ಆರ್ ಟಿ ಐ ವಿರುದ್ಧ ಒಂದಾದ ನೆಮ್ಮದಿ ಕಳಕೊಂಡ ಪುಢಾರಿಗಳು !

Update: 2016-04-29 03:59 GMT

ಹೊಸದಿಲ್ಲಿ, ಎ. 29: ಸರ್ಕಾರಗಳು ಹಾಗೂ ಅಧಿಕಾರಿಗಳು ರಹಸ್ಯವಾಗಿ ಕೈಜೋಡಿಸಿ, ಧೀರ್ಘಕಾಲದಿಂದಲೂ ಮಾಹಿತಿ ಹಕ್ಕಿಗೆ ಪ್ರತಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ಆದರೆ ಈ ಐತಿಹಾಸಿಕ ಶಾಸನದ ವಿರುದ್ಧ ಇರುವ ಪ್ರಬಲ ಪ್ರತಿರೋಧ ಬೆಳಕಿಗೆ ಬಂದದ್ದು ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರ್‌ವಾಲ್, ಈ ಕಾಯ್ದೆಯ ದುರ್ಬಳಕೆ ಬಗೆಗೆ ಆಕ್ರೋಶ ವ್ಯಕ್ತಪಡಿಸಿದಾಗ. ಕಾಯ್ದೆಯನ್ನು ಜಾರಿಗೆ ತಂದ ಕಾಂಗ್ರೆಸ್ ಪಕ್ಷದ ಸದಸ್ಯರೂ ಇದಕ್ಕೆ ದನಿಗೂಡಿಸಿದರು.

ಯುಪಿಎ ಸರ್ಕಾರದ ಮಾಜಿ ಸಚಿವ ಹಾಗೂ ಎನ್‌ಸಿಪಿ ಮುಖಂಡ ಪ್ರಫುಲ್ ಪಟೇಲ್, ಸೋನಿಯಾಗಾಂಧಿ ನೇತೃತ್ವದ ಎನ್‌ಎಸಿ ಪ್ರಸ್ತಾವಿಸಿದ ಕಾಯ್ದೆಯನ್ನು ತುರಾತುರಿಯಲ್ಲಿ ಜಾರಿಗೊಳಿಸಲಾಯಿತು ಎಂದು ಹೇಳಿದರು.

ಸರ್ಕಾರಿ ಅಧಿಕಾರಿಗಳು ಕೂಡಾ ಇದು ಮಾಹಿತಿ ಹಕ್ಕು ಕಾಯ್ದೆಯಡಿ ಬರುತ್ತದೆಯೇ ಎಂದು ಅಂಜಿಕೆಯಿಂದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಇದರ ವಸ್ತುನಿಷ್ಠತೆ ಮಾಯವಾಗಿದ್ದು, ಈ ಬಗ್ಗೆ ಆತಂಕ ಎದುರಾಗಿದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಹೇಳಿದರು.

ಸದಸ್ಯರ ಕಳವಳಕ್ಕೆ ಸ್ಪಂದಿಸಿದ ಸರ್ಕಾರ ಕೂಡಾ, ಕಾಯ್ದೆಯ ದುರ್ಬಳಕೆ ವಿಚಾರವನ್ನು ಗಂಭೀರವಾಗಿ ಪರಿಗಣಿಸುವ ಭರವಸೆ ನೀಡಿತು.
"ಒಬ್ಬ ಪಾನ್‌ ವಾಲ (ಬೀಡಾ ಅಂಗಡಿಯವ) ಅಥವಾ ಚಾಯ್‌ ವಾಲಾ (ಟೀ ಮಾರುವವ) 10 ರೂಪಾಯಿ ಪಾವತಿಸಿ, ಒಂದು ಕ್ಷಿಪಣಿಯನ್ನು ಯಾರು ತಯಾರಿಸಿದ್ದು ಎಂಬ ಬಗ್ಗೆ ಅಥವಾ ಅಂತಾರಾಷ್ಟ್ರೀಯ ವ್ಯವಹಾರದ ಬಗ್ಗೆಯೂ ಮಾಹಿತಿ ಕೇಳಬಹುದು" ಎಂದು ಎನ್‌ಸಿಪಿ ಸಂಸದ ಲಘುವಾಗಿ ಮಾತನಾಡಿದರು.

ಅವರು ತಮ್ಮ ಭಾಷಣ ಮುಗಿಸುವ ಮುನ್ನವೇ, ಚಾಯ್‌ ವಾಲಾ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಮೋದಿ, ಸದನದ ನಾಯಕ ಅರುಣ್ ಜೇಟ್ಲಿ ಹಾಗೂ ಇತರ ಸದಸ್ಯರು ನಕ್ಕರು. ತಕ್ಷಣ ಮೂಲ ಕಾಯ್ದೆಯಲ್ಲಿ ತಿದ್ದುಪಡಿಗೆ ಆಗ್ರಹಿಸಿದ ಅವರು, "ಇದು ಪ್ರಧಾನಿಯವರನ್ನು ಅವಮಾನಿಸುವ ಉದ್ದೇಶ ಹೊಂದಿಲ್ಲ. ಬದಲಾಗಿ ಅವರಿಗೆ ಗೌರವ" ಎಂದು ಚಾಯ್‌ವಾಲಾ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಮಾಹಿತಿ ಹಕ್ಕು ಕಾಯ್ದೆಯನ್ನು ಅಮೆರಿಕದ ಒತ್ತಡದ ಹಿನ್ನೆಲೆಯಲ್ಲಿ ಜಾರಿಗೆ ತರಲಾಗಿದೆ ಎಂದು ಅಗರ್‌ವಾಲ್ ಆಪಾದಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಕಚೇರಿಯ ಸಚಿವ ಜಿತೇಂದ್ರ ಸಿಂಗ್, "ಸದಸ್ಯರ ಕಳವಳವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News