ಬಲಿಷ್ಠ ಸಮುದಾಯವನ್ನು ಹತ್ತಿಕ್ಕುವ ಷಡ್ಯಂತ್ರ: ಅಪ್ಪಾಜಿಗೌಡ

Update: 2016-04-13 18:51 GMT

ಬೆಂಗಳೂರು, ಎ.13: ಕಳೆದೆರಡು ದಿನಗಳ ಹಿಂದೆ ಸೋರಿಕೆಯಾಗಿರುವ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ವರದಿ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇದೆ. ಆ ಮೂಲಕ ಬಲಿಷ್ಠ ಸಮುದಾಯವನ್ನು ಹತ್ತಿಕ್ಕುವ ಷಡ್ಯಂತ್ರ ಹೆಣೆಯಲಾಗುತ್ತಿದೆ. ಆದುದರಿಂದ ಕೂಡಲೇ ರಾಜ್ಯ ಸರಕಾರ ವರದಿಯನ್ನು ತಿರಸ್ಕರಿಸಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ಅಪ್ಪಾಜಿಗೌಡ ಒತ್ತಾಯಿಸಿದ್ದಾರೆ.
 ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ನಮ್ಮ ಸಮುದಾಯದ ಜನಸಂಖ್ಯೆಗೂ ಸೋರಿಕೆಯಾಗಿರುವ ಮಾಹಿತಿಯಾಧಾರಿತ ಜನಸಂಖ್ಯೆಗೂ ಅಜಗಜಾಂತರ ವ್ಯತ್ಯಾಸ ಕಾಣುತ್ತಿದೆ. ಇದರ ಭಾಗವಾಗಿ ಮಾಧ್ಯಮಗಳಲ್ಲಿ 80 ಕ್ಕೂ ಹೆಚ್ಚು ಉಪ ಪಂಗಡಗಳನ್ನು ಹೊಂದಿರುವ ಒಕ್ಕಲಿಗ ಸಮುದಾಯವನ್ನು ಕೇವಲ 8 ಉಪ ಪಂಗಡಗಳಿವೆ ಎಂಬ ಮಾಹಿತಿಯನ್ನು ನೀಡಲಾಗುತ್ತಿದೆ. ಒಂದು ವೇಳೆ ಅಧಿಕೃತ ವರದಿಯಲ್ಲಿ ಇದು ಸತ್ಯ ಎಂದಾದರೆ ಇದನ್ನು ಮರು ಸಮೀಕ್ಷೆ ನಡೆಸಬೇಕಾಗುತ್ತದೆ. ಅಲ್ಲದೇ ಸರಕಾರಕ್ಕೆ ಆವಶ್ಯಕತೆ ಇದ್ದರೆ ಪ್ರತ್ಯೇಕ ಖಾಸಗಿ ಸಂಸ್ಥೆಗೆ ನೀಡಿ ಸಮೀಕ್ಷೆಯನ್ನು ನಡೆಸಲಿ ಎಂದು ತಿಳಿಸಿದರು.
ಗಣತಿ ಮಾಡಿದ ಸಿಬ್ಬಂದಿ ಹಲವಾರು ಕಡೆ ಸಮೀಕ್ಷೆಗೆ ಹೋಗಿಲ್ಲ. ಹೋದ ಕಡೆಯೆಲ್ಲಾ ಪೂರ್ಣ ಮಾಹಿತಿಯನ್ನು ಸಂಗ್ರಹಿಸಿಲ್ಲ. ಸರಿಯಾದ ಮಾಹಿತಿ ಸಂಗ್ರಹಿಸದೇ ಸರಿಯಾದ ಜಾತಿ ಸಮೀಕ್ಷೆ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಸಮೀಕ್ಷೆ ನಡೆಸಲು ಖರ್ಚು ಮಾಡಿರುವ ಹತ್ತಾರು ಕೋಟಿ ಹಣವನ್ನು ಬರಗಾಲದಲ್ಲಿ, ನೀರಿಲ್ಲದೆ ನರಳಾಡುತ್ತಿರುವರಿಗೆ, ನೀರಾವರಿ ಯೋಜನೆಗಳಿಗಾಗಿ ಅಥವಾ ಅಭಿವೃದ್ಧಿ ಕೆಲಸಗಳನ್ನು ಮಾಡಲಿಕ್ಕಾಗಿ ವಿನಿಯೋಗಿಸಬಹುದಾಗಿತ್ತು. ಆದರೆ ಸರಕಾರ ಸಾರ್ವಜನಿಕರ ಹಣವನ್ನು ವ್ಯರ್ಥವಾಗಿ ಪೋಲು ಮಾಡುತ್ತಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News