುದ್ರ ಜೀವಿಗಳ ನಡುವೆ ಜಾತಿಭೇದವಿರಲಿಲ್ಲ. ಅದೇ ತಮಿಳ್ನಾಡಿನ ಸಂತ್ರಸ್ತರಿಗೆ ಡೇರೆ ಕಟ್ಟಿಕೊಟ್ಟು ಸರಕಾರ ಅನ್ನಾಹಾರ ಪಾನೀಯ ಪೂರೈಸಿದರೆ ಕೆಳಜಾತಿಯವರೊಟ್ಟಿಗೆ ತಾವು ಇರುವಂತಿಲ್ಲ ಎಂದು ಪಟ್ಟು ಹಿಡಿದ ದುರಂತಸ್ಥಿತಿ ಮಾನವ ಸಮಾಜದ್ದು; ಅಂಥ ದುರ್ಭರ, ಕಠಿಣ ಪರಿಸ್ಥಿತಿಯಲ್ಲೂ ಮನುಷ್ಯ ತನ್ನ ಜಾತಿಯನ್ನು ನೆನಪಿನಲ್ಲಿರಿಸಿಕೊಳ್ಳುತ್ತಾನೆಂದರೆ ನಾವು ನಿಜವಾಗಿ ಮನುಷ್ಯರೇ? ನಾವು ನಿಜವಾಗಿ "ಚಿಂತಿಸುವ ಪ್ರಾಣಿ"ಯಾಗಿ ಬೆಳೆದಿದ್ದೇವೆಯೇ? ಎಂದು ಮತ್ತೆ ಮತ್ತೆ ಚಿಂತಿಸುವಂತಾಗುತ್ತದೆ.

 "ಶಬ್ದಪಾರಮಾರ್ಗಮಶಕ್ಯಂ" ಎಂಬ ಮಾತಿದೆ. ಶಬ್ದ ಸಾಗರದ ದಡ ಮುಟ್ಟುವುದು ಯಾರಿಗಾದರೂ ಅಶಕ್ಯ. ಶಬ್ದಗಳ ಭಂಡಾರವೆಂದರೆ ಒಂದು ಸಾಗರವೇ ಹೌದು. ಹಳೆಗನ್ನಡ-ಹೊಸಗನ್ನಡ, ಸಂಸ್ಕೃತ-ತದ್ಭವ, ಪ್ರಾದೇಶಿಕ ಭಾಷಾ ವ್ಯತ್ಯಾಸ, ಉಪಭಾಷೆಗಳು, ಇನ್ನು ವ್ಯಕ್ತಿಭಾಷೆ... ಹೀಗೆ ಭಾಷೆಯಲ್ಲಿ ಪ್ರಭುತ್ವ ಪಡೆಯುವುದೆಂದರೆ ಅಸಾಧ್ಯ. ಉದಾಹರಣೆಗೆ ಹಳೆಗನ್ನಡದಲ್ಲಿ "ಆರ್ಗೆ?" ಎಂಬ ಮಾತಿಗೆ "ಯಾರಂತೆ" ಎಂದರ್ಥ (ತುಳುವಿನಲ್ಲಿ "ಏರ್ಗೆ")ಅಂದರೆ, ಅವನು ಯಾರು? ಅವನ ಊರು ಯಾವುದು? ಅವನ ಕುಲಜಾತಿ ಯಾವುದು? ಅವನ ತಂದೆ ತಾಯಂದಿರು ಯಾರು? ಮುಂತಾದ ವಿವರಗಳನ್ನೇ ಒಳಗೊಂಡ ಮಾತಿದು. ವ್ಯಕ್ತಿಯೊಬ್ಬನ ಪೂರ್ವಾಪರಗಳನ್ನು ವಿಚಾರಿಸುವ ಸುಂದರವಾದ ಹಳೆಗನ್ನಡ ಪ್ರಶ್ನಾರ್ಥಕವಿದು. ಹೊಸಗನ್ನಡದಲ್ಲಿ ಇಂಥವು ರೂಢಿಹೀನವಾಗಿದ್ದು ಭಾಷೆಗೆ ದೊಡ್ಡ ನಷ್ಟವೊದಗಿದೆ.

 ಶಬ್ದಗಳಲ್ಲಿ ಒಂದೇ ಶಬ್ದ ವಿರುದ್ದಾರ್ಥಕವಾಗಿ ಬಳಕೆಯಾಗುವುದಿದೆ. ಹಳೆಗನ್ನಡದಲ್ಲಿ "ಅಗ್ಗ" ಎಂಬುದಕ್ಕೆ "ಶ್ರೇಷ್ಠ" (ಅರ್ಘ: ಸಂಸ್ಕೃತ), "ಬೆಲೆಬಾಳುವ" ಮುಂತಾದ ಅರ್ಥವಿದೆ. ಸಮಕಾಲೀನ ಕನ್ನಡದಲ್ಲಿ "ಅಗ್ಗ" ಎಂದರೆ "ಕಡಿಮೆ ಬೆಲೆ"ಯ ವಸ್ತು ಎಂದಾಗಿದೆ. "ಅಮ್ಮ" ಎಂಬ ಸಂಬಂಧವಾಚಕ ತುಳುವಿನಲ್ಲಿ ತಂದೆಯನ್ನು ಸೂಚಿಸುತ್ತದೆ; ಹಳೆಗನ್ನಡದಲ್ಲಿ "ಅಮ್ಮ" ತಂದೆಯನ್ನೇ ಸೂಚಿಸುತ್ತಿತ್ತು. ವಚನಕಾರರ ಕಾಲದಲ್ಲಿ "ಅಮ್ಮನ್" ತಂದೆಯಷ್ಟೇ ಗೌರವಾರ್ಹ ವ್ಯಕ್ತಿ"ಯನ್ನು ಸೂಚಿಸಹತ್ತಿತು. ಇದೀಗ "ಅಮ್ಮ" ತಾಯಿಯಾಗಿದ್ದಾರೆ. ಧಾರವಾಡ ಕಡೆ "ಅಮ್ಮ" ಅಂದರೆ ವಿಧವೆ. ಮಮತೆಯಿಂದ ಹೆಮ್ಮಕ್ಕಳನ್ನು ಕರೆಯುವಾಗ "ಅಮ್ಮ" ಬಳಕೆಯಾಗುವುದಿದೆ. "ಅಮ್ಮ" ಕೆಲವು ಸಂದರ್ಭಗಳಲ್ಲಿ ನಿಪಾತ(ಭಾವಸೂಚಕ: Interjection) ವೂ ಆಗಬಹುದು. ಅರ್ಥವ್ಯತ್ಯಾಸ-ಅರ್ಥ ಸಂಕೋಚ-ಅರ್ಥ ವಿಸ್ತಾರವಾಗಿರುವ ಸಾವಿರಾರು ಪದಗಳನ್ನು ಉದಾಹರಿಸಬಹುದು.

ಸಂಸ್ಕೃತದ ಕೆಲವು ಪದಗಳನ್ನು ಗಮನಿಸಿ: ಯಜಮಾನ(ಯಜ್ಞ ಮಾಡುವ ತಂಡದ ಮುಖಂಡ), ವಿಪರೀತ(ಸುತ್ತುವರಿದಿರುವುದು), ಅವಸರ (ಸಮಯ), ಭಯಂಕರ(ಭಯವನ್ನುಂಟುಮಾಡುವುದು). ಈ ಮೂಲಾರ್ಥ ಇಂದು ರೂಢಿಯಲ್ಲಿಲ್ಲ. ಭಾಷಾ ಚರಿತ್ರೆಯನ್ನು ತಿಳಿದವರು ಒಪ್ಪುವಂತೆ, ನಾಲಗೆ ಹೇಗೆ ಹೊರಳುತ್ತದೆ, ಅದಕ್ಕೆ ತಕ್ಕಂತೆ ಶಬ್ದ ಸ್ವರೂಪ ಮತ್ತು ಅರ್ಥ ರೂಪುಗೊಳ್ಳುತ್ತದೆ. ಆದ್ದರಿಂದ, ಭಾಷಾಶುದ್ಧಿ ಎಂದು ಮಾತಾಡುವುದು ವ್ಯರ್ಥ. ಶಬ್ದಸಾಗರ ಅನಂತ, ಅಪರಿಮಿತ, ಅಗಾಧ. ಆಧುನಿಕ ಇಂಗ್ಲಿಷ್-ಇಂಗ್ಲಿಷ್ ನಿಘಂಟಿನಲ್ಲಿ ಭಾರತೀಯ ಮೂಲಕ ಇಂಗ್ಲಿಷ್ ಶಬ್ದಗಳೆಂಬ ನಮೂದಿನಲ್ಲಿ ಸಾವಿರಾರು ಶಬ್ದಗಳನ್ನು ನಿಘಂಟಿನ ಕೊನೆಯ ಭಾಗದಲ್ಲಾದರೂ ಪ್ರಕಟಿಸುವ ಅನಿವಾರ್ಯತೆಯ ಹಿಂದಿನ ಅರ್ಥವನ್ನು ತಿಳಿಯಬೇಕು.

 ಭಾಷಾ ವಿಷಯದಲ್ಲಿ ಮಡಿವಂತಿಕೆ ನಡೆಯಲಾರದು. 13ನೆ ಶತಮಾನದಲ್ಲಿ ಆಂಡಯ್ಯನೇನೋ "ಕಬ್ಬಿಗರ ಕಾವ"ದಲ್ಲಿ ಒಂದೇ ಒಂದು ಸಂಸ್ಕೃತ ಶಬ್ದವಿಲ್ಲದೆ ಅಚ್ಚಗನ್ನಡದಲ್ಲಿ ಬರೆದಿರಬಹುದು. "ಸಮುದ್ರಶಾಯಿ" ಎಂಬರ್ಥದಲ್ಲಿ "ಕಡಲೊಳ್ ಪಟ್ಟನ್" ಎಂದು ಆತ ಬಳಸಿದ್ದಾರೆ. ಭಾಷಾ ಶುದ್ಧಿಯ ಅತಿರೇಕವುಳ್ಳವರು ಇಂದಿಗೂ "ಪ್ರಬಂಧಕ" "ಅಭಿಯಂತ" "ಷಟ್ಚತ್ರ ವಾಹನ" ಮುಂತಾಗಿ ಶಬ್ದ ಪ್ರಯೋಗ ಮಾಡುವುದು ಅಸಹ್ಯವೆನಿಸುತ್ತದೆ. ಏಕೆಂದರೆ, ಮೇಲಿನ ಶಬ್ದಗಳಿಗಿಂತ "ಮೆನೇಜರ್" "ಇಂಜಿನಿಯರ್" "ಬಸ್ಸು" ಮುಂತಾದುವು ಅನಕ್ಷರಸ್ಥನಿಗೂ ಸುಲಭವಾಗಿ ಅರ್ಥವಾಗುತ್ತದೆ. ಅನ್ಯ ಭಾಷಾ ಪದಗಳನ್ನು ಬಾಚಿಕೊಂಡು, ದೋಚಿಕೊಂಡು ಇಂಗ್ಲಿಷ್ ವಿಶ್ವಭಾಷೆಯಾಗಿರುವುದನ್ನು ಕಂಡಿದ್ದೇವೆ. ನಿತ್ಯಜೀವನದಲ್ಲಿ ನಾವು ವ್ಯವಹರಿಸುವ, ಬಳಸುವ "ಕೋರ್ಟು, ಕಾರು, ಇಂಜಿನ್, ಪಂಪ್‌ಸೆಟ್ಟು" ಮುಂತಾದ ಪದಗಳನ್ನು ಕನ್ನಡವೆಂದೇ ತಿಳಿಯೋಣ; ಬಳಸೋಣ. ಬೆಳೆಯುತ್ತಿರುವ ಭಾಷೆಯ ಸಂದರ್ಭದಲ್ಲಿ ನಾವು ಯಾವತ್ತೂ ಅತಿಯನ್ನು ವಿಸರ್ಜಿಸುವುದು ವಿವೇಕದ ಲಕ್ಷಣ. ಬ್ಯಾಂಕನ್ನು "ದ್ರವ್ಯಾಲಯ", "ಚೆಕ್ಕ"ನ್ನು "ದ್ರವ್ಯಪತ್ರ" ಮುಂತಾಗಿ ಬಳಸುವ ಮೂಲಕ ಭಾಷೆ ಬೆಳೆಯಲಾರದು. ಕನ್ನಡದ ಆದಿಕವಿ, ನಾಡೋಜ ಪಂಪ ನಮಗೆ ಈ ವಿಷಯದಲ್ಲಿ ಆದರ್ಶ, ಮಾರ್ಗ-ದೇಸಿಗಳ ಸಮನ್ವಯಶೀಲನಾದ ಪಂಪ, ಸಂಸ್ಕೃತದ ಶಿಷ್ಟ ಶೈಲಿ ಮತ್ತು ಮೃದುಮಧುರವಾದ ಲೋಕಭಾಷೆಯನ್ನು ಎಲ್ಲೆಲ್ಲಿ ಹೇಗೆ ಎಷ್ಟೆಷ್ಟು ಬಳಸಬೇಕೆಂಬುದನ್ನು ಅಮೋಘವಾಗಿ ತೋರಿಸಿಕೊಟ್ಟವ. ಪಂಪನಿಂದಾಗಿ ಕನ್ನಡಕ್ಕೆ ಚಿರಸ್ಫೂರ್ತಿ! ಕೀರ್ತಿ!!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News