ಸಾಲ ಮರುಪಾವತಿ: ಮಲ್ಯ ಪ್ರಸ್ತಾಪಕ್ಕೆ ಬ್ಯಾಂಕ್‌ಗಳ ತಿರಸ್ಕಾರ

Update: 2016-04-07 18:33 GMT

ಹೊಸದಿಲ್ಲಿ, ಎ.7: ತಮ್ಮ ಸಾಲ ತೀರಿಸುವುದಕ್ಕಾಗಿ ಸೆಪ್ಟಂಬರ್‌ನೊಳಗೆ 4 ಸಾವಿರ ಕೋಟಿ ರೂ. ಪಾವತಿಸುವೆನೆಂದು ಮದ್ಯ ದೊರೆ ವಿಜಯ ಮಲ್ಯ ಮತ್ತವರ ಕಂಪೆನಿಗಳು ಸುಪ್ರೀಂಕೋರ್ಟ್‌ನ ಮುಂದಿರಿಸಿರುವ ಪ್ರಸ್ತಾವವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ಗುಂಪೊಂದು ಗುರುವಾರ ತಿರಸ್ಕರಿಸಿದೆ. ಎ.21ರೊಳಗೆ ಅವರ ಒಟ್ಟು ಆಸ್ತಿಗಳನ್ನು ಬಹಿರಂಗಪಡಿಸುವಂತೆ ಮಲ್ಯರಿಗೆ ಸುಪ್ರೀಂಕೋರ್ಟ್ ಆದೇಶಿಸಿದೆ.

ತನ್ನ ಸಾಲ ಮರು ಪಾವತಿಸುವ ಕುರಿತು ಮಲ್ಯ ಎಷ್ಟು ಗಂಭೀರವಾಗಿದ್ದಾರೆಂಬುದನ್ನು ರುಜುವಾತುಪಡಿಸಲು, ಭಾರತದಲ್ಲಿ ಅವರ ಹಾಜರಾತಿಯನ್ನು ಖಚಿತಪಡಿಸುವಂತೆ ಮಲ್ಯರಿಗೆ ನಿರ್ದೇಶನ ನೀಡಬೇಕೆಂದೂ ಬ್ಯಾಂಕ್‌ಗಳ ಗುಂಪು ನ್ಯಾಯಾಲಯಕ್ಕೆ ಮನವಿ ಮಾಡಿದೆ.

ತಮ್ಮ ಬದ್ಧತೆಯನ್ನು ಸಾಬೀತುಪಡಿಸಲು ಅವರಿಂದ ಸುಪ್ರೀಂಕೋರ್ಟ್‌ನಲ್ಲಿ ಎಷ್ಟು ಹಣವನ್ನು ಠೇವಣಿಯಿಡಲು ಸಾಧ್ಯವೆಂಬುದನ್ನು ಸೂಚಿಸಿ, ಎ.21ರೊಳಗೆ ಉತ್ತರವನ್ನು ದಾಖಲಿಸುವಂತೆ ಮಲ್ಯ ಮತ್ತವರ ಸಂಸ್ಥೆಗಳಿಗೆ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಹಾಗೂ ಆರ್.ಎಫ್.ನಾರಿಮನ್‌ರನ್ನೊಳಗೊಂಡ ಪೀಠ ನಿರ್ದೇಶಿಸಿದೆ.

20 ನಿಮಿಷಗಳ ಕಿರು ವಿಚಾರಣೆಯ ಬಳಿಕ, ಪೀಠವು ಮುಂದಿನ ವಿಚಾರಣೆಯನ್ನು ಎ.26ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News